ಗ್ರಾಹಕರ ಆರೋಗ್ಯ ಮತ್ತು ತಪ್ಪು ಲೇಬಲಿಂಗ್ ತಡೆಯಲು ಮಹಾರಾಷ್ಟ್ರ ಸರ್ಕಾರವು 'ಅನಲಾಗ್ ಪನೀರ್' ಅನ್ನು ನಿಷೇಧಿಸಿದೆ. ಅಸಲಿ ಪನೀರ್ ಎಂದು ಹೇಳಿ ಮಾರಾಟವಾಗುತ್ತಿದ್ದ ಈ ಕೃತಕ ಪನೀರ್ ಎಂದರೇನು, ಅದರ ಅಪಾಯಗಳೇನು ಮತ್ತು ಅದನ್ನು ಗುರುತಿಸುವುದು ಹೇಗೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
ಸಾರ್ವಜನಿಕರ ಆರೋಗ್ಯದ ಕಾಳಜಿ ಮತ್ತು ಆಹಾರ ಪದಾರ್ಥಗಳ ಮೇಲಿನ ತಪ್ಪು ಲೇಬಲಿಂಗ್ ನಿಯಂತ್ರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಪನೀರ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ 'ಅನಲಾಗ್ ಪನೀರ್' (Analogue Paneer/ಕೃತಕ ಪನೀರ್) ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ಮಹಾರಾಷ್ಟ್ರ ಸರ್ಕಾರವು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿದೆ. ಛತ್ತೀಸ್‌ಗಢದ ನಂತರ ಇಂತಹ ಕಠಿಣ ಕ್ರಮ ಕೈಗೊಂಡ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಾಮಾನ್ಯ ಡೈರಿ ಪನೀರ್ ಬದಲಿಗೆ ಈ ಕೃತಕ ಅನಲಾಗ್ ಪನೀರ್ ಅನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂಬ ಗಂಭೀರ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆಹಾರ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ಅನಲಾಗ್ ಪನೀರ್ ಮಾರಾಟ ಮಾಡುವವರಿಗೆ ಕಠಿಣ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಅನಲಾಗ್ ಪನೀರ್ ಎಂದರೇನು? ಇದು ಸಾಮಾನ್ಯ ಪನೀರ್‌ಗಿಂತ ಹೇಗೆ ಭಿನ್ನವಾಗಿದೆ? ಇದು ಆರೋಗ್ಯಕ್ಕೆ ಹಾನಿಕಾರಕವೇ? ಮತ್ತು ಖರೀದಿಸುವ ಮುನ್ನ ಇದನ್ನು ಗುರುತಿಸುವುದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಅನಲಾಗ್ ಪನೀರ್ ಎಂದರೇನು?
ಸರಳವಾಗಿ ಹೇಳುವುದಾದರೆ, ಅನಲಾಗ್ ಪನೀರ್ ಎಂಬುದು ಸಾಮಾನ್ಯ ಪನೀರ್‌ನಂತೆ ಕಾಣುವ ಒಂದು ಕೃತಕ ಪರ್ಯಾಯವಾಗಿದೆ. ಸಾಂಪ್ರದಾಯಿಕ ಪನೀರ್ ಅನ್ನು ಕೇವಲ ತಾಜಾ ಹಾಲಿಗೆ ನಿಂಬೆ ರಸ ಅಥವಾ ಸಿಟ್ರಿಕ್ ಆಸಿಡ್ ಸೇರಿಸಿ ತಯಾರಿಸಲಾಗುತ್ತದೆ. ಆದರೆ ಅನಲಾಗ್ ಪನೀರ್ ಅನ್ನು ತಯಾರಿಸಲು ಕೇವಲ ಹಾಲು ಬಳಸುವುದಿಲ್ಲ. ಬದಲಿಗೆ ವೆಜಿಟೇಬಲ್ ಫ್ಯಾಟ್ (ಮುಖ್ಯವಾಗಿ ಪಾಮ್ ಆಯಿಲ್), ಹಾಲಿನ ಪುಡಿ (milk powder), ಸ್ಟಾರ್ಚ್ (ಗಂಜಿ) ಮತ್ತು ಎಮಲ್ಸಿಫೈಯರ್‌ಗಳನ್ನು ಬಳಸಲಾಗುತ್ತದೆ. ಇದನ್ನು ಅಸಲಿ ಪನೀರ್‌ನಂತೆಯೇ ಕಾಣುವಂತೆ, ಅದೇ ವಿನ್ಯಾಸ ಮತ್ತು ರುಚಿ ಬರುವಂತೆ ಕೃತಕವಾಗಿ ತಯಾರಿಸಲಾಗುತ್ತದೆ. ಇದರ ಉತ್ಪಾದನಾ ವೆಚ್ಚ ಅತ್ಯಂತ ಕಡಿಮೆಯಾಗಿರುತ್ತದೆ.
