ನೆಲಮಂಗಲ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಗಂಗರ ಕಾಲದ, ಕ್ರಿ.ಶ 850ಕ್ಕೆ ಸೇರಿದ ಅಪರೂಪದ ಹುಲಿಬೇಟೆ ವೀರಗಲ್ಲು ಪತ್ತೆಯಾಗಿದೆ. ಈ ಶಾಸನ ಸಹಿತ ವೀರಗಲ್ಲು, ಹುಲಿಯೊಂದಿಗೆ ಹೋರಾಡಿ ವೀರಮರಣ ಹೊಂದಿದ ಸಿವಮರೆನಾದಿ ಎಂಬ ವೀರನ ಕಥೆಯನ್ನು ಸಾರುತ್ತದೆ.
ದಾಬಸ್‍ಪೇಟೆ: ಗಂಗರ ಆಳ್ವಿಕೆ ಕಾಲಘಟ್ಟವಾದ ಕ್ರಿ.ಶ 850ರ ಸುಮಾರಿಗೆ ಸೇರಿರುವ ಅಪರೂಪದ ಶಾಸನ ಸಹಿತ ಹುಲಿಬೇಟೆ ವೀರಗಲ್ಲು ನೆಲಮಂಗಲ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಪತ್ತೆಯಾಗಿದೆ. ಬೈರಸಂದ್ರ ಗ್ರಾಮದ ರಂಗಸ್ವಾಮಯ್ಯನವರ ಜಮೀನಿನಲ್ಲಿ ಉಳುಮೆ ಮಾಡುವಾಗ ವೀರಗಲ್ಲು ಸಿಕ್ಕಿದೆ. ತಕ್ಷಣ ಅದನ್ನು ರಕ್ಷಣೆ ಮಾಡಿ ಪತ್ರಕರ್ತ ವಿಜಯ್ ಹೊಸಪಾಳ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಇತಿಹಾಸ ತಜ್ಞರಾದ ಗೋಪಾಲ್‍ರಾವ್ ಮಗ ಬಾಲಸುಬ್ರಹಣ್ಯ, ವೇದಾವತಿ ಹಾಗೂ ಕೆ.ಧನ್‍ಪಾಲ್, ನರೇಂದ್ರ ಅವರಿಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಹುಲಿಬೇಟೆ ವೀರಗಲ್ಲು ಎಂದು ಅವರು ದೃಢಪಡಿಸಿದ್ದು, ಕ್ರಿ.ಶ 850ರ ಕಾಲಘಟ್ಟಕ್ಕೆ ಸೇರುವ ಅಪರೂಪದ ಶಾಸನ ಸಹಿತ ವೀರಗಲ್ಲು ಎಂಬುದಾಗಿ ತಿಳಿಸಿದ್ದಾರೆ. ಈ ಶಾಸನವನ್ನು ಗೋಪಾಲ್‍ರಾವ್ ಕಿರಿಯ ಮಗ ಕಾರ್ತಿಕೇಯ, ಸೊಸೆ ಡಾ.ವೇದಾವತಿ, ಇತಿಹಾಸ ತಜ್ಞರಾದ ಪಿ.ವಿ ಕೃಷ್ಣಮೂರ್ತಿ, ಕೆ.ಆರ್. ನರಸಿಂಹನ್ ಓದಿ ತಿಳಿಸಿದ್ದಾರೆ.
ಕನ್ನಡ ಶಾಸನದಲ್ಲಿ ಏನಿದೆ?
ತ್ತಂಣೀಯರಟ್ಟಮ್ಮರೊಡೆಯನ ಮಗನಾದ ಸಿವಮರೆನಾದಿ ಎಂಬುವನು ಮಣ್ಣೆನಾಡಿನ ನಾಡಗೌಡನಾಗಿದ್ದ ಮಾರಮ್ಮನ್ ಎಂಬುವನ ಸೇವಕನಾಗಿದ್ದು ಸಿವಮರೆನಾದಿಯು ಹುಲಿಯೊಂದಿಗೆ ಹೋರಾಡುವ ಸಮಯದಲ್ಲಿ ವೀರಮರಣ ಹೊಂದಿದ್ದಾನೆ ಎಂದು ಗಂಗರ ಕಾಲದ ಕನ್ನಡದ ಅಕ್ಷರಗಳಲ್ಲಿ ಶಾಸನ ಬರೆಯಲಾಗಿದೆ.
