ಗಂಭೀರ ಕಾಯಿಲೆಗಳಿಗೆ ಈ ಹಸಿರು ಹಣ್ಣುಗಳೇ ಮದ್ದು! ತಪ್ಪದೇ ತಿನ್ನಿ
ಸಂಶೋಧನೆಯ ಪ್ರಕಾರ, ಹಸಿರು ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಸಂತೋಷವಾಗಿರಲು ನಿಮಗೆ ಸಹಾಯ ಮಾಡುತ್ತೆ. ಯಾವ ಹಸಿರು ಹಣ್ಣುಗಳನ್ನು ತಿನ್ನಬೇಕು ಎಂದು ನೀವು ಯೋಚಿಸುತ್ತಿದ್ದರೆ, ಅದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಉತ್ತಮ ಆರೋಗ್ಯ ಪಡೆಯಲು ಮತ್ತು ರೋಗಗಳನ್ನು ತಪ್ಪಿಸಲು ಆರೋಗ್ಯ ತಜ್ಞರು ಯಾವಾಗಲೂ ಹಸಿರು ತರಕಾರಿ (Green vegetables) ಮತ್ತು ಹಣ್ಣುಗಳ ಸೇವನೆಗೆ ಒತ್ತು ನೀಡುತ್ತಾರೆ. ಏಕೆಂದರೆ ಅವು ಕ್ಲೋರೊಫಿಲ್ ಹೊಂದಿರುತ್ತವೆ, ಇದು ಆರೋಗ್ಯವನ್ನು ಸುಧಾರಿಸುವ ಕೆಲಸ ಮಾಡುತ್ತೆ. ಹಸಿರು ಹಣ್ಣುಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಅಧಿಕ ರಕ್ತದೊತ್ತಡದ ಅಪಾಯ ಕಡಿಮೆ ಮಾಡುವ ಕೆಲಸ ಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ನೀವು ಆಹಾರದಲ್ಲಿ ಸೇರಿಸಬೇಕಾದ ಅಂತಹ 5 ಹಸಿರು ಹಣ್ಣುಗಳ ಬಗ್ಗೆ ತಿಳಿದುಕೊಳ್ಳೋಣ.
ಕಿವಿ (Kiwi)
ವಿಟಮಿನ್-ಇ, ಸಿ, ಫೋಲೇಟ್ ಮತ್ತು ಪೊಟ್ಯಾಷಿಯಮ್ ಜೊತೆಗೆ, ಕಿವಿಯಲ್ಲಿ ಆ್ಯಂಟಿ-ಆಕ್ಸಿಡೆಂಟ್, ಉರಿಯೂತ ಶಮನಕಾರಿ ಮತ್ತು ಅಧಿಕ ರಕ್ತದೊತ್ತಡ ವಿರೋಧಿ ಗುಣಗಳಿವೆ. ರಕ್ತದ ಪ್ಲೇಟ್‌ಲೆಟ್ಸ್ ಹೆಚ್ಚಿಸಲು ಕಿವಿ ಹಣ್ಣನ್ನು ತಿನ್ನಲು ಆಗಾಗ್ಗೆ ಶಿಫಾರಸು ಮಾಡಲಾಗುತ್ತೆ.
ಗರ್ಭಿಣಿಯರಿಗೆ (Pregnant) ಕಿವಿ ಹಣ್ಣನ್ನು ಆಹಾರದಲ್ಲಿ ಸೇರಿಸಲು ಸಲಹೆ ನೀಡಲಾಗುತ್ತೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ, ಆದ್ದರಿಂದ ಮಧುಮೇಹ ರೋಗಿಗಳು ಸಹ ಯಾವುದೇ ಭಯವಿಲ್ಲದೆ ಇದನ್ನು ತಿನ್ನಬಹುದು.
ಗ್ರೀನ್ ಆಪಲ್(Green apple)
ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ಸ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಹಸಿರು ಸೇಬುಗಳಲ್ಲಿ ಮೆದುಳಿನ ಆರೋಗ್ಯ ಸುಧಾರಿಸುವ ಕ್ವೆರ್ಸೆಟಿನ್ ಎಂಬ ರಾಸಾಯನಿಕವೂ ಸಮೃದ್ಧವಾಗಿದೆ.ಮೂಳೆಗಳು ದುರ್ಬಲವಾಗಿರುವ ಜನರು ಹಸಿರು ಸೇಬುಗಳನ್ನು ತಿನ್ನಬೇಕು. ಇದು ಉತ್ತಮ ಪ್ರಮಾಣದ ಫೈಬರ್ ಸಹ ಹೊಂದಿದೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತೆ.
