ಕೇರಳದ ಕೊಚ್ಚಿಯಲ್ಲಿ 21 ವರ್ಷದ ಯುವಕನೋರ್ವ ಕುಟುಂಬದೊಂದಿಗೆ ಉಪಹಾರ ಸೇವಿಸುತ್ತಿದ್ದಾಗ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಚರ್ಚ್‌ನಿಂದ ಬಂದ ನಂತರ ತಿಂಡಿ ತಿನ್ನುವಾಗ ಈ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಯಬೇಕಿದೆ.
21ಕ್ಕೆ ಜೀವನಯಾತ್ರೆ ಮುಗಿಸಿದ ತರುಣ: ಕುಟುಂಬದವರೊಂದಿಗೆ ಕುಳಿತು ಉಪಹಾರ ಸೇವಿಸ್ತಿದ್ದಾಗಲೇ ಸಾವು:
ಕೊಚ್ಚಿ: ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಸಾವು ಯಾರಿಗೆ ಯಾವಾಗ ಬರುತ್ತೆ ಎಂದು ಹೇಳಲಾಗದು. ದಿನಾ ಒಂದಲ್ಲ ಒಂದು ಕಡೆ ಹದಿಹರೆಯದ ಮಕ್ಕಳು, ತರುಣರು ಯುವತಿಯರು, ಪುಟ್ಟ ಮಕ್ಕಳು ಸಹ ಹಠಾತ್ ಆಗಿ ಕುಸಿದು ಬಿದ್ದು ಸಾವು ಕಾಣುತ್ತಿರುವುದು ಅನೇಕ ಪೋಷಕರನ್ನು ಆತಂಕಕ್ಕೆ ದೂಡಿದೆ. ಬೆಳೆದು ನಿಂತ ಮಕ್ಕಳು ಕಣ್ಣಮುಂದೆಯೇ ಹಠಾತ್ ಕುಸಿದು ಬಿದ್ದು, ಸಾವನ್ನಪ್ಪುತ್ತಿದ್ದಾರೆ. ಇದೊಂದು ಅರಗಿಸಿಕೊಳ್ಳಲಾಗದಂತಹ ಪ್ರಕರಣಗಳಾಗಿದ್ದರೂ ಅಲ್ಲಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಹಾಗೆಯೇ ಈಗ ಕೇರಳದಲ್ಲಿ ಕುಟುಂಬದವರೊಂದಿಗೆ ಕುಳಿತು ಉಪಹಾರ ಸೇವಿಸ್ತಿದ್ದ 21ರ ಹರೆಯದ ಹುಡುಗನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಮನೆ ಮಂದಿಗೆ ಸಹಿಸಲಾಗದ ನೋವು ನೀಡಿದೆ.
ಇದನ್ನೂ ಓದಿ: ಆತಂಕಕಾರಿ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದು ಲಿಫ್ಟ್‌ನಲ್ಲಿ ಸಿಲುಕಿದ ಇಬ್ಬರು ಪುಟ್ಟ ಮಕ್ಕಳ ರಕ್ಷಿಸಿದ ಬಾಲಕಿ
ಮೃತ ಕೇರಳದ ಕೊಚ್ಚಿಯ ಮುನಂಬಂನ ಕುರುಪ್ಪಸೇರಿಯಲ್ಲಿ ಈ ಘಟನೆ ನಡೆದಿದ್ದು, ಅಜಿ ಎಂಬುವವರ 21 ವರ್ಷದ ಆಂಟನ್ ಸಾವನ್ನಪ್ಪಿದ್ದಾನೆ. ಪ್ರತಿ ಭಾನುವಾದಂತೆ ಇಂದು ಬೆಳಗ್ಗೆ ಚರ್ಚಗೆ ಹೋಗಿ ಬಂದ ಈ ಯುವಕ ನಂತರ ಮನೆಯವರ ಜೊತೆ ಕುಳಿತು ಬೆಳಗಿನ ತಿಂಡಿ ಸೇವಿಸುತ್ತಿದ್ದ. ಮೊದಲಿಗೆ ಪಪ್ಸ್ ತಿಂದು ಬಳಿಕ ಉಪ್ಪಿಟ್ಟು ತಿಂದಿದ್ದಾನೆ. ಅಷ್ಟರಲ್ಲೇ ಆತ ಕುಸಿದು ಬಿದ್ದಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಮದುವೆಗೆ ದಿನ ಮೊದಲು ಸಾವಿಗೆ ಶರಣಾದ ಶಿಕ್ಷಕ ಸೋದರಿಯರು: ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕ
ಆಂಟನ್ ಲಾಜಿಸ್ಟಿಕ್ಸ್ ವಿದ್ಯಾರ್ಥಿಯಾಗಿದ್ದರು. ಸಾವಿಗೆ ಕಾರಣ ವಾಯುಮಾರ್ಗದಲ್ಲಿ ಸಿಲುಕಿಕೊಂಡ ಆಹಾರವೋ ಅಥವಾ ಹಠಾತ್ ಹೃದಯಾಘಾತವೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ಕಾರಣ ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ ಈ ಹಠಾತ್ ಸಾವು ಮನೆ ಮಂದಿ ಹಾಗೂ ಊರಿನವರಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.


