Gokak: 5 kgಯಿಂದ ಆರಂಭ, ಇಂದು ದಿನಕ್ಕೆ 2 ಸಾವಿರ ಕೆಜಿ; 3ನೇ ಕ್ಲಾಸ್ ಓದಿರೋ ಕೋಟಿ ಒಡೆಯ
ಬೆಳಗಾವಿಯ ಗೋಕಾಕ್‌ನಲ್ಲಿ ಸೈಕಲ್ ಮೇಲೆ 5 ಕೆ.ಜಿ ಕರದಂಟು ಮಾರಾಟ ಆರಂಭಿಸಿದ ಶಂಕರ್ ಅಂಕದವರ್, ಇಂದು ಕೋಟಿಗಳ ಒಡೆಯರಾಗಿದ್ದಾರೆ. ಶುದ್ಧ ತುಪ್ಪ, ಉತ್ತಮ ಬೆಲ್ಲ ಮತ್ತು ಡ್ರೈ ಫ್ರೂಟ್ಸ್ ಬಳಸಿ ತಯಾರಾಗುವ 'ಜನತಾ ಕರದಂಟು' ಇಂದು ಕರ್ನಾಟಕ, ಗೋವಾ, ಮಹಾರಾಷ್ಟ್ರಕ್ಕೂ ತಲುಪಿದೆ.

ಗೋಕಾಕ್ ಪಟ್ಟಣದ ಜನತಾ ಕರದಂಟು
ಬೆಳಗಾವಿ ಜಿಲ್ಲೆಯ ಗೋಕಾಕ್ ಅಂದ್ರೆ ಎರಡು ವಿಷಯಗಳು ಕಣ್ಮುಂದೆ ಬರುತ್ತವೆ. ಒಂದು ಸುಂದರವಾದ ಫಾಲ್ಸ್, ಮತ್ತೊಂದು ಕರದಂಟು. ಅದರಲ್ಲಿಯೂ ಜನತಾ ಕರದಂಟು ಅಂದ್ರೆ ಇಲ್ಲಿಯ ಜನರಿಗೆ ಸಿಕ್ಕಾಪಟ್ಟೆ ಇಷ್ಟ. 5 ಕೆ.ಜಿ. ಕರದಂಟನ್ನು ಸೈಕಲ್ ಮೇಲೆ ಹೊತ್ತು ಊರೂರು ಸುತ್ತಿ, ಜಾತ್ರೆಗಳಲ್ಲಿ ಮಾರಿ ಬದುಕು ಕಟ್ಟಿಕೊಂಡ ಸಾಧಕರಿವರು. ಇಂದು ಕೋಟಿ ಕೋಟಿ ಒಡೆಯನಾಗಿರುವ ಶಂಕರ್ ಅಂಕದವರ್, ಅಂದ್ರೆ ಇಡೀ ಬೆಳಗಾವಿ ಜಿಲ್ಲೆಗೆ ಜನಪ್ರಿಯರು. ಶಂಕರ್ ಅವರು ತಯಾರಿಸುವ ಕರದಂಟು, ಕರ್ನಾಟಕದ ಮೂಲೆ ಮೂಲೆಯನ್ನು ತಲುಪಿದೆ. ಶಂಕರ್ ಆರಂಭಿಸಿದ ಕರದಂಟು ವ್ಯಾಪಾರವನ್ನು ಆಧುನಿಕ ಮಾರುಕಟ್ಟೆ ತಂತ್ರಜ್ಞಾನದ ಜೊತೆ ಅವರ ಮಗ ಪ್ರಶಾಂತ್ ಮುಂದುವರಿಸಿಕೊಂಡು ಬಂದಿದ್ದಾರೆ.
ದಿನಕ್ಕೆ 2 ಸಾವಿರ ಕೆಜಿ ಕರದಂಟು ಮಾರಾಟ
ಜನತಾ ಕರದಂಟು ತಯಾರಿಸಲು ಇಲ್ಲಿ ಶುದ್ಧ ತುಪ್ಪ, ಉತ್ತಮವಾದ ಬೆಲ್ಲ, ಪ್ರೀಮಿಯಂ ಕ್ವಾಲಿಟಿಯ ಡ್ರೈ ಫ್ರೂಟ್ಸ್ ಬಳಕೆ ಮಾಡಲಾಗುತ್ತದೆ. ಮೂರು ಬಗೆಯ ಕರದಂಟು (ಸ್ಪೆಷಲ್, ಪ್ರೀಮಿಯಂ ಮತ್ತು ರಾಯಲ್ ಗೋಲ್ಡ್) ಮಾರಾಟ ಮಾಡಲಾಗುತ್ತದೆ. ಈ ಮೂರರಲ್ಲಿ ಸ್ಪೆಷಲ್ ಕರದಂಟು ಶೇ.70 ರಿಂದ ಶೇ.80 ರಷ್ಟು ಮಾರಾಟವಾಗುತ್ತದೆ. ಫ್ಯಾಕ್ಟರಿಯಲ್ಲಿಯೇ ಸುಮಾರು 20 ರಿಂದ 25 ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಾರೆ. ಶಂಕರ್ ಅವರ ಪತ್ನಿಯೇ ಎಲ್ಲವನ್ನು ನಿರ್ವಹಣೆ ಮಾಡುತ್ತಾರೆ.
