ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನಲ್ ಮೆಸ್ಸಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪತ್ರ ಹಂಚಿಕೊಂಡಿರುವ ಅವರು, 207 ಪಂದ್ಯಗಳಿಂದ 125 ಗೋಲು ಗಳಿಸಿದ ತಮ್ಮ ಸುದೀರ್ಘ ಪಯಣವನ್ನು ಕೊನೆಗೊಳಿಸಿದ್ದಾರೆ. ತಂದೆಯ ಅನಾರೋಗ್ಯದ ಕಾರಣ ಈ ನಿರ್ಧಾರವನ್ನು ತಡವಾಗಿ ಪ್ರಕಟಿಸಿರುವುದಾಗಿ ಅವರು ತಿಳಿಸಿದ್ದಾರೆ.

ಬ್ಯೂನಸ್‌ ಐರಿಸ್‌(ಅರ್ಜೆಂಟೀನಾ): ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರರಲ್ಲಿ ಓರ್ವರಾಗಿದ್ದ, ಅರ್ಜೆಂಟೀನಾದ ಮಾಂತ್ರಿಕ ಫುಟ್ಬಾಲಿಗ ಲಿಯೋನಲ್‌ ಮೆಸ್ಸಿ ತಮ್ಮ ಅಂತಾರಾಷ್ಟ್ರೀಯ ಫುಟ್ಬಾಲ್‌ ವೃತ್ತಿಬದುಕಿಗೆ ತೆರೆ ಎಳೆದಿದ್ದಾರೆ. ಇತ್ತೀಚೆಗಷ್ಟೇ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಸೋತು ಕಣ್ಣೀರಿಟ್ಟಿದ್ದ 39 ವರ್ಷದ ಮೆಸ್ಸಿ, ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪತ್ರವನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

ಈ ಬಗ್ಗೆ ತಾವು ಕೈಯಾರೆ ಬರೆದ ನಿವೃತ್ತಿ ಪತ್ರದ ಫೋಟೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ‘ನಾನು ರಾಷ್ಟ್ರೀಯ ತಂಡದಿಂದ ನಿವೃತ್ತಿ ಹೊಂದುತ್ತಿದ್ದೇನೆ. ಇದು ನನ್ನ ಮನಸ್ಸಿಗೆ ನೋವುಂಟು ಮಾಡುತ್ತಿರುವ ನಿರ್ಧಾರ. ಆದರೆ ಇದು ಸರಿಯಾದ ಸಮಯ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಈವರೆಗೂ ಫುಟ್ಬಾಲ್‌ಗಾಗಿ ನಾನು ಎಲ್ಲವನ್ನೂ ಕೊಟ್ಟಿದ್ದೇನೆ. ಅದು ನನ್ನ ತಂಡ ಗೆದ್ದಾಗ ಮಾತ್ರವಲ್ಲ, ಅದಕ್ಕೂ ಮೊದಲು ಕೂಡಾ. ಫುಟ್ಬಾಲ್‌ ಮೂಲಕ ನಿಮ್ಮಲ್ಲಿ ಸಂತೋಷ ತರಲು, ಅರ್ಜೆಂಟೀನಿಯನ್‌ ಆಗಿರುವುದರ ಬಗ್ಗೆ ಹೆಮ್ಮೆಪಡುವಂತೆ ಮಾಡಲು ನಾನು ಯಾವಾಗಲೂ ಹೋರಾಡಿದ್ದೇನೆ, ನನ್ನಿಂದಾಗುವ ಎಲ್ಲವನ್ನೂ ಕೊಟ್ಟಿದ್ದೇನೆ’ ಎಂದಿದ್ದಾರೆ.

ಮೆಸ್ಸಿ 2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಕಾಲಿಟ್ಟಿದ್ದು, ಇತ್ತೀಚೆಗೆ ಫಿಫಾ ವಿಶ್ವಕಪ್‌ ಫೈನಲ್‌ವರೆಗೂ ತಂಡವನ್ನು ಪ್ರತಿನಿಧಿಸಿದ್ದಾರೆ. 207 ಪಂದ್ಯಗಳನ್ನಾಡಿರುವ ಅವರು 125 ಗೋಲು ಬಾರಿಸಿದ್ದು, ಇದು ವಿಶ್ವದಲ್ಲೇ 2ನೇ ಗರಿಷ್ಠ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ 146 ಗೋಲುಗಳೊಂದಿಗೆ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರ ಎನಿಸಿಕೊಂಡಿದ್ದಾರೆ.

ಸದ್ಯ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಪ್ರಕಟಿಸಿದ್ದರೂ, ಕ್ಲಬ್‌ಗಳಲ್ಲಿ ಆಟ ಮುಂದುವರಿಸುವ ನಿರೀಕ್ಷೆಯಿದೆ. ಬಾರ್ಸಿಲೋನಾ ಮೂಲಕ ವಿಶ್ವದೆಲ್ಲೆಡೆ ಖ್ಯಾತಿ ಗಳಿಸಿದ್ದ ಅವರು ಈಗ ಅಮೆರಿಕದ ಇಂಟರ್‌ ಮಿಯಾಮಿ ತಂಡದ ಪರ ಆಡುತ್ತಿದ್ದಾರೆ.

