Rocking Star Yash Toxic: "ಲೇಡೀಸ್ ಆಂಡ್ ಲೇಡಿಸ್ ಒಬ್ಬೊಬ್ರಾಗೇ ಬನ್ನಿ" ಎಂಬ ಮಾಸ್ ಡೈಲಾಗ್ ಮೂಲಕ ಯಶ್ ಅವರು ಸಿನಿಮಾದಲ್ಲಿರುವ ಪವರ್‌ಫುಲ್ ನಾಯಕಿಯರನ್ನು ಪರಿಚಯಿಸಿದ್ದಾರೆ. ಈ ಒಂದು ಡೈಲಾಗ್ ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' (Toxic) ಸಿನಿಮಾ ಘೋಷಣೆಯಾದ ದಿನದಿಂದಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೆಜಿಎಫ್ ಯಶಸ್ಸಿನ ನಂತರ ಯಶ್ ಯಾವ ರೀತಿಯ ಕಥೆಯನ್ನು ಆಯ್ದುಕೊಳ್ಳಬಹುದು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಗುತ್ತಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ 'ಟಾಕ್ಸಿಕ್' ಚಿತ್ರತಂಡ ಬಿಡುಗಡೆ ಮಾಡಿದ ಮೊದಲನೇ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು. ಇದೀಗ 'ಟಾಕ್ಸಿಕ್' ಚಿತ್ರತಂಡ ನಾಯಕಿಯರ ಪರಿಚಯದ ಟೀಸರ್ ಬಿಡುಗಡೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"ಲೇಡೀಸ್ ಆಂಡ್ ಲೇಡಿಸ್ ಒಬ್ಬೊಬ್ರಾಗೇ ಬನ್ನಿ!"

'ಟಾಕ್ಸಿಕ್' ಟೀಸರ್‌ನಲ್ಲಿ ಎಲ್ಲರ ಗಮನ ಸೆಳೆದಿರುವುದು ಯಶ್ ಅವರ ಖಡಕ್ ಧ್ವನಿ. "ಲೇಡೀಸ್ ಆಂಡ್ ಲೇಡಿಸ್ ಒಬ್ಬೊಬ್ರಾಗೇ ಬನ್ನಿ" ಎಂಬ ಮಾಸ್ ಡೈಲಾಗ್ ಮೂಲಕ ಯಶ್ ಅವರು ಸಿನಿಮಾದಲ್ಲಿರುವ ಪವರ್‌ಫುಲ್ ನಾಯಕಿಯರನ್ನು ಪರಿಚಯಿಸಿದ್ದಾರೆ. ಈ ಒಂದು ಡೈಲಾಗ್ ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತಿದೆ. ಯಶ್ ಅವರ ವಿಭಿನ್ನ ಮ್ಯಾನರಿಸಂ ಮತ್ತು ಈ ಡೈಲಾಗ್ ಡೆಲಿವರಿ ಈಗ ಅಭಿಮಾನಿಗಳ ಫೇವರೆಟ್ ಆಗಿದೆ.

ಐವರು ಸ್ಟಾರ್ ನಾಯಕಿಯರ ಎಂಟ್ರಿ

ಈ ಟೀಸರ್‌ನ ಹೈಲೈಟ್ ಎಂದರೆ ಚಿತ್ರದಲ್ಲಿರುವ ಐವರು ಸ್ಟಾರ್ ನಾಯಕಿಯರ ಎಂಟ್ರಿ. ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ, ಬಾಲಿವುಡ್ ಸುಂದರಿಯರಾದ ಕಿಯಾರಾ ಅಡ್ವಾನಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಸ್ಯಾಂಡಲ್‌ವುಡ್‌ನ ಇಂದಿನ ಕ್ರಶ್ ರುಕ್ಮಿಣಿ ವಸಂತಾ ಈ ಚಿತ್ರದ ಪ್ರಮುಖ ಆಕರ್ಷಣೆ. ಇಷ್ಟೊಂದು ದೊಡ್ಡ ಮಟ್ಟದ ತಾರಾಗಣ ಒಂದೇ ಸಿನಿಮಾದಲ್ಲಿ ಒಂದಾಗುತ್ತಿರುವುದು ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಸಂಗತಿ. ಪ್ರತಿಯೊಬ್ಬ ನಟಿಗೂ ಸಿನಿಮಾದಲ್ಲಿ ವಿಶಿಷ್ಟವಾದ ಮತ್ತು ಕಥೆಗೆ ತಿರುವು ನೀಡುವಂತಹ ಪಾತ್ರಗಳಿವೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರ ಮೇಕಿಂಗ್ ಶೈಲಿ ಮತ್ತು ಯಶ್ ಅವರ ಮಾಸ್ ಇಮೇಜ್ ಸೇರಿ 'ಟಾಕ್ಸಿಕ್' ಚಿತ್ರವನ್ನು ಒಂದು ಗ್ಲೋಬಲ್ ಸಿನಿಮಾವನ್ನಾಗಿ ಮಾಡುತ್ತಿದೆ. ಕೆವಿಎನ್ ಪ್ರೊಡಕ್ಷನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

