Pitru Paksha 2026: ಅಶ್ವಯುಜ ಮಾಸದ ಕೃಷ್ಣ ಪಕ್ಷದ ಮೊದಲ ದಿನ ಪಿತೃಪಕ್ಷವು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಪಿತೃಗಳ ಆರಾಧನೆ, ಶ್ರಾದ್ಧ ಮತ್ತು ತರ್ಪಣದಂತಹ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ 16 ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಅಥವಾ ಹೊಸ ಕೆಲಸಗಳನ್ನು ಕೈಗೊಳ್ಳಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪಿತೃ ಪಕ್ಷದ ಆರಂಭ ಯಾವಾಗ?

ಪಿತೃ ಪಕ್ಷದ ಆರಂಭ ಸೆಪ್ಟೆಂಬರ್ 26ರಿಂದ ಆಗಲಿದೆ. 15 ತಿಥಿಗಳ ಈ ಅವಧಿಯಲ್ಲಿ ಪಿತೃಗಳಿಗೆ ತರ್ಪಣ, ಶ್ರಾದ್ಧ, ಪಿಂಡಪ್ರದಾನ, ದಾನ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ಮಾಡಲಾಗುತ್ತದೆ. ಪಿತೃಗಳಿಗಾಗಿ ಶ್ರಾದ್ಧ ಮಾಡುವುದರಿಂದ ಇದನ್ನು ಶ್ರಾದ್ಧ ಪಕ್ಷ ಎಂದೂ ಕರೆಯುತ್ತಾರೆ. ಆದರೆ ಪಿತೃ ಪಕ್ಷದ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಹುದೇ? ಹೊಸ ವಸ್ತುಗಳನ್ನು ಖರೀದಿಸುವುದು ಶುಭವೇ ಅಥವಾ ಅಶುಭವೇ? ಇದರ ಬಗ್ಗೆ ತಿಳಿಯೋಣ.

ಪಿತೃ ಪಕ್ಷದಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡಬಾರದು?

ಶಾಸ್ತ್ರದ ಪ್ರಕಾರ, ಪಿತೃ ಪಕ್ಷದ ಸಮಯದಲ್ಲಿ ಹೊಸ ಕಾರ್ಯಗಳನ್ನು ಆರಂಭಿಸುವುದನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ. ಈ ಅವಧಿಯಲ್ಲಿ ಜನರು ತಮ್ಮ ಅಗಲಿದ ಪೂರ್ವಜರನ್ನು ಸ್ಮರಿಸಿ, ಅವರಿಗಾಗಿ ಶ್ರಾದ್ಧ ಮತ್ತು ತರ್ಪಣದಂತಹ ವಿಧಿಗಳನ್ನು ನೆರವೇರಿಸುತ್ತಾರೆ. ವಿಷ್ಣು ಪುರಾಣದ ನಂಬಿಕೆಗಳ ಪ್ರಕಾರ, ಪಿತೃ ಪಕ್ಷದ ಸಂದರ್ಭದಲ್ಲಿ ಪಿತೃಗಳು ತಮ್ಮ ಸಂತತಿಯನ್ನು ಭೇಟಿಯಾಗಲು ಯಾವುದಾದರೂ ರೂಪದಲ್ಲಿ ಭೂಲೋಕಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಸಮಯವನ್ನು ಹೊಸ ಶುಭ ಕಾರ್ಯಗಳಿಗಿಂತ ಪಿತೃ ಸ್ಮರಣೆ ಮತ್ತು ಪೂಜೆಗೆ ಮೀಸಲಿಡುವ ಪರಂಪರೆ ಇದೆ.

