ರಾತ್ರಿ ಉಳಿದ ಆಹಾರವನ್ನು ಎಸೆಯುವ ಮೊದಲು ಈ ಮಾಹಿತಿ ತಿಳಿಯಿರಿ! ಕೆಲವು ಭಾರತೀಯ ಖಾದ್ಯಗಳು ಮರುದಿನ ಬಿಸಿ ಮಾಡಿ ತಿಂದಾಗ ಇನ್ನಷ್ಟು ರುಚಿಯಾಗಿರುತ್ತೆ. ಆ ಆಹಾರಗಳು ಯಾವುವು? ಅವುಗಳನ್ನು ಯಾವ ರೀತಿ ತಿನ್ನಬೇಕು? ಎಲ್ಲಾ ಮಾಹಿತಿ ಇಲ್ಲಿದೆ.
ಮರುದಿನ ತಿಂದರೆ ರುಚಿ ಹೆಚ್ಚಾಗುವ 5 ಆಹಾರಗಳು
ಸಾಮಾನ್ಯವಾಗಿ ಮನೆಯಲ್ಲಿ ರಾತ್ರಿ ಉಳಿದ ಆಹಾರವನ್ನು ನೋಡಿದಾಗ ಹಲವರು ಅದನ್ನು ಮತ್ತೆ ತಿನ್ನಲು ಹಿಂದೇಟು ಹಾಕುತ್ತಾರೆ. ಕೆಲವೊಮ್ಮೆ ಉಳಿದ ಆಹಾರವನ್ನು ಬೀದಿನಾಯಿಗಳಿಗೆ ಹಾಕುತ್ತಾರೆ ಅಥವಾ ನೇರವಾಗಿ ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ, ಕೆಲವು ಖಾದ್ಯಗಳು ಮರುದಿನ ತಿಂದಾಗ ಇನ್ನಷ್ಟು ರುಚಿಯಾಗಿರುತ್ತವೆ ಎಂಬುದು ನಿಮಗೆ ಗೊತ್ತೇ? ಹೌದು, ಕೆಲವು ಆಹಾರಗಳು ತಯಾರಿಸಿದ ದಿನಕ್ಕಿಂತ ಮರುದಿನ ತಿಂದಾಗ ಹೆಚ್ಚು ರುಚಿ ನೀಡುತ್ತವೆ. ಇದಕ್ಕೆ ಕಾರಣ, ಸಮಯ ಕಳೆದಂತೆ ಅವುಗಳಲ್ಲಿರುವ ಮಸಾಲೆಗಳು ಮತ್ತು ಇತರ ಪದಾರ್ಥಗಳು ಪರಸ್ಪರ ಚೆನ್ನಾಗಿ ಬೆರೆತು, ರುಚಿ ಇನ್ನಷ್ಟು ಗಾಢವಾಗುವುದು. ಇದರಿಂದ ಖಾದ್ಯದ ಸ್ವಾದ ಮೊದಲಿಗಿಂತ ಹೆಚ್ಚಾಗುತ್ತದೆ. ಮರುದಿನ ಚೆನ್ನಾಗಿ ಬಿಸಿ ಮಾಡಿ ತಿಂದಾಗ ಇನ್ನಷ್ಟು ರುಚಿ ನೀಡುವ 5 ಜನಪ್ರಿಯ ಭಾರತೀಯ ಖಾದ್ಯಗಳು ಯಾವುವು ಎಂಬುದನ್ನು ತಿಳಿಯೋಣ.
ಚೋಲೆ
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಚೋಲೆ. ಈ ಖಾದ್ಯದ ರುಚಿ ಮರುದಿನ ಇನ್ನಷ್ಟು ಹೆಚ್ಚಾಗುತ್ತದೆ. ರಾತ್ರಿ ಪೂರ್ತಿ ಕಡಲೆ ಮತ್ತು ಮಸಾಲೆಗಳು ಚೆನ್ನಾಗಿ ಬೆರೆಯುವುದರಿಂದ ಗ್ರೇವಿ ಗಟ್ಟಿಯಾಗಿ, ಹೆಚ್ಚು ರುಚಿಕರವಾಗುತ್ತದೆ. ಇದೇ ಕಾರಣಕ್ಕೆ ಅನೇಕರು ಚೋಲೆಯನ್ನು ತಯಾರಿಸಿದ ದಿನಕ್ಕಿಂತ ಮರುದಿನ ತಿನ್ನಲು ಹೆಚ್ಚು ಇಷ್ಟಪಡುತ್ತಾರೆ.
