'ರಾಮಾಯಣ' ಪಾರ್ಟ್ 1 ಗ್ಲಿಂಪ್ಸ್ ಬಿಡುಗಡೆ ಆಮಂತ್ರಣದಲ್ಲಿ ಇರುವ ಯಶ್ ಸಹಿ ಇದೀಗ ಭಾರಿ ಸದ್ದು ಮಾಡ್ತಿದೆ. ಇವರ ಸಹಿ ನೋಡಿ ಅಭಿಮಾನಿಗಳು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಕಾರಣವೇನು ನೋಡಿ...
ಸ್ಯಾಂಡಲ್ವುಡ್ ಸ್ಟಾರ್ ಯಶ್ ಅವರು ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಬಾಲಿವುಡ್ಗೂ ಹಾರಿದ್ದು, ಅಲ್ಲೀಗ ಅವರ ರಾಮಾಯಣದ ಚಿತ್ರಕ್ಕಾಗಿ ಕನ್ನಡಿಗರು ಸೇರಿದಂತೆ ಇತರ ಭಾಷಾ ಅಭಿಮಾನಿಗಳೂ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಯಶ್ ಅವರು ಸದಾ ಕನ್ನಡದ ಪ್ರೀತಿ ತೋರುತ್ತಿರುವ ಬಗ್ಗೆ ಇದಾಗಲೇ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಏಕೆಂದರೆ, ಯಶ್ ಅವರು, ಎಲ್ಲಿಗೆ ಹೋದರೂ ಕನ್ನಡ ಭಾಷೆ ಮತ್ತು ಕನ್ನಡ ಪ್ರೇಮವನ್ನು ಎಂದಿಗೂ ಬಿಟ್ಟಿಲ್ಲ. ಕೆಲ ದಿನಗಳ ಹಿಂದೆ, ಮಹಿಳೆಯೊಬ್ಬರು ತಮ್ಮ ಹೊಸ ಕಾರಿನ ಮೇಲೆ ಸಹಿ ಹಾಕುವಂತೆ ಕೇಳಿದಾಗ ನಟ ಯಶ್, ಕನ್ನಡದಲ್ಲಿಯೇ 'ನಿಮ್ಮ ಯಶ್' ಎಂದು ಕನ್ನಡದಲ್ಲಿಯೇ ಸಹಿ ಹಾಕಿದ್ದರು. ಇದೀಗ ಮತ್ತೊಮ್ಮೆ ಕನ್ನಡದ ಪ್ರೇಮ ಮೆರೆದಿದ್ದಾರೆ ಯಶ್. ಅದು ರಾಮಾಯಣದ ಸಿನಿಮಾ ಮೂಲಕ.
'ರಾಮಾಯಣ' ಪಾರ್ಟ್ 1 ಗ್ಲಿಂಪ್ಸ್ ಬಿಡುಗಡೆ ಆಮಂತ್ರಣದಲ್ಲಿ ಈ ಚಿತ್ರದಲ್ಲಿ ನಟಿಸ್ತಿರುವವರು ಸೇರಿದಂತೆ ಹಲವು ತಾರೆಯರು ಇಂಗ್ಲಿಷ್‌ನಲ್ಲಿ ಸಹಿ ಮಾಡಿದ್ದಾರೆ. ಆದರೆ ಪುನಃ ಕನ್ನಡ ಪ್ರೇಮ ಮರೆದಿರುವ ಯಶ್ ಕನ್ನಡದಲ್ಲಿ ಸಹಿ ಮಾಡಿ ಗಮನ ಸೆಳೆದಿದ್ದಾರೆ. ಮೊನ್ನೆ, ‘ರಾಮಾಯಣ’ ಗ್ಲಿಂಪ್ಸ್ ಬಿಡುಗಡೆ ಆಗಿತ್ತು. ಇದು ದೇಶಾದ್ಯಂತ ಹಲವು ನಗರಗಳಲ್ಲಿ ಐಮ್ಯಾಕ್ಸ್ ಸ್ಕ್ರೀನ್ನಲ್ಲಿ ‘ರಾಮಾಯಣ’ ಗ್ಲಿಂಪ್ಸ್ ನೋಡಿ ಪ್ರೇಕ್ಷಕರು ಸಂಭ್ರಮಿಸಿದ್ದರು. ಯೂಟ್ಯೂಬ್ನಲ್ಲಿ ಕೋಟ್ಯಂತರ ಮಂದಿ ಇದಾಗಲೇ ಇದರ ವೀಕ್ಷಣೆ ಮಾಡಿದ್ದಾರೆ. ರಾಮಾಯಣ ಗ್ಲಿಂಪ್ಸ್ನ ಪೋಸ್ಟರ್ಗಳಲ್ಲಿ ಸಹಿ ಹಾಕುವ ಸಮಯದಲ್ಲಿ ಯಶ್ ಕನ್ನಡದ ಪ್ರೀತಿ ಮೆರೆದಿದ್ದಾರೆ.