ಪೇರಳೆ ಹಣ್ಣು(Guava)
ಪೇರಳೆಯಲ್ಲಿ ಮೆಗ್ನೀಷಿಯಮ್ ತುಂಬಿದೆ ಎಂದು ನಿಮಗೆ ತಿಳಿದಿದ್ಯಾ, ಇದು ಸ್ನಾಯುಗಳನ್ನು ಬಲಪಡಿಸಲು ಅವಶ್ಯಕ. ಮೆಗ್ನೀಷಿಯಮ್ ಒತ್ತಡ ಕಡಿಮೆ ಮಾಡುವ ಕೆಲಸ ಮಾಡುತ್ತೆ. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಕೂಡ ಇದೆ, ಇದು ಹೊಟ್ಟೆ ಆರೋಗ್ಯವನ್ನು ಉತ್ತಮವಾಗಿರಿಸುತ್ತೆ.
ಪೇರಳೆ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು(Blood sugar level) ನಿಯಂತ್ರಿಸಲು ಸಹ ಸಹಾಯ ಮಾಡುತ್ತೆ. ಜೊತೆಗೆ, ಪೇರಳೆಯಲ್ಲಿರುವ ವಿಟಮಿನ್-ಎ, ಸಿ, ಫೋಲೇಟ್, ಸತು ಮತ್ತು ತಾಮ್ರವು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಪೇರಳೆ ಹಣ್ಣನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಸೇವಿಸೋದು ಉತ್ತಮ.
ನೆಲ್ಲಿಕಾಯಿ (Amla)
ವಿಟಮಿನ್-ಸಿ, ಬಿ-ಕಾಂಪ್ಲೆಕ್ಸ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಮೂತ್ರವರ್ಧಕ ಆಮ್ಲಗಳು ನೆಲ್ಲಿಕಾಯಿಯಲ್ಲಿ ಕಂಡುಬರುತ್ತವೆ. ಇದಲ್ಲದೆ, ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಕೂಡ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಈ ಸಣ್ಣ ಹುಳಿ ರುಚಿಯ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತೆ.
ದ್ರಾಕ್ಷಿ(Grapes)
ದ್ರಾಕ್ಷಿ ಉತ್ತಮ ಹಣ್ಣು, ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ನೋಡಿಕೊಳ್ಳುವ ಕೆಲಸ ಮಾಡುತ್ತೆ. ಇದರಲ್ಲಿ ವಿಟಮಿನ್-ಎ, ಸಿ ಮತ್ತು ಬಿ ಜೊತೆಗೆ ಪೊಟ್ಯಾಷಿಯಮ್ ಮತ್ತು ಕ್ಯಾಲ್ಸಿಯಂ ಕೂಡ ಇದೆ. ಫ್ಲೇವನಾಯ್ಡ್ಸ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ದ್ರಾಕ್ಷಿ ಕೊಲೆಸ್ಟ್ರಾಲ್ ನಿಯಂತ್ರಿಸುವ ಕೆಲಸ ಮಾಡುತ್ತವೆ.
ದ್ರಾಕ್ಷಿ ತಿನ್ನುವ ಮೂಲಕ, ನೀವು ತಕ್ಷಣದ ಶಕ್ತಿಯನ್ನು ಪಡೆಯುತ್ತೀರಿ ಮತ್ತು ದಣಿವನ್ನು ಅನುಭವಿಸೋದಿಲ್ಲ. ಪ್ರತಿದಿನ ದ್ರಾಕ್ಷಿ ಸೇವಿಸುವ ಜನರಿಗೆ ಅಧಿಕ ರಕ್ತದೊತ್ತಡ(High Blood pressure) ಮತ್ತು ಮಲಬದ್ಧತೆಯ ಸಮಸ್ಯೆ ಇರೋದಿಲ್ಲ. ಹೀಗೆ ಈ ಹಸಿರು ಹಣ್ಣುಗಳನ್ನು ಸೇವಿಸುವ ಮೂಲಕ ನೀವು ಉತ್ತಮ ಆರೋಗ್ಯ ಪಡೆಯಬೇಕು.