Toxic: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ದಿನದಿಂದ ದಿನಕ್ಕೆ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ದಿನದಿಂದ ದಿನಕ್ಕೆ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೇ ಚಿತ್ರತಂಡ ಆಗಸ್ಟ್ 26, 2026ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿತ್ತು. ಇದೀಗ ಬಿಡುಗಡೆಯ ಕೌಂಟ್‌ಡೌನ್ ಆರಂಭವಾಗಿರುವ ಬೆನ್ನಲ್ಲೇ, ಚಿತ್ರದ ಮೊದಲ ಪ್ರಮುಖ ಪ್ರಮೋಶನಲ್ ಕಂಟೆಂಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವಂತೆ ನಟ ಯಶ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕುತೂಹಲಕಾರಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಕಾಮ್ ಡೌನ್! ಲೇಡಿಸ್ ಟೇಕ್ ಟೈಮ್ ಟು ಕಮ್! ನಾಳೆ, 01-07-2026, ಬೆಳಗ್ಗೆ 11:33ಕ್ಕೆ" ಎಂದು ಬರೆದು, "WHERE ARE THE LADIES, @thenameisyash?" ಎಂಬ ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಳೆ ಬಿಡುಗಡೆಯಾಗಲಿರುವ ಗ್ಲಿಂಪ್ಸ್, ಪೋಸ್ಟರ್ ಅಥವಾ ಚಿತ್ರದ ಪ್ರಮುಖ ಮಹಿಳಾ ಪಾತ್ರಗಳ ಪರಿಚಯ ಇರಬಹುದೇ ಎಂಬ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ಬಿಡುಗಡೆಯಾದ ಎರಡು ವಿಭಿನ್ನ ಲುಕ್‌ಗಳ ಪೋಸ್ಟರ್‌ಗಳಲ್ಲಿ ಯಶ್ ಅವರು 'ರಾಯ' ಮತ್ತು 'ಟಿಕೆಟ್' ಎಂಬ ಎರಡು ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ಆ ಪೋಸ್ಟರ್‌ಗಳ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದು, ಚಿತ್ರದ ಗಾಢ ಹಾಗೂ ಬಹು-ಪದರಗಳ ಕಥಾಹಂದರದ ಬಗ್ಗೆ ಸುಳಿವು ನೀಡಿತ್ತು. ಪೋಸ್ಟರ್ ಹಂಚಿಕೊಂಡ ವೇಳೆ, "ತಂದೆಯನ್ನು ಗೌರವಿಸು... #ಟಾಕ್ಸಿಕ್ 26-08-2026ರಂದು ಬಿಡುಗಡೆ" ಎಂಬ ಕ್ಯಾಪ್ಷನ್ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿತ್ತು.
ಹಲವು ಭಾಷೆಗಳಲ್ಲಿ ಬಿಡುಗಡೆ
ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಿರುವ ಟಾಕ್ಸಿಕ್, ಅವರ ಮತ್ತು ಯಶ್ ಅವರ ಮೊದಲ ಸಹಯೋಗವಾಗಿದೆ. ಆಕ್ಷನ್, ಡ್ರಾಮಾ ಹಾಗೂ ಭಾವನಾತ್ಮಕ ಅಂಶಗಳ ಸಂಗಮವಾಗಿರುವ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಸೇರಿದಂತೆ ಪ್ರಬಲ ತಾರಾಗಣ ಅಭಿನಯಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನೊಂದೆಡೆ, ಚಿತ್ರದ ಬಿಡುಗಡೆಗೆ ಆಯ್ಕೆ ಮಾಡಿರುವ ಆಗಸ್ಟ್ 26ರ ದಿನಾಂಕವೂ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ವರಮಹಾಲಕ್ಷ್ಮಿ, ರಕ್ಷಾ ಬಂಧನ ಹಾಗೂ ಓಣಂ ಹಬ್ಬಗಳ ಸಾಲುಸಾಲು ರಜಾದಿನಗಳ ಹಿನ್ನೆಲೆಯಲ್ಲಿ ದೇಶದಾದ್ಯಂತ ಉತ್ತಮ ಓಪನಿಂಗ್ ಪಡೆಯುವ ನಿರೀಕ್ಷೆಯಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭಕ್ಕೆ ಟಾಕ್ಸಿಕ್ ಸಜ್ಜಾಗಿದೆ.


