ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ರಾಮಾಯಣ ಮತ್ತು ಟಾಕ್ಸಿಕ್ ಚಿತ್ರದ ಜೊತೆಗೆ ಕೆಜಿಎಫ್-3 ಚಿತ್ರದ ಬಗ್ಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ಇದರ ನಡುವೆಯೇ ನಟನ ಸಿನಿಮಾದಲ್ಲಿ ದಿಢೀರ್ ಕುಸಿತದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಸದ್ದು ಮಾಡುತ್ತಿದೆ. ಏನದು?
ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಲುಕ್ ಈಚೆಗೆ ರಿವಿಲ್ ಆಗಿದೆ. ಇದರಲ್ಲಿ ನಟ ರಾವಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ತಿಳಿದೇ ಇದೆ. ನಿತೇಶ್ ತಿವಾರಿ ನಿರ್ದೇಶನ ಹಾಗೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಯಶ್ ನಟನಾಗಿಯೂ ಹಾಗೂ ನಿರ್ಮಾಪಕನಾಗಿಯೂ ಕಾಣಿಸಿಕೊಳ್ಳುತ್ತಿರುವುದು ಬಹು ವಿಶೇಷ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ. ಸಿನಿಮಾ ಶೂಟಿಂಗ್‌ನಲ್ಲಿ ಬೃಹತ್ ಸೆಟ್‌ಗಳು ತಲೆಯೆತ್ತಿ ನಿಂತಿದ್ದು, ಆಕ್ಷನ್ ಸೀಕ್ವೆನ್ಸ್‌ಗಳನ್ನು ಹಾಲಿವುಡ್‌ನ ಖ್ಯಾತ ಮ್ಯಾಡ್ ಮ್ಯಾಕ್ಸ್ ಸ್ಟಂಟ್ ನಿರ್ದೇಶಕ ಗೈ ನೋರಿಸ್ ನಿರ್ದೇಶನ ಮಾಡುತ್ತಿದ್ದಾರೆ. ರಾಮಾಯಣ ಸಿನಿಮಾ 2 ಭಾಗಗಳಲ್ಲಿ ಮೂಡಿ ಬರಲಿದ್ದು, ಮೊದಲ ಭಾಗ 2026ರಲ್ಲಿ ರಿಲೀಸ್ ಆಗಲಿದೆ. ಎರಡನೇ ಭಾಗ 2027ರಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಹೈ ವೋಲ್ಟೇಜ್ ಆಕ್ಷನ್ ಸೀನ್‌ಗಳನ್ನ ಈಗಾಗಲೇ ಚಿತ್ರೀಕರಣ ಮಾಡುತ್ತಿದ್ದು ಭಾರತೀಯ ಸಿನಿಮಾರಂಗದಲ್ಲೇ ಹಿಂದೆಂದೂ ಕಂಡಿರದ ಆಕ್ಷನ್ ಸೀನ್ ಗಳನ್ನು ಶೂಟ್ ಮಾಡಲು ತಂಡದೊಡನೆ ಸೇರಿ ಪ್ಲಾನ್ ಮಾಡುತ್ತಿದ್ದಾರೆ ಯಶ್ ಎನ್ನಲಾಗುತ್ತಿದೆ. ರಾಮಾಯಣ ಭಾಗ 1 ಸುಮಾರು 60-70 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರೆ ಇವರು. ಅದೇ ಇನ್ನೊಂದೆಡೆ, ಟಾಕ್ಸಿಕ್ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ. ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರವು 2026ರ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇದು ಯಶ್ ಅವರ 19ನೇ ಸಿನಿಮಾವಾಗಿದೆ ಮತ್ತು ಗೀತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ. ಇದರ ಜೊತೆಗೆ ಕೆಜಿಎಫ್-3 ಬಗ್ಗೆಯೂ ಅಭಿಮಾನಿಗಳು ಕಾಯುತ್ತಿದ್ದಾರೆ.
