Crispy Puffed Rice: ಮನೆಯಲ್ಲಿರುವ ಅಕ್ಕಿಯಿಂದಲೇ ಹಗುರವಾದ, ಕ್ರಿಸ್ಪಿಯಾದ ಮಂಡಕ್ಕಿಯನ್ನು ಸುಲಭವಾಗಿ ತಯಾರಿಸಬಹುದು ಅನ್ನೋದು ನಿಮಗೆ ಗೊತ್ತಾ? ಹೌದು, ಇನ್ನು ಮುಂದೆ ಅಂಗಡಿಯಿಂದ ತರಬೇಡಿ, ಮನೆಯಲ್ಲಿಯೇ ಅಕ್ಕಿಯಿಂದ ಹೇಗೆ ಮಾಡೋದು ನೋಡೋಣ.

ಮನೆಯಲ್ಲಿರುವ ಅಕ್ಕಿಯಿಂದಲೇ ಮಾಡಿ ಕ್ರಿಸ್ಪಿ ಮಂಡಕ್ಕಿ!

ಮಾರುಕಟ್ಟೆಯಿಂದ ಮಂಡಕ್ಕಿ ತಂದು ಭೇಲ್ ಪುರಿ, ಚಾಟ್ ಅಥವಾ ಖಾರ ಮಂಡಕ್ಕಿ ತಯಾರಿಸುವುದು ಸುಲಭ. ಆದರೆ ಇದೇ ಹಗುರವಾದ ಮತ್ತು ಕ್ರಿಸ್ಪಿಯಾದ ಮಂಡಕ್ಕಿಯನ್ನು ಮನೆಯಲ್ಲಿಯೇ ತಯಾರಿಸಬಹುದು ಎಂಬುದು ನಿಮಗೆ ಗೊತ್ತೇ? ಮನೆಯಲ್ಲಿ ಅಕ್ಕಿ ಇದ್ದರೆ ಸಾಕು, ಇದನ್ನು ಮಾಡಲು ಹೆಚ್ಚು ಸಾಮಗ್ರಿಗಳ ಅಗತ್ಯವಿಲ್ಲ. ಸರಿಯಾದ ಅಕ್ಕಿಯನ್ನು ಆಯ್ಕೆ ಮಾಡುವುದು ಮತ್ತು ಅದನ್ನು ಚೆನ್ನಾಗಿ ಒಣಗಿಸುವುದು ಈ ವಿಧಾನದಲ್ಲಿ ಅತ್ಯಂತ ಮುಖ್ಯ. ಸ್ವಲ್ಪ ಎಚ್ಚರಿಕೆ ವಹಿಸಿದರೆ ಅಕ್ಕಿಯ ಕಾಳುಗಳು ಉಬ್ಬಿಕೊಂಡು ಮಂಡಕ್ಕಿಯ ರೂಪ ಪಡೆಯುತ್ತವೆ. ಹಾಗಿದ್ರೆ ಇದನ್ನ ಹೇಗೆ ತಯಾರಿಸೋದು ಅನ್ನೋದನ್ನು ತಿಳಿಯೋಣ.

ಮಂಡಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಮನೆಯಲ್ಲಿಯೇ ಮಂಡಕ್ಕಿ ತಯಾರಿಸಲು ಮುಖ್ಯವಾಗಿ ಅಕ್ಕಿ, ನೀರು ಮತ್ತು ಉಪ್ಪು ಬೇಕಾಗುತ್ತದೆ. ಈ ವಿಧಾನದಲ್ಲಿ ದಪ್ಪ ಕಾಳುಗಳಿರುವ ಕುಸುಬಲಕ್ಕಿ ಅಥವಾ ಪಾರ್ಬಾಯ್ಲ್ಡ್ ರೈಸ್ ಬಳಸುವುದು ಉತ್ತಮ. ಸುಮಾರು 2 ಕಪ್ ಅಕ್ಕಿಯನ್ನು ತೆಗೆದುಕೊಂಡು ತಯಾರಿ ಆರಂಭಿಸಬಹುದು. ಅಕ್ಕಿಯನ್ನು ನೆನೆಸಲು ಮತ್ತು ನಂತರ ಬಿಸಿ ಮಾಡಲು ಉಪ್ಪನ್ನು ಬಳಸಲಾಗುತ್ತದೆ.

