ನೆಲಮಂಗಲದ ಮಂಡಿಗೆರೆಯಲ್ಲಿ ಕ್ರಿ.ಶ.1050ರ ಚೋಳ ಸಾಮ್ರಾಜ್ಯದ ರಾಜಾಧಿರಾಜನ ಶಾಸನ ಪತ್ತೆ!
ನೆಲಮಂಗಲ ತಾಲೂಕಿನ ಮಂಡಿಗೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶೌಚಾಲಯದ ನೆಲಹಾಸಾಗಿದ್ದ ಕಲ್ಲು ಕ್ರಿ.ಶ. 1050ರ ಚೋಳರ ಕಾಲದ ಮಹತ್ವದ ಶಾಸನಗಳಾಗಿವೆ ಎಂಬುದು ಪತ್ತೆಯಾಗಿವೆ. ರಾಜಾಧಿರಾಜ ಚೋಳನ ಆಳ್ವಿಕೆಗೆ ಸೇರಿದ ಈ ಶಾಸನವು ಸಾವಿರಾರು ವರ್ಷಗಳ ಇತಿಹಾಸವನ್ನು ತೆರೆದಿಟ್ಟಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಂಡಿಗೆರೆ ಗ್ರಾಮದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ. ಇಲ್ಲಿಯವರೆಗೆ ಸ್ಥಳೀಯ ಕಥೆಗಳು ಮತ್ತು ಪುರಾಣಗಳಿಗೆ ಮಾತ್ರ ಸೀಮಿತವಾಗಿದ್ದ ಈ ಪ್ರದೇಶದಲ್ಲಿ, ಈಗ ಚೋಳ ಸಾಮ್ರಾಜ್ಯದ ಕಾಲದ ಮಹತ್ವದ ಐತಿಹಾಸಿಕ ಕುರುಹುಗಳು ಹಾಗೂ ಶಾಸನಗಳು ಬೆಳಕಿಗೆ ಬಂದಿವೆ.
ಗ್ರಾಮದ ಅಚ್ಚರಿಯ ಇತಿಹಾಸ:
ನೆಲಮಂಗಲದ ಹೊರವಲಯದ ಭೈರನಾಯಕನಹಳ್ಳಿಯಿಂದ ಮಂಡಿಗೆರೆಗೆ ತೆರಳುವಾಗ ದಾರಿಯಲ್ಲಿ ಸಿಗುವ ಬರಾಡಿ ಬೆಟ್ಟದ ಸುತ್ತಮುತ್ತಲ ಪ್ರದೇಶಗಳು ಹಲವು ರೋಚಕ ಸ್ಥಳೀಯ ಕಥೆಗಳನ್ನು ಹೊಂದಿವೆ. ಸ್ಥಳೀಯರ ಪ್ರಕಾರ, ಇಲ್ಲಿ ಶ್ರೀರಾಮನು ಮರಳಿನ ಲಿಂಗವನ್ನು ಪ್ರತಿಷ್ಠಾಪಿಸಿದ್ದಾನೆ ಹಾಗೂ ಸೀತೆಯ ಜಡೆ ಇಲ್ಲಿನ ಬಂಡೆಯ ಮೇಲೆ ಮೂಡಿದೆ ಎನ್ನಲಾಗುತ್ತದೆ. ಅಲ್ಲದೆ, ಮಹಾಭಾರತದ ಭೀಮ ಮತ್ತು ಅರ್ಜುನನ ಮಂಡಿ (ಮೊಣಕಾಲು) ಗುರುತುಗಳೂ ಇಲ್ಲಿವೆ ಎಂಬ ನಂಬಿಕೆಯಿದೆ.
ಮಂಡಿಗೆರೆಯ ಸರ್ಕಾರಿ ಶೌಚಾಲಯ ಅಥವಾ ಶಾಲೆಯ ಆವರಣಕ್ಕೆ ಭೇಟಿ ನೀಡಿದಾಗ ಅಲ್ಲಿ ಒಂದು ದೊಡ್ಡ ಕಲ್ಲಿನ ಚಪ್ಪಡಿ ಕಂಡುಬಂದಿದೆ. ಇದರ ಮೇಲೆ ತಮಿಳಿನಲ್ಲಿ ಕೆತ್ತಲಾದ ಅಕ್ಷರಗಳು ಹಾಗೂ ವೀರಗಲ್ಲೊಂದು ಇರುವುದನ್ನು ಗಮನಿಸಬಹುದು.
