ಪಂದ್ಯದ ನಡುವೆ ಮಳೆ ವಕ್ಕರಿಸಿದೆ. ಆದರೆ ಮಳೆಯನ್ನು ಲೆಕ್ಕಿಸಿದ ಫುಟ್ಬಾಲ್ ಪಂದ್ಯ ಸಾಗಿತ್ತು. ಪಂದ್ಯ ರೋಚಕ ಘಟ್ಟ ಸಾಗುತ್ತಿದ್ದಂತೆ ಮೈದಾನದಲ್ಲಿ ಆಡುತ್ತಿದ್ದ ಫುಟ್ಬಾಲ್ ಪುಟಗಳತ್ತ ಸಿಡಿಲು ಬಡಿದಿದೆ. ಓರ್ವ ಫುಟ್ಬಾಲ್ ಪಟು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಥಾಯ್ಲೆಂಡ್ (ಆ.06) ಫುಟ್ಬಾಲ್ ಪಂದ್ಯಗಳು ಮಳೆಯಲ್ಲೂ ನಡೆಯುತ್ತದೆ. ಆದರೆ ಇದು ಅತ್ಯಂತ ಅಪಾಯಕಾರಿ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ರೋಚಕ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಂತೆ ಸಿಡಿಲು ಬಡಿದು ಫುಟ್ಬಾಲ್ ಪಟು ಮೃತಪಟ್ಟ ಘಟನೆ ದಕ್ಷಿಣ ಥಾಯ್ಲೆಂಡ್‌ನಲ್ಲಿ ನಡೆದಿದೆ. ಘಟನೆಯಲ್ಲಿ 12 ಆಟಗಾರರು ಗಾಯಗೊಂಡಿದ್ದಾರೆ. ತಕ್ಷಣವೇ ಫುಟ್ಬಾಲ್ ಪಂದ್ಯ ಸ್ಥಗಿತಗೊಳಿಸಿ ಆಟಾಗಾರರನ್ನು ಆಸ್ಪತ್ರೆ ದಾಖಲಿಸಲಾಗಿದೆ.

ಗೊಲೊಕ್ FA ಕಪ್ ಪಂದ್ಯದಲ್ಲಿ ಘಟನೆ

ಥಾಯ್ಲೆಂಡ್‌ನಲ್ಲಿ ನಡೆಯುವ ಜನಪ್ರಿಯ ಗೊಲೊಕ್ FA ಕಪ್ ಟೂರ್ನಿಯಲ್ಲಿ ಈ ದುರಂತ ಸಂಭವಿಸಿದೆ. ಥಾಯಿ ಮಲೇಷಿಯನ್ ಹಾಗೂ ಅಮೆಚ್ಯೂರ್ ನಡುವಿನ ರೋಚಕ ಹೋರಾಟದ ನಡುವೆ ಸಿಡಿಲು ಬಡಿದು ಫುಟ್ಬಾಲಿಗ ಬಲಿಯಾಗಿದ್ದಾನೆ. ಫುಟ್ಬಾಲ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ನೆರೆದಿದ್ದರು. ಹಲವರು ಫುಟ್ಬಾಲ್ ರೋಚಕತೆಯನ್ನು ತಮ್ಮ ಮೊಬೈಲ್ ಮೂಲಕ ಸೆರೆಯುತ್ತಿದ್ದರು. ಈ ವೇಳೆ ಸಿಡಿಲು ಬಡಿದ ದುರಂತವೂ ಈ ಮೊಬೈಲ್ ಮೂಲಕ ಸೆರೆಯಾಗಿದೆ.

ಪಂದ್ಯ ರೋಚಕ ಘಟ್ಟ ತಲುಪಿತ್ತು. ಮಳೆ ತೀವ್ರಗೊಂಡಿತ್ತು. ಆದರೆ ಫುಟ್ಬಾಲ್ ಪಂದ್ಯ ಸಾಗಿತ್ತು. ಅಲ್ಲೊಂದು ಇಲ್ಲೊಂದು ಸಣ್ಣ ಪ್ರಮಾಣದ ಮಿಂಚು ಪ್ರತ್ಯಕ್ಷವಾಗಿತ್ತು. ಆದರೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಾರಣ ಇದಕ್ಕೂ ಮೊದಲಿನ ಹಲವು ಪಂದ್ಯಗಳು ಮಳೆಯಲ್ಲೇ ನಡೆದಿತ್ತು. ಹೀಗಾಗಿ ಪಂದ್ಯ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿರಲಿಲ್ಲ. ಮಳೆಯಲ್ಲಿ ಪಂದ್ಯ ಸಾಗಿತ್ತು. ಉಭಯ ತಂಡದ ಆಟಗಾರರು ಗೋಲ್‌ಗಾಗಿ ಹೋರಾಟ ತೀವ್ರಗೊಳಿಸಿದ್ದರು. ಈ ವೇಳೆ ಒಂದೇ ಸಮನೆ ಸಿಡಿಲು ಬಡಿದಿದೆ.

ಆಟದ ನಡುವೆ ಸಿಡಿಲು ಬಡಿಯುವ ದೃಶ್ಯವೂ ಅಭಿಮಾನಿಗಳ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರೋಚಕ ಪಂದ್ಯದ ನಡುವೆ ದಿಢೀರ್ ಸಿಡಿಲು ಬಡಿದು ತಂಡದ ಪ್ರಮುಖ ಫುಟ್ಬಾಲ್ ಪಟು ಮೈದಾನದಲ್ಲಿ ಮೃತಪಟ್ಟಿದ್ದಾನೆ. ಇತ್ತ 12 ಆಟಗಾರರು ಗಾಯಗೊಂಡಿದ್ದಾರೆ. ಸಿಡಿಲು ಬಡಿದ ಬೆನ್ನಲ್ಲೇ ಯುವಕ ಮೈದಾನದಲ್ಲಿ ಪ್ರಾಣಬಿಟ್ಟಿದ್ದಾನೆ. ಇತರ ಫುಟ್ಬಾಲ್ ಪಟುಗಳು ತಕ್ಷಣವೇ ತೆರಳಿ ಯುವಕನ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಸಿಪಿಆರ್ ಮಾಡಿ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ಇತ್ತ ಹಲವರು ಗಾಯಗೊಂಡು ಮೈದಾನದಲ್ಲಿ ಕುಸಿದು ಬಿದ್ದಿದ್ದರು.

ಆ್ಯಂಬುಲೆನ್ಸ್ ಮೂಲಕ ಆಟಗಾರರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಾಗಿದೆ. ಗಾಯಗೊಂಡ ಆಟಗಾರರು ಚೇತರಿಕೆ ಕಾಣುತ್ತಿದ್ದಾರೆ. ಇತ್ತ ಪ್ರಮುಖ ಪ್ಲೇಯರ್ ದುರಂತ ಅಂತ್ಯಕಂಡಿದ್ದಾನೆ.