ಬೆಂಗಳೂರಿನ ತರಕಾರಿಗಳಲ್ಲಿ ಸೀಸ ಪತ್ತೆ: ಈ ವಿಷಕಾರಿ ಅಂಶದ ಪರಿಣಾಮ ಕಡಿಮೆ ಮಾಡಲು ಹೇಗೆ ತೊಳೆಯಬೇಕು?
How to remove pesticides from vegetables: ತರಕಾರಿಗಳ ಮೇಲಿರುವ ಕೀಟನಾಶಕಗಳ ಅಂಶವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ, ತರಕಾರಿಗಳ ಪೌಷ್ಟಿಕಾಂಶ ಅಥವಾ ರುಚಿಗೆ ಯಾವುದೇ ಧಕ್ಕೆಯಾಗದಂತೆ, ಈ ರಾಸಾಯನಿಕಗಳನ್ನು ಹೋಗಲಾಡಿಸಲು ಸರಿಯಾದ ವಿಧಾನಗಳಲ್ಲಿ ತೊಳೆಯುವುದು ಅತ್ಯಗತ್ಯ.

ಅಪಾಯಕಾರಿ ವಿಷಕಾರಿ ಅಂಶಗಳು ಪತ್ತೆ
ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಸಿಗುವ ತರಕಾರಿಗಳನ್ನು ಬಳಸುವವರು ಇನ್ನು ಮುಂದೆ ಹತ್ತಾರು ಬಾರಿ ಯೋಚಿಸಬೇಕಿದೆ. ಇತ್ತೀಚೆಗೆ ಮಾರುಕಟ್ಟೆಯ ತರಕಾರಿಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ಭಾರೀ ಲೋಹದ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಸಮಿತಿಯು ಈ ಪರೀಕ್ಷೆ ನಡೆಸಿ ಸತ್ಯಾಂಶವನ್ನು ಹೊರಹಾಕಿದೆ. ಒಟ್ಟು ಪರೀಕ್ಷಿಸಿದ 72 ತರಕಾರಿ ಮಾದರಿಗಳ ಪೈಕಿ 19 ಮಾದರಿಗಳಲ್ಲಿ ಅಪಾಯಕಾರಿ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಮುಖ್ಯವಾಗಿ ಬದನೆಕಾಯಿ, ಚಪ್ಪರದ ಅವರೆ, ತೊಂಡೆಕಾಯಿ ಮತ್ತು ವಿವಿಧ ಸೊಪ್ಪುಗಳಲ್ಲಿ ಮಿತಿಮೀರಿದ 'ಸೀಸ'ದ ಅಂಶವಿರುವುದು ದೃಢಪಟ್ಟಿದೆ.
ತರಕಾರಿಗಳನ್ನು ಹೇಗೆ ತೊಳೆಯಬೇಕು?
ಜನರು ತರಕಾರಿಗಳನ್ನು ಬಳಸುವ ಮೊದಲು ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಮತ್ತು ಅವುಗಳನ್ನು ಶುದ್ಧವಾಗಿ ತೊಳೆದು ಬಳಸುವುದು ಅತ್ಯಗತ್ಯವಾಗಿದೆ. ಪೌಷ್ಟಿಕಾಂಶ ಅಥವಾ ರುಚಿಗೆ ಧಕ್ಕೆಯಾಗದಂತೆ ನಿಮ್ಮ ಊಟವನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿಸಲು, ತರಕಾರಿಗಳನ್ನು ಸರಿಯಾದ ವಿಧಾನಗಳಲ್ಲಿ ತೊಳೆಯುವುದು ಬಹಳ ಮುಖ್ಯ. ಈ ವಿಷಕಾರಿ ಅಂಶಗಳ ಪರಿಣಾಮವನ್ನು ಕಡಿಮೆ ಮಾಡಲು ತರಕಾರಿಗಳನ್ನು ಹೇಗೆ ತೊಳೆಯಬೇಕು ಎಂಬ ಸಲಹೆ ಇಲ್ಲಿದೆ.