ರಾಜ್ಮಾ
ರಾಜ್ಮಾ ಕೂಡ ಸಮಯ ಕಳೆದಂತೆ ಇನ್ನಷ್ಟು ರುಚಿ ಹೆಚ್ಚಿಸಿಕೊಳ್ಳುವ ಖಾದ್ಯವಾಗಿದೆ. ಇದನ್ನು ಕೆಲವು ಗಂಟೆಗಳ ಕಾಲ ಅಥವಾ ರಾತ್ರಿ ಪೂರ್ತಿ ಇಟ್ಟಾಗ ಮಸಾಲೆಗಳ ಸ್ವಾದ ರಾಜ್ಮಾ ಕಾಳುಗಳಲ್ಲಿ ಚೆನ್ನಾಗಿ ಬೆರೆಯುತ್ತದೆ. ಮರುದಿನ ಬಿಸಿ ಮಾಡಿ ತಿಂದಾಗ ಇದರ ರುಚಿ ಇನ್ನಷ್ಟು ಅದ್ಭುತವಾಗಿರುತ್ತದೆ.
ಸಾಂಬಾರ್ ಇನ್ನಷ್ಟು ರುಚಿಯಾಗುತ್ತದೆ
ಸಾಂಬಾರ್ ಕೂಡ ಮರುದಿನ ತಿಂದಾಗ ಹೆಚ್ಚು ರುಚಿಯಾಗಿರುತ್ತದೆ. ಬೇಳೆ, ತರಕಾರಿಗಳು ಮತ್ತು ಮಸಾಲೆಗಳ ಮಿಶ್ರಣವು ಸಮಯ ಕಳೆದಂತೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಹೀಗಾಗಿ, ಕೆಲವೊಮ್ಮೆ ಮರುದಿನದ ಸಾಂಬಾರ್ನ ರುಚಿ ಹೊಸದಾಗಿ ತಯಾರಿಸಿದ ಸಾಂಬಾರ್ಗಿಂತಲೂ ಉತ್ತಮವಾಗಿರುತ್ತದೆ.
ಮೀನು ಸಾರು
ಮೀನು ಸಾರು ಮಾಡಿ ಆ ದಿನ ತಿನ್ನೋದಕ್ಕಿಂದ, ಮರುದಿನ ತಿಂದರೆ ಅದಕ್ಕೆ ರುಚಿ ಹೆಚ್ಚಾಗಿರುತ್ತದೆ. ಅದು ಯಾವುದೇ ಮೀನಿನ ಸಾರು, ರಸ ಇರಬಹುದು, ಮಣ್ಣಿನ ಮಡಕೆಯಲ್ಲಿ ಮಾಡಿ, ಅದನ್ನ ಮರುದಿನ ತಿಂದರೇನೆ ರುಚಿ ಹೆಚ್ಚು.
ಬಿರಿಯಾನಿ
ಈ ಪಟ್ಟಿಯ ಕೊನೆಯ ಖಾದ್ಯ ಬಿರಿಯಾನಿ. ಬಿರಿಯಾನಿಯನ್ನು ಸ್ವಲ್ಪ ಸಮಯ ಇಟ್ಟಾಗ ಅದರಲ್ಲಿರುವ ಮಸಾಲೆಗಳು ಮತ್ತು ಪರಿಮಳ ಅನ್ನದ ಕಾಳುಗಳಲ್ಲಿ ಚೆನ್ನಾಗಿ ಬೆರೆಯುತ್ತವೆ. ಹೀಗಾಗಿ, ಮರುದಿನ ಬಿಸಿ ಮಾಡಿ ತಿಂದ ಬಿರಿಯಾನಿ ಹೆಚ್ಚು ಸ್ವಾದಭರಿತವಾಗಿ ಮತ್ತು ರುಚಿಕರವಾಗಿ ಅನಿಸಬಹುದು.


