ನುಗ್ಗೆಸೊಪ್ಪಿನ ದೋಸೆ, ಮೊಟ್ಟೆ ಫ್ರೈ ಟೇಸ್ಟ್ ಮಾಡಿದ್ದೀರಾ? ರೆಸಿಪಿ ಇಲ್ಲಿದೆ...
ನುಗ್ಗೆಸೊಪ್ಪು ಪೌಷ್ಟಿಕ ಆಹಾರಗಳಲ್ಲೊಂದು. ನುಗ್ಗೆಸೊಪ್ಪಿನ ಸಾಂಬಾರು, ಪಲ್ಯವನ್ನಷ್ಟೇ ತಿಂದಿರೋರು ಇದ್ರಿಂದ ಮಾಡುವ ದೋಸೆ ಹಾಗೂ ಮೊಟ್ಟೆ ಫ್ರೈ ಟ್ರೈ ಮಾಡಿ ನೋಡಬಹುದು. ಇವು ಬಾಯಿಗೆ ರುಚಿ ನೀಡೋ ಜೊತೆಗೆ ಆರೋಗ್ಯಕ್ಕೂ ಹಿತಕಾರಿ.
ನುಗ್ಗೆಕಾಯಿ ಸಾಂಬಾರನ್ನು ಚಪ್ಪರಿಸಿಕೊಂಡು ತಿನ್ನುವ ನಾವು,ನುಗ್ಗೆಸೊಪ್ಪನ್ನು ಬಳಸೋದು ಕಡಿಮೆ. ಆದ್ರೆ ನುಗ್ಗೆಸೊಪ್ಪಿನಲ್ಲಿ ಕ್ಯಾರೆಟ್, ಹಾಲು ಸೇರಿದಂತೆ ಅತ್ಯಂತ ಪೌಷ್ಟಿಕ ಆಹಾರಗಳೆಂದು ಪರಿಗಣಿಸಿರುವ ಪದಾರ್ಥಗಳಲ್ಲಿರೋದಕ್ಕಿಂತ ಹೆಚ್ಚಿನ ಪೌಷ್ಟಿಕಾಂಶಗಳಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ನುಗ್ಗೆಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಬಿ1 (ಥೈಯಮಿನ್), ಬಿ2 (ರೈಬೋಫ್ಲವಿನ್), ಬಿ3 (ನಿಯಾಸಿನ್), ಬಿ6 ಹಾಗೂ ಫೊಲೇಟ್‍ನಿಂದ ಸಮೃದ್ಧವಾಗಿವೆ. ಮೆಗ್ನೇಷಿಯಂ, ಕಬ್ಬಿಣಾಂಶ, ಕ್ಯಾಲ್ಸಿಯಂ, ಫೋಸ್ಪರಸ್, ಝಿಂಕ್ ಹಾಗೂ ಅಮಿನೋ ಆಸಿಡ್ ಕೂಡ ಇವೆ. ರಕ್ತಹೀನತೆ, ಕೊಲೆಸ್ಟ್ರಾಲ್, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುವ ಗುಣ ನುಗ್ಗೆಸೊಪ್ಪಿನಲ್ಲಿದೆ. ಇದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದ್ದು, ಬಾಣಂತಿಯರಲ್ಲಿ ಎದೆಹಾಲನ್ನು ಹೆಚ್ಚಿಸಲು ನೆರವು ನೀಡುತ್ತೆ. ನುಗ್ಗೆಸೊಪ್ಪಿಗೆ ಹೆಚ್ಚಾಗಿ ಬೇಳೆ ಅಥವಾ ಕಾಳು ಸೇರಿಸಿ ಪಲ್ಯ, ಸಾಂಬಾರು ಮಾಡ್ತಾರೆ. ಒಂದೇ ತರಹದ ಖಾದ್ಯ ತಯಾರಿಸಿ ತಿನ್ನೋದಕ್ಕಿಂತ ಸಮಥಿಂಗ್ ಡಿಫರೆಂಟ್ ಆಗಿದ್ರೆ ಮನೆಮಂದಿಯೆಲ್ಲ ಖುಷಿಯಿಂದಲೇ ತಿನ್ನುತ್ತಾರೆ. ನೀವು ಕೂಡ ನುಗ್ಗೆಕಾಯಿ ಸೊಪ್ಪಿನಿಂದ ಹೊಸ ರೆಸಿಪಿ ಟ್ರೈ ಮಾಡ್ಬೇಕು ಅಂದ್ಕೊಂಡಿದ್ರೆ ಇದ್ರಿಂದ ದೋಸೆ ಮಾಡ್ಬಹುದು. ದೊಡ್ಡವರ ಜೊತೆ ಮಕ್ಕಳು ಕೂಡ ಈ ದೋಸೆಯನ್ನು ಇಷ್ಟಪಟ್ಟು ತಿನ್ನೋದ್ರಲ್ಲಿ ಸಂಶಯವೇ ಇಲ್ಲ. ಇನ್ನು ನುಗ್ಗೆಸೊಪ್ಪಿಗೆ ಮೊಟ್ಟೆ ಸೇರಿಸಿ ಸಿದ್ಧಪಡಿಸೋ ಪಲ್ಯ ಚಪಾತಿ, ಅನ್ನಕ್ಕೆ ಒಳ್ಳೆಯ ಕಾಂಬಿನೇಷನ್. ಇದನ್ನು ಕೂಡ ಟ್ರೈ ಮಾಡಿ ನೋಡಿ.