ಇನ್ನು, ಯಶ್ ಅವರ ಬಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾದ ಬಗ್ಗೆ ಫ್ಯಾನ್ಸ್ಗೆ ಗೊತ್ತೇ ಇದೆ. ಇದರಲ್ಲಿ ನಟ ರಾವಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ತಿಳಿದೇ ಇದೆ. ನಿತೇಶ್ ತಿವಾರಿ ನಿರ್ದೇಶನ ಹಾಗೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಯಶ್ ನಟನಾಗಿಯೂ ಹಾಗೂ ನಿರ್ಮಾಪಕನಾಗಿಯೂ ಕಾಣಿಸಿಕೊಳ್ಳುತ್ತಿರುವುದು ಬಹು ವಿಶೇಷ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ. ಸಿನಿಮಾ ಶೂಟಿಂಗ್‌ನಲ್ಲಿ ಬೃಹತ್ ಸೆಟ್‌ಗಳು ತಲೆಯೆತ್ತಿ ನಿಂತಿದ್ದು, ಆಕ್ಷನ್ ಸೀಕ್ವೆನ್ಸ್‌ಗಳನ್ನು ಹಾಲಿವುಡ್‌ನ ಖ್ಯಾತ ಮ್ಯಾಡ್ ಮ್ಯಾಕ್ಸ್ ಸ್ಟಂಟ್ ನಿರ್ದೇಶಕ ಗೈ ನೋರಿಸ್ ನಿರ್ದೇಶನ ಮಾಡುತ್ತಿದ್ದಾರೆ. ರಾಮಾಯಣ ಸಿನಿಮಾ 2 ಭಾಗಗಳಲ್ಲಿ ಮೂಡಿ ಬರಲಿದ್ದು, ಮೊದಲ ಭಾಗ 2026ರಲ್ಲಿ ರಿಲೀಸ್ ಆಗಲಿದೆ. ಎರಡನೇ ಭಾಗ 2027ರಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಹೈ ವೋಲ್ಟೇಜ್ ಆಕ್ಷನ್ ಸೀನ್‌ಗಳನ್ನ ಈಗಾಗಲೇ ಚಿತ್ರೀಕರಣ ಮಾಡುತ್ತಿದ್ದು ಭಾರತೀಯ ಸಿನಿಮಾರಂಗದಲ್ಲೇ ಹಿಂದೆಂದೂ ಕಂಡಿರದ ಆಕ್ಷನ್ ಸೀನ್ ಗಳನ್ನು ಶೂಟ್ ಮಾಡಲು ತಂಡದೊಡನೆ ಸೇರಿ ಪ್ಲಾನ್ ಮಾಡುತ್ತಿದ್ದಾರೆ ಯಶ್ ಎನ್ನಲಾಗುತ್ತಿದೆ. ರಾಮಾಯಣ ಭಾಗ 1 ಸುಮಾರು 60-70 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರೆ ಇವರು. ಅದೇ ಇನ್ನೊಂದೆಡೆ, ಟಾಕ್ಸಿಕ್ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ. ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರವು 2026ರ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇದು ಯಶ್ ಅವರ 19ನೇ ಸಿನಿಮಾವಾಗಿದೆ ಮತ್ತು ಗೀತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ. ಇದರ ಜೊತೆಗೆ ಕೆಜಿಎಫ್-3 ಬಗ್ಗೆಯೂ ಅಭಿಮಾನಿಗಳು ಕಾಯುತ್ತಿದ್ದಾರೆ.