ಉಪ್ಪು ನೀರಿನಲ್ಲಿ ನೆನೆಸುವುದು
ಒಂದು ದೊಡ್ಡ ಪಾತ್ರೆ ನೀರಿನಲ್ಲಿ 1-2 ಚಮಚ ಉಪ್ಪನ್ನು ಬೆರೆಸಿ. ತರಕಾರಿಗಳನ್ನು 10-15 ನಿಮಿಷಗಳ ಕಾಲ ನೆನೆಸಿಡಿ. ಉಪ್ಪು ನೀರು ತರಕಾರಿಯ ಮೇಲ್ಮೈಯಲ್ಲಿರುವ ಕೀಟನಾಶಕಗಳ ಅಂಶವನ್ನು ವಿಭಜಿಸಲು ಸಹಾಯ ಮಾಡುತ್ತದೆ.
ಅಡುಗೆ ಸೋಡಾ ಬಳಕೆ
ಒಂದು ಪಾತ್ರೆ ನೀರಿನಲ್ಲಿ ಒಂದು ಚಮಚ ಅಡುಗೆ ಸೋಡಾವನ್ನು ಕರಗಿಸಿ. ಅದರಲ್ಲಿ ತರಕಾರಿಗಳನ್ನು 10-15 ನಿಮಿಷ ನೆನೆಸಿಡಿ. ಅಡುಗೆ ಸೋಡಾವು ಸೌಮ್ಯವಾದ ಕ್ಷಾರೀಯ ದ್ರಾವಣದಂತೆ ಕೆಲಸ ಮಾಡಿ ಕೀಟನಾಶಕಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ.
ಸಿಪ್ಪೆ ತೆಗೆಯುವುದು ಅಥವಾ ಉಜ್ಜುವುದು
ಕ್ಯಾರೆಟ್ ಅಥವಾ ಸೌತೆಕಾಯಿಯಂತಹ ದಪ್ಪ ಸಿಪ್ಪೆಯ ತರಕಾರಿಗಳ ಸಿಪ್ಪೆಯನ್ನು ತೆಗೆಯಿರಿ ಅಥವಾ ಬ್ರಷ್‌ನಿಂದ ಮೃದುವಾಗಿ ಉಜ್ಜಿನ ತೊಳೆಯಿರಿ. ಇದು ಕೀಟನಾಶಕಗಳು ಸಂಗ್ರಹವಾಗುವ ಹೊರಪದರವನ್ನು ತೆಗೆದುಹಾಕುತ್ತದೆ.
ಹರಿಯುವ ನೀರಿನಲ್ಲಿ ತೊಳೆಯುವುದು
ಕನಿಷ್ಠ 20-30 ಸೆಕೆಂಡುಗಳ ಕಾಲ ಹರಿಯುವ ನೀರಿನಲ್ಲಿ (Running water) ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ಇದು ಧೂಳು ಮತ್ತು ಮೇಲ್ಮೈಯಲ್ಲಿರುವ ಕೀಟನಾಶಕಗಳನ್ನು ತೆಗೆದುಹಾಕಲು ಸರಳವಾದ ಮಾರ್ಗವಾಗಿದೆ.
ವಿನೆಗರ್ ಬಳಕೆ
1 ಭಾಗ ಬಿಳಿ ವಿನೆಗರ್ ಅನ್ನು 3 ಭಾಗ ನೀರಿಗೆ ಸೇರಿಸಿ. ತರಕಾರಿಗಳನ್ನು 10-15 ನಿಮಿಷ ನೆನೆಸಿಡಿ. ವಿನೆಗರ್‌ನಲ್ಲಿರುವ ಆಮ್ಲೀಯ ಗುಣವು ಕೀಟನಾಶಕಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಂತರ ಶುದ್ಧ ನೀರಿನಲ್ಲಿ ಮತ್ತೊಮ್ಮೆ ತೊಳೆಯಿರಿ.
