ನಮ್ಮ ಅಡುಗೆಮನೆಯಲ್ಲಿ ಟೊಮ್ಯಾಟೋ (Tomato) ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅದು ಸಾಂಬಾರ್ ಇರಲಿ, ರಸಂ ಇರಲಿ ಅಥವಾ ಸಲಾಡ್ ಇರಲಿ, ಟೊಮ್ಯಾಟೋ ಇರಲೇಬೇಕು. ಆದರೆ, ದಿನವೂ ಅದೇ ಸಾಂಬಾರ್, ರಸಂ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಹೀಗೆ ಮಾಡಿ..

ಟೊಮ್ಯಾಟೋ ಗೊಜ್ಜು ಹೀಗೆ ಮಾಡಿ

Add Asianetnews Kannada as a Preferred SourcegooglePreferred

ನಮ್ಮ ಅಡುಗೆಮನೆಯಲ್ಲಿ ಟೊಮ್ಯಾಟೋ (Tomato) ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅದು ಸಾಂಬಾರ್ ಇರಲಿ, ರಸಂ ಇರಲಿ ಅಥವಾ ಸಲಾಡ್ ಇರಲಿ, ಟೊಮ್ಯಾಟೋ ಇರಲೇಬೇಕು. ಆದರೆ, ದಿನವೂ ಅದೇ ಸಾಂಬಾರ್, ರಸಂ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಭರ್ಜರಿ ರೆಸಿಪಿ! ಅದೇ 'ಟೊಮ್ಯಾಟೋ ಗೊಜ್ಜು'. ಕರ್ನಾಟಕದ ಮನೆ ಮನೆಗಳಲ್ಲಿ ಪ್ರಸಿದ್ಧವಾಗಿರುವ ಈ ಗೊಜ್ಜು, ಬಿಸಿ ಬಿಸಿ ಅನ್ನದ ಜೊತೆಗಷ್ಟೇ ಅಲ್ಲದೆ ಚಪಾತಿ, ರೊಟ್ಟಿ ಹಾಗೂ ದೋಸೆಗೂ ಸಖತ್ ಕಾಂಬಿನೇಷನ್.

ರುಚಿಯ ಹಿಂದೆ ಅಡಗಿದೆ ವಿಶೇಷ ಜಾದೂ!

ಸಾಮಾನ್ಯವಾಗಿ ನಾವು ಯಾವುದೇ ಗೊಜ್ಜು ಅಥವಾ ಚಟ್ನಿ ಮಾಡುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸುತ್ತೇವೆ. ಇದು ರುಚಿಯನ್ನು ಹೆಚ್ಚಿಸುವುದು ನಿಜ. ಆದರೆ, ನೀವು ತಯಾರಿಸಿದ ಗೊಜ್ಜು ಅಂದು ಸಂಜೆಯ ಹೊತ್ತಿಗೆಲ್ಲಾ ಹಾಳಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಬ್ಯಾಚುಲರ್‌ಗಳಿಗೆ ಅಥವಾ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ದಿನವೂ ಅಡುಗೆ ಮಾಡುವುದು ಕಷ್ಟದ ಕೆಲಸ.

ಅಂತಹವರಿಗಾಗಿ ಇಲ್ಲಿದೆ ಒಂದು ಕಿಚನ್ ಹ್ಯಾಕ್!

ವಾರಗಳ ಕಾಲ ಕೆಡದಂತೆ ಇಡುವ 'ಸೀಕ್ರೆಟ್' ಇಲ್ಲಿದೆ:

ಟೊಮ್ಯಾಟೋ ಗೊಜ್ಜನ್ನು ಹೆಚ್ಚು ದಿನಗಳ ಕಾಲ ಇಟ್ಟುಕೊಳ್ಳಬೇಕೆಂದರೆ ನೀವು ಮಾಡುವ ಮೊದಲ ಕೆಲಸವೆಂದರೆ ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸದಿರುವುದು. ಹೌದು, ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದಿದ್ದರೂ ಟೊಮ್ಯಾಟೋ ಗೊಜ್ಜು ಅದ್ಭುತವಾಗಿ ರುಚಿ ನೀಡುತ್ತದೆ.

