- Home
- Life
- Health
- ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
Ear Infection Remedies: ತಂಪಾದ ವಾತಾವರಣದಲ್ಲಿ ಈ ರೀತಿಯ ಕಿವಿಯ ಸೋಂಕಿನ ಸಮಸ್ಯೆ ಹೆಚ್ಚಾಗಿರುತ್ತದೆ. ನೆನಪಿರಲಿ ಇಂತಹ ಸೋಂಕನ್ನು ನಿರ್ಲಕ್ಷಿಸುವಂತಿಲ್ಲ. ಆದ್ದರಿಂದ ಈ ಲೇಖನದಲ್ಲಿ ಡಾ. ದೇವಿ ಪ್ರಸಾದ್ ಚಳಿಗಾಲದಲ್ಲಿ ಹೆಚ್ಚುವ ಕಿವಿ ಸೋಂಕಿಗೆ ಕಾರಣವೇನು ಎಂದು ಪರಿಹಾರ ಸಮೇತ ತಿಳಿಸಿದ್ದಾರೆ.

ಕಿವಿಯ ಸೋಂಕಿನ ಸಮಸ್ಯೆ ಹೆಚ್ಚು
ಕಿವಿಯ ಸೋಂಕು ಯಾವುದೇ ವಾತಾವರಣದಲ್ಲಿ ಕೂಡ ಆಗಬಹುದು. ಆದರೆ ಚಳಿಗಾಲ ಮತ್ತು ಮಳೆಗಾಲದ ಸಮಯದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ತಂಪಾದ ವಾತಾವರಣದಲ್ಲಿ ಈ ರೀತಿಯ ಕಿವಿಯ ಸೋಂಕಿನ ಸಮಸ್ಯೆ ಹೆಚ್ಚಾಗಿರುತ್ತದೆ. ಅದರಲ್ಲೂ ಹೊರ ವಾತಾವರಣದಲ್ಲಿ ಕೆಲಸ ನಿರ್ವಹಿಸುವವರಲ್ಲಿ, ಆಟ ಆಡುವ ಮಕ್ಕಳಲ್ಲಿ ಈ ಸೋಂಕು ಕಂಡುಬರುತ್ತದೆ. ನೆನಪಿರಲಿ ಈ ರೀತಿಯ ಸೋಂಕನ್ನು ನಿರ್ಲಕ್ಷಿಸುವಂತಿಲ್ಲ. ಚಿಕಿತ್ಸೆ ಪಡೆಯದೇ ಇದ್ದಲ್ಲಿ ಸಮಸ್ಯೆ ಉಲ್ಬಣಗೊಂಡು ಶ್ರವಣ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಎನ್‌ಟಿ ಸ್ಪೆಷಲಿಸ್ಟ್ ಡಾ. ದೇವಿ ಪ್ರಸಾದ್ ಚಳಿಗಾಲದಲ್ಲಿ ಹೆಚ್ಚುವ ಕಿವಿ ಸೋಂಕಿಗೆ ಕಾರಣವೇನು ಎಂದು ಪರಿಹಾರ ಸಮೇತ ತಿಳಿಸಿದ್ದಾರೆ.
ಈ ಸಮಸ್ಯೆಗೆ ಕಾರಣಗಳೇನು?
ಸಾಮಾನ್ಯ ಶೀತ
ಚಳಿಗಾಲದಲ್ಲಿ ವಾತಾವರಣದಲ್ಲಿ ವಿವಿಧ ಬಗೆಯ ವೈರಸ್‌ಗಳು ಹೆಚ್ಚಾಗಿರುತ್ತದೆ. ಇದರಿಂದ ಸಾಮಾನ್ಯ ಶೀತ ಮತ್ತು ಮಧ್ಯದ ಕಿವಿಯ ಸೋಂಕಿಗೆ ಕಾರಣವಾಗುತ್ತದೆ. ಚಳಿಗಾಲದ ತಂಪು ಗಾಳಿಯು ಕಿವಿಗೆ ಸೋಕಿದಾಗ ಕಿವಿಯಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಇದರಿಂದಲೂ ಕಿವಿ ನೋವು ಉಂಟಾಗುತ್ತದೆ.
ಸೈನಸ್ ಸಮಸ್ಯೆ
ಸೈನಸ್ ಸೋಂಕು ಚಳಿಗಾಲದಲ್ಲಿ ಕಿವಿ ನೋವಿಗೆ ಸಾಮಾನ್ಯ ಕಾರಣವಾಗಿದೆ. ತಂಪು ವಾತಾವರಣದಲ್ಲಿ ಯುಸ್ಟಾಚಿಯನ್ ಟ್ಯೂಬ್‌ಗಳು ಸಂಕುಚಿತಗೊಳ್ಳುತ್ತವೆ , ಇದರಿಂದ ಕಿವಿಯಲ್ಲಿನ ನೀರಿನಾಂಶವು ಒಣಗಲು ಕಷ್ಟವಾಗುತ್ತದೆ. ಹೀಗಾಗಿ ಸೋಂಕು, ಕಿವಿ ನೋವು , ತುರಿಕೆ ಉಂಟಾಗುತ್ತದೆ.