ಡ್ರೈ ಫ್ರೂಟ್ಸ್ ಎಲ್ಲಿಂದ ಬರುತ್ತೆ?
ಮುಂಬೈನ ವಾಸಿಯಲ್ಲಿಂದ ಡ್ರೈ ಫ್ರೂಟ್ಸ್ ಖರೀದಿ ಮಾಡಿಕೊಳ್ಳಲಾಗುತ್ತದೆ. ಎಮೆರ್ಜೆನ್ಸಿ ಸಮಯದಲ್ಲಿ ಹುಬ್ಬಳ್ಳಿಯಿಂದ ಖರೀದಿ ಮಾಡಿಕೊಳ್ಳುತ್ತೆ. ಅಮ್ಮಾ ಕರದಂಟು ಮಾಡೋದನ್ನು ನೋಡಿಕೊಳ್ಳುತ್ತಾರೆ. ತಂದೆಯವರು ಔಟ್‌ಲೆಟ್ ಸೇರಿದಂತೆ ಹಣಕಾಸಿನ ವಿಭಾಗ ನೋಡಿಕೊಳ್ಳುತ್ತಾರೆ. ನಾನು ಸೇಲ್, ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತೇನೆ ಎಂದು ಪ್ರಶಾಂತ್ ಹೇಳುತ್ತಾರೆ.
ಮಾರುಕಟ್ಟೆ ಜೊತೆ ಹೊಂದಾಣಿಕೆ ಅಗತ್ಯ
ತಂದೆಯವರು ದಿನಕ್ಕೆ 5 ಕೆಜಿಯಿಂದ ಕರದಂಟು ವ್ಯಾಪಾರ ಆರಂಭಿಸಿದ್ದರು. ನಾನು ಮತ್ತು ನನ್ನ ಪತ್ನಿ ಇಬ್ಬರು ಎಂಬಿಎ ಓದಿದ್ದೇವೆ. ನಾನು ಏಳನೇ ಕ್ಲಾಸ್‌ನಿಂದಲೇ ಅಂಗಡಿಯಲ್ಲಿ ಕುಳಿತುಕೊಳ್ಳುತ್ತಿದ್ದೆ. ಹಾಗಾಗಿ ಪ್ರಾಕ್ಟಿಕಲ್ ಅನುಭವ ಬಾಲ್ಯದಿಂದಲೇ ಬಂದಿದೆ. ಮಾರುಕಟ್ಟೆ ಜಗತ್ತು ತುಂಬಾ ವೇಗದಲ್ಲಿದ್ದು, ನಾವು ಅದಕ್ಕೆ ತಕ್ಕಂತೆಯೇ ಕೆಲಸ ಮಾಡಬೇಕು. ಡ್ರೈಫ್ರೂಟ್ಸ್ ಬೆಲೆ ಏರಿಳಿತ ಆಗುತ್ತಿರುತ್ತದೆ. ಹಾಗಾಗಿ ಎಲ್ಲಾ ಮಾರುಕಟ್ಟೆ ಬದಲಾವಣೆಗಳೊಂದಿಗೆ ನಾನು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿರಬೇಕು. ಫ್ಯಾಕ್ಟರಿ, ಬೇಕರಿ ಸೇರಿದಂತೆ ಎಲ್ಲಾ ವಿಭಾಗ ಸೇರಿ 40 ಜನರು ಕೆಲಸ ಮಾಡುತ್ತಾರೆ.
ಫ್ರಾಂಚೈಸಿಯೂ ಲಭ್ಯ
ನಮ್ಮ ಕರದಂಟು ಮಾರಾಟ ಮಾಡಲು ಫ್ರಾಂಚೈಸಿಯನ್ನು 2 ಲಕ್ಷ ರೂಪಾಯಿಗೆ ನೀಡುತ್ತೇವೆ. ಗೋಕಾಕ್‌ನಲ್ಲಿ ನನ್ನದೇ ಐದು ಮತ್ತು ಮತ್ತೈದು ಫ್ರಾಂಚೈಸಿಯನ್ನು ನೀಡಿದ್ದೇನೆ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಜನತಾ ಕರದಂಟು ಸಿಗುತ್ತೆ. ಮಹಾರಾಷ್ಟ್ರ, ಗೋವಾ ಭಾಗಗಳಿಗೂ ನಮ್ಮ ಉತ್ಪನ್ನ ತಲುಪುತ್ತದೆ. ಗೋಕಾಕ್ ಅಂದ್ರೆ ಜನತಾ ಕರದಂಟು ಎಂಬಂತಾಗಿದೆ.

