ಬೇಸಿಗೆಯಲ್ಲಿ ಮೊಸರು ಬೇಗ ಹುಳಿಯಾಗುತ್ತಿದ್ದರೆ ಈ 2 ಪದಾರ್ಥ ಸೇರಿಸಿ, ರುಚಿ ಚೂರು ಬದಲಾಗಲ್ಲ
Sour Curd Prevention: ಬೇಸಿಗೆಯಲ್ಲಿ ಮನೆಯಲ್ಲಿ ತಯಾರಿಸಿದ ಮೊಸರು ಹಲವು ಬಾರಿ ಹುಳಿಯಾಗುತ್ತದೆ. ಪದೇ ಪದೇ ತಾಜಾ ಮೊಸರು ಹಾಕಿದರೂ ಅದರ ರುಚಿಯಲ್ಲಿ ಹುಳಿ ಅಂಶ ಬರಲು ಶುರುವಾದರೆ ಈ ಮುನ್ನೆಚ್ಚರಿಕೆಗಳನ್ನು ವಹಿಸಿ. ಸರಳ ಹಂತಗಳಲ್ಲಿ ಮೊಸರನ್ನು ಹುಳಿಯಾಗದಂತೆ ತಡೆಯುವುದು ಹೇಗೆಂದು ತಿಳಿಯಿರಿ.

ಕೆಲವೇ ಗಂಟೆಗಳಲ್ಲಿ ಹುಳಿ ಹೆಚ್ಚಾಗುತ್ತೆ
ಮೊಸರು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಜನರು ಬೇಸಿಗೆಯಲ್ಲಿ ಮೊಸರು ತಿನ್ನಲು ಹೆಚ್ಚು ಇಷ್ಟಪಡುತ್ತಾರೆ. ರಾಯತ, ಮಜ್ಜಿಗೆ, ಲಸ್ಸಿ ಅಥವಾ ಬರಿ ಮೊಸರು ಕರುಳಿನ ಆರೋಗ್ಯಕ್ಕೆ (Gut Health) ಒಳ್ಳೆಯದು ಮತ್ತು ತೂಕ ಇಳಿಸಲು ಸಹಕಾರಿ. ಆದರೆ ಬೇಸಿಗೆಯಲ್ಲಿ ಮನೆಯಲ್ಲಿ ಮೊಸರು ಹೆಪ್ಪು ಹಾಕಿದ ಕೆಲವೇ ಗಂಟೆಗಳಲ್ಲಿ ಅದರ ರುಚಿ ಕೆಡಲು ಆರಂಭವಾಗುತ್ತದೆ ಮತ್ತು ಹುಳಿ ಹೆಚ್ಚಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ಸರಳ ಸಲಹೆಗಳು ಮತ್ತು ಮುನ್ನೆಚ್ಚರಿಕೆಗಳು ನಿಮಗೆ ಸಹಕಾರಿಯಾಗಲಿವೆ.
ಹಾಲಿನ ಗುಣಮಟ್ಟ ಸರಿಯಾಗಿರಲಿ
ಮೊಸರು ಹೆಪ್ಪು ಹಾಕಲು ಯಾವಾಗಲೂ ತಾಜಾ ಹಾಲನ್ನೇ ಬಳಸಬೇಕು. ಹಾಲು ಹಳೆಯದಾಗಿದ್ದರೆ ಅಥವಾ ಎಕ್ಸ್‌ಪೈರಿ ಆಗುವ ಹಂತದಲ್ಲಿದ್ದರೆ ಅಂತಹ ಹಾಲಿನಿಂದ ತಯಾರಿಸಿದ ಮೊಸರು ಬೇಗ ಹುಳಿಯಾಗುತ್ತದೆ. ಏಕೆಂದರೆ ಹಳೆಯ ಹಾಲಿನಲ್ಲಿ ಮೊದಲೇ ಬ್ಯಾಕ್ಟೀರಿಯಾಗಳು ಇರುತ್ತವೆ ಮತ್ತು ಹೆಪ್ಪು ಹಾಕಿದ ಮೇಲೆ ಈ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗಿ ಮೊಸರು ಬೇಗ ಕೆಟ್ಟು ಹೋಗುತ್ತದೆ, ಆಗ ಅದರ ರುಚಿ ಅತಿಯಾದ ಹುಳಿಯಾಗಿ ಬದಲಾಗುತ್ತದೆ.
