ಕೊರೋನಾ ಕಾಟ, ಲಾಕ್‍ಡೌನ್, ಕೆಲಸದೊತ್ತಡ, ಆರ್ಥಿಕ ಸಮಸ್ಯೆ ಹೀಗೆ ಬದುಕಿನಲ್ಲಿ ಒತ್ತಡ ಹೆಚ್ಚಲು ನೂರಾರು ಕಾರಣಗಳಿವೆ. ಈ ಒತ್ತಡ ನಮ್ಮ ಊಟ, ತಿಂಡಿ, ನಿದ್ರೆ...ಹೀಗೆ ಎಲ್ಲದರ ಮೇಲೂ ಪರಿಣಾಮ ಬೀರುತ್ತೆ. ಊಟ ಮಾಡುವಾಗಲೂ ಕಾಡುವ ಒತ್ತಡದಿಂದಾಗಿ ಎಷ್ಟೋ ಬಾರಿ ತಿನ್ನುವ ತಿನಿಸುಗಳ ರುಚಿಯೂ ತಿಳಿಯೋದಿಲ್ಲ, ಹೊಟ್ಟೆ ತುಂಬಾ ತಿನ್ನಲೂ ಸಾಧ್ಯವಾಗೋದಿಲ್ಲ. ಆದ್ರೆ ನಾವು ತಿನ್ನುವ ಆಹಾರ ಹಾಗೂ ಅದರ ಪರಿಮಳಕ್ಕೆ ಒತ್ತಡವನ್ನು ತಗ್ಗಿಸುವ ಸಾಮಥ್ರ್ಯವಿರೋದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಉದಾಹರಣೆಗೆ ನಿಮ್ಮ ಮೂಗಿಗೆ ಯಾವುದೋ ಒಂದು ಸುವಾಸನೆ ಬಡಿದಾಗ ನಿಮಗದು ಇಷ್ಟವಾದ್ರೆ, ಅದನ್ನು ಇನ್ನೊಮ್ಮೆ ಗ್ರಹಿಸಲು ನೀವು ದೀರ್ಘವಾಗಿ ಉಸಿರು ಎಳೆದುಕೊಳ್ಳುತ್ತೀರಿ. ಈ ರೀತಿ ದೀರ್ಘವಾಗಿ ಉಸಿರು ತೆಗೆದುಕೊಳ್ಳೋದ್ರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಜೊತೆಗೆ ಹೃದಯ ಬಡಿತದ ವೇಗವೂ ತಗ್ಗಿ ಮನಸ್ಸು ರಿಲ್ಯಾಕ್ಸ್ ಆಗುತ್ತೆ. ಇನ್ನು ಕೆಲವೊಂದು ಆಹಾರಗಳ ರುಚಿ ಕೂಡ ಒತ್ತಡ ತಗ್ಗಿಸಬಲ್ಲವು. ಒತ್ತಡ ತಗ್ಗಿಸುವ ಇಂಥ ಕೆಲವು ಆಹಾರಗಳ ಮಾಹಿತಿ ಇಲ್ಲಿದೆ.

ಹೊಟ್ಟೆ ಕ್ಯಾನ್ಸರ್ ಲಕ್ಷಣಗಳಿವು, ಕಡೆಗಣಿಸಿದ್ರೆ ಕಡೆಗಾಲ ಬಂದಂತೆ!

