ಫುಟ್ಬಾಲ್ ದಂತಕಥೆ ಡಿಗೋ ಮರಡೋನಾ ಅವರ 'ಹ್ಯಾಂಡ್ ಆಫ್ ಗಾಡ್' ಗೋಲಿಗೆ ಬಳಸಿದ್ದ ಚೆಂಡು ಬರೋಬ್ಬರಿ 32 ಕೋಟಿ ರೂಪಾಯಿಗೆ ಹರಾಜಾಗಿದೆ. 1986ರ ಫಿಫಾ ವಿಶ್ವಕಪ್‌ನ ಈ ವಿವಾದಾತ್ಮಕ ಚೆಂಡು, ಪಂದ್ಯದ ರೆಫ್ರಿ ಅಲಿ ಬಿನ್ ನಾಸ್ಸೆರ್ ಬಳಿ 36 ವರ್ಷಗಳ ಕಾಲ ಇತ್ತು. ಈ ಹಿಂದೆ ಮರಡೋನಾ ಅವರ ಜೆರ್ಸಿ ಕೂಡ ದಾಖಲೆ ಬೆಲೆಗೆ ಮಾರಾಟವಾಗಿತ್ತು.
ಡಲ್ಲಾಸ್: ಫುಟ್ಬಾಲ್ ದಂತಕಥೆ, ಅರ್ಜೆಂಟೀನಾದ ಡಿಗೋ ಮರಡೋನಾ ಅವರ ಕುಖ್ಯಾತ ‘ಹ್ಯಾಂಡ್ ಆಫ್ ಗಾಡ್’ ಗೋಲಿಗೆ ಬಳಕೆಯಾಗಿದ್ದ ಚೆಂಡು, ಬರೋಬ್ಬರಿ 3.35 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 32 ಕೋಟಿ ರು.)ಗೆ ಹರಾಜಾಗಿದೆ. ಖರೀದಿ ಮಾಡಿದವರ ಹೆಸರನ್ನು ಸಂಸ್ಥೆಯು, ಭದ್ರತಾ ಕಾರಣಗಳಿಂದಾಗಿ ಬಹಿರಂಗಪಡಿಸಿಲ್ಲ.
ಇತ್ತೀಚೆಗೆ ಹರಾಜು ಪ್ರಕ್ರಿಯೆ ನಡೆಸಿದ್ದ ಅಮೆರಿಕದ ಡಲ್ಲಾಸ್ ಮೂಲದ ಹೆರಿಟೇಜ್ ಸಂಸ್ಥೆ, ಚೆಂಡು ಕನಿಷ್ಠ 10 ಮಿಲಿಯನ್ ಡಾಲರ್‌ಗೆ ಬಿಕರಿಯಾಗಬಹುದು ಎಂದು ನಿರೀಕ್ಷಿಸಿತ್ತು. ಈ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಆದರೆ, ಸಂಸ್ಥೆ ನಿರೀಕ್ಷೆ ಮಾಡಿದ್ದ ಅರ್ಧ ಮೊತ್ತವೂ ದೊರೆಯದೆ ಇರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ.
1986ರ ಫಿಫಾ ವಿಶ್ವಕಪ್‌ನಲ್ಲಿ ಈ ವಿವಾದಾತ್ಮಕ ಗೋಲು
1986ರ ಫಿಫಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಮರಡೋನಾ, ತಮ್ಮ ಎಡಗೈ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳಿದ್ದರು. ಈ ಘಟನೆಯನ್ನು ಟ್ಯುನೀಶಿಯಾದ ರೆಫ್ರಿ ಅಲಿ ಬಿನ್ ನಾಸ್ಸೆರ್ ಗಮನಿಸಿರಲಿಲ್ಲ. ಹೀಗಾಗಿ ಅವರು ಗೋಲು ನೀಡಿದ್ದರು. ಈ ವಿವಾದಾತ್ಮಕ ಗೋಲು ದಾಖಲಾದ 4 ನಿಮಿಷಗಳ ಬಳಿಕ ಮರಡೋನಾ, ಇಂಗ್ಲೆಂಡ್‌ನ 6 ಆಟಗಾರರನ್ನು ದಾಟಿಕೊಂಡು, 70 ಮೀ. ಓಡಿ ಗೋಲು ಬಾರಿಸಿದ್ದರು. ಅದು ಈ ಶತಮಾನದ ಶ್ರೇಷ್ಠ ಗೋಲು ಎನ್ನುವ ಹಿರಿಮೆಗೆ ಪಾತ್ರವಾಗಿತ್ತು. ಪಂದ್ಯವನ್ನು 2-1ರಲ್ಲಿ ಗೆದ್ದಿದ್ದ ಅರ್ಜೆಂಟೀನಾ ಬಳಿಕ ವಿಶ್ವ ಚಾಂಪಿಯನ್ ಕೂಡ ಆಗಿತ್ತು.
ಕ್ವಾರ್ಟರ್ ಫೈನಲ್ ಪಂದ್ಯದ ಬಳಿಕ ಚೆಂಡು ರೆಫ್ರಿ ನಾಸ್ಸರ್ ಬಳಿಯೇ ಸುಮಾರು 36 ವರ್ಷ ಉಳಿದಿತ್ತು. 2022ರಲ್ಲಿ ಅವರು 2.37 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಿದ್ದರು.
9.3 ಮಿಲಿಯನ್ ಡಾಲರ್‌ಗೆ ಹರಾಜಾಗಿದ್ದ ಜೆರ್ಸಿ!
ಮರಡೋನಾ ‘ಹ್ಯಾಂಡ್ ಆಫ್ ಗಾಡ್’ ಗೋಲು ಬಾರಿಸಿದ ಪಂದ್ಯದ ವೇಳೆ ಧರಿಸಿದ್ದ ಜೆರ್ಸಿ, 2022ರಲ್ಲಿ ಬರೋಬ್ಬರಿ 9.3 ಮಿಲಿಯನ್ ಡಾಲರ್ (ಅಂದಿನ ಡಾಲರ್ ಮೌಲ್ಯದ ಪ್ರಕಾರ 73 ಕೋಟಿ ರು.)ಗೆ ಹರಾಜಾಗಿತ್ತು.


