- Home
- Life
- Relationship
- ವಿಶ್ವಕಪ್ ಹೀರೋ ಪುತ್ರ, ಸಿಎಸ್‌ಕೆ ಮಾಜಿ ಪ್ಲೇಯರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ, ಇಬ್ಬರಿಗೂ ಇದು ಸೆಕೆಂಡ್ ಮ್ಯಾರೇಜ್!
ವಿಶ್ವಕಪ್ ಹೀರೋ ಪುತ್ರ, ಸಿಎಸ್‌ಕೆ ಮಾಜಿ ಪ್ಲೇಯರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ, ಇಬ್ಬರಿಗೂ ಇದು ಸೆಕೆಂಡ್ ಮ್ಯಾರೇಜ್!
ನಟಿ ಸಂಯುಕ್ತ ಷಣ್ಮುಗನಾಥನ್ ಮತ್ತು ಮಾಜಿ ಕ್ರಿಕೆಟಿಗ ಅನಿರುದ್ಧ ಶ್ರೀಕಾಂತ್ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಮದುವೆಯು ಇಬ್ಬರಿಗೂ ಎರಡನೇ ವಿವಾಹವಾಗಿದ್ದು, ಈ ಮೂಲಕ ತಮ್ಮ ಸಂಬಂಧದ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಟಿ ಮತ್ತು ಮಾಡೆಲ್ ಸಂಯುಕ್ತ ಷಣ್ಮುಗನಾಥನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟಿಗ ಅನಿರುದ್ಧ ಶ್ರೀಕಾಂತ್ ಅವರನ್ನು ಗುರುವಾರ ಚೆನ್ನೈನಲ್ಲಿ ವಿವಾಹವಾದರು.
ಆ ಮೂಲಕ ಹಲವು ದಿನಗಳಿಂದ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಹಿಂದೂ ಸಂಪ್ರದಾಯದಂತೆ ಸಾಂಪ್ರದಾಯಿಕವಾಗಿ ವಿವಾಹ ನಡೆಯಿತು. ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು.
ಮದುವೆಯ ದಿನದಂದು ಸಂಯುಕ್ತ ಚಿನ್ನದ ಬಣ್ಣದ ಸೀರೆ ಹಾಗೂ ಆಕರ್ಷಕ ಚಿನ್ನಾಭರಣಗಳ ಮೂಲಕ ಕಂಗೊಳಿಸಿದರೆ, ಇನ್ನೊಂದೆಡೆ ಅನಿರುದ್ಧದದ ಗೋಲ್ಡ್ ಶೇಡ್‌ನ ಶರ್ಟ್ ಹಾಗೂ ಧೋತಿ ಧರಿಸಿದ್ದರು. ತಕ್ಷಣವೇ ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೊಸ ವಧು-ವರರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಸಂಯುಕ್ತ ಹಾಗೂ ಅನಿರುದ್ಧ ಕಾರ್ಯಕ್ರಮದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು, '27.11.2025' ಎಂದು ಬರೆದುಕೊಂಡಿದ್ದಾರೆ. ಅದರೊಂದಿಗೆ ಉಂಗುರ ಹಾಗೂ ಹೃದಯದ ಇಮೋಜಿಗಳನ್ನೂ ಬಳಸಿದ್ದಾರೆ. ಅದರೊಂದಿಗೆ ಕಾರ್ಯಕ್ರಮದ ವಿಡಿಯೋವನ್ನೂ ಹಂಚಿಕೊಂಡಿದ್ದು, ಇದರಲ್ಲಿ ಎರಡೂ ಕುಟುಂಬಗಳು, ಸಂಯುಕ್ತ ಅವರ ಪುತ್ರ ಹಾಗೂ ಆಪ್ತ ಸ್ನೇಹಿತರು ಇದ್ದರು.