ಜೂ.21ಕ್ಕೇ ನಿವೃತ್ತಿ ಪತ್ರ: ತಂದೆ ಆರೋಗ್ಯ ಕಾರಣ 2 ತಿಂಗಳ ಬಳಿಕ ಪ್ರಕಟ!

ಮೆಸ್ಸಿ ತಮ್ಮ ನಿವೃತ್ತಿ ಪತ್ರವನ್ನು ಜೂ.21ರಂದೇ ಬರೆದಿದ್ದರು. ಈ ಬಗ್ಗೆ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. ವಿಶ್ವಕಪ್‌ ಸೋಲಿನ 2 ದಿನಗಳ ಬಳಿಕವೇ ಈ ಪತ್ರ ಬರೆದಿದ್ದೇನೆ ಎಂದಿದ್ದಾರೆ. ಆದರೆ ತಮ್ಮ ತಂದೆಯ ಆರೋಗ್ಯ ಸಮಸ್ಯೆ ಕಾರಣಕ್ಕೆ ಪತ್ರವನ್ನು ಬಹಿರಂಗಪಡಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೆಸ್ಸಿ ಅವರ ತಂದೆ ಜೊರ್ಜ್ ಮೆಸ್ಸಿ ಆ.8ರಂದು ನಿಧನರಾಗಿದ್ದಾರೆ.

--

ಮೆಸ್ಸಿ ಪ್ರಮುಖ ದಾಖಲೆಗಳು

- 207 ಪಂದ್ಯ: ಅರ್ಜೆಂಟೀನಾ ಪರ ಗರಿಷ್ಠ ಪಂದ್ಯವಾಡಿದ ಆಟಗಾರ.

- 125 ಗೋಲು: ಅರ್ಜೆಂಟೀನಾದ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರ.

- 34 ಪಂದ್ಯ: ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯವಾಡಿದ ಆಟಗಾರ.

- 21 ಗೋಲು: ಫಿಫಾ ವಿಶ್ವಕಪ್‌ನಲ್ಲಿ 2ನೇ ಗರಿಷ್ಠ ಗೋಲಿನ ದಾಖಲೆ.

- 05 ವಿಶ್ವಕಪ್‌: 5 ವಿಶ್ವಕಪ್‌ ಅವೃತ್ತಿಗಳಲ್ಲಿ ಗೋಲು ಬಾರಿಸಿದ ವಿಶ್ವದ ಮೊದಲಿಗ.

ನೇಯ್ಮರ್‌, ಮೆಸ್ಸಿಯ ಬಳಿಕ ಇನ್ನು ರೊನಾಲ್ಡೋ ಸರದಿ?

ಈ ಯುಗದ ಶ್ರೇಷ್ಠ ಫುಟ್ಬಾಲಿಗರ ಪಟ್ಟಿಯಲ್ಲಿ ಮೆಸ್ಸಿ, ರೊನಾಲ್ಡೊ, ನೇಯ್ಮರ್‌ ಹೆಸರು ಮುಂಚೂಣಿಯಲ್ಲಿವೆ. ಆದರೆ ಬ್ರೆಜಿಲ್‌ನ ತಾರಾ ಸ್ಟ್ರೈಕರ್‌ ನೇಯ್ಮರ್‌ ಇತ್ತೀಚೆಗೆ ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಪ್ರಕಟಿಸಿದ್ದಾರೆ. ಈಗ ಮೆಸ್ಸಿ ಕೂಡಾ ರಾಷ್ಟ್ರೀಯ ತಂಡದಿಂದ ನಿವೃತ್ತಿಯಾಗಿದ್ದಾರೆ. 41 ವರ್ಷದ ರೊನಾಲ್ಡೊ ಕೂಡಾ ಶೀಘ್ರದಲ್ಲೇ ತಮ್ಮ ಅಂತಾರಾಷ್ಟ್ರೀಯ ವೃತ್ತಿಬದುಕಿಗೆ ತೆರೆ ಎಳೆಯುವ ಸಾಧ್ಯತೆಯೂ ಇದೆ.

2016ರಲ್ಲಿ ನಿವೃತ್ತಿ ಘೋಷಿಸಿ ಬಳಿಕ ಹಿಂಪಡೆದಿದ್ದರು ಮೆಸ್ಸಿ

ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸುವುದು ಇದು ಮೊದಲೇನಲ್ಲ. ಈ ಹಿಂದೆ ಕೋಪಾ ಅಮೆರಿಕ ಫೈನಲ್‌ ಸೋಲಿನ ಬಳಿಕ ನಿವೃತ್ತಿ ಪ್ರಕಟಿಸಿದ್ದರು. ಆದರೆ ಕೆಲ ಸಮಯದ ಬಳಿಕ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ದರು.