2024ರಲ್ಲಿ ರಾಜ್ಯದಲ್ಲಿರೋ ಈ ಅತ್ಯದ್ಭುತ ಜಾಗಗಳಿಗೆ ಮಿಸ್ ಮಾಡ್ದೆ ವಿಸಿಟ್ ಮಾಡಿ
21ನೇ ಶತಮಾನದಲ್ಲಿ 23 ವರ್ಷಗಳನ್ನು ಮುಗಿಸಿ, ಇದೀಗ 24ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದಲ್ಲಿ ಕ್ಯಾಲೆಂಡರ್ ಅಷ್ಟೇ ಅಲ್ಲದೇ ಜೀವನದ ಹಾದಿಯೂ ಬದಲಾಗುವಂತಾಗಲಿ. ಹೊಸ ವರ್ಷದಲ್ಲಿ ಕರ್ನಾಟಕದಲ್ಲಿ ನೋಡಲೇಬೇಕಾದ ಕೆಲವು ಸ್ಥಳಗಳ ಮಾಹಿತಿ ಇಲ್ಲಿದೆ.
1. ಮಾಂದಲ್ ಪಟ್ಟಿ
ಸಮುದ್ರಮಟ್ಟದಿಂದ 1600 ಮೀ. ಎತ್ತರದಲ್ಲಿರುವ ಈ ಬೆಟ್ಟದ ಸಾಲು ಕೊಡಗು ಜಿಲ್ಲೆಯಲ್ಲಿದ್ದು, ಆಫ್‌ರೋಡ್ ಜೀಪು ಚಾಲನೆ ಅನುಭವ ಮತ್ತು ಮನತಣಿಸುವ ಪ್ರಕೃತಿಯನ್ನು ಸವಿಯಲು ಇಲ್ಲಿಗೆ ಭೇಟಿ ನೀಡಲೇಬೇಕು.
2. ತಡಿಯಂಡಮೋಳ್
ಕರ್ನಾಟಕದ 3ನೇ ಅತ್ಯಂತ ಎತ್ತರದ ಶಿಖರವಾಗಿರುವ, ಕೊಡಗು ಜಿಲ್ಲೆಯಲ್ಲಿರುವ ತಡಿಯಂಡಮೋಳ್ ಸಮುದ್ರಮಟ್ಟದಿಂದ 1748 ಮೀ. ಎತ್ತರವಿದೆ. ಇದು ಶೋಲಾ ಅರಣ್ಯದ ಸೊಬಗನ್ನು ಕಣ್ಣೆದುರು ತೆರೆದಿಡುತ್ತದೆ.
3. ಕೋಡಿ ಬೆಂಗ್ರೆ ಡೆಲ್ಟಾ ಬೀಚ್
ಇದು ಉಡುಪಿ ಜಿಲ್ಲೆಯಲ್ಲಿದ್ದು, ಮೂರು ಬದಿಯಲ್ಲೂ ಸಮುದ್ರ ಹೊಂದಿರುವ ಸುಂದರ ಬೀಚ್ ಇದಾಗಿದೆ. ಸುವರ್ಣಾ ನದಿ ಸಮುದ್ರ ಸೇರುವ ಈ ಸ್ಥಳದಲ್ಲಿ ಡೆಲ್ಟಾ ನಿರ್ಮಾಣವಾಗಿದ್ದು, ಪ್ರವಾಸಿಗರಿಗೆ ಕಯಾಕಿಂಗ್ ಅನುಭವ ಪಡೆಯಲು ಉತ್ತಮ ಸ್ಥಳವಾಗಿದೆ
4. ಸೇಂಟ್ ಮೇರೀಸ್ ದ್ವೀಪಗಳು:
ಉಡುಪಿ ಜಿಲ್ಲೆಯಲ್ಲಿರುವ ಈ ದ್ವೀಪಗಳು ಜ್ವಾಲಮುಖಿಯಿಂದ ಸೃಷ್ಟಿಯಾದ ದ್ವೀಪಗಳಾಗಿದ್ದು, ಸುಂದರ ಪರಿಸರದೊಂದಿಗೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಇಲ್ಲಿಗೆ ತಲುಪಲು ಮಲ್ಪೆಯಿಂದ ಹಡಗಿನ ವ್ಯವಸ್ಥೆಯಿದ್ದು, ಸಮುದ್ರಯಾನದ ಅನುಭವವೂ ಇಲ್ಲಿ ದೊರೆಯಲಿದೆ.
5. ದಾಂಡೇಲಿ:
ಉತ್ತರ ಕನ್ನಡ ಜಿಲ್ಲೆಯ ಈ ತಾಣದಲ್ಲಿ ಪಶ್ಚಿಮ ಘಟ್ಟದ ಅರಣ್ಯ ಸೌಂದರ್ಯ ಸವಿಯಬಹುದು. ಜೊತೆಗೆ ಕಾಳಿ ನದಿಯಲ್ಲಿ ರ್‍ಯಾಫ್ಟಿಂಗ್ ಮಾಡುವ ಅವಕಾಶ ಇಲ್ಲಿ ದೊರೆಯಲಿದೆ. ಹಾಗಾಗಿಯೇ ಇದನ್ನು ದಕ್ಷಿಣ ಭಾರತದ ಸಾಹಸ ಕಾರ್ಯದ ರಾಜಧಾನಿ ಎಂದು ಕರೆಯಲಾಗುತ್ತದೆ.
