Kerala style coconut chutney: ಬೆಳಗ್ಗಿನ ತಿಂಡಿಗೆ ಪ್ರತಿದಿನ ಅದೇ ಶೇಂಗಾ ಚಟ್ನಿ, ಮಾಮೂಲಿ ಕಾಯಿ ಚಟ್ನಿ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ನಿಮ್ಮ ಇಡ್ಲಿ-ದೋಸೆಯ ರುಚಿಯನ್ನು ಡಬಲ್ ಮಾಡಲು ಇಂದೇ ಟ್ರೈ ಮಾಡಿ ಸಾಂಪ್ರದಾಯಿಕ 'ಕೇರಳ ಸ್ಟೈಲ್ ತೆಂಗಿನಕಾಯಿ ಚಟ್ನಿ'.
ನಮ್ಮ ದಕ್ಷಿಣ ಭಾರತದ ಮನೆಗಳಲ್ಲಿ ಬೆಳಗ್ಗಿನ ಉಪಾಹಾರ (ಬ್ರೇಕ್‌ಫಾಸ್ಟ್) ಎಂದ ತಕ್ಷಣ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ಇಡ್ಲಿ ಮತ್ತು ದೋಸೆ. ಇವುಗಳ ಜೊತೆಗೆ ಪ್ರತಿದಿನ ಶೇಂಗಾ (ಕಡಲೆಕಾಯಿ) ಚಟ್ನಿ, ಮಾಮೂಲಿ ಕಾಯಿ ಚಟ್ನಿ ಅಥವಾ ಟೊಮೆಟೊ, ಖಾರದ ಚಟ್ನಿಗಳನ್ನು ಮಾಡಲಾಗುತ್ತದೆ. ಪ್ರತಿದಿನ ಅದೇ ಚಟ್ನಿಗಳನ್ನು ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಒಮ್ಮೆ ಕೇರಳ ಶೈಲಿಯ ಈ ತೆಂಗಿನಕಾಯಿ ಚಟ್ನಿಯನ್ನು ಮಾಡಿ ನೋಡಿ.
ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಹೆಚ್ಚು ಸಮಯವೂ ಹಿಡಿಯುವುದಿಲ್ಲ. ಇದರ ರುಚಿಗೆ ನೀವು ಫಿದಾ ಆಗುವುದು ಖಂಡಿತ. ಸಾಮಾನ್ಯವಾಗಿ ಎರಡು ಇಡ್ಲಿ ತಿನ್ನುವವರು ಕೂಡ ಈ ಚಟ್ನಿಯ ರುಚಿಗೆ ಮರುಳಾಗಿ ಖಂಡಿತವಾಗಿಯೂ ಇನ್ನೆರಡು ಇಡ್ಲಿಗಳನ್ನು ಹೆಚ್ಚುವರಿಯಾಗಿ ಸವಿಯುತ್ತಾರೆ. ಕೇರಳ ಶೈಲಿಯ ತೆಂಗಿನಕಾಯಿ ಚಟ್ನಿಯನ್ನು ನಿಮ್ಮ ಮನೆಯಲ್ಲಿ ಹೇಗೆ ತಯಾರಿಸಬೇಕೆಂದು ಇಲ್ಲಿ ತಿಳಿಯಿರಿ.
ಕೇರಳ ಶೈಲಿಯ ತೆಂಗಿನಕಾಯಿ ಚಟ್ನಿ ತಯಾರಿಸಲು ಬೇಕಾಗುವ ಪದಾರ್ಥಗಳು
ಅಡುಗೆಗೆ ಬಳಸುವ ತೆಂಗಿನ ಎಣ್ಣೆ - 2 ಟೇಬಲ್ ಚಮಚ
ಸಾಂಬಾರ್ ಈರುಳ್ಳಿ (ಸಣ್ಣ ಈರುಳ್ಳಿ) - ಅರ್ಧ ಕಪ್
ಬೆಳ್ಳುಳ್ಳಿ ಎಸಳು - 5
ಒಣ ಮೆಣಸಿನಕಾಯಿ - 5
ತಾಜಾ ಹಸಿ ತೆಂಗಿನಕಾಯಿ ತುರಿ - 2 ಕಪ್
ಶುಂಠಿ ತುರಿ - 1 ಟೇಬಲ್ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ತೆಂಗಿನ ಎಣ್ಣೆ - 2 ಟೇಬಲ್ ಚಮಚ
ಸಾಸಿವೆ - 1 ಟೇಬಲ್ ಚಮಚ
ಉದ್ದಿನ ಬೇಳೆ - 1 ಟೇಬಲ್ ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ ಚೂರುಗಳು - 1 ಟೇಬಲ್ ಚಮಚ
ಕರಿಬೇವು - 2 ಕಡ್ಡಿ
ಒಣ ಮೆಣಸಿನಕಾಯಿ - 2
ನೀರು - ಚಟ್ನಿ ರುಬ್ಬಲು ಅಗತ್ಯವಿರುವಷ್ಟು
ಕೇರಳ ಶೈಲಿಯ ತೆಂಗಿನಕಾಯಿ ಚಟ್ನಿ ತಯಾರಿಸುವ ವಿಧಾನ
ಮೊದಲಿಗೆ ಸ್ಟವ್ ಹಚ್ಚಿ, ಒಂದು ಸಣ್ಣ ಬಾಣಲೆಯನ್ನು ಇಟ್ಟು ಅದರಲ್ಲಿ 2 ಟೇಬಲ್ ಚಮಚ ಅಡುಗೆಗೆ ಬಳಸುವ ತೆಂಗಿನ ಎಣ್ಣೆಯನ್ನು ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ನಂತರ ಸಿಪ್ಪೆ ಸುಲಿದ ಸಾಂಬಾರ್ ಈರುಳ್ಳಿ ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಸುಮಾರು ಒಂದು ನಿಮಿಷಗಳ ಕಾಲ ಹೊಂಬಣ್ಣ ಬರುವವರೆಗೆ ಹುರಿಯಿರಿ.
