ರೆಸಿಪಿ: ಶ್ರಾವಣ ಮಾಸದ ಸಿಹಿ ತಿನಿಸುಗಳು!

ಶ್ರಾವಣ ಮಾಸವೆಂದರೆ ಹಬ್ಬಗಳ ಸಾಲು. ಸಂಪ್ರದಾಯದಂತೆ ಒಂದೊಂದು ಹಬ್ಬಕ್ಕೇ ಪ್ರತ್ಯೇಕವಾದ ಸಿಹಿ ತಿನಿಸುಗಳು. ಮನಸ್ಸಿಗೆ ಖುಷಿ ಕೊಡುವ ಇಂಥ ವಿಶೇಷ ತಿಂಡಿಗಳ ರೆಸಿಪಿ ಇಲ್ಲಿದೆ.

Shravana masa special sweets simple recipe

- ಎಂ.ವಿ.ಸೌಮ್ಯ ಸುಮ

1. ತಂಬಿಟ್ಟು

ಬೇಕಾಗುವ ಸಾಮಗ್ರಿಗಳು

ಅಕ್ಕಿಹಿಟ್ಟು 1/2 ಕಪ್‌

ಹುರಿಗಡಲೆ ಹಿಟ್ಟು 1/4 ಕಪ್‌

ಬೆಲ್ಲ (ಪುಡಿ ಮಾಡಿದ್ದು) 3/4 ಕಪ್‌

ತುಪ್ಪ 4 - 5 ಚಮಚ

ಕಾಯಿತುರಿ 1/4 ಕಪ್‌

ಏಲಕ್ಕಿಪುಡಿ 1/2 ಚಮಚ

Shravana masa special sweets simple recipe

ಮೊದಲಿಗೆ ಬಾಣಲೆಗೆ ಬೆಲ್ಲದ ಪುಡಿ ಹಾಕಿ ಸ್ವಲ್ಪವೇ ನೀರು ಹಾಕಿ ಕರಗಿಸಿಕೊಂಡು ನಂತರ ಅದನ್ನು ಶೋಧಿಸಿಕೊಳ್ಳಬೇಕು. ಮತ್ತೆ ಆ ಶೋಧಿಸಿದ ಬೆಲ್ಲವಿರುವ ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಮತ್ತು ಕಾಯಿತುರಿ ಸೇರಿಸಿ ಒಂದೆಳೆ ಪಾಕ ಬರುವವರೆಗೂ ಕಾಯಿಸಬೇಕು. ನಂತರ ಒಟ್ಟಾಗಿ ಸೇರಿಸಿದ ಅಕ್ಕಿಹಿಟ್ಟು ಮತ್ತು ಹುರಿಗಡಲೆ ಹಿಟ್ಟನ್ನು ಬಾಣಲೆಗೆ ಹಾಕಿ, ಗಂಟಾಗದ ಹಾಗೆ ಕಲೆಸಬೇಕು. ಉರಿಯನ್ನು ಸಣ್ಣಗೆ ಮಾಡಿಕೊಂಡು, ಒಂದೆರೆಡು ನಿಮಿಷಗಳ ನಂತರ ಸ್ಟೌಆರಿಸಬೇಕು. ಬಾಣಲೆಯನ್ನು ತಟ್ಟೆಯಿಂದ ಮುಚ್ಚಬೇಕು. ಒಂದೈದು ನಿಮಿಷಗಳ ನಂತರ, ಮತ್ತೆ ಬಾಣಲೆಯಲ್ಲಿ ಕೈಯಾಡಿಸಿ, ಉಂಡೆ ಕಟ್ಟಬೇಕು. ತಂಬಿಟ್ಟು ತುಪ್ಪದ ಬತ್ತಿಯ ಆರತಿಗೆ, ನಂತರ ತಿನ್ನಲು ಸಿದ್ದವಾಗುತ್ತದೆ.

