ಕೈ ನರಗಳಲ್ಲಿ ಊತ… ಇದಕ್ಕೆ ಕಾರಣವೇನಿರಬಹುದು?
ನಾವು ಎಷ್ಟೇ ಆರೋಗ್ಯವಂತರಾಗಿದ್ದರೂ ಸಹ, ಕೆಲವೊಮ್ಮೆ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಚಿಹ್ನೆಗಳು, ಮುಂದೆ ಈ ಸಮಸ್ಯೆ ಯಾಕಪ್ಪಾ ಬಂತು ಎಂದು ಹೇಳುವಷ್ಟು ಭಯ ಹುಟ್ಟಿಸಿ ಬಿಡುತ್ತೆ. ಕೆಲವೊಮ್ಮೆ ಏನಾಗುತ್ತದೆ ಎಂದರೆ, ಕೈಯ ರಕ್ತನಾಳಗಳು ಹೆಚ್ಚು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಆರೊಗ್ಯವಾಗಿದ್ದರೂ, ಯಾಕೆ ಹೀಗೆ ನರಗಳು ಎದ್ದು ಬಂದಂತೆ ಕಾಣುತ್ತವೆ ಅನ್ನೋದು ಗೊತ್ತಾ ? ಅದರ ಹಿಂದಿನ ಕಾರಣವನ್ನು ಇಲ್ಲಿ ನೀಡಲಾಗಿದೆ.
ಕೈಗಳ ನರಗಳ ಊತವು (visible hand veins) ತುಂಬಾ ಸಾಮಾನ್ಯವಾಗಿದೆ, ಇದು ನಿಮ್ಮ ದೈನಂದಿನ ಕೆಲಸದಲ್ಲಿ ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ. ಆದರೆ ಕೆಲವು ಜನರ ರಕ್ತನಾಳಗಳು ತುಂಬಾ ಉಬ್ಬಿ ಬರುತ್ತವೆ ಮತ್ತು ನೋವು ಸಹ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅದನ್ನು ಗಂಭೀರವಾಗಿ ಪರಿಗಣಿಸಬೇಕು.
ನಿಮ್ಮ ಕೈ ಕಾಲುಗಳಲ್ಲಿ ನರಗಳು ಉಬ್ಬಿ ಹೊರ ಬಂದಿದೆಯೇ? ಇದರಿಂದ ನೀವು ಯಾವುದೇ ಗಂಭೀರ ಕಾಯಿಲೆಗೆ ಬಲಿಯಾಗುವುದಿಲ್ಲ ನಿಜಾ. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಈ ಸಮಸ್ಯೆ ಕಾಡುತ್ತದೆ. ಕೈಗಳ ನರಗಳ ಹೊರಹೊಮ್ಮುವಿಕೆಗೆ ಕಾರಣವೇನು ಎಂದು ತಿಳಿಯೋ ಕುತೂಹಲ ನಿಮಗಿದ್ದರೆ, ಮುಂದೆ ಓದಿ.
ಕೈಯ ರಕ್ತನಾಳಗಳ ಊತಕ್ಕೆ ಕಾರಣಗಳು
ತೂಕ ನಷ್ಟ (weight loss) ನರಗಳ ಊತಕ್ಕೆ ಕಾರಣವಾಗುತ್ತದೆ. ತೂಕ ಕಳೆದುಕೊಳ್ಳುವ ಜನರಲ್ಲಿ, ಅವರ ರಕ್ತನಾಳಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಫ್ಲೆಬಿಟಿಸ್ ಎಂಬುದು ಒಂದು ವೈದ್ಯಕೀಯ ಸ್ಥಿತಿಯಾಗಿದೆ. ಇದು ರಕ್ತನಾಳಗಳು ಕಾಣಿಸಿಕೊಳ್ಳಲು ಸಹ ಕಾರಣವಾಗಬಹುದು. ಇದರಲ್ಲಿ, ಕೈ ಮತ್ತು ಕಾಲುಗಳಲ್ಲಿ ಊತವಿರುತ್ತದೆ. ಅಂದರೆ ಕೈ, ಕಾಲುಗಳ ನರಗಳು ಎದ್ದು ಕಾಣಿಸುತ್ತವೆ.
ನೀವು ವರ್ಕೌಟ್ ಮಾಡುವಾಗ ಸಹ, ಕೈಯ ರಕ್ತನಾಳಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದು ಯಾಕೆ ಆಗುತ್ತೆ ಗೊತ್ತಾ? ವರ್ಕ್ ಔಟ್ ಮಾಡುವ ಸಮಯದಲ್ಲಿ ದೇಹದ ತಾಪಮಾನವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಸ್ನಾಯುಗಳು ಗಟ್ಟಿಯಾಗುತ್ತವೆ, ಇದರಿಂದಾಗಿ ನರಗಳು ಹೊರಹೊಮ್ಮುತ್ತವೆ.
ರಕ್ತನಾಳಗಳ ಊತ ಆನುವಂಶಿಕವಾಗಿರುವ (heredity) ಸಾಧ್ಯತೆ ಸಹ ಇದೆ. ಆನುವಂಶಿಕವಾಗಿ, ಕೈಯ ರಕ್ತನಾಳಗಳು ಸಹ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ನಿಮ್ಮ ಮನೆಯಲ್ಲಿ ಪೋಷಕರ ಅಥವಾ ಬೇರೊಬ್ಬರ ಕೈಯ ನರಗಳು ಹೊರಹೊಮ್ಮಿದ್ದರೆ, ನಿಮಗೂ ಆ ರೀತಿ ಆಗೋದು ಆನುವಂಶಿಕವಾಗಿದೆ.
ಹೆಚ್ಚುತ್ತಿರುವ ವಯಸ್ಸಿನ ಕಾರಣದಿಂದಾಗಿ, ನರಗಳು ಸಹ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ವಾಸ್ತವವಾಗಿ, ನೀವು ವಯಸ್ಸಾದಂತೆ, ರಕ್ತನಾಳಗಳಲ್ಲಿನ ಕವಾಟವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ, ಇದರಿಂದಾಗಿ ರಕ್ತ ಹೆಪ್ಪುಗಟ್ಟುತ್ತದೆ. ರಕ್ತನಾಳವು ಹೊರಹೊಮ್ಮಲು ಪ್ರಾರಂಭಿಸುತ್ತದೆ.