ಈರುಳ್ಳಿ ಬಣ್ಣ ಬದಲಾಗುತ್ತಿರುವಾಗ ಒಣ ಮೆಣಸಿನಕಾಯಿಗಳನ್ನು ಹಾಕಿ, ಅವು ಉತ್ತಮ ಸುವಾಸನೆ ಬೀರಿ ಗರಿಗರಿಯಾಗುವವರೆಗೆ ಕೆಲವು ಸೆಕೆಂಡುಗಳ ಕಾಲ ಹುರಿದು ಸ್ಟವ್‌ನಿಂದ ಕೆಳಗಿಳಿಸಿ.
ಈಗ ಒಂದು ಮಿಕ್ಸಿ ಜಾರ್‌ಗೆ ತಾಜಾ ತೆಂಗಿನಕಾಯಿ ತುರಿ, ಶುಂಠಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಆ ನಂತರ ನಾವು ಮೊದಲೇ ಎಣ್ಣೆಯಲ್ಲಿ ಹುರಿದು ಇಟ್ಟುಕೊಂಡಿರುವ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಯ ಮಿಶ್ರಣವನ್ನು ಅದಕ್ಕೆ ಸೇರಿಸಿ. ಸ್ವಲ್ಪ ನೀರನ್ನು ಹಾಕಿಕೊಂಡು, ಎಲ್ಲವೂ ಚೆನ್ನಾಗಿ ಬೆರೆಯುವಂತೆ ಮಧ್ಯಮವಾಗಿ (ತುಂಬಾ ನುಣ್ಣಗಲ್ಲದಂತೆ) ಗಟ್ಟಿಯಾಗಿ ರುಬ್ಬಿಕೊಳ್ಳಿ. ಹೀಗೆ ರುಬ್ಬಿದ ಚಟ್ನಿಯನ್ನು ಒಂದು ಪಾತ್ರೆಗೆ ವರ್ಗಾಯಿಸಿ.
ಚಟ್ನಿಗೆ ನಿಜವಾದ ರುಚಿ ಬರುವುದೇ ಒಗ್ಗರಣೆಯಿಂದ. ಸ್ಟವ್ ಮೇಲೆ ಒಗ್ಗರಣೆಯ ಸಣ್ಣ ಪಾತ್ರೆಯನ್ನು ಇಟ್ಟು, ಅದರಲ್ಲಿ 2 ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಾಸಿವೆ ಹಾಕಿ ಚಿಟಪಟ ಅನಿಸಿ. ಆಮೇಲೆ ಉದ್ದಿನ ಬೇಳೆ ಹಾಕಿ ತಿಳಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ಈಗ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಚೂರುಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ಕೊನೆಯದಾಗಿ ಕರಿಬೇವು ಮತ್ತು ಒಣ ಮೆಣಸಿನಕಾಯಿಗಳನ್ನು ಹಾಕಿ ಕೆಲವು ಸೆಕೆಂಡುಗಳ ಕಾಲ ಬಾಡಿಸಿ ಸ್ಟವ್ ಆಫ್ ಮಾಡಿ.
ಘಮಘಮಿಸುವ ಈ ಒಗ್ಗರಣೆ ಮಿಶ್ರಣವನ್ನು ಪಾತ್ರೆಯಲ್ಲಿರುವ ಚಟ್ನಿಯ ಮೇಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಅಷ್ಟೇ.. ರುಚಿಕರವಾದ ಕೇರಳ ಸ್ಟೈಲ್ ತೆಂಗಿನಕಾಯಿ ಚಟ್ನಿ ಸವಿಯಲು ಸಿದ್ಧ! ಮತ್ಯಾಕೆ ತಡ, ಬಿಸಿಬಿಸಿ ಇಡ್ಲಿ ಅಥವಾ ದೋಸೆಯೊಂದಿಗೆ ಸವಿಯಿರಿ.