Atharvaa: ಯೂತ್ ಐಕಾನ್ 2026 ಪ್ರಶಸ್ತಿ ಪಡೆದ ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ವಿಲನ್
Atharvaa: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಮದನ್ ಪಾತ್ರದಲ್ಲಿ ತಮ್ಮ ನೆಗೆಟಿವ್ ಶೇಡ್ ಮೂಲಕವೇ ಗಮನ ಸೆಳೆಯುತ್ತಿರುವ ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ವಿಲನ್ ಅಥರ್ವ ಅವರಿಗೆ ಯೂತ್ ಐಕಾನ್ 2026 ಪ್ರಶಸ್ತಿ ಲಭಿಸಿತ್ತು, ಈ ಸಂಭ್ರಮವನ್ನು ನಟ ಹಂಚಿಕೊಂಡಿದ್ದಾರೆ.

ಶ್ರಾವಣಿ ಸುಬ್ರಹ್ಮಣ್ಯ ನಟ
ಜೀ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ವೀಕ್ಷಕರಿಗೆ ಅಥರ್ವ ಪರಿಚಯ ಇದ್ದೇ ಇದೆ. ವೀರೇಂದ್ರ ದೇಸಾಯಿ, ಅಕ್ಕ ವಿಜಯಾಂಬಿಕಾಳ ಒಬ್ಬನೇ ಮುದ್ದಿನ ಮಗ ಮದನ್ ಪಾತ್ರದಲ್ಲಿ ಅಥರ್ವ ನಟಿಸುತ್ತಿದ್ದಾರೆ. ಅಮ್ಮ ಮಗ ಇಬ್ಬರದೂ ವಿಲನ್ ಪಾತ್ರ. ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದಾರೆ ಅಥರ್ವ.
ಹ್ಯಾಂಡ್ಸಮ್ ವಿಲನ್ ಅಥರ್ವ
ಅಥರ್ವ ಅವರನ್ನು ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ವಿಲನ್ ಅಂತಾನೆ ಕರೆಯಬಹುದು. ಯಾಕಂದರೆ, ಹೈಟ್, ವೈಟ್ ಪರ್ಸನಾಲಿಟಿ, ಚಿಗುರು ಮೀಸೆ, ಕಣ್ಣಲ್ಲಿನ ಆ ಖಡಕ್ ಲುಕ್ ಎಲ್ಲವೂ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಹಾಗಾಗಿಯೇ ಅಥರ್ವ ಇಲ್ಲಿವರೆಗೂ ಶ್ರಾವಣಿ ಸುಬ್ರಹ್ಮಣ್ಯ ಅಲ್ಲದೇ, ನೀನಾದೆ ನಾ, ಗೌರಿ ಶಂಕರ ಧಾರಾವಾಹಿಗಳಲ್ಲೂ ವಿಲನ್ ಆಗಿ ಮಿಂಚಿದ್ದರು.
ಅಥರ್ವಗೆ ಸಿಕ್ಕಿದೆ ಯೂತ್ ಐಕಾನ್ ಪ್ರಶಸ್ತಿ
ಇದೀಗ ಅಥರ್ವ ಅವರಿಗೆ ಮಿಲಿಯಾನ ಈವೆಂಟ್ಸ್ ಬೈ ನವ್ಯಾ ಗೌಡ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಯೂತ್ ಐಕಾನ್ 2026 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಾರ್ಯಕ್ರಮದ ಒಂದಷ್ಟು ಫೋಟೊಗಳನ್ನು ಅಥರ್ವ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಗ್ರೇಟ್ ಫುಲ್ ಫಾರ್ ದಿ ಜರ್ನಿ ಅಂತಾನೂ ಬರೆದುಕೊಂಡಿದ್ದಾರೆ.