ಆದರೆ, ಇದರ ಹೊರತಾಗಿಯೂ ಯಶ್ ಅವರ ಸಿನಿಮಾದಲ್ಲಿ ದಿಢೀರ್ ಕುಸಿತವಾಗಲು ಕಾರಣವೇನು ಎಂದು ಅವರ ಅಭಿಮಾನಿಗಳು ತಲೆಬಿಸಿ ಮಾಡಿಕೊಂಡಿದ್ದಾರೆ. ಯಶ್ ಅವರು, 2008-16ರವರೆಗೆ 16 ಸಿನಿಮಾಗಳಲ್ಲಿ ನಟಿಸಿದ್ದರೆ, 2016ರಿಂದ ಇಲ್ಲಿಯವರೆಗೆ ಎರಡೇ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಭಾರಿ ಆತಂಕವೂ ತಂದಿದೆ. ತಮ್ಮ 'ದೇವರನ್ನು' ನೋಡಲು ತುದಿಗಾಲಿನಲ್ಲಿ ನಿಂತಿರುವ ಈ ಅಭಿಮಾನಿಗಳು ನಟನಿಗೆ ಈ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಮೊಗ್ಗಿನ ಮನಸು, ಮೊದಲ ಸಲ, ಕಿರಾತಕ, ಲಕ್ಕಿ, ಗೂಗ್ಲಿ ಸೇರಿದಂತೆ ಕೆಲವು ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೊಟ್ಟಿರುವ ಯಶ್ ಅವರ ಕೆಲವು ಚಿತ್ರಗಳು ಫ್ಲಾಪ್ ಆಗಿದ್ದೂ ಇವೆ. ಆದರೂ ಏನೇ ಆದರೂ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಚರ್ಚೆ ಶುರುವಾಗಿದೆ. ಅನ್ನೋನ್ ಟ್ರೋಲರ್ಸ್ ಹೆಸರಿನಲ್ಲಿ ಖಾತೆಯಲ್ಲಿ ಅಭಿಮಾನಿಗಳು ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ಇದಾಗಲೇ ಯಶ್ ಅವರು ಒಮ್ಮೆ, ಕೊಟ್ಟರೆ ಜನರು ನೋಡುವಂಥ ಚಿತ್ರಗಳನ್ನು ಕೊಡಬೇಕು ಎನ್ನುವ ಮೂಲಕ ನಟ ಮಾಡುವ ಸಿನಿಮಾಗಳ ಸಂಖ್ಯೆ ಮುಖ್ಯವಲ್ಲ, ಬದಲಿಗೆ ಮಾಡಿರುವ ಸಿನಿಮಾ ಎಷ್ಟರಮಟ್ಟಿಗೆ ಸಕ್ಸಸ್ ಕಾಣುತ್ತದೆ ಎನ್ನುವುದು ಮುಖ್ಯ ಎಂದು ಪರೋಕ್ಷವಾಗಿ ತಿಳಿಸಿದ್ದರು. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತನಾಡುತ್ತಾರೆ. 'ಕನ್ನಡ ಸಿನಿಮಾ ನೋಡಲ್ಲ, ಬೇರೆ ಭಾಷೆಯದ್ದಾದರೆ ನೋಡ್ತಾರೆ ಅಂತ ಗೋಳಾಡ್ತಿವಿ. ನಾನೂ ಈ ಹಿಂದೆ ಭಾಷಣದಲ್ಲಿ ಇದನ್ನೇ ಹೇಳಿದ್ದೆ, ಪ್ರೇಕ್ಷಕರು ಥಿಯೇಟರ್ಗಳಿಗೆ ಬರ್ತಿಲ್ಲ, ಕನ್ನಡ ಬದ್ಲು ಬೇರೆ ಸಿನಿಮಾ ನೋಡ್ತಾರೆ ಎಂದೆಲ್ಲಾ ಪ್ರೇಕ್ಷಕರನ್ನೇ ಬೈದುಕೊಳ್ತಿದ್ದೆ. ಆಮೇಲೆ ಯೋಚನೆ ಮಾಡಿದಾಗ ಗೊತ್ತಾಗಿದ್ದು ಇಷ್ಟೆ. ನಮ್ಮ ಕೆಲಸ ನಾವು ಸರಿಯಾಗಿ ಮಾಡಿದ್ರೆ ಅಭಿಮಾನಿಗಳ ನಮ್ಮ ಕೈ ಬಿಡಲ್ಲ, ಅವರು ನಮ್ಮನ್ನು ಕಾಪಾಡುತ್ತಾರೆ. ನಾವು ಚೆನ್ನಾಗಿರುವ ಸಿನಿಮಾ ಕೊಡಬೇಕು ಅಷ್ಟೇ. ನಮಗೆ ನಿಜವಾದ ಗೆಲುವು ಸಿಗುವುದು ನಾವು ಮಾಡುವ ಕೆಲಸದಿಂದ. ಕಷ್ಟಪಟ್ಟು ಕೆಲಸ ಮಾಡಬೇಕು, ಅಪ್ಗ್ರೇಡ್ ಆಗಬೇಕು. ಅದನ್ನು ಬಿಟ್ಟು ಸಿನಿಮಾ ನೋಡಲು ಜನ ಬರುವುದಿಲ್ಲ ಎನ್ನುವುದು ಸುಳ್ಳು, ಚೆನ್ನಾಗಿರುವ ಸಿನಿಮಾ ಕೊಟ್ಟು ನೋಡಿ' ಎಂದಿದ್ದರು. ಆದ್ದರಿಂದ ಸಂಖ್ಯೆ ಕಡಿಮೆಯಾದರೂ ಒಳ್ಳೆಯ ಚಿತ್ರ ಕೊಡುವ ಲೆಕ್ಕಾಚಾರದಲ್ಲಿದ್ದಾರೆ ಯಶ್ ಎನ್ನುವುದು ಇದರಿಂದ ಸಾಬೀತಾಗುತ್ತದೆ.
