- Home
- Entertainment
- TV Talk
- ಸಿನಿಮಾ ಚಾನ್ಸ್ ಸಿಗದೇ ಮೊಬೈಲ್ ಗೀಳಿಗೆ ಬಲಿಯಾದ ಶಕೀಲಾ; ಆಸ್ಪತ್ರೆಯಿಂದಲೇ ಅಭಿಮಾನಿಗಳಿಗೆ ಮನವಿ ಮಾಡಿದ ನಟಿ!
ಸಿನಿಮಾ ಚಾನ್ಸ್ ಸಿಗದೇ ಮೊಬೈಲ್ ಗೀಳಿಗೆ ಬಲಿಯಾದ ಶಕೀಲಾ; ಆಸ್ಪತ್ರೆಯಿಂದಲೇ ಅಭಿಮಾನಿಗಳಿಗೆ ಮನವಿ ಮಾಡಿದ ನಟಿ!
ಖ್ಯಾತ ನಟಿ ಶಕೀಲಾ ಅವರು ಅತಿಯಾದ ಮೊಬೈಲ್ ಬಳಕೆಯಿಂದಾಗಿ ಗಂಭೀರ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ತಪ್ಪಾದ ಭಂಗಿಯಲ್ಲಿ ಗಂಟೆಗಟ್ಟಲೆ ಗೇಮ್ ಆಡುವುದು ಮತ್ತು ರೀಲ್ಸ್ ನೋಡುವುದರ ಪರಿಣಾಮವಾಗಿ ಈ ದುಸ್ಥಿತಿ ಎದುರಾಗಿದ್ದು, ತಮ್ಮ ಈ ಅನುಭವದ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಇದೇ ಮೊಬೈಲ್ ಫೋನ್‌ನ ಅತಿಯಾದ ಬಳಕೆ ಹಾಗೂ ತಪ್ಪಾದ ಭಂಗಿಯಿಂದಾಗಿ (Improper Posture) ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಗಂಭೀರ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಇತ್ತೀಚೆಗಷ್ಟೇ ಕುತ್ತಿಗೆಯ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿರುವ ನಟಿ ಶಕೀಲಾ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ಈ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಗೇಮ್ ಆಡುವುದು ಮತ್ತು ರೀಲ್ಸ್ ನೋಡುವುದರಿಂದ ತಮಗೆ ಎದುರಾದ ಭೀಕರ ಪರಿಣಾಮದ ಬಗ್ಗೆ ಅಭಿಮಾನಿಗಳಿಗೆ ಮುಕ್ತವಾಗಿ ಎಚ್ಚರಿಕೆ ನೀಡಿದ್ದಾರೆ.
ರೂ. 3 ಲಕ್ಷ ವೆಚ್ಚದ ಶಸ್ತ್ರಚಿಕಿತ್ಸೆ: ಗೇಮಿಂಗ್ ಹುಚ್ಚಿಗೆ ಬಂದೊದಗಿದ ಗಂಡಾಂತರ!
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕುತ್ತಿಗೆಗೆ ಬೆಂಬಲ ನೀಡುವ ನೆಕ್ ಕಾಲರ್ ಧರಿಸಿರುವ ಶಕೀಲಾ, ತಮಗೆ ಎದುರಾದ ಸಂಕಟವನ್ನು ವಿವರಿಸಿದ್ದಾರೆ. ಪ್ರಸ್ತುತ ಹಾಸಿಗೆಯಿಂದ ಏಳಲು, ಕುಳಿತುಕೊಳ್ಳಲು ಹಾಗೂ ಊಟ ಮಾಡಲು ಸಹ ಸಹಾಯಕರ ನೆರವು ಬೇಕಾಗಿದೆ ಎಂದು ಅವರು ಸ್ವತಃ ತಿಳಿಸಿದ್ದಾರೆ.