ಓದಿದ್ದು ಸಿವಿಲ್ ಇಂಜಿನಿಯರ್ ಆಗಿದ್ದು ನಟ
ಹಾಸನದಲ್ಲಿ ಹುಟ್ಟಿ ಬೆಳೆದ ಅಥರ್ವ ಓದಿದ್ದು ಸಿವಿಲ್ ಇಂಜಿನಿಯರ್. ಕೈತುಂಬಾ ಸಂಬಳ ಬರುವ ಕೆಲಸ ಸಿಗುತ್ತಿತ್ತು, ಆದರೆ ನಟನಾಗಬೇಕೆಂಬ ಒಲವಿನಿಂದ ಬೆಂಗಳೂರಿಗೆ ಬಂದ ಅಥರ್ವ, ಇಲ್ಲಿ ನಟನಾಗುವವರೆಗೂ ಸ್ವಿಗ್ಗಿ, ಝೊಮ್ಯಾಟೊಗೆ ಡಿಲೆವರಿ ಬಾಯ್ ಕೆಲಸ ಮಾಡಿದ್ದರು. ಆದರೆ ಛಲ ಮಾತ್ರ ಬಿಟ್ಟಿರಲಿಲ್ಲ. 50 ರಿಂದ 70 ಆಡಿಷನ್ ಕೊಟ್ಟು ಸಣ್ಣ, ಪುಟ್ಟ ಪಾತ್ರಗಳನ್ನು ಮಾಡಿ, ಕೊನೆಗೂ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಕಷ್ಟದ ಹಾದಿಯಲ್ಲಿ ನಡೆದು ಬಂದ ನಟ
ಬಳಿಕ ನಾಟಕ ತಂಡ ಸೇರಿ, ಬೀದಿ ನಾಟಕಗಳನ್ನು ಮಾಡಿ, ಯೂಟ್ಯೂಬ್ ಚಾನೆಲ್ ನಲ್ಲಿ ಕೆಲಸ ಮಾಡಿ, ಸುಮಾರು ಒಂದು ವರ್ಷಗಳ ನಂತರ ಅವಕಾಶ ಸಿಗೋದಕ್ಕೂ ಶುರುವಾಯ್ತು. ಆರಂಭದಲ್ಲಿ ಶಾಂತಂ ಪಾಪಂ ಒಂದಷ್ಟು ಎಪಿಸೋಡ್ ಮಾಡಿ, ಬಳಿಕ ಕಮಲಿ ಧಾರಾವಾಹಿಯಲ್ಲಿ ಒಂದು ಎಪಿಸೋಡ್ ಮಾಡಿದ್ದರು. ನಂತರ ಸಿಕ್ಕ ದೊಡ್ಡ ಅವಕಾಶವೇ ‘ರಜಿಯಾ ರಾಮ್’.
ರಜಿಯಾ ರಾಮ್ ಮೂಲಕ ನಾಯಕ
ಕೊನೆಗೆ ಸಿರಿ ಕನ್ನಡದಲ್ಲಿ ‘ರಜಿಯಾ ರಾಮ್’ ಎನ್ನುವ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಅಥರ್ವಗೆ ಒದಗಿ ಬಂತು. ಇದು ಹಿಂದೂ ಮುಸ್ಲಿಂ ಪ್ರೇಮಕಥೆಯ ಸೀರಿಯಲ್ ಆಗಿದ್ದು, ಈ ಧಾರಾವಾಹಿ ಸುಮಾರು 500 ಎಪಿಸೋಡ್ ಗಳನ್ನು ಪೂರೈಸಿ ಎರಡು ವರ್ಷಗಳ ಬಳಿಕ ಮುಕ್ತಾಯ ಕಂಡಿತು. ಬಳಿಕ ‘ಗೌರಿ ಶಂಕರ’ ಧಾರಾವಾಹಿ, ‘ಶ್ರಾವಣಿ ಸುಬ್ರಹ್ಮಣ್ಯ’ ಜೊತೆಗೆ ‘ನೀನಾದೆ ನಾ’ ಧಾರಾವಾಹಿಯಲ್ಲೂ ಅವಕಾಶ ಸಿಕ್ಕಿತು. ಸದ್ಯ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಅಥರ್ವ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