6. ಸೋಮನಾಥಪುರ ಚೆನ್ನಕೇಶವ ದೇಗುಲ:
ಮೈಸೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನ ಹೊಯ್ಸಳರ ಕಾಲದ ಭವ್ಯ ವಾಸ್ತುಶಿಲ್ಪವನ್ನು ತೆರೆದಿಡುತ್ತದೆ. ನಿರ್ಮಾಣಕ್ಕೆ ಸುಮಾರು 50 ವರ್ಷಗಳ ಸಮಯ ತೆಗೆದುಕೊಂಡ ಈ ದೇಗುಲ ಕರ್ನಾಟಕದ ಶಿಲ್ಪಿಗಳ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
7. ಹಿರೇಬೆಣಕಲ್ ಶಿಲಾ ಸಮಾಧಿ:
ಸುಮಾರು 4 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತಾಣವಾದ ಇದು ಕೊಪ್ಪಳ ಜಿಲ್ಲೆಯಲ್ಲಿದೆ. ಇಲ್ಲಿ ಆದಿ ಮಾನವ ನಿರ್ಮಿತ ಶಿಲಾ ಸಮಾಧಿಗಳು ಮತ್ತು ಗುಹಾಚಿತ್ರಗಳಿವೆ.
8. ಹಂಪಿ:
ಜಗತ್ತಿನ ಅತಿದೊಡ್ಡ ಓಪನ್ ಏರ್ ಆರ್ಕಿಯಾಲಜಿಕಲ್ ಮ್ಯೂಸಿಯಂ ಎಂದು ಕರೆಸಿಕೊಳ್ಳುವ ತಾಣ ಹಂಪಿ. ವಿಜಯನಗರ ಜಿಲ್ಲೆಯಲ್ಲಿರುವ ಹಂಪಿಯಲ್ಲಿರುವ ಪ್ರತಿ ಕಲ್ಲೂ ಸೌಂದರ್ಯಕ್ಕೆ ಪ್ರತ್ಯೇಕ ಮೆರುಗು ನೀಡಿದೆ.
9. ನೇತ್ರಾಣಿ ದ್ವೀಪ
ಉತ್ತರ ಕನ್ನಡ ಜಿಲ್ಲೆಯ ಬಳಿ ಅರಬ್ಬಿ ಸಮುದ್ರದಲ್ಲಿರುವ ಹೃದಯಾಕಾರದ ದ್ವೀಪವೇ ನೇತ್ರಾಣಿ. ಕಡಲ ಗರ್ಭವನ್ನು ನೋಡಲು ಸ್ಕೂಬಾ ಡೈವಿಂಗ್ ಮಾಡಲು ಇದು ಅತ್ಯುತ್ತಮ ಪ್ರದೇಶ.
10. ಸಾವನದುರ್ಗ ಬೆಟ್ಟ
ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟವಾದ ಸಾವನದುರ್ಗ ಚಾರಣಪ್ರಿಯರಿಗೆ ಹೊಸತಾದ ಅನುಭವ ನೀಡುತ್ತದೆ. 1700ನೇ ಇಸವಿಯಲ್ಲಿ ಕೆಂಪೇಗೌಡರು ಕಟ್ಟಿದ ಕೋಟೆ ಈ ಶಿಲಾಬೆಟ್ಟದ ಮೇಲಿದೆ.
11. ಸ್ಕಂದಗಿರಿ:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಸ್ಕಂದಗಿರಿ ಬೆಟ್ಟ ಮುಂಜಾನೆಯ ಸುಂದರ ನೋಟವನ್ನು ಚಾರಣಿಗರಿಗೆ ಒದಗಿಸುತ್ತದೆ. ಸೂರ್ಯ ಹುಟ್ಟುವ ಮೊದಲೇ ಬೆಟ್ಟದ ತುದಿ ತಲುಪಿ ಕವಿದಿರುವ ಮಂಜನ್ನು ನೋಡುವುದು ಮನಸ್ಸಿಗೆ ಆನಂದ ನೀಡುತ್ತದೆ.
12. ಬಾದಾಮಿ:
ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು ಗುಹಾಂತರ ದೇವಾಲಯಗಳಿಗೆ ಪ್ರಸಿದ್ಧಿಯಾಗಿದೆ. ಇವು ಮಧ್ಯಕಾಲೀನ ಯುಗದ ಹಿಂದೂ, ಜೈನ ಮತ್ತು ಬೌಧ್ಧ ಸ್ಮಾರಗಳನ್ನು ಹೊಂದಿರುವ ತಾಣವಾಗಿದೆ.