ಶಿವನಿಂದ ಕತ್ತರಿಸಲ್ಪಟ್ಟ ಗಣೇಶನ ಮೂಲ ತಲೆ ಎಲ್ಲಿದೆ ಎಂಬುದರ ಬಗ್ಗೆ ಶಿವ ಪುರಾಣ ಮತ್ತು ಇತರ ನಂಬಿಕೆಗಳು ವಿಭಿನ್ನ ಕಥೆಗಳನ್ನು ಹೇಳುತ್ತವೆ. ಉತ್ತರಾಖಂಡದ ಪಾತಾಳ ಭುವನೇಶ್ವರ ಗುಹೆಯಲ್ಲಿರುವ ಆದಿ ಗಣೇಶನೇ ಆ ಅಸಲಿ ತಲೆ ಎಂಬುದು ಪ್ರಮುಖ ನಂಬಿಕೆಯಾಗಿದೆ. ಇದರ ಜೊತೆಗೆ ಗಂಗೆಯಲ್ಲಿ ಮುಳುಗಿದೆ ಅಥವಾ ಶಿವಲಿಂಗದಲ್ಲಿ ಲೀನವಾಗಿದೆ ಎಂಬ ನಂಬಿಕೆಗಳೂ ಇವೆ.
ಈಗ ಎಲ್ಲೆಲ್ಲೂ ಗಣೇಶ ಚತುರ್ಥಿಯ ಸಂಭ್ರಮ. ಗಜಮುಖನಾಗಿರುವ ಗಣೇಶ ಹಿಂದೂ ಧರ್ಮದಲ್ಲಿ ಬಹುಮುಖ್ಯ ದೇವತೆ ಎನ್ನಿಸಿಕೊಂಡಿದ್ದು, ಪ್ರಥಮ ಪೂಜೆ ಈತನಿಗೇ ಸಲ್ಲುತ್ತದೆ. ಪುರಾಣಗಳ ಪ್ರಕಾರ, ಗಣೇಶನಿಗೆ ಆನೆಯ ತಲೆ ಬಂದದ್ದು ಹೇಗೆ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದದ್ದೇ. ಪಾರ್ವತಿ ಸ್ನಾನಕ್ಕೆ ಹೋಗುವ ಸಮಯದಲ್ಲಿ ಗಣೇಶನನ್ನು ಸ್ಥಾಪಿಸಿ, ಯಾರನ್ನೂ ಒಳಗೆ ಬಿಡದಂತೆ ಹೇಳಿ ಹೋಗಿರುತ್ತಾಳೆ. ಅಲ್ಲಿಗೆ ಶಿವ ಬಂದಾಗ, ಗಣೇಶ ಆತ ಯಾರು ಎನ್ನೋದು ತಿಳಿಯದೇ ಒಳಗೆ ಬಿಡುವುದೇ ಇಲ್ಲ. ಕುಪಿತಗೊಂಡ ಶಿವ ಆತನ ರುಂಡವನ್ನೇ ಛೇದಿಸುತ್ತಾನೆ.
ಕೊನೆಗೆ, ಪಾರ್ವತಿ ಅಳುತ್ತಾ ಬಂದು, ಈಗ ನಮ್ಮ ಪುತ್ರನೇ ಎಂದಾಗ, ಶಾಂತಗೊಂಡಿದ್ದ ಶಿವನಿಗೆ ಚಡಪಡಿಕೆ ಶುರುವಾಗುತ್ತದೆ. ತನ್ನ ಗಣಗಳನ್ನು ಕಳುಹಿಸಿ ಯಾರು ಮೊದಲು ಕಾಣಿಸುತ್ತಾರೋ ಅವರ ತಲೆಯನ್ನು ತಂದು ಜೋಡಿಸುವಂತೆ ಆದೇಶಿಸುತ್ತಾನೆ. ಅದರಂತೆ ಆ ಗಣಗಳಿಗೆ ಕಾಣಿಸುವುದು ಆನೆಯ ತಲೆ. ಆನೆಯನ್ನು ತಂದು ಗಣಪತಿಗೆ ಜೋಡಿಸಲಾಗುತ್ತದೆ. ಅದಕ್ಕೆ ಶಿವ ಜೀವ ತುಂಬುತ್ತಾನೆ. ಅಲ್ಲಿಗೆ ಗಣೇಶ, ಗಜಮುಖನಾಗುತ್ತಾನೆ.
ಶಿವ ಪುರಾಣ ಹೇಳುವುದೇನು?