ಮಹಾರಾಷ್ಟ್ರದಲ್ಲಿ ಈ ನಿಷೇಧಕ್ಕೆ ಕಾರಣವೇನು?
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳ ಪ್ರಕಾರ ಸರಿಯಾದ ಲೇಬಲ್ ಹಾಕಿ 'ನಾನ್-ಡೈರಿ ಅನಲಾಗ್ ಪನೀರ್' ಎಂದು ನಮೂದಿಸಿ ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಕ್ಯಾಟರರ್‌ಗಳು ಅನಲಾಗ್ ಪನೀರ್ ಅನ್ನು ಸಾಮಾನ್ಯ ಡೈರಿ ಪನೀರ್ ಎಂದೇ ಹೇಳಿ ಗ್ರಾಹಕರಿಗೆ ಉಣಬಡಿಸುತ್ತಿದ್ದವು. ಇದು ಗ್ರಾಹಕರನ್ನು ದಿಕ್ಕು ತಪ್ಪಿಸುವ ಮತ್ತು ಆಹಾರ ಸುರಕ್ಷತೆ ಕಾಯ್ದೆ 2006 ರ ನಿಯಮಗಳನ್ನು ಉಲ್ಲಂಘಿಸುವ ಗಂಭೀರ ವಂಚನೆಯಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಈ ಕೃತಕ ಪನೀರ್ ಮೇಲೆ ಕಠಿಣ ನಿಷೇಧ ಹೇರಿದೆ. ನಿಯಮ ಉಲ್ಲಂಘಿಸುವವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಒಂದು ವೇಳೆ ಈ ಕಲಬೆರಕೆ ಆಹಾರ ಸೇವನೆಯಿಂದ ಜೀವಕ್ಕೆ ಅಪಾಯ ಉಂಟಾದರೆ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ 10 ಲಕ್ಷ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ವ್ಯತ್ಯಾಸಗಳೇನು?
ಆರೋಗ್ಯ ತಜ್ಞರು ಮತ್ತು ಆಹಾರ ವಿಶ್ಲೇಷಕರ ಪ್ರಕಾರ ಈ ಎರಡು ಪನೀರ್‌ಗಳ ನಡುವೆ ಪೌಷ್ಟಿಕಾಂಶದ ದೃಷ್ಟಿಯಿಂದ ಭಾರಿ ವ್ಯತ್ಯಾಸಗಳಿವೆ.
- ಪದಾರ್ಥಗಳು: ಅಸಲಿ ಪನೀರ್ ಕೇವಲ ಹಾಲಿನಿಂದ ತಯಾರಾಗುವುದರಿಂದ ಅದರಲ್ಲಿ ನೈಸರ್ಗಿಕ ಹಾಲಿನ ಕೊಬ್ಬು ಇರುತ್ತದೆ. ಅನಲಾಗ್ ಪನೀರ್‌ನಲ್ಲಿ ಪಾಮ್ ಆಯಿಲ್ ಅಥವಾ ಇತರೆ ಸಸ್ಯಜನ್ಯ ಎಣ್ಣೆ ಹಾಗೂ ಸ್ಟಾರ್ಚ್ ಇರುತ್ತದೆ.
- ಪೌಷ್ಟಿಕಾಂಶಗಳು: ನೈಸರ್ಗಿಕ ಪನೀರ್‌ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ವಿಟಮಿನ್ ಬಿ12 ಸಮೃದ್ಧವಾಗಿರುತ್ತದೆ. ಆದರೆ ಅನಲಾಗ್ ಪನೀರ್‌ನಲ್ಲಿ ಇವುಗಳ ಪ್ರಮಾಣ ತೀರಾ ಕಡಿಮೆ ಇರುತ್ತದೆ.
