ಯೋಗದೊಂದಿಗೆ ಆರೋಗ್ಯ: ಆರೋಗ್ಯಕರ ದೇಹಕ್ಕಾಗಿ ಮಾಡಿ ಈ 5 ಆಸನಗಳು
ಯೋಗವು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅತ್ಯುತ್ತಮ. ಮಂಡಿ ನೋವು, ಸೊಂಟ ನೋವು ಮುಂತಾದ ಸಮಸ್ಯೆಗಳಿಗೆ ಯೋಗಾಸನಗಳು ಪರಿಹಾರ ನೀಡುತ್ತವೆ. ವೃಕ್ಷಾಸನ, ಚಕ್ರಾಸನ, ತ್ರಿಕೋನಾಸನ, ಶವಾಸನ ಮತ್ತು ದಂಡಾಸನಗಳಂತಹ ಆಸನಗಳು ದೇಹ ಮತ್ತು ಮನಸ್ಸನ್ನು ಬಲಪಡಿಸಲು ಸಹಾಯ ಮಾಡುತ್ತವೆ.

ಯೋಗ ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿ ಇಡುವಲ್ಲಿ ಬಹಳ ಸಹಕಾರಿಯಾಗುವಂತಹ ಅಭ್ಯಾಸಗಳಲ್ಲೊಂದು. ರೋಗವನ್ನ ಸಾಕಷ್ಟು ದೂರ ಇಡುವಲ್ಲಿ ಯೋಗ ಸಹಾಯ ಮಾಡುತ್ತದೆ. ಯೋಗವು ದೇಹ ಮತ್ತು ಮನಸ್ಸನ್ನು ಉಲ್ಲಾಸ ಭರಿತವಾಗಿ ಇಡುತ್ತದೆ. ಪ್ರಾರಂಭದಲ್ಲಿ ಇದನ್ನ ಕರಗತ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಅನ್ನಿಸಬಹುದು, ಆದರೆ ಒಮ್ಮೆ ಕರಗತ ಮಾಡಿಕೊಂಡರೆ ನಮ್ಮ ದೇಹ ಹಾಗೂ ಮನಸ್ಸನ್ನ ಕೇಂದ್ರಿಕರಿಸಲು ಬಹಳ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ಮಂಡಿ ನೋವು, ಸೊಂಟ ನೋವು ಮುಂತಾದ ದೈಹಿಕ ರೋಗಗಳಿಂದ ಬಳಲುತ್ತಿರುತ್ತಾರೆ. ಅಂತವರಿಗೆ ಈ ಯೋಗಾಸನಗಳು ಸಹಾಯ ಮಾಡುತ್ತವೆ. ಈ ಯೋಗ, ಧ್ಯಾನ, ಯೋಗಾಸನಗಳು ಪ್ರಾರಂಭದಲ್ಲಿ ಪ್ರಯೋಜನಕಾರಿ ಅನಿಸುವುದಿಲ್ಲ, ಜೊತೆಗೆ ಪ್ರಾರಂಭದಲ್ಲಿ ಯೋಗಾಸನಗಳನ್ನ ಪ್ರಯತ್ನಿಸಿದಾಗ ದೇಹದ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳಬಹುದು, ಆದರೆ ನಿರಂತರವಾಗಿ ಅಭ್ಯಾಸ ಮಾಡುವುದರಿಂದ ದೇಹ ನಿಧಾನವಾಗಿ ಹೊಂದಿಕೊಳ್ಳುತ್ತದೆ. ನಮ್ಮ ದೇಹ ಯಾವುದೇ ಅಭ್ಯಾಸಕ್ಕೆ ಹೊಂದಿಕೊಳ್ಳುವುದಕ್ಕೆ ಕನಿಷ್ಟ ಎಂದರು ಒಂದು ತಿಂಗಳು ಬೇಕಾಗುತ್ತದೆ. ಹಾಗೇ ಯೋಗಾಭ್ಯಾಸವು ಸಹ ದೇಹಕ್ಕೆ ಹೊಂದಿಕೊಳ್ಳಲು ಕೆಲವು ಸಮಯ ತೆಗೆದುಕೊಳ್ಳುತ್ತದೆ. ನಮ್ಮ ದೇಹಕ್ಕೆ ಬರುವಂತಹ ಸಾಮಾನ್ಯ ಕಾಯಿಲೆಗಳನ್ನ ಹೋಗಲಾಡಿಸುವುದಕ್ಕೆ ಕೆಲವೊಂದು ಆಸನಗಳು ಇಲ್ಲಿವೆ.
