- Home
- Life
- Food
- ಕುರಿಮರಿ ಮಾಂಸ vs ಮೇಕೆ ಮಾಂಸ; ರುಚಿ, ಆರೋಗ್ಯದಲ್ಲಿ ಯಾವುದು ಬೆಸ್ಟ್? ಮಾಂಸ ಪ್ರಿಯರು ತಿಳಿಯಲೇಬೇಕಾದ ಡೀಟೈಲ್ಸ್ ಇದು
ಕುರಿಮರಿ ಮಾಂಸ vs ಮೇಕೆ ಮಾಂಸ; ರುಚಿ, ಆರೋಗ್ಯದಲ್ಲಿ ಯಾವುದು ಬೆಸ್ಟ್? ಮಾಂಸ ಪ್ರಿಯರು ತಿಳಿಯಲೇಬೇಕಾದ ಡೀಟೈಲ್ಸ್ ಇದು
ಮಟನ್ ಪ್ರಿಯರಿಗೆ ಯಾವಾಗಲೂ ಒಂದು ಗೊಂದಲವಿರುತ್ತದೆ. ಎಳೆ ಕುರಿಮರಿ ಮಾಂಸ ಮತ್ತು ಬಲಿತ ಮೇಕೆ ಮಾಂಸದಲ್ಲಿ ಯಾವುದು ಉತ್ತಮ? ಅವುಗಳ ರುಚಿ, ಪೋಷಕಾಂಶಗಳು ಮತ್ತು ಆರೋಗ್ಯ ಪ್ರಯೋಜನಗಳಲ್ಲಿನ ವ್ಯತ್ಯಾಸಗಳೇನು? ಮಾಂಸದ ಗುಣಮಟ್ಟವನ್ನು ಮೇಕೆಯ ವಯಸ್ಸು ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ.

ಕುರಿಮರಿ ಮಾಂಸ vs ಮೇಕೆ ಮಾಂಸ
ಭಾನುವಾರ ಬಂತೆಂದರೆ ಸಾಕು, ನಮ್ಮ ಮನೆಗಳಲ್ಲಿ ಮಾಂಸ ಬೇಯಲೇಬೇಕು. ಅದರಲ್ಲೂ ಮಟನ್ ಪ್ರಿಯರ ಖುಷಿಯೇ ಬೇರೆ. ಆದರೆ ಮಟನ್ ಅಂಗಡಿಗೆ ಹೋದಾಗ ಪ್ರತಿಯೊಬ್ಬರನ್ನೂ ಕಾಡುವ ದೊಡ್ಡ ಗೊಂದಲವೆಂದರೆ, "ಕುರಿಮರಿ ಮಾಂಸ ತೆಗೆದುಕೊಳ್ಳಬೇಕಾ? ಅಥವಾ ಮೇಕೆ (ಟಗರು) ಮಾಂಸ ತೆಗೆದುಕೊಳ್ಳಬೇಕಾ?" ಎಂಬುದು. ಕೆಲವರು ಮೃದುವಾಗಿರುತ್ತದೆ ಎಂದು ಕುರಿಮರಿಯನ್ನು ಇಷ್ಟಪಟ್ಟರೆ, ಇನ್ನು ಕೆಲವರು ಅಪ್ಪಟ ನಾಟಿ ರುಚಿಗಾಗಿ ಮೇಕೆಯತ್ತ ಮುಖ ಮಾಡುತ್ತಾರೆ. ಅಸಲಿಗೆ ಇವೆರಡರಲ್ಲಿ ಯಾವುದರ ರುಚಿ ಚೆನ್ನಾಗಿರುತ್ತದೆ? ಆರೋಗ್ಯದ ದೃಷ್ಟಿಯಿಂದ ಯಾವುದು ತಿಂದರೆ ಹೆಚ್ಚು ಪ್ರಯೋಜನ? ಎಂಬುದನ್ನು ಇಲ್ಲಿ ತಿಳಿಯೋಣ.
