ವಿಧಾನಸೌಧದಲ್ಲಿ ಡಿಸಿಪಿ ಯೋಗೇಶ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಫುಲ್ ಗರಂ ಆದರು. ಅದಕ್ಕೆ ಕಾರಣ ಸಿಎಂ ಡಿಕೆಶಿ ಆದೇಶವಿಲ್ಲದಿದ್ದರೂ, ಕಾರನ್ನ ತೆಗೆಸಿರೋದಕ್ಕೆ. ಅಷ್ಟಕ್ಕೂ ಏನಿದು ವಿವಾದ? ಸ್ಟೋರಿ ಓದಿ..

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ವಿಧಾನಸೌಧ ಡಿಸಿಪಿ ಮೇಲೆ ಫುಲ್ ಗರಂ ಆದರು. ಅಧಿವೇಶನ ಮುಗಿಸಿಕೊಂಡು ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ತೆರಳುವ ವೇಳೆ ಘಟನೆ ನಡೆದಿದೆ.

ಆಗಿದ್ದೇನು?

ಮುಖ್ಯಮಂತ್ರಿಯಾದ ದಿನದಿಂದ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬಂದಾಗ ಕೆಂಗಲ್ ದ್ವಾರದ ಬಳಿ ತಮ್ಮ ಕಾರನ್ನು ನಿಲ್ಲಿಸುತ್ತಿದ್ದರು. ಈಗ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕಾರನ್ನು ನಿಲ್ಲಿಸಿ ವಿಧಾನಸೌಧದ ಒಳಗೆ ಪ್ರವೇಶ ಮಾಡಿದ ಬೆನ್ನಲ್ಲೇ ಡಿಸಿಪಿ ಯೋಗೇಶ್ ಅವರು ಡ್ರೈವರ್‍‌ಗೆ ಹೇಳಿ ಕಾರನ್ನು ತೆಗೆಸಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.

ವಿಧಾನಸೌಧದಲ್ಲಿ ಕೆಲಸ ಮುಗಿದ ಬಳಿಕ ಸಿದ್ದರಾಮಯ್ಯ ನಿವಾಸಕ್ಕೆ ತೆರಳಲು ಕೆಂಗಲ್ ಗೇಟ್ ಬಳಿ ಬಂದಿದ್ದರು. ಆದರೆ ಅವರ ಕಾರು ಅಲ್ಲಿರಲಿಲ್ಲ. ಕಾರಿಗಾಗಿ ಸ್ವಲ್ಪ ಹೊತ್ತು ಕಾದಿದ್ದಾರೆ. ನಂತರ ಕಾರು ಎಲ್ಲಿ ಹೋಯ್ತು ಎಂದು ಕೇಳಿದಾಗ ಬೆಂಬಲಿಗರು, ಡಿಸಿಪಿ ತೆಗೆಸಿರೋ ವಿಚಾರವನ್ನು ಹೇಳಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಸಿದ್ದರಾಮಯ್ಯ ಡಿಸಿಪಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಡಿಸಿಪಿ ಗೆ ಕರೆದು ಯಾಕೆ ಕಾರು ತೆಗೆಸಿದ್ದು ಎಂದು ಗದರಿದ್ದಾರೆ. ಏ ನಿನ್ನ ಮೇಲೆ ಕೇಸ್ ಇರೋದು ಗೊತ್ತಿದೆ. ಸುಮ್ಮನೆ ಇಲ್ಲದಿರೋದನ್ನ ಮಾಡಬೇಡ.. ಹುಷಾರ್ ಎಂದು ಡಿಸಿಪಿಯನ್ನು ಕರೆದು ಜಾಡಿಸಿದ್ದಾರೆ. ಅಷ್ಟರಲ್ಲಿ ಅವರ ಕಾರು ಬಂದಿತ್ತು, ಕೋಪದಲ್ಲೇ ಸಿದ್ದರಾಮಯ್ಯ ಹೊರಟು ಹೋಗಿದ್ದಾರೆ. ಹೋಗುವ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಡಿಸಿಪಿ ನಡವಳಿಕೆ ಬಗ್ಗೆ ಹೇಳಿದ್ದಾರೆ. ಅವರು ವಿಧಾನಸೌಧದಲ್ಲಿ ಸರಿಯಾಗಿ ನಡೆದುಕೊಳ್ಳಲ್ಲ. ಮೊದಲಿನಿಂದಲೂ ಅವರ ವಿರುದ್ಧ ಆರೋಪಗಳಿವೆ. ಆತನ ಮೇಲೆ ಕಣ್ಣು ಇಡಿ ಎಂದು ಖರ್ಗೆಗೆ ಹೇಳಿದ್ದಾರೆ. ಇನ್ನು, ವಿಧಾನಸೌಧದಲ್ಲಿ ಡಿಸಿಪಿ ಯೋಗೇಶ್ ಅವರ ಕೆಲಸದ ಮೇಲೆ ವಿಧಾನಸೌಧದಲ್ಲಿ ಮೊದಲಿನಿಂದಲೂ ಆಕ್ಷೇಪಗಳಿವೆ ಎನ್ನಲಾಗಿದೆ.

ವಿವಿಐಪಿಗಳ ವಿಚಾರದಲ್ಲಿ ಅವರು ತಮ್ಮ ಕರ್ತವ್ಯನಿಷ್ಠೆಯನ್ನ ಮಾಡಿಲ್ಲ ಎಂಬ ಆರೋಪಗಳಿವೆ. ಸಿದ್ದರಾಮಯ್ಯ ಅವರ ಕಾರು ಸಿಬ್ಬಂದಿಗೆ ಬೆದರಿಸಿ ಕಾರನ್ನು ತೆಗೆಸಿದ್ದರು ಎನ್ನಲಾಗಿದೆ. ಈ ವಿಚಾರ ಸಿದ್ದರಾಮಯ್ಯಗೆ ಗೊತ್ತಾಗಿತ್ತು. ಅದೇ ಕಾರಣಕ್ಕೆ ಸಿದ್ದರಾಮಯ್ಯ ಇವತ್ತು ಡಿಸಿಪಿಯನ್ನ ಕರೆಸಿ ಹುಷಾರ್ ಎಂದು ಎಚ್ಚರಿಸಿದ್ದಾರೆ. ಅದಕ್ಕೆ ಡಿಸಿಪಿ ಅವರು ಕ್ಷಮೆ ಕೇಳಿದ್ದಾರೆ.

ಇಲ್ಲಿ ಪ್ರಮುಖ ವಿವಾದ ಏನು ಅಂದರೆ ಸಿದ್ದರಾಮಯ್ಯ ಅವರ ಕಾರನ್ನು ತೆಗೆಸಿ ಅಂತಾ ಯಾವುದೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಯಾವುದೇ ಸೂಚನೆ ನೀಡಿಲ್ಲ. ಆದರೆ ಇದು ಮುಖ್ಯಮಂತ್ರಿ ಅವರ ಸೂಚನೆ ಎಂದು ಹೇಳಿ ಡಿಸಿಪಿ ಅವರು ಕಾರನ್ನು ತೆಗೆಸಿದ್ದಾರೆ.ಇಲ್ಲಿ ಮುಖ್ಯಮಂತ್ರಿಗಳ ಕಾರು ಮಾತ್ರ ಇರಬೇಕು. ಬೇರೆ ಯಾರದ್ದೂ ಇರಬಾರದು ಎಂದು ಅವಾಜ್ ಹಾಕಿ ಕಾರನ್ನು ತೆಗೆಸಿದ್ದಾರೆ ಎಂಬ ಆರೋಪ ಇದೆ.

YouTube video player