- Home
- Entertainment
- TV Talk
- ಆ ಆಸ್ಪತ್ರೆಯಲ್ಲಿ ಕಣ್ಣು ಕಳ್ಕೊಂಡ ವೃದ್ಧರಿಗೂ, Bigg Boss ಅಶ್ವಿನಿ ಗೌಡಗೂ ಏನು ಸಂಬಂಧ? ಬೂಟ್ ಪಾಲಿಶ್ ಚಳುವಳಿ ಮಾಡಿದ್ರು
ಆ ಆಸ್ಪತ್ರೆಯಲ್ಲಿ ಕಣ್ಣು ಕಳ್ಕೊಂಡ ವೃದ್ಧರಿಗೂ, Bigg Boss ಅಶ್ವಿನಿ ಗೌಡಗೂ ಏನು ಸಂಬಂಧ? ಬೂಟ್ ಪಾಲಿಶ್ ಚಳುವಳಿ ಮಾಡಿದ್ರು
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಅವರ ಆಟಕ್ಕೆ ನೆಗೆಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಈಗ ದಿನೇಶ್ ಕುಮಾರ್ ಎನ್ನುವವರು ಬರೆದ ಬರಹವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ವಕೀಲಸಾಬ್ ಜಗದೀಶ್ ಅಭಿಮಾನಿಗಳು ಎಂಬ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಯಾಕೆ ಬಿಗ್ ಬಾಸ್‌ಗೆ ಹೋದರು?
ಅಶ್ವಿನಿ ಗೌಡ Ashwini Gowda ಅವರು ಯಾಕಾಗಿ ಬಿಗ್ ಬಾಸ್‌ಗೆ ಹೋದರು, ಯಾಕಾಗಿ ಅವರು ಇನ್ನೂ ಅಲ್ಲಿ ಇದ್ದಾರೆ ಅನ್ನುವುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ.
ಹಿಂದಿಯಲ್ಲಿ ಮೊದಲ ಬಿಗ್ ಬಾಸ್ ಶುರುವಾದಾಗಿನಿಂದ ಬೇರೆ ಬೇರೆ ಕಾರಣಗಳಿಗೆ ಅದನ್ನು ಫಾಲೋ ಮಾಡಿಕೊಂಡು ಬಂದವನು ನಾನು. ಅದೊಂದು psychological ಗೇಮ್ ಶೋ. ಮನುಷ್ಯನನ್ನು ಹಂತಹಂತವಾಗಿ ಮಾನಸಿಕವಾಗಿ ಬ್ರೇಕ್ ಮಾಡುತ್ತ ಆಡಿಸುವ ಆಟ.
ಅಶ್ವಿನಿ ಅವ್ರಿಗೆ ಇದು ಬೇಕಿರಲಿಲ್ಲ
ಈ ಬಾರಿಯ ಬಿಗ್ ಬಾಸ್‌ಗೆ ಅಶ್ವಿನಿ ಗೌಡ ಹೋಗಿದ್ದು ಗೊತ್ತಾದ ಕೂಡಲೇ ಇದು ಅವರಿಗೆ ಬೇಕಾಗಿರಲಿಲ್ಲ ಅನಿಸಿತ್ತು. ಅವರು ಮಹಾಸ್ವಾಭಿಮಾನಿ. ತಪ್ಪೋ ಸರಿಯೋ ತನಗೆ ಸರಿ ಎನಿಸಿದ್ದನ್ನು ಮಾಡುವವರು. ಆರಂಭದಲ್ಲಿ ಅವರಿಂದಲೂ ತಪ್ಪುಗಳಾದವು. ರಕ್ಷಿತಾ ವಿಷಯದಲ್ಲಿ ಅವರು ಮಾಡಿದ ಎಸ್ category ರಿಮಾರ್ಕ್ ಯಾರೂ ಕೂಡ ಸಮರ್ಥಿಸಿಕೊಳ್ಳಲಾಗದು. ನೋಡನೋಡ್ತಾ ಅವರು ಸೋಷಿಯಲ್ ಮೀಡಿಯಾದಲ್ಲಿ villainess ಆಗಿ ಹೋದರು. ಅಲ್ಲಿಂದಾಚೆಗೆ ಅವರು ಕುಂತರೂ ತಪ್ಪು, ನಿಂತರೂ ತಪ್ಪು. ಸೋಷಿಯಲ್ ಮೀಡಿಯಾ ಪರಿಭಾಷೆಯೇ ಅಂಥದ್ದು. ಅಲ್ಲಿ ದ್ವೇಷಿಸಲು ಜನರು ಬೇಕು, ಬೈಯಲು ಜನ ಬೇಕು, ಕೆಟ್ಟಾ ಕೊಳಕಾಗಿ ನಿಂದಿಸಲು ಜನ ಬೇಕು. ಬೈದುಬೈದು ತಮ್ಮ ಇಗೋ ತಣಿಸಿಕೊಳ್ಳುವ ಒಂದು ಜನವರ್ಗವೇ ಸೋಷಿಯಲ್ ಮೀಡಿಯಾದಲ್ಲಿ ಇದೆಯಲ್ಲವೇ?