ಪಾತ್ರೆ ಸ್ವಚ್ಛವಾಗಿರಲಿ
ಮೊಸರು ಹಾಕಲು ಯಾವಾಗಲೂ ಸ್ವಚ್ಛವಾದ ಪಾತ್ರೆಯನ್ನೇ ಬಳಸಿ. ಅನೇಕರು ಪಾತ್ರೆಯನ್ನು ತೊಳೆಯದೆ ಅದರಲ್ಲಿಯೇ ಪದೇ ಪದೇ ಮೊಸರು ಹಾಕುತ್ತಾರೆ. ಹಳೆಯ ಮೊಸರಿನ ಪಾತ್ರೆಯ ಅಂಚಿನಲ್ಲಿ ಅಂಟಿಕೊಂಡಿರುವ ಮೊಸರಿನಿಂದ ಹೊಸ ಮೊಸರು ಬೇಗ ಹೆಪ್ಪುಗಟ್ಟುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಇಂತಹ ಮೊಸರು ಬೇಗ ಹುಳಿಯಾಗುತ್ತದೆ. ಆದ್ದರಿಂದ ಮೊಸರು ಹಾಕುವ ಪಾತ್ರೆಯನ್ನು ಸೋಪು ಮತ್ತು ನೀರಿನಿಂದ ಚೆನ್ನಾಗಿ ತೊಳೆದ ನಂತರವೇ ಮತ್ತೆ ಬಳಸಬೇಕು.
ಹೆಪ್ಪು ತಾಜಾವಾಗಿರಲಿ
ಮೊಸರು ಹೆಪ್ಪು ಹಾಕಲು ಸ್ವಲ್ಪ ಹಳೆಯ ಮೊಸರನ್ನು ಬಳಸಲಾಗುತ್ತದೆ. ಇದನ್ನು ಪಾತ್ರೆಗೆ ಸವರಿ ಅದರ ಮೇಲೆ ಹಾಲು ಹಾಕಲಾಗುತ್ತದೆ. ಆದರೆ ನೆನಪಿಡಿ, ಹೆಪ್ಪು ಹಾಕಲು ಬಳಸುವ ಮೊಸರು ತಾಜಾವಾಗಿರಬೇಕು. ಆ ಮೊಸರು ಹುಳಿಯಾಗಿರಬಾರದು. ಒಂದು ವೇಳೆ ಹೆಪ್ಪು ಹಾಕುವ ಮೊಸರೇ ಹುಳಿಯಾಗಿದ್ದರೆ, ಇಡೀ ಮೊಸರು ಹುಳಿಯಾಗುತ್ತದೆ. ಆದ್ದರಿಂದ ತುಂಬಾ ಹಳೆಯ ಮೊಸರಿನಿಂದ ಹೊಸ ಮೊಸರು ತಯಾರಿಸಲು ಪ್ರಯತ್ನಿಸಬೇಡಿ.
ಹಾಲಿನ ತಾಪಮಾನ
ಬೇಸಿಗೆಯಲ್ಲಿ ಹಾಲಿನ ತಾಪಮಾನ ಕೂಡ ಮುಖ್ಯವಾಗುತ್ತದೆ. ಹಾಲು ಅತಿಯಾಗಿ ಬಿಸಿಯಾಗಿದ್ದರೆ ಮೊಸರು ಹೆಪ್ಪುಗಟ್ಟಿದ ನಂತರ ಹುಳಿಯಾಗುತ್ತದೆ. ಮೊಸರು ಹಾಕಲು ಹಾಲು ಎಷ್ಟು ಬಿಸಿ ಇರಬೇಕೆಂದರೆ, ನಿಮ್ಮ ಬೆರಳನ್ನು ಹಾಲಿನಲ್ಲಿ ಅದ್ದಿದಾಗ ಆ ಬಿಸಿಯನ್ನು ತಡೆದುಕೊಳ್ಳುವಂತಿರಬೇಕು. ಬೆರಳು ಸುಡುವಷ್ಟು ಬಿಸಿಯಾಗಿದ್ದರೆ ಅದು ಮೊಸರು ಹಾಕಲು ಸರಿಯಾದ ತಾಪಮಾನವಲ್ಲ.
