ಬೆಂಗಳೂರು ಟು ತುಮಕೂರಿಗೆ ಮೆಟ್ರೊ: ಒಂದು ಗಂಟೆಯ ಪ್ರಯಾಣ; ಎಲ್ಲೆಲ್ಲಿ ಸ್ಟಾಪ್? ಡಿಟೇಲ್ಸ್ ಇಲ್ಲಿದೆ
ಬೆಂಗಳೂರು ಮತ್ತು ತುಮಕೂರು ನಡುವೆ ನಮ್ಮ ಮೆಟ್ರೋ ವಿಸ್ತರಣೆಗೆ ಯೋಜನೆ ಸಿದ್ಧವಾಗಿದ್ದು, ಇದು ರಾಜ್ಯದ ಮೊದಲ ಅಂತರ್-ಜಿಲ್ಲಾ ಮೆಟ್ರೋ ಆಗಲಿದೆ. ಹಸಿರು ಮಾರ್ಗದ ವಿಸ್ತರಣೆಯಾಗಿ ಮಾದಾವರದಿಂದ ಸಿರಾ ಗೇಟ್‌ವರೆಗೆ 60 ಕಿ.ಮೀ ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣ ನಿರ್ಮಿಸಲು BMRCL ಯೋಜನಾ ವರದಿ ಸಲ್ಲಿಸಿದೆ.

ಬೆಂಗಳೂರು ತುಂಬಾ ಮೆಟ್ರೊ
ನಮ್ಮ ಮೆಟ್ರೊ ಇದಾಗಲೇ ಬೆಂಗಳೂರನ್ನು ಕವರ್ ಮಾಡುತ್ತಿದೆ. ಕೆಲವು ಪ್ರದೇಶಗಳಲ್ಲಿ ಇನ್ನೂ ಮೆಟ್ರೊ ಕಾಮಗಾರಿ ಆರಂಭವಾಗದಿದ್ದರೂ ಕೆಲವೇ ವರ್ಷಗಳಲ್ಲಿ ಸಂಪೂರ್ಣ ಬೆಂಗಳೂರು ಮೆಟ್ರೊಮಯ ಆಗಲಿದೆ. ಇದರ ನಡುವೆಯೇ ಬೆಂಗಳೂರು ಮತ್ತು ತುಮಕೂರು ನಡುವೆ ಕೇವಲ ಒಂದು ಗಂಟೆಯ ಅವಧಿಗೆ ಮೆಟ್ರೊ ವಿಸ್ತರಣೆ ಆಗಲಿದೆ. ಈ ಕುರಿತು ಇದಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ವಿವರವಾದ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಬೆಂಗಳೂರು ಟು ತುಮಕೂರು
ಸರ್ಕಾರದ ಸದ್ಯದ ರಾಜಕೀಯ ಪರಿಸ್ಥಿತಿ ತಿಳಿಯಾದ ಮೇಲೆ ಇದರ ಬಗ್ಗೆ ಸರ್ಕಾರ ಗಮನ ಹರಿಸಲಿದೆ. ಬೆಂಗಳೂರು ಮತ್ತು ತುಮಕೂರು ಎರಡು ಪ್ರತ್ಯೇಕ ಜಿಲ್ಲೆಗಳಾಗಿರುವ ಹಿನ್ನೆಲೆಯಲ್ಲಿ, ಈ ಮೆಟ್ರೋದಿಂದ ರಾಜ್ಯದ ಮೊದಲ ಅಂತರ್-ಜಿಲ್ಲಾ ಮೆಟ್ರೋ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.
