ನಂದಿ ಹಿಲ್ಸ್‌ನಲ್ಲಿ ಮಾತ್ರವಲ್ಲ ಬೆಂಗಳೂರಿನ ಈ ಸ್ಥಳಗಳಲ್ಲೂ ಸನ್‌ರೈಸ್ ಸಖತ್ತಾಗಿರುತ್ತೆ, ಮಿಸ್ ಮಾಡ್ಬೇಡಿ
ಸೂರ್ಯೋದಯ ಅಂದ್ರೆ ಕತ್ತಲನ್ನು ಹೊಡೆದೋಡಿಸಿ ಬೆಳಕಿನ ಆಗಮನ. ದಿನದ ಶುಭಾರಂಭ. ಮುಂಜಾನೆ ಸೂರ್ಯನನ್ನು ಕಣ್ತುಂಬಿಕೊಂಡರೆ ದಿನವಿಡೀ ಉಲ್ಲಾಸಭರಿತವಾಗರಬಹುದು. ನೀವು ಬೆಂಗಳೂರಿನಲ್ಲಿದ್ದು ಬ್ಯೂಟಿಫುಲ್ ಸನ್‌ರೈಸ್ ನೋಡೋಕೆ ಬಯಸಿದ್ರೆ ಮಿಸ್ ಮಾಡ್ದೆ ಈ ಜಾಗಗಳಿಗೆ ವಿಸಿಟ್ ಮಾಡಿ.
ಮಾಕಲಿ ದುರ್ಗ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ 18 ಕಿಲೋಮೀಟರ್ ದೂರದಲ್ಲಿ ಮಾಕಲಿ ದುರ್ಗವಿದೆ. ಘಾಟಿಸುಬ್ರಮಣ್ಯ ದೇವಸ್ಥಾನದಿಂದ 6.4 ಕಿ. ಮೀ ದೂರದಲ್ಲಿರುವ ಮಾಕಳಿ ದುರ್ಗವು ಬೆಟ್ಟವು ಹಚ್ಚ ಹಸಿರಿನಿಂದ ಕೂಡಿದೆ. ಬೆಂಗಳೂರಿನಿಂದ ಕೇವಲ 60 ಕಿಮೀ ದೂರದಲ್ಲಿರುವ ಮಾಕಳಿ ದುರ್ಗ ಇತ್ತೀಚಿಗೆ ಚಾರಣಿಗರ ಫೇವರಿಟ್ ಲಿಸ್ಟ್‌ನಲ್ಲಿದೆ. ಇಲ್ಲಿನ ಸೂರ್ಯೋದಯ ನೋಡಲು ಸಖತ್ತಾಗಿರುತ್ತದೆ.
ಬಿಳಿಕಲ್ ರಂಗಸ್ವಾಮಿ ಬೆಟ್ಟ
ಬಿಳಿಕಲ್ ರಂಗನಾಥ ಸ್ವಾಮಿ ಬೆಟ್ಟವು ಭಾರತದ ಕರ್ನಾಟಕ ಕನಕಪುರ ಪಟ್ಟಣದ ಸಮೀಪವಿರುವ ಬೆಟ್ಟವಾಗಿದೆ. ಇದು ಬೆಂಗಳೂರು ನಗರದ ದಕ್ಷಿಣಕ್ಕೆ 70 ಕಿಲೋ ಮೀಟರ್ ಹಾಗೂ ಕನಕಪುರ ತಾಲೂಕಿನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಬೆಳ್ಳಂಬೆಳಗ್ಗೆ ಇಲ್ಲಿ ತೆರಳಿದರೆ ಸುಂದರವಾದ ಸೂರ್ಯೋದಯ ನೋಡಬಹುದು. ಬೆಟ್ಟದ ಮೇಲೆ ರಂಗನಾಥ ಸ್ವಾಮಿಯ ದೇವಸ್ಥಾನವಿದೆ.
ನಾರಾಯಣ ಗಿರಿ ಬೆಟ್ಟ
ಬೆಂಗಳೂರಿನಿಂದ ಸುಮಾರು 76 ಕಿ.ಮೀ ದೂರದಲ್ಲಿರುವ ನಾರಾಯಣಗಿರಿ ಬೆಟ್ಟವು ಅತ್ಯುತ್ತಮ ಸೂರ್ಯೋದಯವನ್ನು ತೋರಿಸುತ್ತದೆ. ಈ ಶಿಖರವು ರಾಮನಗರದಿಂದ ಸುಮಾರು 20 ಕಿಮೀ ದೂರದಲ್ಲಿದೆ ಮತ್ತು ಸುಮಾರು 3800 ಅಡಿ ಎತ್ತರದಲ್ಲಿದೆ. ವಾರಾಂತ್ಯದಲ್ಲಿ ಮಾತ್ರ ತೆರೆದಿರುವ ಲಕ್ಷ್ಮೀ ನಾರಾಯಣನ ದೇವಾಲಯದ ನೆಲೆಯಾಗಿದೆ, ಪರ್ವತವನ್ನು ಸುತ್ತುವರೆದಿರುವ ಕೋಟೆಯ ಅವಶೇಷಗಳನ್ನು ಶಿಖರದಿಂದ ನೋಡಬಹುದಾಗಿದೆ.
