ಪ್ರೊಟೀನ್ ಗಾಗಿ ನೀವು ಪ್ರತಿದಿನ ಚಿಕನ್ ತಿಂತೀರಾ? ಜೀವ ಜೋಪಾನ!
ನೀವು ಪ್ರತಿದಿನ ಕೋಳಿ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ, ಜಾಗರೂಕರಾಗಿರಿ, ಏಕೆಂದರೆ ಇದು ನಿಮ್ಮ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಈ ಭಯಾನಕ ಸಂಗತಿಯು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ.

ಮಾಂಸಾಹಾರಿಗಳ (non vegetarian) ತಟ್ಟೆಯಲ್ಲಿ ಕೋಳಿ ಮಾಂಸವು ಅತ್ಯಂತ ಸಾಮಾನ್ಯವಾದ ಆಹಾರಗಳಲ್ಲಿ ಒಂದಾಗಿದೆ. ಕೋಳಿ ಮಾಂಸವನ್ನು ಕೇವಲ ರುಚಿಕರವಾಗಿ ಮಾತ್ರ ಅಲ್ಲ, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸಬಹುದು.
ಕಡಿಮೆ ಕ್ಯಾಲೋರಿ, ಕಡಿಮೆ ಸೋಡಿಯಂ ಮತ್ತು ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿರುವ ಕೋಳಿ ಮಾಂಸವನ್ನು (Chicken meat) ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ಮಾನವ ಆಹಾರಕ್ಕೆ ಅಗತ್ಯವಿರುವ ಎಲ್ಲಾ 9 ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇವು ನಮಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತವೆ. ಕೋಳಿ ಮಾಂಸ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನು ಹೆಚ್ಚಾಗಿ ರೆಡ್ ಮೀಟ್ ಗಿಂತಲೂ(red meat) ಆರೋಗ್ಯಕರ ಪ್ರೋಟೀನ್ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ಅಧ್ಯಯನವು ಕೋಳಿ ಪ್ರಿಯರಲ್ಲಿ ಭಯವನ್ನು ಹುಟ್ಟಿಸಿದೆ. ಹೆಚ್ಚು ಕೋಳಿ ತಿನ್ನುವುದರಿಂದ ಮರಣ ಪ್ರಮಾಣ ಹೆಚ್ಚಾಗುತ್ತದೆ ಎಂದು ಅಧ್ಯಯನವು ಹೇಳುತ್ತದೆ. ವಿಜ್ಞಾನಿಗಳು ಏನು ಹೇಳುತ್ತಾರೆಂದು ತಿಳಿಯೋಣ.
ಜಾಗರೂಕರಾಗಿರಿ
'ನ್ಯೂಟ್ರಿಯೆಂಟ್ಸ್' ನಲ್ಲಿ ಇತ್ತೀಚೆಗೆ ನಡೆದ ಅಧ್ಯಯನವು ಹೆಚ್ಚಿನ ಪ್ರಮಾಣದಲ್ಲಿ ಕೋಳಿ ಸೇವನೆ ಮತ್ತು ಹೆಚ್ಚಿದ ಮರಣದ ನಡುವಿನ ಸಂಭಾವ್ಯ ಸಂಬಂಧವನ್ನು ಸೂಚಿಸುತ್ತದೆ, ವಿಶೇಷವಾಗಿ ಹೆಚ್ಚು ಕೋಳಿ ತಿಂದ್ರೆ ಜಠರಗರುಳಿನ ಕ್ಯಾನ್ಸರ್ ನಿಂದ (gastrointestinal cancer) ಸಾವನ್ನಪ್ಪುತ್ತಾರೆ ಎನ್ನಲಾಗಿದೆ. ಪ್ರತಿ ವಾರ 300 ಗ್ರಾಂ ಗಿಂತ ಹೆಚ್ಚು ಕೋಳಿ ತಿನ್ನುವವರು 100 ಗ್ರಾಂ ಗಿಂತ ಕಡಿಮೆ ತಿನ್ನುವವರಿಗಿಂತ 27% ಹೆಚ್ಚಿನ ಸಾವಿನ ಅಪಾಯವನ್ನು ಎದುರಿಸುತ್ತಾರೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.
300 ಗ್ರಾಂ ಗಿಂತ ಹೆಚ್ಚು ಕೋಳಿ ಮಾಂಸ ತಿನ್ನುವುದು ಹಾನಿಕಾರಕ
ಈ ಅಧ್ಯಯನವು ದಕ್ಷಿಣ ಇಟಲಿಯಲ್ಲಿ ಮಾಂಸ ಸೇವನೆ ಮತ್ತು ಜಠರಗರುಳಿನ ಕ್ಯಾನ್ಸರ್ (GC) ಮತ್ತು ಮರಣದ ಇತರ ಕಾರಣಗಳ ನಡುವಿನ ಸಂಬಂಧವನ್ನು ಪರಿಶೀಲಿಸಿದೆ. 300 ಗ್ರಾಂ ಗಿಂತ ಹೆಚ್ಚು ಕೋಳಿ ಮಾಂಸ ಸೇವಿಸುವ ಜನರು 100 ಗ್ರಾಂ ಗಿಂತ ಕಡಿಮೆ ಸೇವಿಸುವವರಿಗೆ ಹೋಲಿಸಿದರೆ ಸಾವಿನ ಅಪಾಯವನ್ನು 27% ರಷ್ಟು ಹೆಚ್ಚಾಗಿ ಹೊಂದಿದ್ದಾರೆಂದು ಗಮನಿಸಲಾಗಿದೆ. ಮಹಿಳೆಯರಿಗಿಂತ ಪುರುಷರಿಗೆ ಈ ಅಪಾಯ ಹೆಚ್ಚು.
ಇದನ್ನು ತಡೆಯಲು ಏನು ಮಾಡಬೇಕು?
ಅಧ್ಯಯನದ ಪ್ರಕಾರ, ಕೋಳಿ ಮಾಂಸದ ಅತಿಯಾದ ಸೇವನೆಯು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಅಥವಾ ವಾರಕ್ಕೊಮ್ಮೆ ತಿನ್ನುವ ಕೋಳಿ ಮಾಂಸದ ಪ್ರಮಾಣದ ಬಗ್ಗೆ ಜಾಗರೂಕರಾಗಿರಬೇಕು.
ಪ್ರೋಟೀನ್‌ನ ಇತರ ಮೂಲಗಳು
ಇದರ ಹೊರತಾಗಿ, ನೀವು ಇತರ ಪ್ರೋಟೀನ್ ಮೂಲಗಳನ್ನು ಸಹ ಆಹಾರದ ಭಾಗವಾಗಿ ಮಾಡಬಹುದು. ದೈನಂದಿನ ಪ್ರೋಟೀನ್ (protine) ಸೇವನೆಗಾಗಿ ಕೋಳಿ ಮಾಂಸವನ್ನು ತಿನ್ನುವ ಅಗತ್ಯವಿರುವುದಿಲ್ಲ. ಕೋಳಿಯ ಬದಲಾಗಿ ನೀವು ತೋಫು, ಬೀನ್ಸ್ ಮತ್ತು ಬೀಜಗಳು (ಸಸ್ಯ ಆಧಾರಿತ ಪ್ರೋಟೀನ್ ಮೂಲಗಳು) ಅಥವಾ ಡೈರಿ, ಮೊಟ್ಟೆ, ಮೀನು (ಪ್ರಾಣಿ ಆಧಾರಿತ ಪ್ರೋಟೀನ್ ಮೂಲಗಳು) ಇವುಗಳನ್ನು ಸೇವಿಸಬಹುದು.