ಹಸಿರು ಲೈನ್ ಕಾರ್ಯ
18-20 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಹಸಿರು ಲೈನ್ ಕಾರ್ಯ ನಿರ್ವಹಿಸಲಿದೆ. ಮಾದಾವರದಿಂದ ಸಿರಾ ಗೇಟ್‌ವರೆಗೆ 60 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಇದು ಸಂಚರಿಸಲಿದೆ. ಒಟ್ಟೂ 16 ನಿಲ್ದಾಣಗಳನ್ನು ಫಿಕ್ಸ್ ಮಾಡಲಾಗಿದೆ. ಆರಂಭಿಕ ಕಾರ್ಯಸಾಧ್ಯತಾ ವರದಿಯಲ್ಲಿ ಈ ಮಾರ್ಗದಲ್ಲಿ 25 ನಿಲ್ದಾಣಗಳನ್ನು ನಿರ್ಮಿಸುವ ಪ್ರಸ್ತಾಪವಿತ್ತು. ಆದರೆ, ಪ್ರಸ್ತುತ ಡಿಪಿಆರ್‌ನಲ್ಲಿ ಆ ಸಂಖ್ಯೆಯನ್ನು 16ಕ್ಕೆ ಇಳಿಸಲಾಗಿದೆ.
16 ಸ್ಟಾಪ್ಗಳು
ಅಂದಹಾಗೆ ಈ ಉದ್ದೇಶಿತ ಮೆಟ್ರೋ ಆರಂಭವಾಗುವುದು ಹಾಲಿ ಇರುವ ಹಸಿರು ಮಾರ್ಗದ ಕೊನೆಯ ನಿಲ್ದಾಣ ಮಾದಾವರ (ಬಿಐಇಸಿ)ದಿಂದ. ಇದು ನೆಲಮಂಗಲ, ಡಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಮಾರ್ಗವಾಗಿ ತುಮಕೂರು ಪ್ರವೇಶಿಸಲಿದೆ. ಕ್ಯಾತಸಂದ್ರದ ನಂತರ, ತುಮಕೂರು ವಿಶ್ವವಿದ್ಯಾಲಯ, ಸಿದ್ದಗಂಗಾ ವೈದ್ಯಕೀಯ ಕಾಲೇಜು, ತುಮಕೂರು ಬಸ್ ನಿಲ್ದಾಣದಲ್ಲಿ ನಿಲ್ದಾಣಗಳು ಬರಲಿದ್ದು, ಸಿರಾ ಗೇಟ್ ಬಳಿ ಟರ್ಮಿನಲ್ (ಕೊನೆಯ) ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ.
ಪ್ರಮುಖ ನಿಲ್ದಾಣಗಳು ಎಲ್ಲೆಲ್ಲಿ?
ಮಾದಾವರದಿಂದ ಆರಂಭವಾಗುವ ಈ ಮೆಟ್ರೊ ನೆಲಮಂಗಲ, ಡಾಬಸ್‌ಪೇಟೆ, ಕ್ಯಾತಸಂದ್ರ, ತುಮಕೂರು ವಿಶ್ವವಿದ್ಯಾಲಯ, ಸಿದ್ದಗಂಗಾ ವೈದ್ಯಕೀಯ ಕಾಲೇಜು, ತುಮಕೂರು ಬಸ್ ನಿಲ್ದಾಣದಲ್ಲಿ ಸ್ಟಾಪ್ ನೀಡಲಿದೆ. ಸಿರಾ ಗೇಟ್ ಇದು ತುಮಕೂರಿನ ಕೊನೆಯ ಅಥವಾ ಟರ್ಮಿನಲ್ ನಿಲ್ದಾಣವಾಗಲಿದೆ. ಸುಮಾರು ಮೂರು ಲಕ್ಷ ಪ್ರಯಾಣಿಕರು ಇದರಲ್ಲಿ ದಿನನಿತ್ಯ ಸಂಚರಿಸುವ ನಿರೀಕ್ಷೆ ಇದೆ.
ಎಷ್ಟು ಖರ್ಚು
ಬಿಎಂಆರ್‌ಸಿಎಲ್ ತಾನೇ ನೇರವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಅಂದಾಜು 18,000 ಕೋಟಿ ರೂ. ವೆಚ್ಚವಾಗಲಿದೆ. ಪಿಪಿಪಿ ಮಾದರಿ ಅರ್ಥಾತ್ ಸಾರ್ವಜನಿಕ - ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಿರ್ಮಿಸಿದರೆ ಯೋಜನಾ ವೆಚ್ಚವು ಸುಮಾರು 20,000 ಕೋಟಿ ರೂ. ಆಗಲಿದೆ ಎನ್ನಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