ವೀರಗಲ್ಲಿನಲ್ಲಿ ಕನ್ನಡದ ಶಾಸನದ ಜತೆ ಹುಲಿಯ ಜತೆ ಸೆಳೆದಾಡುತ್ತಿರುವ ವೀರನ ಚಿತ್ರವಿದ್ದು ಆತನ ಒಂದು ಕೈನಲ್ಲಿ ಹುಲಿ ಹಿಡಿದು, ಮತ್ತೊಂದು ಕೈನಲ್ಲಿ ಕತ್ತಿಯನ್ನು ಹಿಡಿದಿದ್ದಾನೆ. ಆತ ವೀರಮರಣ ಹೊಂದಿದ ನಂತರ ದೇವಲೋಕದ ಅಪ್ಸರೆಯರು ಕರೆದುಕೊಂಡು ಹೋಗುವ ಚಿತ್ರವಿದೆ.
ನಮ್ಮ ಹೊಲ ಉಳುಮೆ ಮಾಡುವಾಗ ಈ ಕಲ್ಲು ಸಿಕ್ಕಿತು, ಅದರಲ್ಲಿ ದೇವರ ವಿಗ್ರಹ ಕಂಡ ಹಿನ್ನೆಲೆ ನಮ್ಮೂರಿನ ವಿಜಯ್ ಗೆ ಮಾಹಿತಿ ನೀಡಿದಾಗ ಬಾಲಸುಬ್ರಮಣ್ಯರವರು ಬಂದು ಹುಲಿಬೇಟೆ ವೀರಗಲ್ಲು ಎಂದು ಹೇಳಿದರು. ಅನಂತರ ಧನಪಾಲ್, ನರೇಂದ್ರ, ಶಾಂತಕುಮಾರರವರು ಸಹ ಬಂದು ಶಾಸನದಲ್ಲಿರುವ ಮಾಹಿತಿ ನೀಡಿದ್ದಾರೆ. ಇಷ್ಟುಹಳೆಯ ಇತಿಹಾಸವಿರುವುದು ನಮಗೆ ನೋಡಿ ಅಚ್ಚರಿಯಾಗಿದೆ. ಅಧಿಕಾರಿಗಳು ಇದನ್ನು ರಕ್ಷಣೆ ಮಾಡಬೇಕು.
ರಂಗಸ್ವಾಮಯ್ಯ, ವೀರಗಲ್ಲು ಸಿಕ್ಕ ಜಮೀನು ಮಾಲೀಕ
ಹುಲಿ ಬೇಟೆಯಾಡಿ ವೀರಮರಣಹೊಂದಿರುವ ಬಗ್ಗೆ ಕ್ರಿ.ಶ 850ರ ಸುಮಾರಿನ ಶಾಸನ ಸಹಿತ ವೀರಗಲ್ಲು ಸಿಕ್ಕಿರುವುದು ನಮ್ಮೂರಿನ ಹೆಮ್ಮೆ. ಗಂಗರ ಕಾಲದಲ್ಲಿ ರಾಜರ ಸೇವಕನೊಬ್ಬ ಹುಲಿಯ ಜೊತೆ ಹೋರಾಡುವ ಸಾಮರ್ಥ್ಯ ಹೊಂದಿರುವುದು ನಾಡಿನ ಶ್ರೇಷ್ಠತೆಯನ್ನು ಸಾರುತ್ತದೆ. ಬಾಲಸುಭ್ರಮಣ್ಯ ಅವರು ಇದು ಹುಲಿಬೇಟೆ ವೀರಗಲ್ಲು ಎಂಬುದಾಗಿ ಹೇಳಿದರು. ಅನಂತರ ಧನಪಾಲ್, ನರೇಶ್, ಶಾಂತಕುಮಾರ್ ಅವರು ಸಹ ಭೇಟಿ ಮಾಡಿ ವೀರಗಲ್ಲಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು ನಮ್ಮೂರ ಇತಿಹಾಸ ನಮಗೆ ಹೆಮ್ಮೆಯಾಗಿದೆ.
- ವಿಜಯಹೊಸಪಾಳ್ಯ, ಗ್ರಾಮದ ಯುವಕ