Perfect ಕ್ರಿಸ್ಪಿ ಪೂರಿ ಮಾಡುವ ಈಸಿ ವಿಧಾನ

2. ಗುಲ್ಪಾವಟೆ

ಚಿರೋಟಿ ರವೆ 1/2 ಕಪ್‌

ಬೆಲ್ಲ (ಪುಡಿ ಮಾಡಿದ್ದು) 1/4 ಕಪ್‌ + ಸ್ವಲ್ಪ

ಕಾಯಿತುರಿ 1/4 ಕಪ್‌

ತುಪ್ಪ 5 - 6 ಚಮಚ

ಗೋಡಂಬಿ, ದ್ರಾಕ್ಷಿ ಸ್ವಲ್ಪ

Shravana masa special sweets simple recipe

ಮೊದಲಿಗೆ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ರವೆಯನ್ನು ಹುರಿದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಅದಕ್ಕೆ ಕಾಯಿತುರಿ ಮತ್ತು ಎರಡು ಚಮಚ ನೀರು ಹಾಗೂ ಎರಡು ಚಮಚ ಹಾಲನ್ನು ಸೇರಿಸಿ ಕಲೆಸಿ ಹದಿನೈದು ನಿಮಿಷ ಬಿಡಬೇಕು. ಬೆಲ್ಲಕ್ಕೆ ಸ್ವಲ್ಪವೇ ನೀರು ಸೇರಿಸಿ ಒಲೆಯ ಮೇಲಿಟ್ಟು ಕರಗಿಸಿ ನಂತರ ಶೋಧಿಸಬೇಕು. ಶೋಧಿಸಿದ ಬೆಲ್ಲವನ್ನು ಒಲೆಯ ಮೇಲಿಟ್ಟು ಒಂದೆಳೆ ಪಾಕವನ್ನು ಮಾಡಿಕೊಳ್ಳಬೇಕು. ನಂತರ ಕಲೆಸಿದ ರವೆ, ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಚೆನ್ನಾಗಿ ಗಂಟಾಗದ ಹಾಗೆ ಕಲೆಸಬೇಕು. ಬಾಣಲೆಯ ಮೇಲೆ ತಟ್ಟೆಮುಚ್ಚಿ ಒಂದೈದು ನಿಮಿಷ ಬೇಯಿಸಬೇಕು. ನಂತರ ಒಲೆ ಆರಿಸಿ, ಮತ್ತೆ ಕಲೆಸಬೇಕು. ಉಂಡೆ ಮಾಡಿದರೆ ತಿನ್ನಲು ರೆಡಿ.

ಮಳೆಗಾಲದ ಸಂಜೆಗಳನ್ನು ಮಜವಾಗಿಸುವ ಪಕೋಡಾ 

3. ಬಾದಾಮಿ ಬರ್ಫಿ

ಬಾದಾಮಿ 200 ಗ್ರಾಮ್‌

(2 ಗಂಟೆಗಳ ಕಾಲ ನೀರಲ್ಲಿ ನೆನೆಸಿದ್ದು)

ಗೋಡಂಬಿ 100 ಗ್ರಾಮ್‌

(2 ಗಂಟೆಗಳ ಕಾಲ ಹಾಲಿನಲ್ಲಿ ನೆನೆಸಿದ್ದು)