ಗ್ರೀನ್ ಆಪಲ್
ಗ್ರೀನ್ ಆಪಲ್ ಪರಿಮಳ ನಿಮಗೆ ಇಷ್ಟವಾಗಿದ್ರೆ ಒತ್ತಡದಿಂದಾಗಿ ಉಂಟಾಗಿರುವ ತಲೆನೋವಿಗೆ ಇದು ರಾಮಬಾಣ. ಗ್ರೀನ್ ಆಪಲ್ ಪರಿಮಳ ತಲೆನೋವನ್ನು ಕಡಿಮೆ ಮಾಡಬಲ್ಲದು ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಮೈಗ್ರೇನ್‍ನಿಂದ ಬಳಲುತ್ತಿರುವವರು ತಲೆನೋವು ಪ್ರಾರಂಭವಾಗುವ ಸಮಯದಲ್ಲಿ ಗ್ರೀನ್ ಆಪಲ್ ಸುವಾಸನೆಯನ್ನು ಉಸಿರಿನ ಮೂಲಕ ಒಳಗೆಳೆದುಕೊಂಡ ಪರಿಣಾಮ ನೋವು ಶಮನವಾಗಿರೋದಾಗಿ ಈ ಬಗ್ಗೆ ನಡೆದ ಅಧ್ಯಯನವೊಂದರಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ಕೆಫಿನೇಟೆಡ್ ಟೀ
ಜಾಸ್ತಿ ಟೆನ್ಷನ್ ಆದಾಗ ಟೀ ಕುಡಿಯುವ ಅಭ್ಯಾಸ ಬಹುತೇಕರಿಗಿದೆ. ಟೀ ಕುಡಿದ ತಕ್ಷಣ ಇಡೀ ಶರೀರಕ್ಕೆ ಆಹ್ಲಾದಕಾರ ಅನುಭವವಾಗುವ ಕಾರಣಕ್ಕೇ ಬೆಳಗ್ಗೆ ಎದ್ದ ಕೂಡಲೇ ನಾವೆಲ್ಲ ಚಹಾಕ್ಕಾಗಿ ಚಡಪಡಿಸೋದು. ಕೆಫಿನ್ ಅಂಶವುಳ್ಳ ಬ್ಲ್ಯಾಕ್, ಗ್ರೀನ್ ಟೀ ಕುಡಿಯೋದ್ರಿಂದ ಮಿದುಳು ಹೆಚ್ಚು ಅಲರ್ಟ್ ಆಗುತ್ತೆ ಎಂದು ‘ದಿ ಜರ್ನಲ್ ಆಫ್ ನ್ಯುಟ್ರಿಷನ್’ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ. ಟೀಯಲ್ಲಿರುವ ಥೆಯನೈನ್ ಎಂಬ ಅಮಿನೋ ಆಸಿಡ್ ಕೆಫಿನ್ ಜೊತೆ ಸೇರಿ ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತೆ ಎಂಬುದು ಸಂಶೋಧಕರ ಅಭಿಪ್ರಾಯ. 

ಲ್ಯಾವೆಂಡರ್ ಆಯಿಲ್
ಲ್ಯಾವೆಂಡರ್ ಫ್ಲೇವರ್ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ಲ್ಯಾವೆಂಡರ್ ಪರಿಮಳಕ್ಕೆ ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುವ ಸಾಮಥ್ರ್ಯವಿದೆಯಂತೆ. ಬ್ರಿಟಿಷ್ ಸಂಶೋಧಕರು 2010ರಲ್ಲಿ 340 ದಂತ ವೈದ್ಯಕೀಯ ಚಿಕಿತ್ಸೆಗೊಳಗಾದ ರೋಗಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಇದು ಸಾಬೀತಾಗಿದೆ ಕೂಡ. ದಂತ ಚಿಕಿತ್ಸೆ ಸಮಯದಲ್ಲಿ ಕೊಠಡಿಯಲ್ಲಿ ಲ್ಯಾವೆಂಡರ್ ಆಯಿಲ್ ಇರುವ ಸಿರಾಮಿಕ್ ಕ್ಯಾಂಡಲ್ ಉರಿಯುತ್ತಿದ್ದಾಗ ರೋಗಿಗಳಲ್ಲಿ ಉದ್ವೇಗ ಕಡಿಮೆ ಇರೋದು ಪತ್ತೆಯಾಗಿತ್ತು.

ತಿರಸ್ಕಾರದ ನೋವು ಬೆಂಬಿಡದೆ ಕಾಡುತ್ತಿದೆಯಾ?

ತೆಂಗಿನಕಾಯಿ ಪರಿಮಳದಲ್ಲಿದೆ ಜಾದೂ
ತೆಂಗಿನೆಣ್ಣೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಅಂತಾರೆ. ಅದೇ ರೀತಿ ತೆಂಗಿನ ಪರಿಮಳ ಕೂಡ ಹೃದಯ ಬಡಿತದ ವೇಗವನ್ನು ತಗ್ಗಿಸುವ ಮೂಲಕ ರಕ್ತದೊತ್ತವನ್ನು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಇನ್ನು ಮುಂದೆ ಮನಸ್ಸು ಕ್ರೋಧಗೊಂಡಾಗ ತೆಂಗಿನ ಪರಿಮಳವನ್ನು ಆಸ್ವಾದಿಸಿ, ಸಿಟ್ಟು ಸರ್ರನೆ ಕೆಳಗಿಳಿಯುತ್ತದೆ. ಒತ್ತಡ ಕೂಡ ತಗ್ಗಿ ಮನಸ್ಸು ರಿಲ್ಯಾಕ್ಸ್ ಆಗುತ್ತೆ.

