ಯಾಸ್ಮಿನ್ ಆಗಿ ಬುರ್ಖಾದಲ್ಲಿ ಕಾಣಿಸಿಕೊಂಡ ಖ್ಯಾತ ಬಹುಭಾಷಾ ನಟಿ! ಮತಾಂತರದ ಬಗ್ಗೆ ಹೇಳಿದ್ದೇನು?
ಖ್ಯಾತ ನಟಿ ಸೀತಾ ಲಕ್ಷ್ಮಿ ತಮ್ಮ ಹೆಸರನ್ನು ಯಾಸ್ಮಿನ್ ಎಂದು ಬದಲಿಸಿ ಬುರ್ಖಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮೊದಲ ಮದುವೆಯ ಚಿತ್ರಹಿಂಸೆ, ನೋವಿನಿಂದ ಹೊರಬಂದು, ಎರಡನೇ ಪತಿ ಅಬ್ದುಲ್ ಖಾದರ್ ಅವರ ಬೆಂಬಲದಿಂದ ಮತಾಂತರವಾಗಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ.

ಏಕಾಏಕಿ ಬುರ್ಖಾದಲ್ಲಿ ನಟಿ
ಮತಾಂತರ, ಲವ್ ಜಿಹಾದ್ ಎಲ್ಲವೂ ಸಾಕಷ್ಟು ಸದ್ದು ಮಾಡುತ್ತಿರುವ ನಡುವೆಯೇ ಇಲ್ಲೊಬ್ಬ ತೆಲಗು, ತಮಿಳು ಮತ್ತು ಮಲಯಾಳಂನ ಖ್ಯಾತ ಸಿನಿಮಾ ಮತ್ತು ಕಿರುತೆರೆ ನಟಿಯೊಬ್ಬರು ತಮ್ಮ ಹೆಸರನ್ನು ಯಾಸ್ಮಿನ್ ಎಂದು ಬದಲಿಸಿ ಬುರ್ಖಾದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಕೊನೆಗೂ ಅವರು ತಮ್ಮ ಮತಾಂತರದ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಈ ನಟಿ ತೆಲುಗು ಸೀರಿಯಲ್ನ ಖ್ಯಾತಿ ನಟಿಯಾಗಿದ್ದ ಸೀತಾ ಲಕ್ಷ್ಮಿ ಉರ್ಫ್ ಯಾಸ್ಮಿನ್.
ಮತಾಂತರದ ಬಗ್ಗೆ ನಟಿ
ತಮ್ಮ ಮತಾಂತರ ಬಗ್ಗೆ ನಟಿ ಈಗ ಮನಬಿಚ್ಚಿ ಮಾತನಾಡಿದ್ದಾರೆ. ತಾವು ಮತಾಂತರವಾಗಿರುವುದಕ್ಕೆ ಕಾರಣವನ್ನು ಹೇಳಿದ್ದಾರೆ. ನಾನು ಮೊದಲು ಅನಿಲ್ ಎನ್ನುವವರ ಜೊತೆ ಮದುವೆಯಾಗಿದ್ದೆ. ಅದು ಲವ್ ಮ್ಯಾರೇಜ್. ನನಗಿಂತ ಕಿರಿಯರು. ಆದರೆ ಅವರೇ ನನ್ನನ್ನು ತುಂಬಾ ಇಷ್ಟಪಟ್ಟು ಮದುವೆಯಾದರು. ಅವರ ಕ್ಯಾರೆಕ್ಟರ್ ಸರಿ ಇಲ್ಲ ಎಂದು ಹಲವರು ಹೇಳಿದರೂ ನಾನು ಕೇಳಲಿಲ್ಲ. ಎರಡು ವರ್ಷ ಲವ್ ಮಾಡಿದ ಬಳಿಕ ಮದುವೆಯಾದೆ ಎಂದು ತಮ್ಮ ಮೊದಲ ಮದುವೆಯ ವಿಷ್ಯವನ್ನು ನಟಿ ಹೇಳಿದ್ದಾರೆ.