ಮಿಂಟೋ ಆಸ್ಪತ್ರೆಯಲ್ಲಿ ಕಣ್ಣು ಕಳ್ಕೊಂಡ ಕಥೆ ಏನು?
ಅಶ್ವಿನಿ ಗೌಡ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಮಿಂಟೋ ಆಸ್ಪತ್ರೆಯಲ್ಲಿ ಹನ್ನೆರಡು ವೃದ್ಧರು ಕಣ್ಣಿನ ಪೊರೆ ಚಿಕಿತ್ಸೆಗೆ ಹೋಗಿ ಶಾಶ್ವತವಾಗಿ ಕಣ್ಣುಗಳನ್ನೇ ಕಳೆದುಕೊಂಡರು. ರೋಗಿಗಳಿಗೆ ಬಳಸಿದ ಔಷಧ ದೋಷಪೂರಿತವಾಗಿತ್ತು, ಅದಕ್ಕೆ ಅವರ ಕಣ್ಣುಹೋಯ್ತು ಎಂದು ವೈದ್ಯರು ತಲೆತೊಳೆದುಕೊಂಡರು. ಅದಕ್ಕೆ ಯಾರು ಜವಾಬ್ದಾರಿ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತವಿರಲಿಲ್ಲ.
ಕಣ್ಣುಕಳೆದುಕೊಂಡವರು ಯಾರು?
ಕಣ್ಣುಕಳೆದುಕೊಂಡವರು ತಳ್ಳೋಗಾಡಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು.. ಎಲ್ಲರೂ ಹೇಳುವವರು ಕೇಳುವವರು ಇಲ್ಲದ ಅಸಹಾಯಕ ಜನರು. ಕರವೇ ಈ ಹೋರಾಟವನ್ನು ಕೈಗೆ ಎತ್ತಿಕೊಂಡಾಗ ಇದನ್ನು ಲೀಡ್ ಮಾಡಲು ಅಶ್ವಿನಿ ಗೌಡರೆ ಸರಿ ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ. ಎ ನಾರಾಯಣಗೌಡರು ತೀರ್ಮಾನಿಸಿದ್ದರು. ಅಶ್ವಿನಿ ಗೌಡ ಮತ್ತು ತಂಡ ಮಿಂಟೋ ಗೆ ಹೋಗಿ ಯಾಕೆ ಹೀಗಾಯ್ತು ಎಂದು ಪ್ರಶ್ನಿಸಿದಾಗ ಅವರಲ್ಲಿ ಉತ್ತರಗಳಿರಲಿಲ್ಲ. ಒಂದಷ್ಟು ಜಗಳಗಳು ಆದವು. ವೈದ್ಯರು ನಮ್ಮ ಮೇಲೆ ಹಲ್ಲೆಯಾಯ್ತು ಎಂದು ಕಂಪ್ಲೇಂಟ್ ಕೊಟ್ಟರು.