ಅಕ್ಕಿಯನ್ನು ನೆನೆಸುವುದು ಮೊದಲ ಮುಖ್ಯ ಹಂತ

  • ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಬಿಸಿ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ, ಅದರಲ್ಲಿ ಅಕ್ಕಿಯನ್ನು ಸುಮಾರು 30 ನಿಮಿಷಗಳ ಕಾಲ ನೆನೆಸಿಡಿ. ಇದರಿಂದ ಅಕ್ಕಿ ಮೃದುವಾಗಿ ನೀರನ್ನು ಹೀರಿಕೊಳ್ಳುತ್ತದೆ.
  • ನಂತರ ಅಕ್ಕಿಯನ್ನು ಜರಡಿಗೆ ಹಾಕಿ ನೀರನ್ನು ಸಂಪೂರ್ಣವಾಗಿ ಬಸಿಯಿರಿ. ಈಗ ಸ್ವಚ್ಛವಾದ ಹತ್ತಿ ಬಟ್ಟೆ ಅಥವಾ ದೊಡ್ಡ ತಟ್ಟೆಯಲ್ಲಿ ಅಕ್ಕಿಯನ್ನು ತೆಳುವಾದ ಪದರದಲ್ಲಿ ಹರಡಿ. ಅಕ್ಕಿಯಲ್ಲಿರುವ ತೇವಾಂಶ ಸಂಪೂರ್ಣವಾಗಿ ಹೋಗುವವರೆಗೆ ಬಿಸಿಲಿನಲ್ಲಿ ಒಣಗಿಸಿ.
  • ಈ ಹಂತದಲ್ಲಿ ಆತುರ ಮಾಡಬಾರದು. ಅಕ್ಕಿಯ ಒಳಭಾಗದಲ್ಲಿ ತೇವಾಂಶ ಉಳಿದಿದ್ದರೆ, ಅವು ಸರಿಯಾಗಿ ಉಬ್ಬದೆ ಇರಬಹುದು. ಆದ್ದರಿಂದ ಅಕ್ಕಿಯನ್ನು ಸಂಪೂರ್ಣವಾಗಿ ಒಣಗಿಸುವುದು ಬಹಳ ಮುಖ್ಯ.

ಉಪ್ಪಿನಲ್ಲಿ ಅಕ್ಕಿ ಹೀಗೆ ಉಬ್ಬುತ್ತದೆ!

  • ಈಗ ದಪ್ಪ ತಳವಿರುವ ಬಾಣಲೆ ಗ್ಯಾಸ್ ಮೇಲೆ ಇಟ್ಟು, ಅದರಲ್ಲಿ ಸುಮಾರು ಒಂದು ಬಟ್ಟಲು ಉಪ್ಪು ಹಾಕಿ. ಉಪ್ಪು ಚೆನ್ನಾಗಿ ಬಿಸಿಯಾಗಲು ಬಿಡಿ. ಉಪ್ಪು ಒಂದೇ ಕಡೆ ಹೆಚ್ಚು ಬಿಸಿಯಾಗದಂತೆ ಆಗಾಗ ಕಲಕುತ್ತಿರಿ.
  • ಉಪ್ಪು ಚೆನ್ನಾಗಿ ಬಿಸಿಯಾದ ನಂತರ ಅದಕ್ಕೆ ಒಣಗಿಸಿದ ಅಕ್ಕಿಯನ್ನು ಸೇರಿಸಿ. ಈಗ ಹೆಚ್ಚಿನ ಉರಿಯಲ್ಲಿ ಅಕ್ಕಿಯನ್ನು ನಿರಂತರವಾಗಿ ಕಲಕುತ್ತಿರಿ. ಬಿಸಿ ಉಪ್ಪಿನ ಸಂಪರ್ಕಕ್ಕೆ ಬಂದಾಗ ಅಕ್ಕಿಯ ಕಾಳುಗಳು ನಿಧಾನವಾಗಿ ಉಬ್ಬಲು ಪ್ರಾರಂಭಿಸುತ್ತವೆ.
  • ಈ ಸಮಯದಲ್ಲಿ ಅಕ್ಕಿಯನ್ನು ಬಾಣಲೆಯಲ್ಲಿ ಹೆಚ್ಚು ಹೊತ್ತು ಕಲಕದೆ ಹಾಗೆಯೇ ಬಿಡಬೇಡಿ. ಹೆಚ್ಚಿನ ಕಾಳುಗಳು ಉಬ್ಬಿ ಮಂಡಕ್ಕಿಯಂತೆ ಕಾಣಲು ಪ್ರಾರಂಭಿಸಿದಾಗ ಗ್ಯಾಸ್ ಆಫ್ ಮಾಡಿ.
  • ನಂತರ ಬಾಣಲೆಯಲ್ಲಿರುವ ಮಿಶ್ರಣವನ್ನು ಎಚ್ಚರಿಕೆಯಿಂದ ದೊಡ್ಡ ಜರಡಿಗೆ ಹಾಕಿ ಸೋಸಿ. ಇದರಿಂದ ಬಿಸಿಯಾದ ಉಪ್ಪು ಬೇರ್ಪಡುತ್ತದೆ ಮತ್ತು ನಿಮಗೆ ಹಗುರವಾದ, ಮಂಡಕ್ಕಿ ಸಿಗುತ್ತದೆ.