ಮೊಸರು ಹೆಪ್ಪುಗಟ್ಟಿದ ನಂತರ ಸರಿಯಾದ ಜಾಗದಲ್ಲಿಡಿ
ಮೊಸರು ಒಮ್ಮೆ ಚೆನ್ನಾಗಿ ಹೆಪ್ಪುಗಟ್ಟಿದ ನಂತರ ಅದನ್ನು ಶೇಖರಿಸುವ ಜಾಗವೂ ಸರಿಯಾಗಿರಬೇಕು. ಮೊಸರು ಹೆಪ್ಪುಗಟ್ಟಿದ ತಕ್ಷಣ ಅದನ್ನು ಫ್ರಿಜ್‌ನಲ್ಲಿ ಇಡಬೇಡಿ. ಸುಮಾರು ಒಂದು ಗಂಟೆಯ ನಂತರ ಅದನ್ನು ಫ್ರಿಜ್ ಅಥವಾ ಯಾವುದಾದರೂ ತಂಪಾದ ಜಾಗದಲ್ಲಿ ಇರಿಸಿ. ಅತಿಯಾದ ಬಿಸಿ ಇರುವ ಜಾಗದಲ್ಲಿ ಮೊಸರನ್ನು ಹೆಚ್ಚು ಹೊತ್ತು ಬಿಟ್ಟರೆ ಅದರ ರುಚಿ ಬದಲಾಗಿ ಹುಳಿಯಾಗುತ್ತದೆ.
ಮೊಸರು ಹುಳಿಯಾದರೆ ಅದನ್ನು ಸರಿಪಡಿಸುವುದು ಹೇಗೆ?
ಒಂದು ವೇಳೆ ಮೊಸರು ಹುಳಿಯಾಗಿದ್ದರೆ ಅದನ್ನು ಸರಿಪಡಿಸಲು ಈ ವಿಧಾನಗಳನ್ನು ಅನುಸರಿಸಿ
*ಮೊಸರು ಹೆಪ್ಪು ಹಾಕುವಾಗ ಹಾಲಿಗೆ ಸ್ವಲ್ಪ ಸಕ್ಕರೆ ಸೇರಿಸಿ. ಇದರಿಂದ ಮೊಸರು ಸಿಹಿಯಾಗಿ ಬರುತ್ತದೆ.
*ಮೊಸರು ಹಾಕಲು ಸ್ವಚ್ಛವಾದ ಮಣ್ಣಿನ ಪಾತ್ರೆಯನ್ನು ಬಳಸುವುದರಿಂದಲೂ ಮೊಸರು ಹುಳಿಯಾಗದಂತೆ ತಡೆಯಬಹುದು.
*ಮೊಸರಿಗೆ ಸ್ವಲ್ಪ ಗಟ್ಟಿಯಾದ ಮತ್ತು ಕ್ರೀಮ್ ಇರುವ ಹಾಲನ್ನು ಸೇರಿಸಿ. ಇದರಿಂದ ಮೊಸರಿನ ರುಚಿ ಸರಿಯಾಗುತ್ತದೆ.
ನಿಮಗಾಗಿ ಒಂದು ವಿಶೇಷ ಟಿಪ್
ಮೊಸರು ಬೇಗ ಹುಳಿಯಾಗಬಾರದು ಎಂದರೆ, ಹೆಪ್ಪು ಹಾಕಿದ ಹಾಲಿನ ಪಾತ್ರೆಗೆ ಒಂದು ಅಥವಾ ಎರಡು ಹಸಿ ಮೆಣಸಿನಕಾಯಿಯನ್ನು (ತೊಟ್ಟು ಸಮೇತ) ಹಾಕಿಡಿ. ಮೆಣಸಿನಕಾಯಿಯಲ್ಲಿರುವ ಕಿಣ್ವಗಳು ಮೊಸರು ಅತಿಯಾಗಿ ಹುಳಿಯಾಗದಂತೆ ಕಾಪಾಡುತ್ತವೆ ಮತ್ತು ಮೊಸರು ದಪ್ಪಗೆ (Thick) ಬರುವಂತೆ ಮಾಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