ಹಸಿವಿನ ಬಯಕೆ ತಗ್ಗಿಸುವ ಪುದೀನಾ 
ಹಸಿವಾದಾಗ ಮನಸ್ಸು ತಾಳ್ಮೆ ಕಳೆದುಕೊಳ್ಳುತ್ತೆ. ಚಿಕ್ಕಪುಟ್ಟ ವಿಷಯಕ್ಕೂ ಕೋಪ ಬರುತ್ತೆ. ಇಂಥ ಸಮಯದಲ್ಲಿ ಪುದೀನಾ ಸುವಾಸನೆಯನ್ನು ಗ್ರಹಿಸೋದ್ರಿಂದ ಹಸಿವು ಕಡಿಮೆಯಾಗುತ್ತದೆ ಅನ್ನೋದನ್ನು ವೆಸ್ಟ್ ವರ್ಜಿನದ ಜೆಸೂಟ್ ಯುನಿವರ್ಸಿಟಿ ಸಂಶೋಧಕರು ತಮ್ಮ ಅಧ್ಯಯನದಲ್ಲಿ ಬಹಿರಂಗಪಡಿಸಿದ್ದಾರೆ. ಹೀಗಾಗಿ ಹೊಟ್ಟೆ ಚುರುಗುಟ್ಟುತ್ತಿದ್ರೆ, ತಿನ್ನಲು ಸಮಯವಿಲ್ಲದಿದ್ರೆ ಡೋಂಟ್ ವರಿ, ಪುದೀನಾ ಎಲೆಯನ್ನು ಮುಗಿನಡಿ ಹಿಡಿಯಿರಿ ಸಾಕು!

ಡಾರ್ಕ್ ಚಾಕೋಲೇಟ್ 
ಇತ್ತೀಚೆಗೆ ನಡೆದ ಅಧ್ಯಯನವೊಂದು ಡಾರ್ಕ್ ಚಾಕೋಲೇಟ್ ಒತ್ತಡ ಸೃಷ್ಟಿಸುವ ಹಾರ್ಮೋನ್‍ಗಳ ಸ್ರವಿಕೆಯನ್ನು ತಗ್ಗಿಸುತ್ತದೆ ಎಂದು ಹೇಳಿದೆ. ಒತ್ತಡ ಹೆಚ್ಚಾದಾಗ ಡಾರ್ಕ್ ಚಾಕೋಲೇಟ್ ತುಂಡೊಂದನ್ನು ಬಾಯಿಗೆ ಹಾಕಿಕೊಂಡ್ರೆ ಸಾಕು, ಎಲ್ಲವೂ ನಾರ್ಮಲ್ ಆಗುತ್ತೆ.

ನೆನಪಿನ ಶಕ್ತಿ ಹೆಚ್ಚಿಸೋಕೆ ಬೇಕು ಈ ಜೀವನಶೈಲಿ

ಕಾರ್ಬೋಹೈಡ್ರೆಟ್ಸ್ ಹೆಚ್ಚಿರುವ ಆಹಾರ
ಕಾರ್ಬೋಹೈಡ್ರೆಟ್ ಸಮೃದ್ಧ, ಫ್ಯಾಟ್ ಕಡಿಮೆಯಿರುವ ಆಹಾರ ಸೇವಿಸೋರು ಖುಷಿಯಾಗಿರುತ್ತಾರೆ ಎಂಬುದನ್ನು ಆರ್ಚಿವ್ಸ್ ಆಫ್ ಇಂಟರ್ನಲ್ ಮೆಡಿಸಿನ್‍ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ. ಹೀಗಾಗಿ ಕಾರ್ಬೋಹೈಡ್ರೆಟ್ಸ್‍ನಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ ಒತ್ತಡ ತಗ್ಗಿಸಿಕೊಂಡು, ಹ್ಯಾಪಿ ಆಗಿರಿ.