ವಿಜಯ್ ಅವರ ಕೊನೆಯ ಚಿತ್ರ 'ಜನನಾಯಗನ್' ಸೆನ್ಸಾರ್ ಸಮಸ್ಯೆಯಿಂದಾಗಿ ಬಿಡುಗಡೆಯಾಗದೆ ಸಂಕಷ್ಟಕ್ಕೆ ಸಿಲುಕಿದೆ. ಸೆನ್ಸಾರ್ ಮಂಡಳಿ ಮತ್ತು ನಿರ್ಮಾಪಕರ ನಡುವಿನ ಕಾನೂನು ಹೋರಾಟದಲ್ಲಿ, ಮದ್ರಾಸ್ ಹೈಕೋರ್ಟ್ ಚಿತ್ರದ ಬಿಡುಗಡೆಗೆ ತಡೆ ನೀಡಿದೆ. ಇದರಿಂದಾಗಿ ಕೆವಿಎನ್ ಪ್ರೊಡಕ್ಷನ್ಸ್‌ಗೆ ಹಿನ್ನಡೆಯಾಗಿದೆ.

ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರವಾದ ಜನನಾಯಗನ್ ಇದೇ ಜನವರಿ 9ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ಸೆನ್ಸಾರ್ ಸಮಸ್ಯೆಯಿಂದ ಕೋರ್ಟ್ ಅಂಗಳಕ್ಕೆ ಹೋದ ಜನನಾಯಗನ್ ಈಗಲೂ ರಿಲೀಸ್ ಆಗಿಲ್ಲ. ಅಷ್ಟೇ ಅಲ್ಲ ಜನನಾಯಗನ್ ಗೆ ಕೋರ್ಟ್ ಕೂಡ ಶಾಕ್ ಕೊಟ್ಟಿದ್ದು, ನಿರ್ಮಾಪಕರ 400 ಕೋಟಿ ನೀರಿನಲ್ಲಿ ಮುಳುಗುವ ಲಕ್ಷಣ ಕಾಣ್ತಾ ಇವೆ.

ಜನನಾಯಗನ್‌ಗೆ ಹೈಕೋರ್ಟ್ ಬಿಗ್ ಶಾಕ್..!

ಯೆಸ್ ದಳಪತಿ ವಿಜಯ್ ನಟನೆಯ ಕೊನೆ ಸಿನಿಮಾ ಜನನಾಯಗನ್ ಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ತಾ ಇಲ್ಲ. ಇದು ವಿಜಯ್ ನಟನೆಯ ಕೊನೆ ಸಿನಿಮಾ, ಈ ಚಿತ್ರದ ಬಳಿಕ ಫುಲ್ ಟೈಂ ಪಾಲಿಟಿಕ್ಸ್‌ನಲ್ಲಿ ಸಕ್ರಿಯರಾಗಲಿದ್ದಾರೆ. ಸೋ ನೆಚ್ಚಿನ ನಟನ ಕೊನೆ ಚಿತ್ರವನ್ನ ದೊಡ್ಡದಾಗಿ ಸೆಲೆಬ್ರೇಟ್ ಮಾಡೋಕೆ ಸಜ್ಜಾಗಿದ್ದ ಫ್ಯಾನ್ಸ್‌ಗೆ ಶಾಕ್ ಮೇಲೆ ಶಾಕ್ ಕೊಡಲಾಗ್ತಾ ಇದೆ. ಅಸಲಿಗೆ ಜನವರಿ 9ಕ್ಕೆ ಸಿನಿಮಾದ ಬಿಡುಗಡೆ ಫಿಕ್ಸ್ ಆಗಿತ್ತು. ಅಡ್ವಾನ್ಸ್ ಬುಕ್ಕಿಂಗ್ ಕೂಡ ಆರಂಭಗೊಂಡಿತ್ತು. ಆದ್ರೆ ಸೆನ್ಸಾರ್ ಮಂಡಳಿ ಸಿನಿಮಾಗೆ ಸರ್ಟಿಫಿಕೇಟ್ ಕೊಡೋದಕ್ಕೆ ಒಪ್ಪಲಿಲ್ಲ. ಸೆನ್ಸಾರ್ ಹೇಳಿದ ಕಂಡೀಷನ್ಸ್‌ ಒಪ್ಪೋದಕ್ಕೆ ವಿಜಯ್ ರೆಡಿ ಆಗಲಿಲ್ಲ. ಸೋ ನಾಟಕೀಯ ಬೆಳವಣಿಗೆಯಲ್ಲಿ ಚಿತ್ರದ ರಿಲೀಸ್ ಮುಂದಕ್ಕೆ ಹೋಯ್ತು.