ವೃಕ್ಷಾಸನ (ವೃಕ್ಷದ ಭಂಗಿ)
ಮರದ ಭಂಗಿಯಲ್ಲಿ ನಿತ್ತುಕೊಂಡು ಮಾಡುವಂತಹ ಆಸನ ಇದಾಗಿದ್ದು ಮನಸ್ಸಿನ ಏಕಾಗ್ರತೆಯನ್ನ ಹೆಚ್ಚಿಸುತ್ತದೆ. ಮನಸ್ಸನ್ನು ಪ್ರಶಾಂತಗೊಳಿಸಿ, ಮನಸ್ಸಿಗೆ ಸಮಚಿತ್ತತೆಯನ್ನು ತರುವಲ್ಲಿ ಸಹಾಯವನ್ನ ಮಾಡುತ್ತದೆ. ಈ ಯೋಗಾಸನದಲ್ಲಿ ವಿಶ್ರಮಿಸುವುದರಿಂದ ಮನಸ್ಸು ಸಮಸ್ಥಿತಿಗೆ ಬರುವುದರ ಜೊತೆಗೆ ಹೃದಯವು ಆರೋಗ್ಯಕರವಾಗಿ ತನ್ನ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ದೇಹ ಸಮಸ್ಥಿತಿಯಲ್ಲಿ ಇಡುತ್ತದೆ.
ಚಕ್ರಾಸನ
ಚಕ್ರಾಸನ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಚಕ್ರಾಸನ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡುವ ಪ್ರಯೋಜನಕಾರಿ ಆಸನ ಎಂದು ಪರಿಗಣಿಸಲಾಗಿದೆ. ಅದರ ಹೆಸರೇ ಸೂಚಿಸುವಂತೆ- ಚಕ್ರಾಸನ, ಯೋಗ ಮಾಡುವಾಗ, ದೇಹವನ್ನು ಬಿಲ್ಲಿನಂತೆ ಚಕ್ರದ ಆಕಾರದಲ್ಲಿ ಭಾಗಿಸುವುದು. ಚಕ್ರಾಸನ ಕಠಿಣ ವ್ಯಾಯಾಮಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಆದರೆ ನಿಯಮಿತ ಅಭ್ಯಾಸದಿಂದ ಈ ಆಸನವನ್ನ ಕರಗತ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮಗೆ ವಿಶೇಷ ಏಕಾಗ್ರತೆ ಮತ್ತು ನಿಯಮಿತ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಲು ಆರೋಗ್ಯ ತಜ್ಞರು ಚಕ್ರಾಸನ ಮಾಡುವುದು ಉತ್ತಮ ಎಂದು ತಿಳಿಸುತ್ತಾರೆ.
ತ್ರಿಕೋನಾಸನ
ನಿಂತುಕೊಂಡು ಮಾಡಬೇಕಾದ ಈ ಆಸನವು ಹೃದಯದ ವ್ಯಾಯಾಮವಾಗಿದೆ. ಆಳವಾಗಿ ಉಸಿರಾಡಿದಾಗ ಎದೆಯು ವಿಸ್ತಾರವಾಗುತ್ತದೆ ಮತ್ತು ಲಯಬದ್ಧವಾದ ಉಸಿರಾಟದಿಂದ ದಾಢ್ರ್ಯತೆ ಹೆಚ್ಚುತ್ತದೆ. ಇದು ಸೊಂಟ, ಭುಜಗಳು ಮತ್ತು ತೊಡೆಸಂದುಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಆಸನವನ್ನ ಮಾಡುವುದರಿಂದ ಮಂಡಿ ಮತ್ತು ತೊಡೆಸಂದು ಬಲಗೊಳ್ಳುತ್ತವೆ. ಈ ಆಸನವನ್ನ ಒಂದೆರಡು ದಿನ ಮಾಡಿದರೆ ಅದು ಪ್ರಯೋಜನವಾಗುವುದಿಲ್ಲ. ನಿರಂತರವಾಗಿ ಅಭ್ಯಾಸವನ್ನ ಮಾಡದರೆ ಮಾತ್ರ ಈ ಆಸನದ ಪ್ರಯೋಜನವನ್ನ ಪಡೆಯಬಹುದು.