ಎಳೆ ಕುರಿಮರಿ ಮಾಂಸ (Lamb):
ಸಾಮಾನ್ಯವಾಗಿ ಒಂದು ವರ್ಷದೊಳಗಿನ ಕುರಿಮರಿಗಳಿಂದ ಬರುವ ಮಾಂಸವನ್ನು 'ಲ್ಯಾಂಬ್' ಎನ್ನುತ್ತಾರೆ. ಇದು ದೊಡ್ಡ ಮೇಕೆ ಮಾಂಸಕ್ಕೆ ಹೋಲಿಸಿದರೆ ತುಂಬಾ ಮೃದು ಮತ್ತು ಹೆಚ್ಚು ರುಚಿಕರವಾಗಿರುತ್ತದೆ. ಇದರಲ್ಲಿ ವಿಟಮಿನ್‌ಗಳು ಮತ್ತು ಕೊಬ್ಬು ಹೆಚ್ಚಾಗಿರುತ್ತದೆ. ಇದರಲ್ಲಿ ಫೈಬರ್ ಕಡಿಮೆ ಇರುವುದರಿಂದ ಬಾಯಲ್ಲಿಟ್ಟರೆ ಕರಗಿದಂತೆ ಭಾಸವಾಗುತ್ತದೆ. ಇದು ಬೇಗನೆ ಬೇಯುತ್ತದೆ ಮತ್ತು ಮಸಾಲೆಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಹಾಗಾಗಿ ರುಚಿ ಅದ್ಭುತವಾಗಿರುತ್ತದೆ.
ದೊಡ್ಡ ಮೇಕೆ ಅಥವಾ ಟಗರು ಮಾಂಸ (Mutton):
ದೊಡ್ಡ ಮೇಕೆ ಅಥವಾ ಟಗರು ಮಾಂಸಕ್ಕೆ ನಾವು ಸಾಮಾನ್ಯವಾಗಿ ಮಟನ್ ಎಂದು ಕರೆಯುವುದು ಇದನ್ನೇ. ಇದು ಎರಡು ವರ್ಷ ಮೇಲ್ಪಟ್ಟ ಮೇಕೆಗಳಿಂದ ಬರುತ್ತದೆ. ಎಳೆ ಮಾಂಸಕ್ಕೆ ಹೋಲಿಸಿದರೆ ಇದು ಸ್ವಲ್ಪ ಗಟ್ಟಿ ಮತ್ತು ಉತ್ತಮ ರುಚಿಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಔತಣ ಮತ್ತು ಹಬ್ಬಗಳಿಗೆ ಹೆಚ್ಚಾಗಿ ಟಗರು ಮಾಂಸವನ್ನೇ ಇಷ್ಟಪಡುತ್ತಾರೆ. ಈ ಮಾಂಸವು ಗಾಢ ಕೆಂಪು ಬಣ್ಣದಲ್ಲಿ, ಗಟ್ಟಿಯಾಗಿರುತ್ತದೆ. ಇದರಲ್ಲಿ ಕೊಬ್ಬು ಚೆನ್ನಾಗಿ ಶೇಖರಣೆಯಾಗಿರುವುದರಿಂದ, ಇದಕ್ಕೆ ಒಂದು ವಿಶೇಷವಾದ, ಘಾಟು 'ನಾಟಿ ರುಚಿ' ಬರುತ್ತದೆ. ಇದರಿಂದ ಮಾಡುವ ಗ್ರೇವಿ ತುಂಬಾ ದಪ್ಪವಾಗಿ, ಅದ್ಭುತ ರುಚಿಯನ್ನು ಹೊಂದಿರುತ್ತದೆ. ಆದರೆ ಇದು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಎಳೆ ಕುರಿಮರಿ ಮಾಂಸ:
ಇದರಲ್ಲಿ ಕೊಬ್ಬಿನಾಂಶ ತೀರಾ ಕಡಿಮೆ ಇರುತ್ತದೆ. ಸಂತೃಪ್ತ ಕೊಬ್ಬು ಮತ್ತು ಕ್ಯಾಲೊರಿಗಳು ತುಂಬಾ ಕಡಿಮೆ. ಅದಕ್ಕಾಗಿಯೇ ಈ ಮಾಂಸ ಸುಲಭವಾಗಿ ಜೀರ್ಣವಾಗುತ್ತದೆ. ವಿಶೇಷವಾಗಿ ಚಿಕ್ಕ ಮಕ್ಕಳು, ವೃದ್ಧರು ಮತ್ತು ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ಇದು ತುಂಬಾ ಒಳ್ಳೆಯದು. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇರುವುದರಿಂದ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ದೊಡ್ಡ ಮೇಕೆ ಅಥವಾ ಟಗರು ಮಾಂಸ: ಮೇಕೆ ಮಾಂಸದಲ್ಲಿ ಅಧಿಕ ಪ್ರೊಟೀನ್ ಮತ್ತು ಕಬ್ಬಿಣಾಂಶ ಇರುತ್ತದೆ. ಹಾಗಾಗಿ ಬೆಳೆಯುವ ಮಕ್ಕಳಿಗೆ ಮತ್ತು ಬಾಡಿ ಬಿಲ್ಡಿಂಗ್ ಮಾಡುವವರಿಗೆ ಇದೊಂದು ಪವರ್‌ಹೌಸ್. ಇದರಲ್ಲಿ ಜಿಂಕ್ ಮತ್ತು ವಿಟಮಿನ್ ಬಿ12 ಕೂಡ ಸಮೃದ್ಧವಾಗಿದೆ. ರಕ್ತಹೀನತೆ ಇರುವವರಿಗೆ ಮೇಕೆ ಮಾಂಸವು ರಕ್ತವನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ. ಇದು ದೇಹಕ್ಕೆ ತಕ್ಷಣದ ಶಕ್ತಿ ಮತ್ತು ಬಲವನ್ನು ನೀಡುತ್ತದೆ.