ಪೂರ್ವಜರಿಗೆ ಕೃತಜ್ಞತೆ ಸಲ್ಲಿಸುವ ಸಮಯ

ಪಿತೃ ಪಕ್ಷವು ಪೂರ್ವಜರನ್ನು ಸ್ಮರಿಸಿ, ಅವರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಸಮಯವೆಂದು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಪರಿಗಣಿಸಲಾಗುತ್ತದೆ. ಶಾಸ್ತ್ರಗಳ ನಂಬಿಕೆಯಂತೆ, ಪಿತೃಗಳ ಆಶೀರ್ವಾದದಿಂದ ಕುಟುಂಬದಲ್ಲಿ ಸುಖ, ಸಮೃದ್ಧಿ, ಆರೋಗ್ಯ ಮತ್ತು ಪ್ರಗತಿ ದೊರೆಯುತ್ತದೆ. ಅದೇ ರೀತಿ ಪಿತೃಗಳು ಅಸಂತುಷ್ಟರಾಗಿದ್ದರೆ ಪಿತೃ ದೋಷ ಉಂಟಾಗಬಹುದು ಎಂಬ ನಂಬಿಕೆಯೂ ಇದೆ. ಇದರಿಂದ ಜೀವನದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆ, ಕುಟುಂಬದಲ್ಲಿ ಕಲಹ ಹಾಗೂ ಕೆಲಸಗಳಲ್ಲಿ ವಿಳಂಬ ಎದುರಾಗಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.

ಪಿತೃ ಪಕ್ಷದಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಉಳಿಸಿ

ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ, ವರ್ಷದ ಇತರ ಸಮಯಗಳಲ್ಲಿ ನಾವು ಮದುವೆ, ಗೃಹಪ್ರವೇಶ ಸೇರಿದಂತೆ ಹಲವು ಶುಭ ಕಾರ್ಯಗಳನ್ನು ಮಾಡುತ್ತೇವೆ. ಪ್ರತಿಯೊಂದು ಹೊಸ ಕಾರ್ಯಕ್ಕೂ ಹಣ, ಸಮಯ ಮತ್ತು ದೈಹಿಕ-ಮಾನಸಿಕ ಶಕ್ತಿ ಬೇಕಾಗುತ್ತದೆ. ಆದ್ದರಿಂದ ಪಿತೃ ಪಕ್ಷದ ಅವಧಿಯಲ್ಲಿ ಹೊಸ ಕಾರ್ಯಗಳನ್ನು ಆರಂಭಿಸುವ ಬದಲು, ಪಿತೃ ಪೂಜೆ, ತರ್ಪಣ, ದಾನ ಮತ್ತು ಕುಟುಂಬದ ಪೂರ್ವಜರ ಸ್ಮರಣೆಗೆ ಸಮಯ ನೀಡುವ ಸಂಪ್ರದಾಯ ಬೆಳೆದಿದೆ.

ಪಿತೃ ಪಕ್ಷದಲ್ಲಿ ಈ 9 ವಸ್ತುಗಳನ್ನು ಖರೀದಿಸಬೇಡಿ!

ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 10ರವರೆಗೆ ಇರಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಅವಧಿಯಲ್ಲಿ ಕೆಲವು ಹೊಸ ವಸ್ತುಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಈ ವಸ್ತುಗಳನ್ನು ಖರೀದಿಸುವುದರಿಂದ ಜೀವನದಲ್ಲಿ ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಆ ವಸ್ತುಗಳು ಯಾವುವು ಅನ್ನೋದನ್ನು ನೋಡೋಣ.

  • ಹೊಸ ಬಟ್ಟೆಗಳು
  • ಚಿನ್ನಾಭರಣ ಮತ್ತು ಇತರೆ ಆಭರಣಗಳು
  • ಹೊಸ ವಾಹನ
  • ಆಸ್ತಿ ಅಥವಾ ಜಮೀನು
  • ಹೊಸ ಪೊರಕೆ
  • ಸಾಸಿವೆ ಎಣ್ಣೆ
  • ಉಪ್ಪು
  • ಎಲೆಕ್ಟ್ರಾನಿಕ್ಸ್ ವಸ್ತುಗಳು
  • ಹೊಸ ಪೀಠೋಪಕರಣಗಳು

ಸಾಧ್ಯವಾದಷ್ಟು ಈ 15 ದಿನಗಳ ಕಾಲ ಈ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. ಜೊತೆಗೆ ನಿಮ್ಮ ಪಿತೃಗಳಿಗೆ ಪಿಂಡ ದಾನ, ಪೂಜೆ, ಶ್ರಾಧ್ಧವನ್ನು ಮಾಡಲು ಮರಿಬೇಡಿ.