ಒಬ್ಬಂಟಿಯಾಗಿದ್ದಾಗ ಹೃದಯಾಘಾತವಾದ್ರೆ ಇಷ್ಟು ಫಾಲೋ ಮಾಡಿ.. 15 ಸೆಕೆಂಡಿನಲ್ಲಿ ಜೀವ ಉಳಿಸ್ಬೋದು
Cardiac Arrest Warning Signs: ಹೃದಯಾಘಾತದ ಸಮಯದಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿರುವುದು ಭಯಾನಕವೆನಿಸಬಹುದು. ಆದರೆ ಭಯಪಡದೆ, ತಕ್ಷಣಕ್ಕೆ ಈ ಕೆಳಗೆ ನೀಡಿರುವ ಸಲಹೆ ಪಾಲಿಸಿದ್ರೆ ಹೃದಯಾಘಾತದಿಂದ ಪಾರಾಗಬಹುದು.

ಚಿಕಿತ್ಸೆಗೂ ಮುನ್ನ
ಈಗಂತೂ ಹೃದಯಾಘಾತವು ಪುರುಷರು, ಮಹಿಳೆಯರು, ಮಕ್ಕಳು ಎನ್ನದೆ ಎಲ್ಲಾ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ. ಆದರೆ ನೀವು ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಅಥವಾ ಯಾರೂ ಇಲ್ಲದಿರುವಾಗ ಇಂತಹ ಸಮಯ ಎದುರಾದಾಗ ಇದನ್ನು ನಿಭಾಯಿಸುವುದು ಇನ್ನೂ ಕಷ್ಟಕರ. ಆದ್ದರಿಂದ ಒಬ್ಬಂಟಿಯಾಗಿದ್ದಾಗ ಅದನ್ನು ನಿಭಾಯಿಸುವುದು ಹೇಗೆಂದು ತಿಳಿಯೋಣ..
ಅತ್ಯಂತ ಮುಖ್ಯ ಹಂತ
ನಿಮಗೆ ಹೃದಯಾಘಾತವಾಗಿದೆ ಎಂದು ನೀವು ಭಾವಿಸಿದರೆ ಅತ್ಯಂತ ಮುಖ್ಯ ಹಂತ ಮೊದಲು ತುರ್ತು ಸೇವೆಗೆ ತಕ್ಷಣ ಕರೆ ಮಾಡುವುದು ಮತ್ತು ಲಭ್ಯವಿದ್ದರೆ ಆಸ್ಪಿರಿನ್ ತೆಗೆದುಕೊಳ್ಳಿ. ನೆನಪಿಡಿ ನಿಮಗೆ ಆಸ್ಪಿರಿನ್‌ಗೆ ಅಲರ್ಜಿ ಇಲ್ಲದಿದ್ದರೆ ಮಾತ್ರ ತೆಗೆದುಕೊಳ್ಳಿ. ನಂತರ ಶಾಂತವಾಗಿರಿ. ನಿಧಾನವಾಗಿ ನಿಮ್ಮ ಬಾಗಿಲನ್ನು ಅನ್‌ಲಾಕ್ ಮಾಡಿ. ಇದರಿಂದ ಯಾರಾದರೂ ನಿಮ್ಮನ್ನು ನೋಡಿದಾಗ ಸಹಾಯ ಮಾಡಲು ಮನೆಗೆ ಪ್ರವೇಶಿಸಬಹುದು.
ಮೊದಲು ಮಾಡಬೇಕಾದದ್ದು..
*ಹೃದಯಾಘಾತದ ಸಮಯದಲ್ಲಿ ಆತಂಕ ಮತ್ತು ಭಯ ಆವರಿಸಿಕೊಳ್ಳುವುದು ಸಹಜವಾದರೂ ಬೇಗನೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಅವಶ್ಯಕ.
*ನಿಮ್ಮನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿ.
*ಭಯಪಡದಿರುವುದು ಮುಖ್ಯ. ಶಾಂತವಾಗಿರಿ, ನಿರಾಳವಾಗಿರಿ ಮತ್ತು ಆರಾಮದಾಯಕ ಸ್ಥಾನದಲ್ಲಿ ಕುಳಿತುಕೊಳ್ಳಿ.
*ನಿಮಗೆ ಈಗಾಗಲೇ ಹೃದಯ ಸಮಸ್ಯೆ ಇದ್ದರೆ ತುರ್ತು ಔಷಧಿಯನ್ನು ಕೈಯಲ್ಲಿ ಇಟ್ಟುಕೊಳ್ಳಿ.
*ರಕ್ತದಲ್ಲಿ ಆಮ್ಲಜನಕದ ಅಗತ್ಯ ಮಟ್ಟವನ್ನು ಕಾಯ್ದುಕೊಳ್ಳಲು ನಿಧಾನವಾಗಿ ಉಸಿರಾಡಿ.