ದೇಶಾದ್ಯಂತ ಚರ್ಚೆ ಆಯ್ತು
ಅಲ್ಲಿಂದಾಚೆಗೆ ಕಿರಿಯ ವೈದ್ಯರೆಲ್ಲ ಬೀದಿಗಿಳಿದರು. ವೈದ್ಯರ ಹೋರಾಟ ಬೆಳೆಯುತ್ತಾ ಹೋಯ್ತು. ಅಶ್ವಿನಿ ಗೌಡ ಅರೆಸ್ಟ್ ಆಗಬೇಕು ಅನ್ನೋದು ಅವರ ಬೇಡಿಕೆ. ಅರೆಸ್ಟ್ ಮಾಡೋದಿದ್ರೆ ಮಾಡಿ, ಆಗಿದ್ದು ಇಷ್ಟು ಎಂದು ಮೀಡಿಯಾ ಮುಂದೆ ಅಶ್ವಿನಿ ಮಾತಾಡುತ್ತಾ ಹೋದರು. ಈ ಅಮಾಯಕರ ಕಣ್ಣು ಕಿತ್ಕೊಂಡ್ರಲ್ಲ, ಕಾರಣ ಏನು ಹೇಳಿ ಅಂದ್ರು. ಪೊಲೀಸರಿಗೆ ವೈದ್ಯರು ಕೊಟ್ಟಿದ್ದು ಸುಳ್ಳು ದೂರು ಅನ್ನೋದು ಗೊತ್ತಿತ್ತು. ಹೀಗಾಗಿ ಅವರು ಅರೆಸ್ಟ್ ಮಾಡೋದಕ್ಕೆ ಹೋಗಲಿಲ್ಲ. ವೈದ್ಯ ಸಂಘಟನೆಗಳೆಲ್ಲ ಅಖಾಡಕ್ಕೆ ಇಳಿದವು. ಇಡೀ ಕರ್ನಾಟಕ ಎಲ್ಲ ಆಸ್ಪತ್ರೆಗಳ opd ಬಂದ್ ಮಾಡುವ ತೀರ್ಮಾನ ಆಯಿತು. ದೇಶಮಟ್ಟದಲ್ಲಿ ಇದು ವಿಸ್ತರಣೆ ಆಗುವ ಹಂತ ತಲುಪಿತು.
ಜೈಲಿಗೆ ಹೋಗಲು ಅಶ್ವಿನಿ ಗೌಡ ರೆಡಿ
ವೈದ್ಯರು opd ಗಳನ್ನು ಬಂದ್ ಮಾಡಿದರೆ ಲಕ್ಷಾಂತರ ರೋಗಿಗಳು ಪರದಾಡಬೇಕಾಗುತ್ತೆ, ಎಷ್ಟೋ ಜನರು ಸತ್ತೆಹೋಗಬಹುದು ಅನ್ನೋದು ಗೊತ್ತಾಗುತ್ತಿದ್ದಂತೆ ನಾರಾಯಣಗೌಡರು ಒಂದು ತೀರ್ಮಾನ ತಗೊಂಡು ಅಶ್ವಿನಿ ಗೌಡ ಮತ್ತು ಇತರರನ್ನು surrender ಮಾಡಿಸಿದರು. ಕೋರ್ಟಿಗೆ ಹಾಜರುಪಡಿಸಿದಾಗ ನೂರಾರು ವಕೀಲರು ಸ್ವಯಂ ಪ್ರೇರಣೆಯಿಂದ ಬಂದುನಿಂತಿದ್ದರು. ಕೋರ್ಟ್‌ನಲ್ಲೇ ಬೇಲ್ ಆಯ್ತು. ಜೈಲಿಗೆ ಹೋಗೋ ಪ್ರಮೇಯವೂ ಬರಲಿಲ್ಲ. ಆದರೆ ನಗುನಗುತ್ತಲೇ ಜೈಲಿಗೆ ಹೋಗಲು ಸಿದ್ಧವಾಗಿ ಬಂದಿದ್ದರು ಅಶ್ವಿನಿ ಗೌಡ.