ಹಾಗಿದ್ದರೆ ಗಣೇಶನ ಅಸಲಿ ತಲೆ ಎಲ್ಲಿದೆ ಎನ್ನುವ ಪ್ರಶ್ನೆ ಹಲವರನ್ನು ಕಾಡುವುದು ಇದೆ. ಶಿವ ಪುರಾಣದ ಪ್ರಕಾರ, ಶಿವನು ಗಣೇಶನ ತಲೆಯನ್ನು ಎಷ್ಟು ಕೋಪದಿಂದ ಕತ್ತರಿಸಿದ್ದನೆಂದರೆ ಅವನ ತಲೆ ಭೂಮಿಯ ಮೇಲಿನ ಗುಹೆಯೊಳಗೆ ಬಿದ್ದಿತು ಎಂದು ಹೇಳಲಾಗಿದೆ. ಗಣೇಶನ ತಲೆ ಬಿದ್ದಂತಹ ಗುಹೆ ಉತ್ತರಾಖಂಡ ರಾಜ್ಯದ ಪಿಥೋರಗಢ ಜಿಲ್ಲೆಯಲ್ಲಿದ್ದು, ಇದರ ಹೆಸರು ಪಾತಾಳ ಭುವನೇಶ್ವರ (Patal Bhuvaneshwar). ಇಂದಿಗೂ ಸಹ, ಈ ಗುಹೆಯಲ್ಲಿ ಗಣೇಶನ ಕತ್ತರಿಸಿದ ತಲೆಯ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಇದನ್ನು ಆದಿ ಗಣೇಶ ಎನ್ನುತ್ತಾರೆ. ಇದರ ಮೇಲೆ 108 ಪಕಳೆಗಳಿರುವ ದಿವ್ಯ ಕಮಲವನ್ನು ರಚಿಸಲಾಗಿದೆ. ಅಲ್ಲಿಂದ ನಿರಂತರವಾಗಿ ನೀರು ಗಣೇಶನ ತಲೆಯ ಮೇಲೆ ಬೀಳುತ್ತಲೇ ಇರುತ್ತದೆ. ಈ ಗುಹೆಯಲ್ಲಿ ಕಂಡುಬರುವ ನಾಲ್ಕು ಕಲ್ಲುಗಳು ನಾಲ್ಕು ಯುಗಗಳನ್ನು ಪ್ರತಿನಿಧಿಸುತ್ತವೆ ಮತ್ತು ನಾಲ್ಕನೇ ಕಲ್ಲು ಕಲಿಯುಗದ ಸಂಕೇತವಾಗಿದೆ. ನಾಲ್ಕನೇ ಕಲ್ಲು ಗುಹೆಯ ಗೋಡೆಯನ್ನು ಮುಟ್ಟಿದ ದಿನ ಕಲಿಯುಗ ಕೊನೆಗೊಳ್ಳುತ್ತದೆ ಎಂಬ ಪೌರಾಣಿಕ ನಂಬಿಕೆ ಇದೆ.
ಇನ್ನು ಕೆಲವು ನಂಬಿಕೆಗಳು
ಕೆಲವು ನಂಬಿಕೆಗಳ ಪ್ರಕಾರ, ಶಿವನು ತನ್ನ ತ್ರಿಶೂಲದಿಂದ ಗಣೇಶನ ತಲೆಯನ್ನು ಕತ್ತರಿಸಿದಾಗ, ಆ ತಲೆ ಗಂಗೆಯಲ್ಲಿ ಮುಳುಗಿತು. ಗಂಗಾ ನದಿಯಲ್ಲಿ ವಹರಿಯುವುದರಿಂದ ಗಣೇಶನ ಮೂಲ ತಲೆ ಶಾಶ್ವತವಾಗಿ ಕಳೆದುಹೋಯಿತು ಎನ್ನುವ ನಂಬಿಕೆ ಕೂಡ ಇದೆ. ಇನ್ನೊಂದು ನಂಬಿಕೆಯ ಪ್ರಕಾರ, ಗಣೇಶನ ಕತ್ತರಿಸಿದ ತಲೆಯನ್ನು ದೇವರುಗಳು ಸ್ವರ್ಗಕ್ಕೆ ತೆಗೆದುಕೊಂಡು ಹೋಗಿ ಸುರಕ್ಷಿತವಾಗಿಟ್ಟರು. ಇನ್ನೂ ಕೆಲವು ತಂತ್ರ ಗ್ರಂಥಗಳ ಪ್ರಕಾರ, ಗಣೇಶನ ತಲೆಯು ದೈವಿಕ ಶಕ್ತಿಯಾಗಿ ರೂಪಾಂತರಗೊಂಡು ಶಿವಲಿಂಗದಲ್ಲಿ ವಿಲೀನವಾಯಿತು. ಶಿವಲಿಂಗದಲ್ಲಿ ಗಣೇಶ ಸೇರಿದುದರಿಂದ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ ಎಂದೂ ಸಹ ಕೆಲವು ಶಾಸ್ತ್ರಗಳು ಹೇಳುತ್ತವೆ. ಏಕೆಂದರೆ ಅವನ ಮೂಲ ತಲೆಯು ಶಿವನ ಶಕ್ತಿಯಲ್ಲಿ ಲೀನವಾಗಿದೆ. ಇದರಲ್ಲಿ ಯಾವುದು ನಿಜ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಈ ಎಲ್ಲಾ ನಂಬಿಕೆಗಳನ್ನು ಜನರು ನಂಬಿಕೊಂಡು ಬರುತ್ತಿದ್ದಾರೆ.