ಸೆನ್ಸಾರ್ ವಿರುದ್ದ ಜನನಾಯಗನ್ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಸುಪ್ರೀಂ ಕೋರ್ಟ್ ಕೆಳಗಿನ ನ್ಯಾಯಾಲಯದಲ್ಲಿ ಮೊದಲು ವಿಚಾರಣೆ ಎದುರಿಸಿ ಅಂತ ಚಾಟಿ ಬೀಸಿತು. ಆ ಬಳಿಕ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠ, ಸೆನ್ಸಾರ್ ಮಂಡಳಿಯನ್ನ ತರಾಟೆಗೆ ತೆಗೆದುಕೊಂಡು ತಕ್ಷಣವೇ ಸಿನಿಮಾಗೆ ಸರ್ಟಿಫಿಕೇಟ್ ಕೊಡಿ ಅಂತ ಆರ್ಡರ್ ಮಾಡಿತ್ತು. ಇದ್ರಿಂದ ವಿಜಯ್ ಫ್ಯಾನ್ಸ್ ಫುಲ್ ಖುಷಿಯಾಗಿದ್ರು. ಆದ್ರೆ ಈ ಆದೇಶದ ವಿರುದ್ದ ಸೆನ್ಸಾರ್ ಬೋರ್ಡ್ ಮೇಲ್ಮನವಿ ಸಲ್ಲಿಸಿತ್ತು.

ಜನನಾಯಗನ್‌ಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ..!

ಹೌದು ಮಂಗಳವಾರ ಏಕಸದಸ್ಯ ಪೀಠದ ಆದೇಶವನ್ನ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ. ಅಂದ್ರೆ ಸಿಂಗಲ್ ಜಡ್ಜ್ ಕೊಟ್ಟಿದ್ದ ತೀರ್ಪು ಸಿಂಧುವಲ್ಲ ಅಂತ ಹೇಳಿ ಕೆವಿಎನ್ ಪ್ರೊಡಕ್ಷನ್ಸ್‌ಗೆ ಶಾಕ್ ಕೊಟ್ಟಿದೆ. ಸಿನಿಮಾದಲ್ಲಿ ಸೇನೆಗೆ ಸಂಬಂಧಿಸಿದ ದೃಶ್ಯಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿವೆ ಅನ್ನೋದು ಸೆನ್ಸಾರ್ ಮಂಡಳಿ ವಾದ. ಇದಕ್ಕಾಗಿ ಸಿನಿಮಾವನ್ನ ಪರಿಷ್ಕರಣಾ ಸಮಿತಿಗೆ ಕಳಿಸಬೇಕು ಅಂತ ಅವರು ಪಟ್ಟು ಹಿಡಿದಿದ್ರು. ಈಗ ಕೋರ್ಟ್ ಕೂಡ ಸೆನ್ಸಾರ್ ಮಂಡಳಿ ಪರವಾಗಿಯೇ ತೀರ್ಪು ಕೊಟ್ಟಿದ್ದು, ಸಿನಿಮಾ ರಿಲೀಸ್ ಯಾವಾಗ ಅನ್ನೋದು ಯಕ್ಷ ಪ್ರಶ್ನೆ ಆಗಿದೆ.