ಬೂಟ್ ಪಾಲಿಶ್ ಚಳವಳಿ ಮಾಡಿದ್ರು
ಯಾರೋ ಕಣ್ಣು ಕಳಕೊಂಡ ಅಸಹಾಯಕರು. ಅವರ ಪರವಾಗಿ ನಿಂತು ಬಡಿದಾಡಿದ ಅಶ್ವಿನಿ ಗೌಡ ಅವರನ್ನು ಬಿಗ್ ಬಾಸ್ ಶೋನಲ್ಲಿ ಅವರ ಸಹಸ್ಪರ್ಧಿಗಳು ವಯಸ್ಸಾದವಳು, ಹಲ್ಲು ಸೆಟ್ ಉದುರುಸ್ತೀನಿ, ಮೂಲೆಯಲ್ಲಿ ಬಿದ್ದಿರಬೇಕು, ಹೋಗಲೇ ಅಂತೆಲ್ಲ ಅನ್ನುವಾಗ ನಿಜಕ್ಕೂ ನೋವಾಗುತ್ತದೆ. ಬಾಗಲಕೋಟೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಅಲ್ಲಿನ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾಗ, ಅಲ್ಲಿಗೆ ಹೋಗಿ ಬೂಟ್ ಪಾಲಿಶ್ ಚಳವಳಿ ಮಾಡಿದವರು ಇದೇ ಅಶ್ವಿನಿ ಗೌಡ. ಈಗ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಮಂಜೂರಾಗಿ ಹಣ ಬಿಡುಗಡೆಯೂ ಆಗಿದೆ.
ಬಿಗ್ ಬಾಸ್ ಏನು ಅನ್ನೋದು ಗೊತ್ತಿರೋ ಆಟಗಾರರು ಸಹಸ್ಪರ್ಧಿಗಳ ನಿಂದನೆಯನ್ನು ಮನಸಿಗೆ ತೆಗೆದುಕೊಳ್ಳದೆ ಆಡುತ್ತಾರೆ. ಆದರೆ ಅಶ್ವಿನಿ ಎಲ್ಲವನ್ನೂ ಹೃದಯಕ್ಕೆ ತೆಗೆದುಕೊಂಡು ಆಡುತ್ತಿದ್ದಾರೆ. ಅದಕ್ಕೆ ಅವರು ಕೆರಳುತ್ತಾರೆ, ಕೂಗಾಡುತ್ತಾರೆ, ಅಳುತ್ತಾರೆ. ತನ್ನ ಆತ್ಮಾಭಿಮಾನಕ್ಕೆ ಧಕ್ಕೆಯಾದ ಸಿಟ್ಟಿನಲ್ಲಿ ತಾವೂ ತಪ್ಪುಗಳನ್ನು ಮಾಡುತ್ತಿದ್ದಾರೆ.
ಗಿಲ್ಲಿಗೂ, ಅಶ್ವಿನಿಗೆ ಯಾಕೆ ಆಗಿ ಬರೋದಿಲ್ಲ?