ಶವಾಸನ
ಶವಾಸನವನ್ನ ಹೆಚ್ಚಾಗಿ ಎಲ್ಲಾ ಆಸನಗಳನ್ನ ಮಾಡಿದ ನಂತರದಲ್ಲಿ ಈ ಆಸನವನ್ನ ಮಾಡಬೇಕು ಎಂದು ಹೇಳಲಾಗುತ್ತದೆ. ಕಾರಣ ಎಲ್ಲಾ ಅಸನಗಳನ್ನ ಮಾಡಿ ದೇಹ ದಣಿದಿರುತ್ತದೆ. ಶವಾಸನದಲ್ಲಿ ಆರಾಮವಾಗಿ ಮಲಗುವುದರಿಂದ ದೇಹ ಸುಧಾರಿಸಿಕೊಳ್ಳುತ್ತದೆ. ಇದು ಕೇವಲ ವಿಶ್ರಾಂತಿಗಲ್ಲ ಇದರಲ್ಲೂ ಹಲವು ಪ್ರಯೋಜನಗಳು ಇವೆ. ಹಲವರಲ್ಲಿ ಅರ್ಧ ತಲೆನೋವು ಕಾಣಿಸಿಕೊಳ್ಳುತ್ತದೆ. ಇದರ ಪರಿಹಾರಕ್ಕೆ ಶವಾಸನ ನೆರವಾಗುತ್ತದೆ. ಶವಾಸನದಿಂದ ಮೆದುಳಿಗೆ ಸೂಕ್ತ ಪ್ರಮಾಣದಲ್ಲಿ ರಕ್ತಸಂಚಾರ ಸರಿಯಾದ ರೀತಿಯಲ್ಲಿ ಆಗುತ್ತದೆ. ಇದರಿಂದಾಗಿ ತಲೆನೋವು ದೂರವಾಗುತ್ತದೆ. ಒತ್ತಡ, ಖಿನ್ನತೆಯಿಂದ ಬಳಲುತ್ತಿದ್ದರೆ ಈ ಆಸನ ಅದರಿಂದ ಹೊರ ತರಲು ಸಹಾಯ ಮಾಡುತ್ತದೆ. ಶವಾಶನ ಮಾಡುವುದರಿಂದ ದೇಹದ ರಕ್ತ ಪರಿಚಲನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ರಕ್ತ ಪರಿಚಲನೆಯಲ್ಲಿನ ಹೆಚ್ಚಳವು ನಂತರ ದೇಹದಿಂದ ಎಲ್ಲಾ ವಿಷಗಳನ್ನು ತೆಗೆದುಹಾಕುತ್ತದೆ ಮತ್ತು ಇಡೀ ದೇಹಕ್ಕೆ ಧನಾತ್ಮಕ ಶಕ್ತಿಯನ್ನು ನೀಡುತ್ತದೆ.
ದಂಡಾಸನ
ದಂಡಾಸನ ಅಥವಾ ಕೋಲಿನ ಆಸನವು ಇತರ ಯೋಗಾಸನಗಳಿಗಿಂತಲೂ ವ್ಯತಿರಿಕ್ತವಾಗಿದ್ದು, ಇದರಲ್ಲಿ ಮೂರು ರೀತಿಯ ಭಂಗಿಗಳು ಇವೆ. ದಂಡಾಸನವು ಬೆನ್ನನ್ನು ಬಲಿಷ್ಟವಾಗಿಸುವುದರ ಜೊತೆ ಜೊತೆಗೆ ಭುಜಗಳ ಮತ್ತು ಎದೆಯನ್ನು ವಿಸ್ತರಿಸುತ್ತದೆ. ದೇಹದಲ್ಲಿ ಹೆಚ್ಚು ಕೊಬ್ಬು ಹೊಂದಿದವರು ಈ ಆಸನವನ್ನ ಮಾಡುವುದರಿಂದ ದೇಹದಲ್ಲಿ ಕೊಬ್ಬಿನ ಅಂಶವನ್ನ ಕಡಿಮೆ ಮಾಡುತ್ತದೆ. ಹಾಗೇ ಹೃದಯದ ಆರೋಗ್ಯಕ್ಕೂ ಸಹ ದಂಡಾಸನ ಸಹಕಾರಿಯಾಗಿದೆ.
ಈ ಐದು ಆಸನಗಳನ್ನ ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ದೇಹದ ಜೊತೆಗೆ ಮನಸ್ಸು ಬಲಿಷ್ಟವಾಗುತ್ತದೆ. ಪ್ರಾರಂಭದಲ್ಲಿ ಕಠಿಣವೆನಿಸಿದರೂ ಅಭ್ಯಾಸವಾಗುತ್ತಾ ದೇಹಕ್ಕೆ ಹೊಂದಿಕೊಂಡು ಬಿಡುತ್ತದೆ. ಯಾವುದೇ ಆಸನಗಳನ್ನ ನಿರಂತರವಾಗಿ ಮಾಡಿದಾಗ ಮಾತ್ರ ಅದರ ಪ್ರಯೋಜನ ದೇಹಕ್ಕೆ ದೊರೆಯುತ್ತದೆ.