ಇವರಿಬ್ಬರ ಸಂಬಂಧ ಕಳೆದ ದೀಪಾವಳಿ ಸಂದರ್ಭದಲ್ಲಿ ಜಗಜ್ಜಾಹೀರಾಗಿತ್ತು. ಇಬ್ಬರೂ ಕೂಡ ಜೊತೆಯಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದರು. ಆ ಮೂಲಕ ಇವರಿಬ್ಬರ ರಿಲೇಷನ್‌ಷಿಪ್ ರೂಮರ್‌ಗಳು ಶುರುವಾಗಿ, ನಿಶ್ಚಿತಾರ್ಥ-ಮದುವೆಯವರೆಗೂ ಹಬ್ಬಿತ್ತು.
ತಮ್ಮ ಅಧಿಕೃತ ಘೋಷಣೆಗೂ ಮುನ್ನ, ಸಂಯುಕ್ತಾ ಅವರು "ಎಲ್ಲವೂ ಇಂಟರ್ನೆಟ್‌ನಲ್ಲಿದೆ. ಏನೇನಿದೆಯೋ, ಅದು ಅಲ್ಲೇ ಇದೆ" ಎಂದು ಹೇಳುವ ಮೂಲಕ ನಡೆಯುತ್ತಿರುವ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ್ದರು.
ಈ ವಿವಾಹವು ಇಬ್ಬರಿಗೂ ಹೊಸ ದಾರಿಯನ್ನು ಸೂಚಿಸಿದೆ. 1983ರ ವಿಶ್ವಕಪ್ ವಿಜೇತ ತಂಡದ ಹೀರೋ ಹಾಗೂ ಹಿರಿಯ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಪುತ್ರ ಅನಿರುದ್ಧ ಶ್ರೀಕಾಂತ್ ಈ ಹಿಂದೆ ಮಾಡೆಲ್ ಆರತಿ ವೆಂಕಟೇಶ್ ಅವರನ್ನು ವಿವಾಹವಾಗಿದ್ದರು. ಆ ವಿವಾಹವು ಎರಡು ವರ್ಷಗಳ ಕಾಲ ನಡೆದು, 2012 ಮತ್ತು 2014 ರ ನಡುವೆ ವಿಚ್ಛೇದನದಲ್ಲಿ ಕೊನೆಗೊಂಡಿತು.
ಸಂಯುಕ್ತಾ ಅವರ ಮೊದಲ ವಿವಾಹ ಟೆಕ್ ಉದ್ಯಮಿ ಕಾರ್ತಿಕ್ ಶಂಕರ್ ಅವರೊಂದಿಗೆ ಆಗಿತ್ತು. ಈ ದಂಪತಿಗಳು 2025 ರ ಆರಂಭದಲ್ಲಿ ತಮ್ಮ ವಿಚ್ಛೇದನವನ್ನು ಅಂತಿಮಗೊಳಿಸಿದರು. ಸಂದರ್ಶನವೊಂದರಲ್ಲಿ ತಮ್ಮ ವಿಚ್ಛೇದನ ಅಧಿಕೃತ ಆಗಿರುವುದನ್ನು ಘೋಷಿಸಿದ್ದರು. ನನ್ನ ಪತಿಗೆ ಇನ್ನೊಂದು ಸಂಬಂಧ ಇದ್ದ ಕಾರಣಕ್ಕೆ ಈ ವಿವಾಹ ಕೊನೆಗೊಂಡಿತು ಎಂದು ಹೇಳಿದ್ದಲ್ಲದೆ, ಆ ಕ್ಷಣದಲ್ಲಿ ಇಡೀ ಜೀವನ ಸುಳ್ಳು ಎಂದು ನನಗೆ ಅನಿಸಿತ್ತು ಎಂದಿದ್ದರು. ಸಂಯುಕ್ತ ಮತ್ತು ಅನಿರುದ್ಧ ಅವರಿಗೆ ಎಲ್ಲೆಡೆಯಿಂದ ಅಭಿನಂದನೆಗಳು ಹರಿದು ಬರುತ್ತಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