ಲೇಸ್ ಸ್ಟೈಲ್‌ನ ಆಲೂಗೆಡ್ಡೆ ಚಿಪ್ಸ್ ರಿಸಿಪಿ ಇಲ್ಲಿದೆ ನೋಡಿ
ನುಗ್ಗೆಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿಗಳು
ಹಚ್ಚಿದ ನುಗ್ಗೆಸೊಪ್ಪು –2 ಕಪ್, ಅಕ್ಕಿ-1 ಕಪ್, ಕಾಯಿತುರಿ-1/2 ಕಪ್, ಕೆಂಪುಮೆಣಸು-4, ಕೊತ್ತಂಬರಿ-1 ಟೀ ಚಮಚ, ಜೀರಿಗೆ-1/2 ಟೀ ಚಮಚ, ಅರಿಶಿಣ-ಚಿಟಿಕೆಯಷ್ಟು, ಈರುಳ್ಳಿ-1, ಹುಣಸೆಹುಳಿ- ಸ್ವಲ್ಪ, ಉಪ್ಪು –ರುಚಿಗೆ ತಕ್ಕಷ್ಟು, ತೆಂಗಿನೆಣ್ಣೆ- 4 ಟೀ ಚಮಚ
ಮಾಡುವ ವಿಧಾನ
-ಅಕ್ಕಿಯನ್ನು 3-4 ಗಂಟೆಗಳ ಕಾಲ ನೆನೆಹಾಕಿ.
-ಫ್ರೈಯಿಂಗ್ ಪ್ಯಾನ್‍ಗೆ 1/2 ಚಮಚ ಎಣ್ಣೆ ಹಾಕಿ ಅದಕ್ಕೆ ಕೊತ್ತಂಬರಿ, ಜೀರಿಗೆ ಹಾಗೂ ಕೆಂಪು ಮೆಣಸು ಹಾಕಿ ಹುರಿಯಿರಿ.
-ನೆನೆಹಾಕಿದ ಅಕ್ಕಿ, ಕಾಯಿತುರಿ, ಹುರಿದ ಕೊತ್ತಂಬರಿ, ಜೀರಿಗೆ, ಕೆಂಪುಮೆಣಸು, ಅರಿಶಿಣ, ಹುಣಸೆಹುಳಿ ಹಾಕಿ ರುಬ್ಬಿ (ದೋಸೆ ಹಿಟ್ಟಿನ ಹದಕ್ಕೆ).
-ರುಬ್ಬಿದ ಹಿಟ್ಟಿಗೆ ಉಪ್ಪು ಸೇರಿಸಿ ಕಲಸಿ ಆ ಬಳಿಕ ಹಚ್ಚಿದ ನುಗ್ಗೆಸೊಪ್ಪು, ಈರುಳ್ಳಿ ಸೇರಿಸಿ ಮಿಕ್ಸ್ ಮಾಡಿ.
-ಕಾದ ತವಾಕ್ಕೆ ಒಂದು ಸೌಟು ಹಿಟ್ಟು ಹಾಕಿ ನಿಧಾನಕ್ಕೆ ಹರಡಿ, ಅದರ ಮೇಲೆ ತೆಂಗಿನೆಣ್ಣೆ ಹಾಕಿ.