- ಕೊಬ್ಬಿನಾಂಶ: ಅನಲಾಗ್ ಪನೀರ್‌ನಲ್ಲಿ ಸಸ್ಯಜನ್ಯ ಎಣ್ಣೆಗಳನ್ನು ಬಳಸುವುದರಿಂದ ಇದರಲ್ಲಿ ಸ್ಯಾಚುರೇಟೆಡ್ ಫ್ಯಾಟ್ (ಹಾನಿಕಾರಕ ಕೊಬ್ಬು) ಪ್ರಮಾಣ ಅಧಿಕವಾಗಿರುತ್ತದೆ.
ಅನಲಾಗ್ ಪನೀರ್ ಗುರುತಿಸಲು 3 ಸುಲಭ ವಿಧಾನಗಳು
ಪ್ಯಾಕೆಟ್ ಮೇಲಿನ ಲೇಬಲ್ ಪರಿಶೀಲಿಸಿ: ಪ್ಯಾಕ್ ಮಾಡಿದ ಪನೀರ್ ಖರೀದಿಸುವಾಗ ಅದರ ಮೇಲಿರುವ ಘಟಕಾಂಶಗಳ (Ingredients) ಪಟ್ಟಿಯನ್ನು ತಪ್ಪದೇ ಓದಿ. ಅಸಲಿ ಪನೀರ್ ಪ್ಯಾಕೆಟ್ ಮೇಲೆ 'Milk Solids' ಮತ್ತು 'Citric Acid' ಎಂದು ಬರೆದಿರುತ್ತದೆ. ಆದರೆ ಅನಲಾಗ್ ಪನೀರ್ ಆಗಿದ್ದರೆ ಅದರ ಮೇಲೆ 'Vegetable Oil', 'Palm Oil', 'Starch' ಅಥವಾ 'Analogue Paneer' ಎಂದು ನಮೂದಿಸಲಾಗಿರುತ್ತದೆ.
ಅಯೋಡಿನ್ ಪರೀಕ್ಷೆ (Iodine Test): ಪನೀರ್‌ನಲ್ಲಿ ಸ್ಟಾರ್ಚ್ (ಗಂಜಿ) ಬೆರೆಸಲಾಗಿದೆಯೇ ಎಂದು ತಿಳಿಯಲು ಈ ಪರೀಕ್ಷೆ ಉಪಯುಕ್ತ. ಪನೀರ್‌ನ ಸಣ್ಣ ತುಂಡಿಗೆ ಕೆಲವು ಹನಿ ಅಯೋಡಿನ್ ದ್ರಾವಣವನ್ನು ಹಾಕಿ. ಪನೀರ್‌ನ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದರೆ, ಅದರಲ್ಲಿ ಸ್ಟಾರ್ಚ್ ಇರುವುದು ಖಚಿತವಾಗುತ್ತದೆ. ಇದು ಅನಲಾಗ್ ಪನೀರ್ ಎಂಬುದರ ಸಂಕೇತವಾಗಿದೆ.
