ನೀವು ತಿನ್ನುತ್ತಿರುವ ಉಪ್ಪು ಅಸಲಿಯಾ ಅಥವಾ ನಕಲಿಯಾ ಹೇಗೆ ತಿಳಿಯೋದು ?
ಉಪ್ಪಿಗಿಂತ ರುಚಿ ಬೇರೆ ಇಲ್ಲ….. ಅಲ್ವಾ? ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತೆ. ಉಪ್ಪು ಇಲ್ಲದೆ ಆಹಾರ ತಿನ್ನೋದನ್ನು ಊಹಿಸೋದು ಕಷ್ಟ. ಉಪ್ಪು ಆಹಾರದಲ್ಲಿ ಬಳಸುವ ಒಂದು ಪದಾರ್ಥ. ನಾವು ಇತರ ಮಸಾಲೆಗಳಿಲ್ಲದೆ ಅಡುಗೆ ತಯಾರಿಸಬಹುದು, ಉಪ್ಪು ಇಲ್ಲದೆ ಅದು ಸಾಧ್ಯವಿಲ್ಲ. ಆದರೆ ರುಚಿ ಹೆಚ್ಚಿಸಲು ನಾವು ಕೊಂಡುಕೊಳ್ಳುವ ಉಪ್ಪು ನಿಜವಾಗಿಯೂ ಅಸಲಿಯೇ? ಇದನ್ನು ತಿಳಿದುಕೊಳ್ಳೋದು ಹೇಗೆ? ಇಲ್ಲಿದೆ ನೋಡಿ ನಿಮ್ಮ ಮನೆಗೆ ತರುವ ಉಪ್ಪು ಅಸಲಿಯೇ? ನಕಲಿಯೇ? ಎಂದು ತಿಳಿದುಕೊಳ್ಳುವ ದಾರಿ.

ಉಪ್ಪು(Salt) ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ರೀತಿಯಲ್ಲಿ ಆರೋಗ್ಯಕರ. ಆದರೆ ಉಪ್ಪು ಅಶುದ್ಧವಾಗಿದ್ದರೆ, ಅದು ಅನೇಕ ರೀತಿಯ ಹಾನಿಯನ್ನು ಉಂಟುಮಾಡಬಹುದು. ಹಾಗಾಗಿ, ಅದು ಆರೋಗ್ಯಕ್ಕೆ ಹಾನಿಕಾರಕವಾಗುತ್ತೆ. ನೀವು ತಿನ್ನುತ್ತಿರುವ ಉಪ್ಪು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸೋದು ಹೇಗೆ ಎಂದು ತಿಳಿಯೋಣ..
ಉಪ್ಪಿನ ಪ್ರಯೋಜನಗಳು
1. ಉಪ್ಪು ದೇಹದಲ್ಲಿ ಅಯೋಡಿನ್(Iodine) ಕೊರತೆಯನ್ನು ಪೂರೈಸುತ್ತೆ ಮತ್ತು ಹೈಪೋಥೈರಾಯ್ಡಿಸಂನಂತಹ ರೋಗಗಳಿಂದ ರಕ್ಷಿಸುತ್ತೆ. ಆದುದರಿಂದ ಉಪ್ಪನ್ನು ನಿಯಮಿತವಾಗಿ ಸೇವಿಸಲೇಬೇಕು. ಗರ್ಭಿಣಿಯರಿಗೆ ಉಪ್ಪಿನ ಸೇವನೆ ಬಹಳ ಮುಖ್ಯ. ಉಪ್ಪು ತಾಯಿ ಮತ್ತು ಮಗುವನ್ನು ಅಯೋಡಿನ್ ಕೊರತೆಯಿಂದ ರಕ್ಷಿಸುತ್ತೆ.
2. ಕೈ ಅಥವಾ ಕಾಲುಗಳಲ್ಲಿ ಊತವಿದ್ದರೆ(Swelling), ನೀವು ಬಿಸಿ ನೀರು ಮತ್ತು ಉಪ್ಪನ್ನು ಬೆರೆಸಿ ಮುಳುಗಿಸಬಹುದು. ಇದು ಸಾಕಷ್ಟು ಆರಾಮ ನೀಡುತ್ತೆ. ಇಲ್ಲವಾದರೆ ಊತವಿರುವ ಜಾಗಕ್ಕೆ ಉಪ್ಪಿನ್ನು ಬಟ್ಟೆಯಲ್ಲಿ ಕಟ್ಟಿ ಬಿಸಿ ಮಾಡಿ ಇಟ್ಟರೆ ಅದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ನಿಮಗೆ ತಕ್ಷಣ ಆರಾಮ ಸಿಗುತ್ತದೆ.