ಜೊತೆಗೆ ಮತ್ತೊಂದು ಮುಖ್ಯ ಅಂಶವೆಂದರೆ ತೆಂಗಿನೆಣ್ಣೆ.

ನೀವು ಗೊಜ್ಜನ್ನು ತಯಾರಿಸುವಾಗ ಸಾಮಾನ್ಯ ಎಣ್ಣೆಯ ಬದಲು ಶುದ್ಧ ತೆಂಗಿನೆಣ್ಣೆಯನ್ನು ಸ್ವಲ್ಪ ಧಾರಾಳವಾಗಿ ಬಳಸಿ. ತೆಂಗಿನೆಣ್ಣೆಯು ಗೊಜ್ಜಿಗೆ ಒಂದು ವಿಶಿಷ್ಟ ಪರಿಮಳವನ್ನು ನೀಡುವುದಲ್ಲದೆ, ನೈಸರ್ಗಿಕ ಪ್ರಿಸರ್ವೇಟಿವ್ ಆಗಿ ಕೆಲಸ ಮಾಡುತ್ತದೆ. ಚೆನ್ನಾಗಿ ಹಣ್ಣಾದ ಕೆಂಪು ಟೊಮ್ಯಾಟೋಗಳನ್ನು ಸಣ್ಣದಾಗಿ ಹೆಚ್ಚಿ, ಎಣ್ಣೆಯಲ್ಲಿ ಅವು ನೀರು ಬಿಟ್ಟು ಪೇಸ್ಟ್ ಆಗುವವರೆಗೆ ಬೇಯಿಸಿ. ಇದಕ್ಕೆ ಸ್ವಲ್ಪ ಬೆಲ್ಲ, ಉಪ್ಪು ಮತ್ತು ಖಾರದ ಪುಡಿ ಸೇರಿಸಿದರೆ ಅದರ ರುಚಿಯೇ ಬೇರೆ!

ಪ್ರಯಾಣಕ್ಕೂ ಬೆಸ್ಟ್ ಜೊತೆಗಾರ:

ನೀವು ಎಲ್ಲಾದರೂ ಪ್ರವಾಸಕ್ಕೆ ಹೋಗುತ್ತಿದ್ದರೆ ಅಥವಾ ಹಾಸ್ಟೆಲ್‌ನಲ್ಲಿರುವ ಮಕ್ಕಳಿಗೆ ಏನಾದರೂ ಕಳುಹಿಸಿಕೊಡಬೇಕಿದ್ದರೆ ಈ 'ನೋ ಆನಿಯನ್-ನೋ ಗಾರ್ಲಿಕ್' ಟೊಮ್ಯಾಟೋ ಗೊಜ್ಜು ಬೆಸ್ಟ್ ಆಪ್ಷನ್. ಈ ರೀತಿ ತಯಾರಿಸಿದ ಗೊಜ್ಜನ್ನು ಗಾಜಿನ ಸೀಸೆಯಲ್ಲಿ ಹಾಕಿಟ್ಟರೆ ಒಂದು ವಾರಕ್ಕೂ ಹೆಚ್ಚು ಕಾಲ ಇದು ಕೆಡುವುದಿಲ್ಲ.

ಇನ್ನೇಕೆ ತಡ, ನಿಮ್ಮ ಅಡುಗೆಮನೆಯಲ್ಲಿ ಟೊಮ್ಯಾಟೋಗಳಿದ್ದರೆ ಇಂದೇ ಈ ಸ್ಪೆಷಲ್ ಗೊಜ್ಜನ್ನು ಟ್ರೈ ಮಾಡಿ. ನಿಮ್ಮ ಮನೆಯವರು ಖಂಡಿತವಾಗಿಯೂ ಎರಡರ ಬದಲು ನಾಲ್ಕು ಮುದ್ದೆ ಅಥವಾ ಚಪಾತಿ ತಿನ್ನುವುದರಲ್ಲಿ ಅನುಮಾನವೇ ಇಲ್ಲ!