ಗಿಲ್ಲಿ ನಟ ಒಳ್ಳೆಯ ಕಾಮಿಡಿಯನ್. ಅವನ ಕಾಮೆಡಿ timing ನಿಜಕ್ಕೂ ಚೆನ್ನಾಗಿದೆ. ಆದರೆ ಬಿಗ್ ಬಾಸ್ ಶುರುವಾದಾಗಿನಿಂದ ಅವನಿಗೆ ಅಶ್ವಿನಿ ಗೌಡ ಕೆರಳಿಸುವುದೇ ಒಂದು ಟಾಸ್ಕ್ ಆದಂತೆ ಇದೆ. ಅದು ಅವನ ತಪ್ಪೂ ಅಲ್ಲ. ಅದು ಅವನ ಆಟ. ಈ ಬಾರಿಯ ಬಿಗ್ ಬಾಸ್ ಗೆಲುವಿನ ಓಟದಲ್ಲಿ ಅವನೇ ಮುಂದಾಳು. ಉಳಿದ ಬಹುತೇಕ ಸ್ಪರ್ಧಿಗಳು ಅವನ ಸುತ್ತ ತಿರುಗುವ ಬಾಲಂಗೋಚಿಗಳು ಅಷ್ಟೇ. ಅವರೆಲ್ಲರನ್ನೂ ಅವನು ಸುಲಭವಾಗಿ ಮ್ಯಾನ್ಯುಪುಲೇಟ್ ಮಾಡುತ್ತಾನೆ. ಯಾರನ್ನು ಯಾರ ವಿರುದ್ಧನಾದರೂ ಎತ್ತಿಕಟ್ಟುತ್ತಾನೆ. ಅದು ಅವನಿಗೆ ಸಲೀಸು. ಅವನ ಬಳಗದಲ್ಲಿ ಇಲ್ಲದ, ಬಾಲಂಗೋಚಿ ಆಗಲು ಒಲ್ಲದ ಅಶ್ವಿನಿ ಗೌಡ ಅವನಿಗೆ ಟಾರ್ಗೆಟ್ ಆಗಿರೋದು ಕೂಡ ಸಹಜನೆ.
ಅಶ್ವಿನಿ ಗೌಡ ಅವ್ರನ್ನು ನಿಂದಿಸುತ್ತಿರೋರು ಯಾರು?
ಬಿಗ್ ಬಾಸ್ ಗೆದ್ದು ಅಶ್ವಿನಿ ಗೌಡ ಸಾಧಿಸಬೇಕಾಗಿದ್ದು ಏನೂ ಇಲ್ಲ. ಅವರನ್ನು ನಾನು ಮತ್ತು ಅವರನ್ನು ಹತ್ತಿರದಿಂದ ಬಲ್ಲವರು ಗುರುತಿಸೋದು ಛಲ ಬಿಡದ ಹೋರಾಟಗಾರ್ತಿಯನ್ನಾಗಿ ಮಾತ್ರ. ಅಶ್ವಿನಿಗೌಡ ಎಂದರೆ ಕೇಸ್, ಕೋರ್ಟ್ ಎಲ್ಲದರ ನಡುವೆಯೂ ತಿಂಗಳುಗಟ್ಟಲೆ ಈ ಪ್ರಕರಣದ ಬೆನ್ನುಬಿದ್ದು ಓಡಾಡಿ ಆ ಹನ್ನೆರಡು ಅಸಹಾಯಕ ವೃದ್ಧರಿಗೆ ಲಕ್ಷಗಟ್ಟಲೆ ಪರಿಹಾರ ಕೊಡಿಸಿದ್ದೆ ನೆನಪಾಗೋದು. ಯಾವ್ದೋ ಬಿಗ್ ಬಾಸ್ ಟಾಸ್ಕ್ ನಲ್ಲಿ ಗೆದ್ದಿದ್ದಲ್ಲ. ಅಶ್ವಿನಿ ಗೌಡ ಜೈಲಿಗೆ ಹೋಗ್ತಾರೆ ಅಂತ ಕಣ್ಣೀರಿಡುತ್ತಾ ಆ ಹನ್ನೆರಡು ಬಡಪಾಯಿಗಳು ಅವತ್ತು ಕೋರ್ಟ್‌ನಲ್ಲಿ ಸಾಲಾಗಿ ನಿಂತಿದ್ದನ್ನು ಹೇಗೆ ಮರೆಯೋದು? ಅದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದು?
ಅಶ್ವಿನಿ ಗೌಡ ಅವರನ್ನು ವಾಚಾಮಗೋಚರವಾಗಿ ನಿಂದಿಸುತ್ತ ಇರುವ ಜನರು ತಪ್ಪೆ ಮಾಡದ ಶುದ್ಧ ಜೀವಿಗಳ? ಒಂದೇ ಒಂದು ತಪ್ಪು ಮಾತಾಡದ ದಿವ್ಯಚೇತನಗಳಾ? ಟೀಕೆ ತಪ್ಪಲ್ಲ? ಆದರೆ ಸೊಂಟದ ಕೆಳಗಿನ ಭಾಷೆಯ ನಿಂದನೆ? ಅದು ಯಾವ ಸಂಸ್ಕಾರ?
