Janmashtami 2026: ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜೆಯಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಆದರೆ ಪೂಜೆಗೆ ತುಳಸಿ ಬೇಕಿದ್ದರೂ ಜನ್ಮಾಷ್ಟಮಿ ದಿನವೇ ತುಳಸಿ ಎಲೆ ಕೀಳುವುದು ಸರಿಯೇ? ಯಾವ ದಿನಗಳಲ್ಲಿ ತುಳಸಿ ಕೀಳಬಾರದು, ಎಲೆಗಳನ್ನು ಹೇಗೆ ಕೀಳಬೇಕು ಮತ್ತು ಪೂಜೆಗೆ ಮುಂಚಿತವಾಗಿ ಏನು ಮಾಡಬೇಕು ಇಲ್ಲಿದೆ ಪ್ರಮುಖ ಮಾಹಿತಿ.
ಜನ್ಮಾಷ್ಟಮಿಯಂದು ತುಳಸಿ ಎಲೆಗಳನ್ನು ಯಾಕೆ ಕೀಳಬಾರದು?
ಜನ್ಮಾಷ್ಟಮಿಯಂದು ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ; ಬದಲಾಗಿ, ಎಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಬೇಕು ಮತ್ತು ಪೂಜೆಯ ಸಮಯದಲ್ಲಿ ಸರಿಯಾದ ಆಚರಣೆಗಳು ಮತ್ತು ಮಂತ್ರಗಳನ್ನು ಪಾಲಿಸಬೇಕು. ಅಷ್ಟಮಿ ದಿನ ನೀವು ಪಾಲಿಸಬೇಕಾದ ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ.
ಜನ್ಮಾಷ್ಟಮಿಯಂದು ಶ್ರೀಕೃಷ್ಣನನ್ನು ‘ಬಾಲ ಗೋಪಾಲ’ನ ರೂಪದಲ್ಲಿ ಪೂಜಿಸುವುದು ವಿಶೇಷ ಮಹತ್ವದ್ದಾಗಿದೆ. ಪೂಜೆಯ ಸಮಯದಲ್ಲಿ ತುಳಸಿ ಎಲೆಗಳನ್ನು ಅರ್ಪಿಸುವ ಸಂಪ್ರದಾಯವೂ ಇದೆ. ಈ ವರ್ಷ, ಸೆಪ್ಟೆಂಬರ್ 4 ರಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಆಚರಣೆಯಲ್ಲಿ ತುಳಸಿಯ ಪ್ರಾಮುಖ್ಯತೆಯನ್ನು ಗಮನಿಸಿದರೆ, ಜನ್ಮಾಷ್ಟಮಿಯ ದಿನದಂದು ತುಳಸಿ ಎಲೆಗಳನ್ನು ಕೀಳಬಹುದೇ ಎಂದು ಅನೇಕ ಜನರು ಪ್ರಶ್ನಿಸುತ್ತಾರೆ. ಧರ್ಮಗ್ರಂಥಗಳು ಈ ದಿನದಂದು ತುಳಸಿಯನ್ನು ಕೀಳದಂತೆ ಸಲಹೆ ನೀಡುತ್ತವೆ. ಕೃಷ್ಣನಿಗೆ ತುಳಸಿ ಅತ್ಯಂತ ಪ್ರಿಯವಾದ ವಸ್ತು. ಹಾಗಾಗಿ ಜನ್ಮಾಷ್ಟಮಿ ದಿನ ತುಳಸಿಗೆ ನೋವು ನೀಡಬಾರದು. ತುಳಸಿಗೆ ನೋವು ನೀಡಿದರೆ, ಕೃಷ್ಣನಿಗೂ ನೋವಾದಂತೆ. ಹಾಗಾಗಾಗಿ ಆ ದಿನ ತುಳಸಿ ಎಲೆಗಳನ್ನು ಕೀಳಬಾರದು.