ದೊಡ್ಡ ಆಲದ ಮರ
ರಾಮೋಹಳ್ಳಿಯಲ್ಲಿರುವ ದೊಡ್ಡ ಆಲದ ಮರ ಅಥವಾ ಬಿಗ್ ಬನಿಯನ್ ಟ್ರೀ ಜಾಗವು 3 ಎಕರೆ ಪ್ರದೇಶದಲ್ಲಿ ಹರಡಿರುವ ದೈತ್ಯ 4 ಶತಮಾನಗಳಷ್ಟು ಹಳೆಯದಾದ ಆಲದ ಮರವಾಗಿದೆ, ಇದು ಬೆಂಗಳೂರು ನಗರದ ಹೊರವಲಯದಲ್ಲಿರುವ ಜನಪ್ರಿಯ ಆಕರ್ಷಣೆಯಾಗಿದೆ. ದೊಡ್ಡ ಆಲದ ಮರದ ಸಂಕೀರ್ಣದ ಸುತ್ತಲೂ ನಡೆಯುವುದು ಸಂತಸವನ್ನುಂಟು ಮಾಡುತ್ತದೆ. ದೊಡ್ಡ ಆಲದ ಮರದ ಸುತ್ತಲೂ ನಿರ್ಮಿಸಲಾದ ಸಣ್ಣ ಉದ್ಯಾನವನದ ಬೇರುಗಳ ನಡುವೆ ನಡೆಯುವ ದಾರಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಸುಂದರವಾದ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬಹುದು.
ಮಂಚನಬೆಲೆ ಡ್ಯಾಮ್
ಮಂಚನಬೆಲೆ ಬೆಂಗಳೂರಿನ ಹೊರವಲಯದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ಸುಂದರವಾದ ಅಣೆಕಟ್ಟು ಮತ್ತು ಜಲಾಶಯಕ್ಕೆ ಹೆಸರುವಾಸಿಯಾಗಿದೆ. ಇದು ಬೆಂಗಳೂರಿನಿಂದ 40 ಕಿಮೀ ದೂರದಲ್ಲಿದೆ ಮತ್ತು ಈ ಸ್ಥಳವು ನೀಡುವ ಶಾಂತಿ, ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತತೆಯಿಂದಾಗಿ ಬೆಂಗಳೂರಿನ ಜನರಿಗೆ ಇತ್ತೀಚೆಗೆ ಜನಪ್ರಿಯ ವಾರಾಂತ್ಯದ ವಿಶ್ರಾಂತಿ ತಾಣವಾಗಿ ಹೊರಹೊಮ್ಮಿದೆ. ಇಲ್ಲಿನ ಸೂರ್ಯೋದಯ ನೋಡಲು ಅತ್ಯದ್ಭುತವಾಗಿರುತ್ತದೆ.
ತುರಹಳ್ಳಿ ಫಾರೆಸ್ಟ್
ತುರಹಳ್ಳಿ ಫಾರೆಸ್ಟ್ ಬೆಂಗಳೂರಿನ ಹೊರವಲಯದಲ್ಲಿ ಹೊಸಹಳ್ಳಿ ಬಳಿ, ಬೆಂಗಳೂರು-ಕನಕಪುರ ರಸ್ತೆಯ ವಾಜರಹಳ್ಳಿ ರಸ್ತೆಯಲ್ಲಿದೆ. ಈ ಜಾಗವು ಬೆಂಗಳೂರಿನಿಂದ ವಾರಾಂತ್ಯ ಮತ್ತು ಬೆಳಗಿನ ಪ್ರಯಾಣಕ್ಕೆ ಸೂಕ್ತವಾಗಿದೆ. ಬ್ಯೂಟಿಫುಲ್ ಸನ್‌ರೈಸ್, ರಮಣೀಯ ಸೌಂದರ್ಯ, ವ್ಯೂಪಾಯಿಂಟ್‌ಗಳನ್ನು ಇಲ್ಲಿ ನೋಡಬಹುದು. ಈ ಪ್ರದೇಶಕ್ಕೆ ಸಾರಿಗೆ ವ್ಯವಸ್ಥೆ ಅಷ್ಟೇನೂ ಸರಿಯಾಗಿಲ್ಲದ ಕಾರಣ, ಜನರು ಸ್ವಂತ ವಾಹನದ ಮೂಲಕ ತೆರಳುವುದು ಉತ್ತಮ.
ಸ್ಕಂದ ಗಿರಿ
ಬೆಂಗಳೂರಿನಿಂದ 70ಕಿಮೀ ದೂರದಲ್ಲಿರುವ ಸ್ಕಂದ ಗಿರಿ, ಒಂದು ದಿನದ ಚಾರಣ ಕೈಗೊಳ್ಳಲು ಸೂಕ್ತ ತಾಣ. ಚಿಕ್ಕಬಳ್ಳಾಪುರ ಗ್ರಾಮದಿಂದ 3ಕಿಮೀ ದೂರದಲ್ಲಿದೆ. ಇಲ್ಲಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಬೆಟ್ಟದ ತುದಿ ತಲುಪಲು 2 ಗಂಟೆ ಸಮಯ ಹಿಡಿಯುತ್ತದೆ. ಆದರೆ ಇಲ್ಲಿಗೆ ತಲುಪಿ ಸೂರ್ಯೋದಯ ನೋಡುವುದೇ ಕಣ್ಣಿಗೆ ಹಬ್ಬದಂತಿರುತ್ತದೆ.