ಸಿಹಿ ಸೇರಿಸಿರದ ಖೋವಾ 200 ಗ್ರಾಮ್‌

ಸಕ್ಕರೆ 1 3/4 ಕಪ್‌

ತುಪ್ಪ 1 1/2 ಕಪ್‌

Shravana masa special sweets simple recipe

ಮೊದಲಿಗೆ ಮಿಕ್ಸಿ ಜಾರಿನೊಳಗೆ ನೆನಸಿದ ಸಿಪ್ಪೆ ತೆಗೆದ ಬಾದಾಮಿ ಹಾಗೂ ನೆನೆಸಿದ ಗೋಡಂಬಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಣಲೆಗೆ ಹಾಕಿಕೊಂಡು, ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ ಕಾಯಿಸಬೇಕು. ಹಾಗೆಯೇ ಚೆನ್ನಾಗಿ ಕೈಯಾಡಿಸುತ್ತಾ ಗಂಟಾಗದ ಹಾಗೆ ನೋಡಿಕೊಳ್ಳಬೇಕು. ನಂತರ ತುಪ್ಪ ಹಾಗೂ ಖೋವಾವನ್ನು ಅದಕ್ಕೆ ಸೇರಿಸಬೇಕು. ಗಂಟಾಗದಂತೆ ಚೆನ್ನಾಗಿ ಕೈಯಾಡಿಸುತ್ತಿರಬೇಕು. ಬಾಣಲೆಯಲ್ಲಿನ ಮಿಶ್ರಣವು ಗಟ್ಟಿಯಾಗಿ, ಬಾಣಲೆಯ ಅಂಚಿನಿಂದ ಬಿಡುತ್ತಿದ್ದಂತೆಯೇ, ತುಪ್ಪ ಸವರಿದ ತಟ್ಟೆಗೆ ಅದನ್ನು ಹಾಕಿಕೊಳ್ಳಿ. ನಂತರ ಬಿಲ್ಲೆಗಳನ್ನು ಮಾಡಿದರೆ ಬಾದಾಮಿ ಬರ್ಫಿ ಸಿದ್ಧವಾಗುತ್ತದೆ.

ಹಲಸಿನ ಬಹುಬಗೆ ಖಾದ್ಯ;ಸಾಗರದ ಗೀತಾ ಹಲಸಿಂದ 400 ರೆಸಿಪಿ ಮಾಡ್ತಾರೆ! 

4. ಕರಿಗಡುಬು

ಕಾಯಿತುರಿ 1 1/2 ಕಪ್‌

ಬೆಲ್ಲ (ಪುಡಿ ಮಾಡಿದ್ದು) 1 ಕಪ್‌

ಮೈದಾಹಿಟ್ಟು/ ಚಿರೋಟಿ ರವೆ 1 ಕಪ್‌

ಕರಿಯಲು ಎಣ್ಣೆ ಅಗತ್ಯಕ್ಕೆ ತಕ್ಕಷ್ಟು

Shravana masa special sweets simple recipe

ಸಣ್ಣ ಉರಿಯಲ್ಲಿ ಬಾಣಲೆಗೆ ಕಾಯಿತುರಿ ಹಾಗು ಬೆಲ್ಲದ ಪುಡಿ ಸೇರಿಸಿ ಹುರಿಯಬೇಕು. ಮಿಶ್ರಣವು ಹೊಂದಿಕೊಂಡ ಮೇಲೆ ಒಲೆ ಆರಿಸಿ, ಬೇರೆ ಪಾತ್ರೆಗೆ ಹಾಕಿಕೊಳ್ಳಬೇಕು. ಹೂರಣ ಸಿದ್ಧವಾಯಿತು. ಚಿರೋಟಿ ರವೆ ಅಥವಾ ಮೈದಾಹಿಟ್ಟು ಹಾಗೂ ಚಿಟಿಕೆ ಉಪ್ಪು ಸೇರಿಸಬೇಕು. ಜತೆಗೆ ಎರಡು ಚಮಚ ಬಿಸಿ ಎಣ್ಣೆಯನ್ನೂ ಸೇರಿಸಬೇಕು. ನೀರನ್ನು ಸ್ವಲ್ಪ ಸ್ವಲ್ಪವೇ ಸೇರಿಸಿಕೊಂಡು ಗಟ್ಟಿಯಾಗಿ ಹಿಟ್ಟನ್ನು ಕಲೆಸಿಟ್ಟುಕೊಳ್ಳಬೇಕು. ಈಗ ಕಣಕ ಸಿದ್ಧವಾಯಿತು.

