ಭಾರ್ಗವಿ ಸಹಾಯಕ್ಕೆ ಬರ್ತಿದ್ದಾರೆ ಲೇಡಿ ರಾಮಾಚಾರಿ ಸತ್ಯ ಖ್ಯಾತಿಯ ಗೌತಮಿ ಜಾದವ್
ಸತ್ಯ ಸೀರಿಯಲ್ ಖ್ಯಾತಿಯ ಲೇಡಿ ರಾಮಾಚಾರಿ ಗೌತಮಿ ಜಾದವ್ ಭಾರ್ಗವಿ LLB ಸೀರಿಯಲ್ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ತಿದ್ದಾರೆ.

ಕಲರ್ಸ್ ಕನ್ನಡದಲ್ಲಿ (Colorss Kannada) ಭಾರ್ಗವಿ LLB ಸೀರಿಯಲ್ ಪ್ರಸಾರವಾಗುತ್ತಿದೆ. ಸದ್ಯ ಸೀರಿಯಲ್ ನಲ್ಲಿ ಸಖತ್ ಟ್ವಿಸ್ಟ್ ಟರ್ನ್ ಗಳು ನಡೆಯುತ್ತಿವೆ. ಜೆಪಿ ಪಾಟೇಲನನ್ನು ಎದುರು ಹಾಕಿಕೊಂಡಿರುವ ಭಾರ್ಗವಿ ಟಕ್ಕರ್ ಕೊಡೋದಕ್ಕೆ ರೆಡಿಯಾಗಿದ್ದಾರೆ.
ಭಾರ್ಗವಿ LLB (Bhargavi LLB) ಧಾರಾವಾಹಿ ಪೂರ್ತಿಯಾಗಿ ವಕೀಲರಿಗೆ ಸಂಬಂಧಪಟ್ಟಂತಹ ಸೀರಿಯಲ್ ಆಗಿದೆ. ತಂದೆ ವಕೀಲ. ಪ್ರತಿಷ್ಟಿತ ವಕೀಲ ಜೆಪಿ ಪಾಟೀಲ್ ಯಾವತ್ತೂ ಸೋಲನ್ನು ಕಾಣದ ವಕೀಲ, ಮೋಸದಿಂದಾದರೂ, ಹಣ ಕೊಟ್ಟಾದರೂ ಸರಿ ಕೇಸನ್ನು ಗೆಲ್ಲುವ ದುಷ್ಟನಿಂದಾಗಿ ಕೆಲಸ ಕಳೆದುಕೊಂಡಿರುತ್ತಾರೆ ಭಾರ್ಗವಿ ತಂದೆ.
ತಂದೆಯ ಕನಸನ್ನು ನನಸು ಮಾಡೊದಕ್ಕೆ ಪಣತೊಟ್ಟು ನಿಂತವಳು ಭಾರ್ಗವಿ. ಅಕ್ಕನ ಮೋಸಕ್ಕೂ ಕರಗದೇ ಜೆಪಿ ಪಾಟೀಲ್ ವಿರುದ್ಧ ಸದ್ಯ ಆತ ಉಂಟು ಮಾಡಿದ ಸಮಸ್ಯೆಗಳನ್ನೆಲ್ಲಾ ಮೀರಿ ಎದುರಿಸೋಕೆ ಸಿಂಹಿಣಿಯಂತೆ ನಿಂತಿದ್ದಾಳೆ ಭಾರ್ಗವಿ.
ಇನ್ನೊಂದೆಡೆ, ಭಾರ್ಗವಿಯನ್ನು ಕೋರ್ಟ್ ಮೆಟ್ಟಿಲೇರದಂತೆ ತಡೆಯೋಕೆ ದುಷ್ಟರು ಸಖತ್ ಆಗಿ ಪ್ಲ್ಯಾನ್ ಮಾಡ್ತಿದ್ದಾರೆ. ಅದಕ್ಕಾಗಿ ರೌಡಿಗಳನ್ನು ಸಹ ಛೂ ಬಿಟ್ಟಿದ್ದಾರೆ. ಆದರೆ ಇದೀಗ ಖಡಕ್ ಲಾಯರ್ ಭಾರ್ಗವಿಗೆ ಸಹಾಯ ಮಾಡೊದಕ್ಕೆ ಮತ್ತೊಬ್ಬ ಖಡಕ್ ಲೇಡಿ ಎಂಟ್ರಿ ಕೊಡ್ತಿದ್ದಾರೆ.
ಹೌದು, ಭಾರ್ಗವಿ ಸಹಾಯಕ್ಕೆ ನಿಂತಿರೋದು ಬೇರೆ ಯಾರು ಅಲ್ಲ, ಕನ್ನಡ ಕಿರುತೆರೆಯಲ್ಲಿ ಲೇಡಿ ರಾಮಾಚಾರಿ (Lady Ramachari) ಎಂದೇ ಖ್ಯಾತಿ ಪಡೆದಿರುವ ಸತ್ಯ ಸೀರಿಯಲ್ ಖ್ಯಾತಿಯ ಗೌತಮಿ ಜಾಧವ್, ಎಂಟ್ರಿ ಕೊಟ್ಟಿದ್ದು, ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಸತ್ಯ ಸೀರಿಯಲ್ ಮುಗಿದ ಬಳಿಕ ಬಿಗ್ ಬಾಸ್ ಸೀಸನ್ 11 (Bigg Boss Season 11) ರಲ್ಲಿ ಭಾಗವಹಿಸಿ, ಜನಪ್ರಿಯತೆ ಪಡೆದಿದ್ದ ನಟಿ ಗೌತಮಿ ಜಾಧವ್, ಇದೀಗ ಭಾರ್ಗವಿ LLB ಸೀರಿಯಲ್ ನಲ್ಲಿ ಮತ್ತೆ ಅದೇ ಖಡಕ್ ಸತ್ಯ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಣುಕು ವೈರಲ್ ಆಗುತ್ತಿದೆ.
ಭಾರ್ಗವಿಗೆ ರೌಡಿಗಳು ಕಾಟಕೊಡಲು ಬಂದಾಗ, ಅಡ್ಡ ಬರುವ ಗೌತಮಿ /ಸತ್ಯ ಇನ್ನು ನಾನು ಬಂದಾಯ್ತಲ್ಲ, ಇನ್ನೇನಿದ್ರೂ ನನ್ನದೇ ಹವಾ ಎನ್ನುತ್ತಾ, ಸೀರೆಯನ್ನು ಸೊಂಟಕ್ಕೆ ಸುತ್ತಿ, ರೌಡಿಗಳನ್ನು ಮೂಟೆ ಕಟ್ಟೋಕೆ ರೆಡಿಯಾಗುತ್ತಿರುವ ವಿಡೀಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದು, ಮತ್ತೆ ಗೌತಮಿ ಜಾಧವ್ ಅವರನ್ನು ತೆರೆ ಮೇಲೆ ನೋಡಿ ಸಂಭ್ರಮ ಪಡುತ್ತಿದ್ದಾರೆ. ಅಂದ ಹಾಗೇ ಸತ್ಯ ಸೀರಿಯಲ್ ನಿರ್ದೇಶನ ಮಾಡಿರುವ ಸ್ವಪ್ನ ಕೃಷ್ಣ ಅವರೇ ಭಾರ್ಗವಿ LLB ನಿರ್ದೇಶನ ಮಾಡುತ್ತಿರೋದರಿಂದ ಗೌತಮಿ ಜಾಧವ್ ಎಂಟ್ರಿ ಕೊಟ್ತಿದ್ದಾರೆ.