-ದೋಸೆ ಕಂದುಬಣ್ಣಕ್ಕೆ ತಿರುಗಿದ ಬಳಿಕ ತವಾದಿಂದ ತೆಗೆಯಿರಿ. ಈ ದೋಸೆಯನ್ನು ಚಟ್ನಿ ಅಥವಾ ಸಾಂಬಾರು ಇಲ್ಲದೆ ಹಾಗೆಯೇ ತಿನ್ನಬಹುದು.
ಯಾವುದೇ ಗಿಲ್ಟ್ ಇಲ್ಲದೆ ಸಸ್ಯಾಹಾರಿಗಳು ತಿನ್ನಬಹುದು ಈ ಆಮ್ಲೆಟ್!
ನುಗ್ಗೆಸೊಪ್ಪಿನ ಮೊಟ್ಟೆ ಫ್ರೈ
ಬೇಕಾಗುವ ಸಾಮಗ್ರಿಗಳು
ನುಗ್ಗೆಸೊಪ್ಪು-3 ಕಪ್, ಮೊಟ್ಟೆಗಳು-3, ಟೊಮ್ಯಾಟೋ -1, ಅಚ್ಚ ಖಾರದ ಪುಡಿ, ಅರಿಶಿಣ, ಎಣ್ಣೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು
ಮಾಡುವ ವಿಧಾನ
-ನುಗ್ಗೆಸೊಪ್ಪನ್ನು ದಂಟುಗಳಿಂದ ಬಿಡಿಸಿ ಚೆನ್ನಾಗಿ ತೊಳೆಯರಿ. ಆ ಬಳಿಕ ಸಣ್ಣಗೆ ಹಚ್ಚಿಕೊಳ್ಳಿ.
-ಈರುಳ್ಳಿ ಹಾಗೂ ಟೊಮ್ಯಾಟೋವನ್ನು ಸಣ್ಣಗೆ ಹಚ್ಚಿಕೊಳ್ಳಿ.
ರೆಸಿಪಿ: ಶ್ರಾವಣ ಮಾಸದ ಸಿಹಿ ತಿನಿಸುಗಳು!
-ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಕಾದ ಬಳಿಕ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಆ ಬಳಿಕ ಕತ್ತರಿಸಿದ ಟೊಮ್ಯಾಟೋ ಹಾಕಿ ಫ್ರೈ ಮಾಡಿ. ಇದಕ್ಕೆ ಹಚ್ಚಿದ ನುಗ್ಗೆಸೊಪ್ಪು ಸೇರಿಸಿ 5 ನಿಮಿಷ ಪ್ರೈ ಮಾಡಿ. ಅರಿಶಿಣ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಗೂ ಖಾರದಪುಡಿ ಸೇರಿಸಿ. ನುಗ್ಗೆಸೊಪ್ಪು ಬೆಂದ ಬಳಿಕ ಉರಿ ಕಡಿಮೆ ಮಾಡಿ, ಮೊಟ್ಟೆಗಳನ್ನು ಒಡೆದು ಹಾಕಿ ಮಗುಚಿ. ಬೇಕಿದ್ದರೆ ಸ್ವಲ್ಪ ಎಣ್ಣೆ ಸೇರಿಸಿದ ಬಳಿಕವೇ ಮೊಟ್ಟೆಗಳನ್ನು ಒಡೆದು ಹಾಕಿ, ಇದ್ರಿಂದ ಮೊಟ್ಟೆ ತಳ ಹಿಡಿಯೋದಿಲ್ಲ. ಹುಳಿ ಹೆಚ್ಚು ಬೇಕೆನ್ನುವರು ಸ್ಟೌವ್ ಆಫ್ ಮಾಡಿದ ಬಳಿಕ ಲಿಂಬೆಹಣ್ಣಿನ ರಸ ಸೇರಿಸಬಹುದು.
-ನುಗ್ಗೆಸೊಪ್ಪಿನ ಮೊಟ್ಟೆ ಫ್ರೈ ಚಪಾತಿ ಹಾಗೂ ಅನ್ನದೊಂದಿಗೆ ತಿನ್ನಲು ಚೆನ್ನಾಗಿರುತ್ತೆ.