ಅಂದಹಾಗೆ, ಅಭಿಮಾನಿಗಳು ಕ್ಯಾಲೆಂಡರ್‌ನಲ್ಲಿ ದಿನಾಂಕವನ್ನು ಗುರುತು ಹಾಕಿಕೊಳ್ಳುವ ಸಮಯ ಬಂದಿದೆ. ಹೌದು. ಈ ಅದ್ಧೂರಿ ಆಕ್ಷನ್ ಸಿನಿಮಾ ಆಗಸ್ಟ್ 26 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಒಟ್ಟಿನಲ್ಲಿ, ಯಶ್ ಈ ಬಾರಿ ಕೇವಲ ಮಾಸ್ ಮಾತ್ರವಲ್ಲದೆ, ಒಂದು ಪವರ್‌ಫುಲ್ ಸ್ಟಾರ್ ಕ್ಯಾಸ್ಟ್ ಮೂಲಕ ಬಾಕ್ಸ್ ಆಫೀಸ್ ಧೂಳಿಪಟ ಮಾಡಲು ಸಜ್ಜಾಗಿದ್ದಾರೆ. ಇಡೀ ದೇಶವೇ ಈಗ 'ಟಾಕ್ಸಿಕ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದೆ.

ಮಕ್ಕಳಿಗೆ ಮತ್ತು ಹಿರಿಯರಿಗೆ ವಿಶೇಷ ಸೂಚನೆ

ಟೀಸರ್ ಬಿಡುಗಡೆ ಮಾಡುವ ಮೊದಲು ಯಶ್ ಮತ್ತು ಚಿತ್ರತಂಡ 'Kids Stay Away' (ಮಕ್ಕಳೇ ದೂರವಿರಿ) ಎಂಬ ವಿಶೇಷ ಎಚ್ಚರಿಕೆಯನ್ನು ನೀಡಿದ್ದಾರೆ. "ಪೋಷಕರೇ, ನಿಮ್ಮ ಮಕ್ಕಳು ಈ ಟೀಸರ್‌ನಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಿ. ತಾತ-ಅಜ್ಜಿಯರೇ, ನಿಮ್ಮ ಮೊಮ್ಮಕ್ಕಳು ಇದನ್ನು ನೋಡದಂತೆ ಎಚ್ಚರವಹಿಸಿ. ಇನ್ನು ಮುತ್ತಾತ-ಮುತ್ತಜ್ಜಿಯರು ಈ ಟೀಸರ್ ಅನ್ನು ನೋಡಬೇಕೆಂದರೆ ಅದು ನಿಮ್ಮ ಸ್ವಂತ ಜವಾಬ್ದಾರಿ!" ಎಂದು ಹೇಳುವ ಮೂಲಕ ಚಿತ್ರತಂಡ ಟೀಸರ್ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಟೈಲ್, ಸಸ್ಪೆನ್ಸ್ ಮತ್ತು ಗ್ಲಾಮರ್‌ನ ಅನಾವರಣ

ಸ್ಟೈಲ್, ಸಸ್ಪೆನ್ಸ್ ಮತ್ತು ಗ್ಲಾಮರ್‌ನಿಂದ ಕೂಡಿರುವ ಈ ಟೀಸರ್‌ನಲ್ಲಿ ಐವರು ಸ್ಟಾರ್ ನಟಿಯರ ಪಾತ್ರಗಳು ಅಚ್ಚರಿ ಮೂಡಿಸುವಂತಿವೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು 'ಗಂಗಾ' ಎಂಬ ಅತ್ಯಂತ ಪವರ್ ಫುಲ್ ಮತ್ತು ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ ಅವರು 'ನಾಡಿಯಾ' ಎಂಬ ಹೆಸರಿನಲ್ಲಿ ಗ್ಲಾಮರಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್ ಚಲುವೆ ರುಕ್ಮಿಣಿ ವಸಂತ್ ಅವರು 'ಮೆಲ್ಲಿಸಾ' ಎಂಬ ಪಾತ್ರದ ಮೂಲಕ ಕನ್ನಡಿಗರ ಗಮನ ಸೆಳೆದಿದ್ದಾರೆ. ನಟಿ ಹುಮಾ ಖುರೇಶಿ ಅವರು 'ಎಲಿಜೆಬೆತ್' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡರೆ, ತಾರಾ ಸುತಾರಿಯಾ ಅವರು 'ರೆಬೆಕಾ' ಎಂಬ ಪಾತ್ರದ ಮೂಲಕ ಅಖಾಡಕ್ಕೆ ಇಳಿದಿದ್ದಾರೆ.

ಒಟ್ಟಾರೆಯಾಗಿ, ಈ ಟೀಸರ್ ಚಿತ್ರದಲ್ಲಿನ ಮಹಿಳಾ ಪಾತ್ರಗಳು ಎಷ್ಟು ಪವರ್‌ಫುಲ್ ಆಗಿವೆ ಎಂಬುದನ್ನು ಸಾಬೀತುಪಡಿಸಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಆಕಾಶಕ್ಕೆ ಮುಟ್ಟಿಸಿದೆ.

YouTube video player