ತುಳಸಿ ಎಲೆಗಳನ್ನು ಮುಂಚಿತವಾಗಿ ಕೀಳಬೇಕು
‘ಬ್ರಹ್ಮವೈವರ್ತ ಪುರಾಣ’ದ ಪ್ರಕಾರ, ಜನ್ಮಾಷ್ಟಮಿಯ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು. ಪೂಜಾ ವಿಧಿವಿಧಾನಗಳಿಗೆ ಮುಂಚಿತವಾಗಿ ತುಳಸಿ ಎಲೆಗಳನ್ನು ಕೀಳುವುದು ಉತ್ತಮ. ಕಿತ್ತುಹಾಕಿದ ತುಳಸಿ ಎಲೆಗಳು 11 ದಿನಗಳವರೆಗೆ 'ಹಾಳಾಗುವುದಿಲ್ಲ'. ಹಾಗಾಗಿ ಅಗತ್ಯವಿದ್ದಾಗ ಅವುಗಳನ್ನು ಸ್ವಚ್ಛಗೊಳಿಸಿ ಪೂಜೆಗೆ ಬಳಸಬಹುದು.
ಈ ದಿನಗಳಲ್ಲಿ ತುಳಸಿ ಕೀಳುವುದನ್ನು ತಪ್ಪಿಸಿ
ಶಾಸ್ತ್ರೀಯ ನಂಬಿಕೆಗಳ ಪ್ರಕಾರ, ಏಕಾದಶಿ, ಅಮವಾಸ್ಯೆ, ದ್ವಾದಶಿ, ಚತುರ್ದಶಿ, ಸಪ್ತಮಿ ಮತ್ತು ಭಾನುವಾರಗಳಂದು ತುಳಸಿ ಎಲೆಗಳನ್ನು ಕೀಳಬಾರದು. ಅಷ್ಟೇ ಅಲ್ಲ ಸ್ನಾನ ಮಾಡದೆ ಅಥವಾ ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳುವುದನ್ನು ಸಹ ನಿಷೇಧಿಸಲಾಗಿದೆ. ಇದರಿಂದ ನಿಮಗೆ ಕೆಟ್ಟದಾಗುತ್ತದೆ.
ತುಳಸಿಯನ್ನು ಎಲೆ ಕೀಳುವಾಗ ಈ ಮಂತ್ರಗಳನ್ನು ಹೇಳಿ
ತುಳಸಿ ಎಲೆಗಳನ್ನು ಕೀಳುವಾಗ, ‘ಮಾತಸ್ತುಳಸಿ ಗೋವಿಂದ ಹೃದಯಾನಂದಕರಿಣಿ ।ಪ್ರಸೀದ ಹರ ಮೇ ಪಾಪಂ ಸರ್ವವಿಷ್ಣುಪ್ರಿಯೇ ಶುಭೇ ॥ ಎನ್ನುವ ಮಂತ್ರ ಪಠಿಸಿ. ಈ ಮಂತ್ರದ ಅರ್ಥ ಓ ಮಾತಾ ತುಳಸಿ, ನೀವು ಭಗವಾನ್ ಗೋವಿಂದನಿಗೆ ಪ್ರಿಯರು ಮತ್ತು ನಾನು ನಿಮ್ಮನ್ನು ನಾರಾಯಣನ ಪೂಜೆಗೆ ಸ್ವೀಕರಿಸುತ್ತಿದ್ದೇನೆ.
ನಿಮ್ಮ ಉಗುರುಗಳಿಂದ ಎಲೆಗಳನ್ನು ಕೀಳಬೇಡಿ.
ತುಳಸಿ ಎಲೆಗಳನ್ನು ನಿಮ್ಮ ಉಗುರುಗಳಿಂದ ಕೀಳಬಾರದು ಅನ್ನೋದು ಯಾವಾಗಲೂ ನೆನಪಿರಲಿ. ಎಲೆಗಳನ್ನು ನಿಧಾನವಾಗಿ ಕೀಳಬೇಕು, ಈ ಪ್ರಕ್ರಿಯೆಯಲ್ಲಿ ಸಸ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಈ ರೀತಿಯಾಗಿ, ಒಬ್ಬರು ತುಳಸಿಯನ್ನು ಭಕ್ತಿಯಿಂದ ಅರ್ಪಿಸಬಹುದು ಮತ್ತು ಭಗವಾನ್ ಶ್ರೀ ಕೃಷ್ಣನನ್ನು ಪೂಜಿಸಬಹುದು.


