ಶೆಫಾಲಿ ಜರಿವಾಲಾಗೆ 15ನೇ ವಯಸ್ಸಿನಿಂದಲೂ ಈ ಕಾಯಿಲೆಯಿತ್ತು, ಆತಂಕದಲ್ಲೇ ಕಾಲ ಕಳೆದಿದ್ದರು ನಟಿ
“ಇದೇ ಭಯಕ್ಕೆ ನಾನು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ” ಎಂದು ಶೆಫಾಲಿ ಜರಿವಾಲಾ ಸಂದರ್ಶನವೊಂದರಲ್ಲಿ ತಿಳಿಸಿದ್ದು, ಸದ್ಯ ಅವರ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.

ನಟಿ, ರಿಯಾಲಿಟಿ ಶೋ ಸ್ಟಾರ್, ಕಾಂಟಾ ಲಗಾ ಗರ್ಲ್ ಶೆಫಾಲಿ ಜರಿವಾಲಾ ಹಠಾತ್ ಸಾವು ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಶೆಫಾಲಿ ಜರಿವಾಲಾ ಒಂದು ಕಾಲದಲ್ಲಿ ಬಹಳ ಜನಪ್ರಿಯತೆ ಗಳಿಸಿದ್ದರು. ತಮ್ಮ ಸೌಂದರ್ಯ ಮತ್ತು ನಟನೆಯಿಂದ ದೊಡ್ಡ ನಟಿಯರಿಗೇ ಪೈಪೋಟಿ ಕೊಡುತ್ತಿದ್ದರು. ಆದರೆ ಅವರಿಗಿದ್ದ ಅನಾರೋಗ್ಯದಿಂದಾಗಿ ವೃತ್ತಿಜೀವನ ಹಳಿತಪ್ಪಿತು.
ಕಾಂಟಾ ಲಗಾ ಯಶಸ್ಸಿನ ನಂತರ ಶೆಫಾಲಿ ಜರಿವಾಲಾ ರಾತ್ರೋರಾತ್ರಿ ಸ್ಟಾರ್ ಆದರು. 2003ರಲ್ಲಿ ರೇಡಿಯೋ ಸಮೀಕ್ಷೆಯೊಂದು ಅವರನ್ನು ವರ್ಷದ 'ಬ್ರೇಕ್ಔಟ್ ಸ್ಟಾರ್' ಪಟ್ಟಿಯಲ್ಲಿ ಸೇರಿಸಿತು. ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ, ಲಾರಾ ದತ್ತ ಮತ್ತು ಶಾಹಿದ್ ಕಪೂರ್ ಅವರಂತಹ ಹೆಸರುಗಳು ಸೇರಿದ್ದವು. ಒಂದು ಹಾಡಿನ ಮೂಲಕ ಶೆಫಾಲಿ ಬಾಲಿವುಡ್‌ನ ಎ ಲಿಸ್ಟರ್‌ಗಳಷ್ಟೇ ಜನಪ್ರಿಯರಾದರು.
ಮುಜ್ಸೆ ಶಾದಿ ಕರೋಗಿ ಚಿತ್ರದಲ್ಲಿ ಶೆಫಾಲಿ ಅತಿಥಿ ಪಾತ್ರದಲ್ಲಿ ನಟಿಸಿದರು. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರಂತಹ ತಾರೆಯರು ಈ ಚಿತ್ರದಲ್ಲಿ ಕಾಣಿಸಿಕೊಂಡರು. ಶೆಫಾಲಿ ಇಡೀ ವೃತ್ತಿಜೀವನದಲ್ಲಿ ಯಾವುದೇ ಪ್ರಮುಖ ಹಿಂದಿ ಚಿತ್ರದಲ್ಲಿ ಕೆಲಸ ಮಾಡಲಿಲ್ಲ. ಆದರೆ ಶೆಫಾಲಿ 2011 ರಲ್ಲಿ ಬಿಡುಗಡೆಯಾದ ಕನ್ನಡದ ಹುಡುಗರು ಚಿತ್ರದಲ್ಲಿ ಕಾಣಿಸಿಕೊಂಡರು. ಇದು ಹೊರತುಪಡಿಸಿದರೆ 2018 ರ ವೆಬ್ ಸಿರೀಸ್ ಬೇಬಿ ಕಮ್ ನಾ ಮತ್ತು 2024 ರ ಶೈತಾನಿ ರಸ್ಮೆನಲ್ಲಿ ಕಾಣಿಸಿಕೊಂಡಿದ್ದರು.
ಕಾಂಟಾ ಲಗಾ ನಂತರ "ನೀವೇಕೆ ಹೆಚ್ಚು ಕಾಣಿಸಿಕೊಳ್ಳಲಿಲ್ಲ ಎಂದು ಎಲ್ಲರೂ ಕೇಳುತ್ತಾರೆ. ಆದರೆ ಅಪಸ್ಮಾರದಿಂದ ಬಳಲುತ್ತಿದ್ದರಿಂದ ನಾನು ಹೆಚ್ಚು ಕೆಲಸ ಮಾಡಲು ಸಾಧ್ಯವಾಗಲಿಲ್ಲ. ನನಗೆ 15ನೇ ವಯಸ್ಸಿನಲ್ಲಿಯೇ ಈ ಕಾಯಿಲೆ ಕಾಣಿಸಿಕೊಂಡಿತು. ಆದರೆ 20ನೇ ವಯಸ್ಸಿನಲ್ಲಿ ಕಾಂಟಾ ಲಗಾ ರಾತ್ರೋರಾತ್ರಿ ಜನಪ್ರಿಯತೆ ತಂದುಕೊಟ್ಟಿತು. ಆದರೆ ಅಪಸ್ಮಾರ ನನ್ನನ್ನು ಹಿಂಬಾಲಿಸಿ ಬರುತ್ತಿತ್ತು. ಇದೇ ಭಯಕ್ಕೆ ನಾನು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಆ ಸಮಯದಲ್ಲಿ ನನ್ನ ಅಧ್ಯಯನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಒತ್ತಡದಲ್ಲಿದ್ದೆ ಎಂದು ನನಗೆ ನೆನಪಿದೆ. ತರಗತಿ ಕೊಠಡಿಗಳಲ್ಲಿ, ವೇದಿಕೆಯ ಹಿಂದೆ, ಬೀದಿಗಳಲ್ಲಿ ಮತ್ತು ಇತರೆಡೆಗಳಲ್ಲಿ ನನಗೆ ಸಮಸ್ಯೆಗಳು ಸಂಭವಿಸಿವೆ, ಅದು ನನ್ನ ಸ್ವಾಭಿಮಾನವನ್ನು ಕುಗ್ಗಿಸಿದೆ" ಎಂದು ಶೆಫಾಲಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಶೆಫಾಲಿ ಜರಿವಾಲಾ ಜೂನ್ 27 ರ ರಾತ್ರಿ ಕೇವಲ 42 ನೇ ವಯಸ್ಸಿನಲ್ಲಿ ನಿಧನರಾದರು. ಪತಿ ಮತ್ತು ಇತರ ಮೂವರು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆತಂದರೂ ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ಘೋಷಿಸಲಾಯಿತು.