ಒಂದು ಗ್ಲಾಸ್ ವೈನ್ ಕುಡಿಯೋದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದಾ?
Red Wine Benefits: ಆಲ್ಕೋಹಾಲ್ ಸೇವಿಸುವವರಲ್ಲಿ ಹಲವರು ವೈನ್ ಕೂಡ ಕುಡಿಯುತ್ತಾರೆ. ವೈನ್ ಕುಡಿಯುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತೆ ಅನ್ನೋ ಒಂದು ಚರ್ಚೆ ಇದೆ. ಹಾಗಿದ್ರೆ, ನಿಜವಾಗಿಯೂ ವೈನ್ ಹೃದಯಕ್ಕೆ ಒಳ್ಳೆಯದಾ? ಇದರಲ್ಲಿ ಸತ್ಯ ಎಷ್ಟು ಅನ್ನೋದನ್ನು ತಿಳಿಯೋಣ.

ಇದರಲ್ಲಿ ಎಷ್ಟು ಸತ್ಯಾಂಶವಿದೆ?
ವೈನ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯ ಬಹಳ ಕಾಲದಿಂದ ಚಾಲ್ತಿಯಲ್ಲಿದೆ. ಅದರಲ್ಲೂ ರೆಡ್ ವೈನ್ ಬಗ್ಗೆ ಈ ಮಾತು ಹೆಚ್ಚಾಗಿ ಕೇಳಿಬರುತ್ತದೆ. ದಿನಕ್ಕೆ ಒಂದು ಗ್ಲಾಸ್ ವೈನ್ ಕುಡಿದರೆ ಹೃದಯವನ್ನು ರಕ್ಷಿಸಬಹುದು ಎಂಬ ವಾದವಿದೆ. ಆದರೆ, ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ದ್ರಾಕ್ಷಿಯ ಸಿಪ್ಪೆಯಲ್ಲಿದೆ ಆ್ಯಂಟಿಆಕ್ಸಿಡೆಂಟ್
ರೆಡ್ ವೈನ್‌ನಲ್ಲಿ 'ರೆಸ್ವೆರಾಟ್ರಾಲ್' ಎಂಬ ನೈಸರ್ಗಿಕ ಅಂಶವಿದೆ. ಇದು ಹೆಚ್ಚಾಗಿ ದ್ರಾಕ್ಷಿಯ ಸಿಪ್ಪೆಯಲ್ಲಿ ಕಂಡುಬರುತ್ತದೆ. ಈ ಸಿಪ್ಪೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳಿದ್ದು, ಇದು ರಕ್ತನಾಳಗಳ ಒಳಪದರವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಅಲ್ಲದೆ, ಕೆಟ್ಟ ಕೊಲೆಸ್ಟ್ರಾಲ್‌ನ ಆಕ್ಸಿಡೀಕರಣವನ್ನು ಕಡಿಮೆ ಮಾಡಲು ಕೂಡ ಇದು ಸಹಕಾರಿಯಾಗಿರಬಹುದು.
ಅಧ್ಯಯನ ಹೇಳುವುದೇನು?
ಕೆಲವು ಅಧ್ಯಯನಗಳ ಪ್ರಕಾರ, ಕಡಿಮೆ ಪ್ರಮಾಣದಲ್ಲಿ ವೈನ್ ಸೇವಿಸಿದರೆ 'ಒಳ್ಳೆಯ ಕೊಲೆಸ್ಟ್ರಾಲ್' ಎನಿಸಿದ ಎಚ್‌ಡಿಎಲ್ (HDL) ಮಟ್ಟ ಸ್ವಲ್ಪ ಹೆಚ್ಚಾಗಬಹುದು. ಈ ಕೊಲೆಸ್ಟ್ರಾಲ್, ರಕ್ತನಾಳಗಳಲ್ಲಿ ಶೇಖರಣೆಯಾದ ಹೆಚ್ಚುವರಿ ಕೊಬ್ಬನ್ನು ಯಕೃತ್ತಿಗೆ ಸಾಗಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತನಾಳಗಳಲ್ಲಿ ಬ್ಲಾಕೇಜ್ ಆಗುವ ಅಪಾಯ ಸ್ವಲ್ಪ ಕಡಿಮೆಯಾಗಬಹುದು. ಆದರೆ ಈ ಪರಿಣಾಮ ತುಂಬಾ ಚಿಕ್ಕದು.
ಇದಕ್ಕಿಂತ ಹೆಚ್ಚು ಕುಡಿದರೆ ಲಾಭವಿಲ್ಲ
ವೈನ್‌ನಿಂದ ಹೃದಯಕ್ಕೆ ಸಿಗುವ ಪ್ರಯೋಜನವು ಕೇವಲ ಕಡಿಮೆ ಪ್ರಮಾಣದ ಸೇವನೆಗೆ ಮಾತ್ರ ಸೀಮಿತ. ವೈದ್ಯಕೀಯ ತಜ್ಞರ ಪ್ರಕಾರ, ಮಹಿಳೆಯರು ದಿನಕ್ಕೆ ಒಂದು ಡ್ರಿಂಕ್ಸ್ ಮತ್ತು ಪುರುಷರು ದಿನಕ್ಕೆ ಎರಡು ಡ್ರಿಂಕ್ಸ್ ತೆಗೆದುಕೊಳ್ಳಬಹುದು. ಒಂದು ಡ್ರಿಂಕ್ಸ್ ಎಂದರೆ ಸುಮಾರು 120 ರಿಂದ 150 ಮಿಲಿಲೀಟರ್ ವೈನ್. ಇದಕ್ಕಿಂತ ಹೆಚ್ಚು ಕುಡಿದರೆ ಲಾಭವಿಲ್ಲ, ಬದಲಾಗಿ ಅಪಾಯಗಳೇ ಹೆಚ್ಚು.
ಹೊಸದಾಗಿ ಆರಂಭಿಸಬಾರದು
ಹೆಚ್ಚಿನ ಪ್ರಮಾಣದಲ್ಲಿ ವೈನ್ ಕುಡಿಯುವುದರಿಂದ ಹೃದಯದ ಆರೋಗ್ಯಕ್ಕೆ ಅಪಾಯ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ, ಹೃದಯ ಬಡಿತದಲ್ಲಿ ಏರುಪೇರು, ಬೊಜ್ಜು, ಯಕೃತ್ತಿನ ಸಮಸ್ಯೆಗಳು ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವೈನ್ ಔಷಧಿಯಲ್ಲ ಎಂದು ವೈದ್ಯರು ಸ್ಪಷ್ಟಪಡಿಸುತ್ತಾರೆ. ಈಗಾಗಲೇ ಆಗಾಗ ಕುಡಿಯುವವರಿಗೆ ದೊಡ್ಡ ನಷ್ಟವಿಲ್ಲದಿರಬಹುದು. ಆದರೆ, ಕುಡಿಯದವರು ಹೃದಯದ ಆರೋಗ್ಯಕ್ಕಾಗಿ ಹೊಸದಾಗಿ ಇದನ್ನು ಆರಂಭಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.