Texture ಮತ್ತು ಬೆಲೆ: ಅನಲಾಗ್ ಪನೀರ್ ಮಾರುಕಟ್ಟೆಯಲ್ಲಿ ಅಸಲಿ ಪನೀರ್‌ಗಿಂತ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ಇದನ್ನು ತಿನ್ನುವಾಗ ಹೆಚ್ಚು ರಬ್ಬರ್‌ನಂತೆ (rubbery) ಹಾಗೂ ಗಟ್ಟಿಯಾಗಿ ಸಾಫ್ಟ್ ಇಲ್ಲದೆ ಇರುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮನೆಮದ್ದು ಪರೀಕ್ಷೆಗಳು ಪ್ರಾಥಮಿಕ ಅರಿವು ಮೂಡಿಸುತ್ತವೆಯೇ ಹೊರತು ಇವು ಅಧಿಕೃತ ಪ್ರಯೋಗಾಲಯದ (Lab Test) ವರದಿಗಳಲ್ಲ. ಪ್ಯಾಕೇಜ್ಡ್ ಉತ್ಪನ್ನಗಳಿಗೆ ಲೇಬಲ್ ಪರಿಶೀಲಿಸುವುದೇ ಅತ್ಯಂತ ನಂಬಲರ್ಹ ವಿಧಾನವಾಗಿದೆ. ಅಯೋಡಿನ್ ಪರೀಕ್ಷೆಯು ಕೇವಲ ಸ್ಟಾರ್ಚ್ ಇರುವುದನ್ನು ಮಾತ್ರ ತೋರಿಸುತ್ತದೆ, ಆದರೆ ಇಡೀ ಉತ್ಪನ್ನ ಹೇಗೆ ತಯಾರಾಗಿದೆ ಎಂಬುದನ್ನು ಸಂಪೂರ್ಣವಾಗಿ ದೃಢೀಕರಿಸಲು ಸಾಧ್ಯವಿಲ್ಲ. ಇನ್ನು ಕೆಲವು ವಿಡಿಯೋಗಳಲ್ಲಿ ತೋರಿಸಲಾಗುವ ದಾಲ್/ಯೂರಿಯಾ ಪರೀಕ್ಷೆಗಳನ್ನು ಎಫ್‌ಎಸ್‌ಎಸ್‌ಎಐ (FSSAI) ಶಿಫಾರಸು ಮಾಡಿಲ್ಲ ಮತ್ತು ಅವುಗಳ ನಿಖರತೆ ಸಾಬೀತಾಗಿಲ್ಲ.
ಅನಲಾಗ್ ಪನೀರ್ ಸೇವನೆ ಆರೋಗ್ಯಕ್ಕೆ ಹಾನಿಕಾರಕವೇ?
ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣದಲ್ಲಿ, ನಿಯಮಾನುಸಾರ ತಯಾರಿಸಿ ಸರಿಯಾದ ಲೇಬಲ್ ಹಾಕಿ ಮಾರಾಟ ಮಾಡಿದರೆ ಅನಲಾಗ್ ಪನೀರ್ ಸೇವನೆ ನೇರವಾಗಿ ಹಾನಿಕಾರಕವಲ್ಲ. ಆದರೆ ಸಮಸ್ಯೆ ಉದ್ಭವಿಸುವುದು ಎಲ್ಲಿ ಎಂದರೆ.. ಗ್ರಾಹಕರಿಗೆ ಅಸಲಿ ಪನೀರ್ ಎಂದು ಹೇಳಿ ಕೃತಕ ಪನೀರ್ ಮಾರಾಟ ಮಾಡಿದಾಗ, ಅತ್ಯಂತ ಕಳಪೆ ಅಥವಾ ಅಶುಚಿಯಾದ ಜಾಗದಲ್ಲಿ ಇವುಗಳನ್ನು ಸಿದ್ಧಪಡಿಸಿದಾಗ ಅಸಲಿ ಪನೀರ್‌ನಿಂದ ಸಿಗಬೇಕಾದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಿಗದೇ, ಹಾನಿಕಾರಕ ಕೊಬ್ಬು ದೇಹ ಸೇರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.
ಗ್ರಾಹಕರು ಏನು ಮಾಡಬೇಕು?
ಪನೀರ್ ಖರೀದಿಸುವಾಗ ಯಾವಾಗಲೂ ವಿಶ್ವಾಸಾರ್ಹ ಡೈರಿ ಅಥವಾ ಪ್ರಸಿದ್ಧ ಬ್ರ್ಯಾಂಡ್‌ಗಳಿಂದ ಮಾತ್ರ ಖರೀದಿಸಿ. ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳಲ್ಲಿ ಅತಿ ಕಡಿಮೆ ದರಕ್ಕೆ ಸಿಗುವ ಪನೀರ್ ಖಾದ್ಯಗಳ ಬಗ್ಗೆ ಎಚ್ಚರವಿರಲಿ. ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲೇ ತಾಜಾ ಹಾಲನ್ನು ಬಳಸಿ ಶುದ್ಧವಾದ ಪನೀರ್ ತಯಾರಿಸಿ ಬಳಸುವುದು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ.