ಲಿಂಬೆ ರಸದ ನೀರು
ಒಂದು ಪಾತ್ರೆ ನೀರಿಗೆ ಲಿಂಬೆ ಹಣ್ಣಿನ ತುಂಡುಗಳು ಅಥವಾ 2-3 ಚಮಚ ಲಿಂಬೆ ರಸವನ್ನು ಸೇರಿಸಿ, ತರಕಾರಿಗಳನ್ನು 5-10 ನಿಮಿಷ ನೆನೆಸಿಡಿ. ಲಿಂಬೆಯ ಆಮ್ಲೀಯತೆಯು ಕೀಟನಾಶಕಗಳನ್ನು ಕಡಿಮೆ ಮಾಡುವುದಲ್ಲದೆ ತರಕಾರಿಗಳು ತಾಜಾವಾಗಿರುವಂತೆ ಮಾಡುತ್ತದೆ.
ಸೊಪ್ಪುಗಳ ಎಲೆಗಳನ್ನು ಬಿಡಿಸುವುದು
ಪಾಲಕ್ ಅಥವಾ ಲೆಟಿಸ್‌ನಂತಹ ಸೊಪ್ಪುಗಳ ಹೊರಗಿನ ಎಲೆಗಳನ್ನು ತೆಗೆದುಹಾಕಿ ಮತ್ತು ಉಳಿದ ಎಲೆಗಳನ್ನು ನೀರಿನಲ್ಲಿ ನೆನೆಸಿಡಿ. ಕೀಟನಾಶಕಗಳು ಹೆಚ್ಚಾಗಿ ಹೊರಗಿನ ಎಲೆಗಳ ಮೇಲೆ ಸಂಗ್ರಹವಾಗುವುದರಿಂದ ಇದು ಸುರಕ್ಷಿತ.
ಕಮರ್ಷಿಯಲ್ ವೆಜಿಟೇಬಲ್ ವಾಶ್
ಮಾರುಕಟ್ಟೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿ ತೊಳೆಯುವ ದ್ರಾವಣಗಳನ್ನು (Vegetable Wash) ಸೂಚನೆಗಳ ಪ್ರಕಾರ ಬಳಸಿ. ಇವುಗಳನ್ನು ಕೀಟನಾಶಕ, ಧೂಳು ಮತ್ತು ಮೇಣದಂತಹ ಅಂಶಗಳನ್ನು ತೆಗೆದುಹಾಕಲು ವಿಶೇಷವಾಗಿ ತಯಾರಿಸಲಾಗಿರುತ್ತದೆ.
ಸ್ಟೀಮ್ ಕ್ಲೀನಿಂಗ್ (ಹಬೆಯಲ್ಲಿ ಬೇಯಿಸುವುದು)
ತರಕಾರಿಗಳನ್ನು ಹಗುರವಾಗಿ ಹಬೆಯಲ್ಲಿ ಬೇಯಿಸುವುದರಿಂದ ಮೇಲ್ಮೈ ಕೀಟನಾಶಕಗಳು ಸಡಿಲಗೊಳ್ಳುತ್ತವೆ ಮತ್ತು ಅವುಗಳನ್ನು ತೊಳೆದು ಹಾಕುವುದು ಸುಲಭವಾಗುತ್ತದೆ. ಇದು ಪೌಷ್ಟಿಕಾಂಶವನ್ನು ಕಾಪಾಡಲು ಸಹಕಾರಿ.
ಬ್ಲಾಂಚಿಂಗ್ ಅಥವಾ ಕುದಿಸುವುದು
ತರಕಾರಿಗಳನ್ನು 2-5 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಕುದಿಸಿ ಅಥವಾ ಬ್ಲಾಂಚ್ ಮಾಡಿ. ಶಾಖವು ಕೆಲವು ಕೀಟನಾಶಕಗಳನ್ನು ನಾಶಪಡಿಸುತ್ತದೆ. ಇದು ಸೊಪ್ಪುಗಳಿಗೆ ಮತ್ತು ತೆಳುವಾದ ಎಲೆಗಳ ತರಕಾರಿಗಳಿಗೆ ಹೆಚ್ಚು ಪರಿಣಾಮಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