ನಂತರ ಕಣಕದ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಗುಂಡಗೆ ಲಟ್ಟಿಸಬೇಕು. ಒಂದು ಚಮಚ ಹೂರಣವನ್ನು ಮಧ್ಯದಲ್ಲಿಟ್ಟು ಅಂಚಿನ ಅರ್ಧ ಭಾಗಕ್ಕೆ ನೀರನ್ನು ಹಚ್ಚಬೇಕು. ಕಡುಬಿನಾಕರಕ್ಕೆ ಮಡಿಸಿ ಒತ್ತಬೇಕು. ಅದನ್ನು ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಬೇಕು. ಕರಿಗಡುಬು ಸಿದ್ಧವಾಗುತ್ತದೆ.

5. ಕಾಯಿ ಒಬ್ಬಟ್ಟು

ಹೂರಣಕ್ಕೆ:

ಕಾಯಿತುರಿ 2 ಕಪ್‌

ಬೆಲ್ಲ (ಪುಡಿ ಮಾಡಿದ್ದು) 1 ಕಪ್‌

ಅಕ್ಕಿ (ನೆನಸಿದ್ದು) 3 ಚಮಚ

ಕಣಕಕ್ಕೆ

ಚಿರೋಟಿ ರವೆ 1 ಕಪ್‌

ಚಿಟಿಕೆ ಉಪ್ಪು ಹಾಗೂ ಅರಿಶಿನ ಹಾಗೂ ಎಣ್ಣೆ

Shravana masa special sweets simple recipe

ಚಿರೋಟಿ ರವೆ, ಉಪ್ಪು, ಎಣ್ಣೆ ಹಾಗೂ ಅರಿಶಿನ ಸೇರಿಸಿ ನೀರನ್ನು ಸ್ವಲ್ಪ ಸ್ವಲ್ಪವೇ ಹಾಕಿ ಮೃದುವಾಗಿ ಹಿಟ್ಟನ್ನು ಕಲೆಸಿಟ್ಟುಕೊಳ್ಳಬೇಕು. ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ ಒಂದೆರಡು ಗಂಟೆ ಹಿಟ್ಟನ್ನು ನೆನೆಸಬೇಕು. ನೆನೆಸಿದ ಅಕ್ಕಿ ಹಾಗೂ ಕಾಯಿತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಪುಡಿ ಮಾಡಿದ ಬೆಲ್ಲಕ್ಕೆ ರುಬ್ಬಿದ್ದನ್ನು ಸೇರಿಸಿ ಬಾಣಲೆಯಲ್ಲಿ ಚೆನ್ನಾಗಿ

ಗಟ್ಟಿಯಾಗುವವರೆಗೂ ಹುರಿದುಕೊಳ್ಳಬೇಕು. ಆರಿದ ನಂತರ ಅದನ್ನು ಉಂಡೆಗಳಾಗಿ ಮಾಡಿಕೊಳ್ಳಬೇಕು.

ಕಣಕದ ಸಣ್ಣ ಉಂಡೆಯ ಮಧ್ಯೆ ಹೂರಣದ ಉಂಡೆಯನ್ನು ಇಟ್ಟು, ಬಾಳೆಎಲೆ ಅಥವಾ ಅಂಟಿಕೊಳ್ಳದ ಕಾಗದದ ಮೇಲೆ ತೆಳ್ಳಗೆ ಲಟ್ಟಿಸಿಕೊಳ್ಳಬೇಕು. ಕಾದ ಕಾವಲಿಯ ಮೇಲೆ ಹಾಕಿ ಎಣ್ಣೆ ಹೊಯ್ದು ಎರಡೂ ಕಡೆಯಲ್ಲೂ ಚೆನ್ನಾಗಿ ಬೇಯಿಸಬೇಕು. ಬಿಸಿ ಬಿಸಿ ಕಾಯಿ ಒಬ್ಬಟ್ಟು ಸಿದ್ಧವಾಗುತ್ತದೆ.

Latest Videos
Follow Us:
Download App:
  • android
  • ios