ದಳಪತಿ ನಂಬಿ 400 ಕೋಟಿ ಕಳೆದುಕೊಂಡ KVN?

ಹೌದು ದಳಪತಿ ವಿಜಯ್‌ ಅವರ ಈ ಸಿನಿಮಾವನ್ನ ನಿರ್ಮಿಸಿರೋದು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್. ವಿಜಯ್‌ಗೆ ಬರೊಬ್ಬರಿ 250 ಕೋಟಿ ಸಂಭಾವನೆ ಕೊಟ್ಟಿರೋ ಕೆವಿಎನ್ 150 ಕೋಟಿ ಹಣವನ್ನ ಚಿತ್ರದ ಮೇಕಿಂಗ್‌ಗೆ ಖರ್ಚು ಮಾಡಿದೆ. ಇಷ್ಟೆಲ್ಲಾ ಖರ್ಚು ಮಾಡಿದ್ರೂ ಇದು ರಿಮೇಕ್ ಸಿನಿಮಾ ಅನ್ನೋದು ಟ್ರೈಲರ್ ನೋಡ್ತಾನೇ ಬಯಲಾಗಿದೆ.

ತೆಲುಗಿನ ಭಗವಂತ್ ಕೇಸರಿ ಚಿತ್ರವನ್ನ ರಿಮೇಕ್ ಮಾಡಿ, ಅದಕ್ಕೆ ತನ್ನ ರಾಜಕೀಯ ಭವಿಷ್ಯಕ್ಕೆ ಅನುಕೂಲವಾಗುವಂಥಾ ಕೆಲ ದೃಶ್ಯ ಸೇರಿಸಿದ್ದಾರೆ ವಿಜಯ್. ಆ ದೃಶ್ಯಗಳಿಂದಲೇ ಈಗ ಸಿನಿಮಾ ಬಿಡುಗಡೆಗೆ ಸಮಸ್ಯೆ ಆಗಿದೆ. ವಿಜಯ್​​ ನಂಬಿ ಕೆವಿಎನ್ ಪ್ರೊಡಕ್ಷನ್ಸ್​ ಬರೊಬ್ಬರಿ 400 ಕಳೆದುಕೊಳ್ಳುವ ಸ್ಥಿತಿ ಬಂದಿದೆ.

ರಾಜಕೀಯ ಹಗ್ಗಜಗ್ಗಾಟ, ನಿರ್ಮಾಪಕನಿಗೆ ಸಂಕಟ!

ಹೌದು ಜನನಾಯಗನ್ ಸೆನ್ಸಾರ್ ವಿಷ್ಯ ರಾಜಕೀಯ ಹಗ್ಗಜಗ್ಗಾಟಕ್ಕೂ ಕಾರಣ ಆಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , ಈ ಸಿನಿಮಾ ಪರ ಮಾತನಾಡಿ ಕೇಂದ್ರ ಸರ್ಕಾರವನ್ನ ಟೀಕಿಸಿದ್ರು. ಈ ಸಿನಿಮಾದ ರಿಲೀಸ್‌ಗೆ ಅಡ್ಡಿಯಾಗಿದ್ದು ವಿಜಯ್ ಪರ ಫ್ಯಾನ್ಸ್​ಗೆ ಮತ್ತಷ್ಟು ಅನುಕಂಪ ಮೂಡುವಂತೆ ಮಾಡ್ತಾ ಇದೆ. ಅದು ಅವರ ರಾಜಕೀಯಕ್ಕೆ ಪ್ಲಸ್ ಆಗಬಹುದು ಅನ್ನಲಾಗ್ತಾ ಇದೆ. ಆದ್ರೆ ಇವರ ರಾಜಕೀಯದ ನಡುವೆ ಬಡವಾಗಿದ್ದು ಮಾತ್ರ ಕೆವಿಎನ್ ಪ್ರೊಡಕ್ಷನ್ಸ್..!

ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್.