ವಿಶೇಷ ಸೂಚನೆ ಇಲ್ಲಿದೆ!
ಇದೆಲ್ಲ ಓದಿ ಇದೇನೋ ಪಿಆರ್ ಮಾಡ್ತಿದ್ದಾರೆ ಅಂದುಕೊಳ್ಳಬೇಡಿ. ಅಶ್ವಿನಿ ಗೌಡ ಗೆಲ್ಲೋದು ಬೇಡ, ಅಲ್ಲಿ ಇನ್ನಷ್ಟು ದಿನ ಇರೋದು ಬೇಡ. ಹೊರಗೆ ಮಾಡಲು ಬೇಕಾದಷ್ಟು ಕೆಲಸಗಳು ಅವರಿಗೆ ಇದೆ. ಹಲ್ಲು ಕಚ್ಚಿ ಹೋರಾಟಕ್ಕೆ ನಿಂತರೆ ಇನ್ನಷ್ಟು ಅಸಹಾಯಕ ಜೀವಗಳಿಗೆ ಅನ್ಯಾಯವಾದಾಗ ಕೋರ್ಟು ಜೈಲು ಅಂತ ಹೆದರದೆ ನಿಲ್ಲುವ ಶಕ್ತಿಯು ಅವರಿಗಿದೆ. ಯಾರಿಗೆ ಗೊತ್ತು, ಅವರನ್ನು ನಿಂದಿಸುವ ಜನರಿಗೆ ಯಾವತ್ತೋ ಅನ್ಯಾಯವಾದಾಗ ನ್ಯಾಯ ಕೊಡಿಸಲು ಇದೇ ಅಶ್ವಿನಿ ಗೌಡ ಅವುಡುಗಚ್ಚಿ ಹೋರಾಟಕ್ಕೆ ನಿಲ್ಲಬಹುದು! ಯಾಕೆಂದರೆ ಬದುಕು ಬಿಗ್ ಬಾಸ್ ಶೋ ಅಲ್ಲ. ಬದುಕು ನಿತ್ಯ ಸಂಘರ್ಷದ ಮಹಾಯಾತ್ರೆ. ಸೋತು ಕುಸಿದಾಗ ಅಶ್ವಿನಿ ಗೌಡ ಅಂಥವರು ಊರುಗೋಲಾಗಿ ಬರಬಹುದು!
(ವಿ.ಸೂ.: ನನ್ನ ಈ ಬರೆಹಕ್ಕೂ ಒಂದಷ್ಟು ಜನರು ಕೆಟ್ಟ ಕಾಮೆಂಟ್ ಹಾಕಬಹುದು. ಹಾಕೊಳ್ಳಿ. ಇಂಥ ಕಾಮೆಂಟ್‌ಗಳಿಗೆ ಅಂಜಿ ಕೂರಲು ಆಗದು. ನನಗೆ ಅನ್ನಿಸಿದನ್ನು ಹೇಳಲು ನಾನು ಯಾವತ್ತೂ, ಯಾವ ಹಿಂಜರಿಕೆಯನ್ನೂ ಇಟ್ಟುಕೊಂಡವನಲ್ಲ, ಅದು ನನ್ನ ಜಾಯಮಾನವೇ ಅಲ್ಲ. )
( ವಿಶೇಷ ಸೂಚನೆ- ಈ ಲೇಖನಕ್ಕೂ, ಎಷಿಯಾನೆಟ್ ಸುವರ್ಣನ್ಯೂಸ್‌ಗೂ ಸಂಬಂಧ ಇಲ್ಲ. ಇದು ಲೇಖಕರ ಅಭಿಪ್ರಾಯ. ಇದನ್ನು ಸುವರ್ಣ ನ್ಯೂಸ್ ಬೆಂಬಲಿಸೋದಿಲ್ಲ )
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