ಮಂಡಕ್ಕಿ ತಯಾರಿಸುವ ಇನ್ನೊಂದು ವಿಧಾನ

ಕೆಲವರು ಅಕ್ಕಿಯನ್ನು ಮೊದಲು ಬೇಯಿಸಿ ನಂತರ ಮಂಡಕ್ಕಿ ತಯಾರಿಸಬಹುದು. ಈ ವಿಧಾನದಲ್ಲಿ ಅಕ್ಕಿಯನ್ನು ಬೇಯಿಸಿದ ನಂತರ ಚೆನ್ನಾಗಿ ಒಣಗಿಸಬೇಕು.

ಅಕ್ಕಿಯಲ್ಲಿರುವ ತೇವಾಂಶ ಸಂಪೂರ್ಣವಾಗಿ ಹೋದ ಬಳಿಕ, ಬಿಸಿ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅಕ್ಕಿಯನ್ನು ನಿರಂತರವಾಗಿ ಕಲಕುತ್ತಾ ಹುರಿಯಲಾಗುತ್ತದೆ. ಆದರೆ ಈ ವಿಧಾನದಲ್ಲಿಯೂ ಅಕ್ಕಿಯನ್ನು ಸರಿಯಾಗಿ ಒಣಗಿಸುವುದು ಮತ್ತು ಉರಿಯನ್ನು ನಿಯಂತ್ರಿಸುವುದು ಬಹಳ ಮುಖ್ಯ.

ಮನೆಯಲ್ಲೇ ತಯಾರಿಸಿದ ಮಂಡಕ್ಕಿಯಿಂದ ಹಲವು ತಿಂಡಿಗಳನ್ನು ಮಾಡಿ

ತಯಾರಾದ ಮಂಡಕ್ಕಿಯನ್ನು ಹಾಗೆಯೇ ತಿನ್ನಬಹುದು ಅಥವಾ ನಿಮ್ಮ ಇಷ್ಟದ ಮಸಾಲೆಗಳನ್ನು ಸೇರಿಸಿ ಖಾರ ತಿಂಡಿಯನ್ನಾಗಿ ಮಾಡಬಹುದು. ಈರುಳ್ಳಿ, ಟೊಮೆಟೊ, ಹಸಿರು ಚಟ್ನಿ ಮತ್ತು ಸೇವ್ ಸೇರಿಸಿದರೆ ಕ್ಷಣಾರ್ಧದಲ್ಲಿ ರುಚಿಕರವಾದ ಭೇಲ್ ಪುರಿ ತಯಾರಿಸಬಹುದು. ಮಸಲಾ ಮಂಡಕ್ಕಿ, ಖಾರ ಮಂಡಕ್ಕಿ ಎಲ್ಲವನ್ನೂ ತಯಾರಿಸಬಹುದು.