ನಟಿ ಶಕೀಲಾ ಅವರ ಮಾತುಗಳಲ್ಲೇ ಹೇಳುವುದಾದರೆ:
'ನಾನು ಹಾಸಿಗೆಯ ಮೇಲೆ ಒಂದು ಮಗ್ಗುಲಿನಲ್ಲಿ ಮಲಗಿ ಸತತವಾಗಿ 4 ಗಂಟೆಗಳ ಕಾಲ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದೆ. ಮಧ್ಯದಲ್ಲಿ ಟೀ ಅಥವಾ ಕಾಫಿ ಕುಡಿಯಲು ಮಾತ್ರ ಏಳುತ್ತಿದ್ದೆ. ನಂತರ ಮತ್ತೆ ಬಂದು ಅದೇ ಗೇಮ್ ಮುಂದುವರಿಸುತ್ತಿದ್ದೆ. ತದನಂತರ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಗಂಟೆಗಟ್ಟಲೆ ರೀಲ್ಸ್ ನೋಡುತ್ತಿದ್ದೆ. ಈ ರೀತಿ ತಪ್ಪಾದ ಭಂಗಿಯಲ್ಲಿ ಸತತವಾಗಿ ಮೊಬೈಲ್ ಬಳಸಿದ್ದರಿಂದ ನನ್ನ ಕುತ್ತಿಗೆಯ ಪ್ರಮುಖ ನರಗಳಿಗೆ ತೀವ್ರ ಹಾನಿಯಾಗಿ, ಶಸ್ತ್ರಚಿಕಿತ್ಸೆ ಮಾಡುವ ಪರಿಸ್ಥಿತಿ ಬಂದೊದಗಿತು.'
ಅಭಿಮಾನಿಗಳಿಗೆ ಮತ್ತು ಪೋಷಕರಿಗೆ ಖಡಕ್ ಎಚ್ಚರಿಕೆ:
ತಮಗೆ ಎದುರಾದ ಈ ಕಹಿ ಅನುಭವದ ನಂತರ ಶಕೀಲಾ ಅವರು ಜನರಿಗೆ ಮತ್ತು ಪೋಷಕರಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. 'ಮೊಬೈಲ್ ಅತ್ಯಂತ ಉಪಯುಕ್ತ ಸಾಧನ, ಆದರೆ ಅದನ್ನು ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ. ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್ ಕೊಡಬೇಡಿ. ಅನಗತ್ಯ ವೀಡಿಯೊಗಳನ್ನು ನೋಡಿ ಸಮಯ ಹಾಗೂ ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ಇಲ್ಲದಿದ್ದರೆ ನನ್ನಂತೆ ರೂ. 3 ಲಕ್ಷ ಹಣ ಕಳೆದುಕೊಳ್ಳುವುದರ ಜೊತೆಗೆ ತಡೆಯಲಾಗದ ಶಾರೀರಿಕ ನೋವನ್ನು ಅನುಭವಿಸಬೇಕಾಗುತ್ತದೆ' ಎಂದು ಅವರು ಕಳಕಳಿಯ ಮನವಿ ಮಾಡಿದ್ದಾರೆ.
'ಶಕೀಲಾ ತರಂಗಂ' ಎಂಬ ಅದ್ಭುತ ಚಿತ್ರಪಯಣ:
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಶಕೀಲಾ ಸಿ ಬೆಗಮ್, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸಂಚಲನ ಮೂಡಿಸಿದವರು. 2000ನೇ ಇಸವಿಯಲ್ಲಿ ಬಿಡುಗಡೆಯಾದ ಆರ್.ಜೆ. ಪ್ರಸಾದ್ ನಿರ್ದೇಶನದ 'ಕಿನ್ನಾರತುಂಬಿಕಲ್' ಚಿತ್ರವು ಕೇವಲ 12 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿ, ಬರೊಬ್ಬರಿ 4 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು. ಈ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ 'ಶಕೀಲಾ ತರಂಗಂ' (ಶಕೀಲಾ ಅಲೆ) ಆರಂಭವಾಯಿತು.
ಆ ಕಾಲಘಟ್ಟದಲ್ಲಿ ಮುಖ್ಯವಾಹಿನಿಯ ಪ್ರಮುಖ ನಾಯಕರ ಸಿನಿಮಾಗಳಿಗಿಂತ ಶಕೀಲಾ ಅಭಿನಯದ ಸಿನಿಮಾಗಳೇ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚಿನ ಗಳಿಕೆ ಮಾಡುತ್ತಿದ್ದವು. ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲೂ ಇವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೋಹನ್‌ಲಾಲ್ ಅವರ 'ಚೋಟಾ ಮುಂಬೈ', ಪೃಥ್ವಿರಾಜ್ ಅಭಿನಯದ 'ತೇಜಾ ಭಾಯ್ & ಫ್ಯಾಮಿಲಿ', ತಮಿಳಿನ 'ಮರು ಮಲರ್ಚಿ', 'ಅಳಗಿಯ ತಮಿಳ್ ಮಗನ್', 'ಶಿವ ಮನಸುಲ ಶಕ್ತಿ', 'ಬಾಸ್ ಎಂಗಿರ ಭಾಸ್ಕರನ್' ಹಾಗೂ ಕನ್ನಡದ 'ಮೋನಾಲಿಸಾ' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