ರೋಗನಿರೋಧಕ ಶಕ್ತಿ
ತಂಪು ವಾತಾವರಣವು ಕೆಲವರಲ್ಲಿ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಒಣ ಮತ್ತು ತಂಪು ಗಾಳಿಯು ಉಸಿರಾಟದ ವ್ಯವಸ್ಥೆಗೆ ಸೋಂಕು ಸೇರಲು ನೆರವಾಗುತ್ತವೆ. ಹಾಗೇ ಹೆಚ್ಚಾಗಿ ಮನೆಯಲ್ಲೇ ಇರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಮನೆಯೊಳಗಿನ ಶೀತ ವಾತಾವರಣ, ನೀರಿನಾಂಶ, ಒದ್ದೆಯಾದ ಬಟ್ಟೆಗಳು ಕೂಡ ಸೋಂಕಿಗೆ ಕಾರಣವಾಗುತ್ತವೆ.
ಅಕಾಲಿಕ ಮಳೆ
ಚಳಿಗಾಲದಲ್ಲಿ ಅಕಾಲಿಕವಾಗಿ ಬರುವ ಮಳೆ ಉಸಿರಾಟದ ಸೋಂಕು, ಕಿವಿಯ ಸೋಂಕಿನ ಸಮಸ್ಯೆ ಅಧಿಕವಾಗಿರುತ್ತದೆ. ಫಂಗಸ್ ಬೆಳವಣಿಗೆ ಕಿವಿಯಲ್ಲಿ ಸಮಸ್ಯೆ ಉಂಟು ಮಾಡುತ್ತವೆ.
ಚಳಿಗಾಲದಲ್ಲಿ ಕಿವಿಯ ರಕ್ಷಣೆ ಹೇಗೆ?
ತಂಪು ವಾತಾವರಣದಲ್ಲಿ ಕಿವಿಯನ್ನು ಮುಚ್ಚುವಂತಹ ಗವಸು (earmuffs) ಧರಿಸಿ ಕಿವಿಯನ್ನು ಬೆಚ್ಚಗಿಡಿ. ಸೈನಸ್ ಸೋಂಕಿನಿಂದ ರಕ್ಷಣೆ ಪಡೆಯಲು ಅಗತ್ಯವಾದಷ್ಟು ನೀರನ್ನು ಸೇವಿಸಿ. ಜೊತೆಗೆ ಸೈನಸ್ ಸಮಸ್ಯೆ ಇದ್ದಲ್ಲಿ ನಿರ್ಲಕ್ಷಿಸದೇ ಚಿಕಿತ್ಸೆ ಪಡೆಯಿರಿ. ಇದರಿಂದ ಕಿವಿ ನೋವು, ಸೋಂಕಿನ ಸಮಸ್ಯೆಯಿಂದ ರಕ್ಷಣೆ ಪಡೆಯಬಹುದು. ಕಿವಿಯಲ್ಲಿ ಕುಗ್ಗೆ ತುಂಬಿದ್ದರೆ ವೈದ್ಯರನ್ನು ಭೇಟಿಯಾಗಿ ಸ್ವಚ್ಚಮಾಡಿಸಿಕೊಳ್ಳಿ . ಪದೇ ಪದೇ ಕಿವಿ ಉಜ್ಜುವುದು, ಪಿನ್, ಕ್ಲಿಪ್‌ನಂತಹ ಸಾಧನದಿಂದ ಕಿವಿ ಸ್ವಚ್ಚ ಮಾಡಬೇಡಿ, ಇದರಿಂದ ಕಿವಿ ನೋವು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.
ವೈದ್ಯಕೀಯ ನೆರವು
ಚಳಿಗಾಲದಲ್ಲಿ ಕೇವಲ ಕಿವಿ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಸಾಲದು, ಮೂಗು, ಗಂಟಲಿನ ಆರೋಗ್ಯದ ಕಡೆಯೂ ಲಕ್ಷ್ಯ ವಹಿಸುವುದು ಮುಖ್ಯ. ಸೋಂಕುಗಳು ದೇಹವನ್ನು ಸೇರಲು ಕಿವಿ, ಗಂಟಲು, ಮೂಗು ಪ್ರಮುಖ ಮಾರ್ಗವಾಗಿರುವ ಹಿನ್ನಲೇ ಇವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸಮಸ್ಯೆ ಎದುರಾದಲ್ಲಿ ವೈದ್ಯಕೀಯ ನೆರವು ಪಡೆಯುವುದು ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