3. ನಿಮ್ಮ ದೇಹವು ಉತ್ತಮವಾಗಿ ಹೈಡ್ರೇಟ್(Hydrate) ಆಗಿರಲು ಸೋಡಿಯಂ ಮತ್ತು ಪೊಟ್ಯಾಸಿಯಮ್ ನ ಸೂಕ್ಷ್ಮ ಸಮತೋಲನದ ಅಗತ್ಯವಿದೆ. ಏಕೆಂದರೆ ನಿಮ್ಮ ದೇಹದಲ್ಲಿನ ನೀರು ಸೋಡಿಯಂ ಅನ್ನು ಅನುಸರಿಸುತ್ತದೆ, ಆದ್ದರಿಂದ ನೀವು ಹೆಚ್ಚು ಸೋಡಿಯಂ ಹೊಂದಿದ್ದರೆ ನಿಮ್ಮ ದೇಹವು ನೀರನ್ನು ಉಳಿಸಿಕೊಳ್ಳುತ್ತದೆ. ಪೊಟ್ಯಾಸಿಯಮ್ ಇದನ್ನು ಸಮತೋಲನಗೊಳಿಸಲು ಕೆಲಸ ಮಾಡುತ್ತದೆ, ಅದಕ್ಕಾಗಿಯೇ ಸಮುದ್ರದ ಉಪ್ಪು ಸೋಡಿಯಂ ಕ್ಲೋರೈಡ್ ಅಥವಾ ಟೇಬಲ್ ಸಾಲ್ಟ್ ಗಿಂತ ಉತ್ತಮವಾಗಿದೆ.
ಉಪ್ಪು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸೋದು ಹೇಗೆ
ಉಪ್ಪು ಶುದ್ಧವೇ ಅಥವಾ ಅಶುದ್ಧವೇ ಎಂದು ನೀವು ಯೋಚಿಸುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ನಕಲಿ ಉಪ್ಪನ್ನು ಮಾರಾಟ ಮಾಡಲಾಗುತ್ತಿದೆ, ಇದು ನಿಮ್ಮ ಆರೋಗ್ಯಕ್ಕೆ(Health) ಹಾನಿಕಾರಕ. ಆದ್ದರಿಂದ, ಕಲಬೆರಕೆ ಮತ್ತು ಅನಾರೋಗ್ಯವನ್ನು ತಪ್ಪಿಸಲು ನೀವು ಉಪ್ಪಿನ ಶುದ್ಧತೆಯನ್ನು ಪರಿಶೀಲಿಸಬಹುದು. ಅದು ಹೇಗೆಂದು ತಿಳಿಯೋಣ..
ಈ ಹಂತಗಳೊಂದಿಗೆ ಉಪ್ಪಿನ ಶುದ್ಧತೆಯನ್ನು ಪರಿಶೀಲಿಸಿ
ಮೊದಲು ಒಂದು ಆಲೂಗಡ್ಡೆಯನ್ನು(Potato) ತೆಗೆದುಕೊಂಡು ಅದನ್ನು ಎರಡು ತುಂಡುಗಳಾಗಿ ಕಟ್ ಮಾಡಿ.
ಈಗ ಆಲೂಗಡ್ಡೆಯ ಒಂದು ಬದಿಯಲ್ಲಿ ಉಪ್ಪನ್ನು ಹಚ್ಚಿ ಕನಿಷ್ಠ 3 ರಿಂದ 4 ನಿಮಿಷಗಳ ಕಾಲ ಬಿಡಿ.
ಇದರ ನಂತರ, ಆಲೂಗಡ್ಡೆಯ ತುಂಡಿಗೆ ಎರಡು ಹನಿ ನಿಂಬೆ ರಸವನ್ನು ಸೇರಿಸಿ, ಅದರ ಮೇಲೆ ಉಪ್ಪನ್ನು ಹಚ್ಚಿ.
ನಿಂಬೆ ರಸವನ್ನು(Lemon juice) ಸೇರಿಸಿದ ಕೆಲವು ನಿಮಿಷಗಳ ನಂತರ ಉಪ್ಪಿನ ಬಣ್ಣವು ನೀಲಿ ಬಣ್ಣಕ್ಕೆ ತಿರುಗಿದರೆ, ಅದರರ್ಥ ಉಪ್ಪು ಅಶುದ್ಧವಾಗಿದೆ ಎಂದರ್ಥ.
ಉಪ್ಪಿನ ಬಣ್ಣ ಬದಲಾಗದಿದ್ದರೆ, ಅದು ಶುದ್ಧವಾಗಿದೆ ಎಂದರ್ಥ ಮತ್ತು ಈ ರೀತಿ ಉಪ್ಪನ್ನು ಬಳಸಿ.
ಇದು ನಿಮ್ಮನ್ನು ಕಲಬೆರಕೆ ಉಪ್ಪಿನಿಂದ ರಕ್ಷಿಸಬಹುದು ಮತ್ತು ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.