ಕ್ರಿ.ಶ. 1050 ರ ಚೋಳರ ಶಾಸನ ಪತ್ತೆ:
'ಎಪಿಗ್ರಾಫಿಯಾ ಕರ್ನಾಟಕ' ಸಂಪುಟ 9 (EC9) ರ ಪ್ರಕಾರ, ಮಂಡಿಗೆರೆಯಲ್ಲಿ ಗ್ರಂಥ ಮತ್ತು ತಮಿಳು ಅಕ್ಷರಗಳಲ್ಲಿ ಕೆತ್ತಲಾದ ಶಾಸನವೊಂದು ಪತ್ತೆಯಾಗಿದೆ. ಕ್ರಿ.ಶ. 1050ರಷ್ಟು ಹಳೆಯದಾದ ಈ ಶಾಸನವು ಪ್ರಸಿದ್ಧ ರಾಜಾಧಿರಾಜ ಚೋಳ-1 (Kovirajakesaripanmar alias Sri-Rajadhiraja-Devar) ನ ಆಳ್ವಿಕೆಯ 33ನೇ ವರ್ಷಕ್ಕೆ ಸೇರಿದೆ.
ಈ ಶಾಸನದಲ್ಲಿ ರಾಜಾಧಿರಾಜನ ತಂದೆಯಾದ ರಾಜೇಂದ್ರ ಚೋಳನು ಉತ್ತರದಲ್ಲಿ ಗಂಗಾ ನದಿ, ದಕ್ಷಿಣದಲ್ಲಿ ಲಂಕಾ (ಇಲಂಗೈ), ಪಶ್ಚಿಮದಲ್ಲಿ ಮಹಾದಾಯಿ ನದಿ ಹಾಗೂ ಪೂರ್ವದಲ್ಲಿ ಕದರಂ (ಮಲೇಷ್ಯಾ) ವಿಜಯ ಸಾಧಿಸಿದ ಬಗ್ಗೆ ಉಲ್ಲೇಖಿಸಲಾಗಿದೆ. ಗಂಗ ಸಮ್ರಾಜ್ಯದ ರಾಜಧಾನಿಯಾಗಿದ್ದ ಮಾನ್ಯಪುರ (ಪ್ರಸ್ತುತ ಮಣ್ಣೆ) ಮತ್ತು ಮಣ್ಣೈ-ನಾಡು ಪ್ರದೇಶದ ಆಡಳಿತದ ಕುರಿತು ಶಾಸನವು ಬೆಳಕು ಚೆಲ್ಲುತ್ತದೆ.
ಬರಾಡಿ ಬೆಟ್ಟದ ಮೇಲಿರುವ ಶ್ರೀ ಮರಳು ರಾಮೇಶ್ವರ ದೇವಾಲಯ:
ಮಂಡಿಗೆರೆ ಶಾಸನದ ಮುಂದುವರಿದ ಭಾಗವು ಕಲ್ಲಿನ ಹಿಮ್ಮಗ್ಗಲ (ಕಲ್ಲಿನ ಹಿಂಭಾಗದ) 15 ಸಾಲುಗಳಲ್ಲಿ ಕೆತ್ತಲ್ಪಟ್ಟಿರುವುದು ಕಂಡುಬಂದಿದೆ. ಇಲ್ಲಿರುವ 'ಮಂಡೇಶ್ವರ ದೇವಾಲಯ'ದ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ಬೆಟ್ಟದ ಹತ್ತುವಾಗ ಸಿಗುವ 'ಶ್ರೀ ಮರಳು ರಾಮೇಶ್ವರ ಸ್ವಾಮಿ' ದೇವಾಲಯದ ಆವರಣದಲ್ಲಿ ಧನುಸ್ಸು ಮತ್ತು ಕತ್ತಿ ಹಿಡಿದಿರುವ ಅತ್ಯಂತ ಸುಂದರವಾದ ಪ್ರಾಚೀನ ವೀರಗಲ್ಲನ್ನು ಕಾಣಬಹುದು.
ಒಟ್ಟಾರೆಯಾಗಿ, ಮಂಡಿಗೆರೆ ಗ್ರಾಮಸ್ಥರಿಗೆ ತಮ್ಮ ಗ್ರಾಮಕ್ಕೆ ಒಂದು ಸಹಸ್ರಮಾನದ (1000 ವರ್ಷಗಳ) ಇತಿಹಾಸವಿದೆ ಎಂಬುದು ಈಗ ತಿಳಿದುಬಂದಿದೆ. ಸ್ಥಳೀಯರು ಮತ್ತು ಇತಿಹಾಸಾಸಕ್ತರು ಈ ಅಪರೂಪದ ಚೋಳರ ಕಾಲದ ಶಾಸನ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಮುಂದಾಗಬೇಕಿದೆ.