ಚಿತ್ರಹಿಂಸೆ
ಆದರೆ, ಅದು ನನ್ನ ಜೀವನದ ಅತಿದೊಡ್ಡ ತಪ್ಪಾಗಿತ್ತು. ತುಂಬಾ ಚಿತ್ರಹಿಂಸೆ ನೀಡಲು ಶುರು ಮಾಡಿದರು. ಅವರಿಗೆ ಬೇಕಾಗಿದ್ದು ನನ್ನ ದುಡ್ಡು ಮಾತ್ರ. ಈ ಮಧ್ಯೆ, ನಾನು ಗರ್ಭಿಣಿಯಾದೆ. ನನ್ನನ್ನು ಒದ್ದು ಹೊಡೆದರು ಮತ್ತು ಅದು ಗರ್ಭಪಾತದಲ್ಲಿ ಕೊನೆಗೊಂಡಿತು. ನಮ್ಮ ದಾಂಪತ್ಯ ಹತ್ತು ವರ್ಷಗಳು. ಆದರೆ ನಾನು ಅವನೊಂದಿಗೆ ಕೇವಲ ಮೂರು ವರ್ಷಗಳ ಕಾಲ ವಾಸಿಸಿದ್ದೆ. ಉಳಿದ ಏಳು ವರ್ಷಗಳು ನನ್ನ ತವರು ಮನೆಯಲ್ಲಿ ಕಳೆದದ್ದು ಎಂದು ಆಘಾತಕಾರಿ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಡಿವೋರ್ಸ್ ಪಡೆದೆ
ಅವರಿಗೆ ಬೇಕಾಗಿರುವುದು ಹಣ ಮಾತ್ರ. ನನ್ನ ತಾಯಿ ಕ್ಯಾನ್ಸರ್ ನಿಂದ ಅಸ್ವಸ್ಥರಾಗಿದ್ದಾಗ, ನಾನು ನನ್ನ ತಾಯಿಯ ಹೆಸರಿನಲ್ಲಿ ಖರೀದಿಸಿದ ಫ್ಲಾಟ್‌ಗೆ ಸಹಿ ಹಾಕುವಂತೆ ಅವನು ನನ್ನನ್ನು ಒತ್ತಾಯಿಸಿದನು. ಅದಕ್ಕಾಗಿ ಯಾವಾಗಲೂ ಹೊಡೆಯುವುದು ಮತ್ತು ಜಗಳವಾಡುವುದು ನಡೆಯುತ್ತಿತ್ತು. ಫ್ಲಾಟ್ ಖರೀದಿಸಿದ ನಂತರವೇ ನೀವು ನನ್ನೊಂದಿಗೆ ವಾಸಿಸಬಹುದು ಎಂದು ಅವನು ಹೇಳಿದನು. ಹಾಗಾಗಿ ನಾನು ವಿಚ್ಛೇದನವನ್ನು ಕೇಳಿದೆ. ತುಂಬಾ ನೋವು ಅನುಭವಿಸಿದೆ ಎಂದಿದ್ದಾರೆ ನಟಿ.
ಸಿಕ್ಕವರೇ ಅಬ್ದುಲ್ ಖಾದರ್
ಕೊನೆಗೆ ನನ್ನ ಸ್ಕೂಲ್ ಫ್ರೆಂಡ್ ಆದ ಅಬ್ದುಲ್ ಖಾದರ್ ಸಿಕ್ಕ. ಅವರಲ್ಲಿ ನನ್ನ ವಿಷ್ಯ ಎಲ್ಲಾ ಹೇಳಿದೆ. ಆತ ನನಗೆ ಬಾಳು ಕೊಡಲು ಮುಂದೆ ಬಂದರು. ನನಗೂ ಒಂದು ಆಸರೆ ಬೇಕಿತ್ತು. ಅವರು ತುಂಬಾ ಒಳ್ಳೆಯವರು. ಆದ್ದರಿಂದ ಮದುವೆಯಾದೆ ಎಂದಿದ್ದಾರೆ ಸೀತಾಲಕ್ಷ್ಮಿ.
ತವರಿನ ಬೆಂಬಲವಿಲ್ಲ
ನನ್ನ ತವರು ಮನೆಯಿಂದ ಯಾವ ಬೆಂಬಲ ಇಲ್ಲ. ಆದ್ದರಿಂದ ನನಗೆ ಗಂಡನ ಮನೆಯವರೇ ಬೆಂಬಲ ನೀಡುತ್ತಿದ್ದಾರೆ. ಆದ್ದರಿಂದ ನಾನು ನನ್ನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಆದ್ದರಿಂದಲೇ ಮತಾಂತರ ಕೂಡ ಆಗಿದ್ದೇನೆ, ಹೆಸರನ್ನು ಬದಲಿಸಿಕೊಂಡಿದ್ದೇನೆ ಎಂದಿದ್ದಾರೆ ನಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