*ಯಾವುದೇ ರೀತಿಯ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಡಿ.
*ಏನನ್ನೂ ತಿನ್ನಲು ಅಥವಾ ಕುಡಿಯಲು ಪ್ರಯತ್ನಿಸಬೇಡಿ. ಏಕೆಂದರೆ ಅದು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಬಹುದು.
*ನೀವು ಉಸಿರಾಡಲು ಹೇರಳವಾದ ಗಾಳಿಯನ್ನು ಪಡೆಯಿರಿ ಮತ್ತು ನಿಮ್ಮ ಮನೆಯ ಬಾಗಿಲುಗಳು, ಕಿಟಕಿಗಳನ್ನು ತೆರೆದಿಡಿ.
*ಆಸ್ಪತ್ರೆಗೆ ಕಾರಿನಲ್ಲಿ ಹೋಗಲು ಪ್ರಯತ್ನಿಸಬೇಡಿ.
ಹೃದಯಾಘಾತ ಎಂದರೇನು?
ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (Myocardial infarction) ಎಂಬುದು ನಿಮ್ಮ ಹೃದಯ ಸ್ನಾಯುವಿನ ಕೆಲವು ಭಾಗಗಳಿಗೆ ಸಾಕಷ್ಟು ರಕ್ತದ ಹರಿವು ಇಲ್ಲದಿರುವುದರಿಂದ ಸಂಭವಿಸುವ ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದೆ. ಈ ರಕ್ತದ ಹರಿವಿನ ಕೊರತೆಯು ಹಲವು ವಿಭಿನ್ನ ಅಂಶಗಳಿಂದ ಉಂಟಾಗಬಹುದು. ಆದರೆ ಇದು ಸಾಮಾನ್ಯವಾಗಿ ನಿಮ್ಮ ಹೃದಯದ ಒಂದು ಅಥವಾ ಹೆಚ್ಚಿನ ಅಪಧಮನಿಗಳಲ್ಲಿನ ಅಡಚಣೆಗೆ ಸಂಬಂಧಿಸಿದೆ.
ರಕ್ತದ ಹರಿವು ಇಲ್ಲದೆ, ಪೀಡಿತ ಹೃದಯ ಸ್ನಾಯು ಸಾಯಲು ಪ್ರಾರಂಭಿಸುತ್ತದೆ. ರಕ್ತದ ಹರಿವು ಬೇಗನೆ ಮರಳಿ ಬರದಿದ್ದರೆ ಹೃದಯಾಘಾತವು ಶಾಶ್ವತ ಹೃದಯ ಹಾನಿ /ಸಾವಿಗೆ ಕಾರಣವಾಗಬಹುದು.
ಹೃದಯಾಘಾತದ ಚಿಹ್ನೆಗಳು ಮತ್ತು ಲಕ್ಷಣಗಳು
ತಜ್ಞರ ಪ್ರಕಾರ ಇವು ಹೃದಯಾಘಾತದ ಲಕ್ಷಣಗಳಾಗಿರಬಹುದು
*ಎದೆಯಲ್ಲಿ ವಿಶೇಷವಾಗಿ ಮಧ್ಯಭಾಗದಲ್ಲಿ ಕೆಲವು ನಿಮಿಷಗಳಿಗಿಂತ ಹೆಚ್ಚು ಕಾಲ ಇರುವ ಅಥವಾ ಬಂದು ಹೋಗುವ ಅಸ್ವಸ್ಥತೆ. ಈ ಅಸ್ವಸ್ಥತೆಯು ಭಾರ, ಹೊಟ್ಟೆ ತುಂಬಿರುವಿಕೆ, ಹಿಸುಕುವಿಕೆ ಅಥವಾ ನೋವಿನಂತೆ ಭಾಸವಾಗಬಹುದು.
*ತೋಳುಗಳು, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಂತಹ ದೇಹದ ಮೇಲ್ಭಾಗದಲ್ಲಿ ಅಸ್ವಸ್ಥತೆ. ಇದು ನೋವು ಅಥವಾ ಸಾಮಾನ್ಯ ಅಸ್ವಸ್ಥತೆಯಂತೆ ಅನಿಸಬಹುದು.
*ಉಸಿರಾಟದ ತೊಂದರೆ. ಇದು ಎದೆಯ ಅಸ್ವಸ್ಥತೆಯೊಂದಿಗೆ ಅಥವಾ ಇಲ್ಲದೆ ಬರಬಹುದು.
*ಶೀತ ಬೆವರು, ವಾಕರಿಕೆ, ವಾಂತಿ, ತಲೆತಿರುಗುವಿಕೆ ಮುಂತಾದ ಅಸಾಮಾನ್ಯ ಸಂವೇದನೆಗಳು. ಪುರುಷರಿಗಿಂತ ಮಹಿಳೆಯರು ಈ ರೀತಿಯ ಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