ಮಾಂಸದ ವಿನ್ಯಾಸ: ಕುರಿಮರಿ ಮಾಂಸ ತುಂಬಾ ಮೃದು ಮತ್ತು ರಸಭರಿತವಾಗಿರುತ್ತದೆ. ಮೇಕೆ ಮಾಂಸವು ಗಟ್ಟಿಯಾಗಿ, ಅಗಿಯಲು ಅನುಕೂಲಕರವಾಗಿರುತ್ತದೆ.
ಬೇಯುವ ಸಮಯ:
ಕುರಿಮರಿ ಮಾಂಸವು ಕಡಿಮೆ ಸಮಯದಲ್ಲಿ (ಬೇಗನೆ) ಬೇಯುತ್ತದೆ. ಅದೇ ಮೇಕೆ ಮಾಂಸ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ (ಕುಕ್ಕರ್‌ನಲ್ಲಿ ಹೆಚ್ಚು ವಿಷಲ್ ಬೇಕು).
ಕೊಬ್ಬಿನ ಪ್ರಮಾಣ: ಕುರಿಮರಿ ಮಾಂಸದಲ್ಲಿ ಕೊಬ್ಬಿನ ಪ್ರಮಾಣ ತುಂಬಾ ಕಡಿಮೆ. ಅದೇ ದೊಡ್ಡ ಮೇಕೆ ಅಥವಾ ಟಗರು ಮಾಂಸದಲ್ಲಿ ಹೆಚ್ಚು.
ಜೀರ್ಣಕ್ರಿಯೆ: ಚಿಕ್ಕ ಕುರಿಮರಿ ಮಾಂಸವು ಸುಲಭವಾಗಿ ಜೀರ್ಣವಾಗುತ್ತದೆ. ದೊಡ್ಡ ಮೇಕೆ ಮಾಂಸ ಜೀರ್ಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಯಾವ ಅಡುಗೆಗೆ ಯಾವುದು ಉತ್ತಮ: ಮಟನ್ ಫ್ರೈ, ಮಟನ್ ಬಿರಿಯಾನಿ, ಮಟನ್ ಸೂಪ್‌ಗಳಿಗೆ ಎಳೆ ಮಾಂಸ ಉತ್ತಮ.
ಅದೇ ಘಾಟಾದ ಗ್ರೇವಿಯೊಂದಿಗೆ ಮಟನ್ ಕರಿ, ತಲೆ ಮಾಂಸ, ಬೋಟಿ ಬೇಕೆಂದರೆ ದೊಡ್ಡ ಮೇಕೆ ಮಾಂಸವೇ ಒಳ್ಳೆಯದು.
ಉತ್ತಮ ಆರೋಗ್ಯಕ್ಕೆ ಕುರಿಮರಿ ಮಾಂಸ ಬೆಸ್ಟ್
ನೀವು ಕೇವಲ ಆರೋಗ್ಯ, ಕಡಿಮೆ ಕ್ಯಾಲೊರಿ ಮತ್ತು ಸುಲಭ ಜೀರ್ಣಕ್ರಿಯೆಯನ್ನು ಬಯಸಿದರೆ 'ಕುರಿಮರಿ ಮಾಂಸ' ಅತ್ಯುತ್ತಮ ಆಯ್ಕೆ. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವವರಿಗೆ ಇದು ಪರ್ಫೆಕ್ಟ್ ಹೆಲ್ತಿ ಆಪ್ಷನ್. ಆದರೆ, ದೇಹಕ್ಕೆ ಉತ್ತಮ ಬಲ, ರಕ್ತ ವೃದ್ಧಿ ಮತ್ತು ಹೆಚ್ಚು ಪ್ರೊಟೀನ್‌ಗಳು ಬೇಕೆಂದರೆ 'ಮೇಕೆ ಮಾಂಸ' ಪ್ರಯೋಜನಕಾರಿ. ಆದರೆ ಇದನ್ನು ಮಿತವಾಗಿ ತಿನ್ನುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
