Yash Toxic Trailer Sparks Controversy: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್‌ ಫಾರ್ ಗ್ರೋನ್-ಅಪ್ಸ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾದ ಬೆನ್ನಲ್ಲೇ ಭರ್ಜರಿ ಚರ್ಚೆ ಶುರುವಾಗಿದೆ.

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್‌ ಫಾರ್ ಗ್ರೋನ್-ಅಪ್ಸ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾದ ಬೆನ್ನಲ್ಲೇ ಭರ್ಜರಿ ಚರ್ಚೆ ಶುರುವಾಗಿದೆ. ಟ್ರೇಲರ್‌ನ ಮೇಕಿಂಗ್‌, ಆ್ಯಕ್ಷನ್‌, ಲುಕ್‌ ಹಾಗೂ ಹಾಲಿವುಡ್‌ ಶೈಲಿಯ ಪ್ರಸ್ತುತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾದಲ್ಲಿ ನಟಿಸಿರುವ ನಟಿಯರೂ ಯಶ್‌ ಜೊತೆಗಿನ ತಮ್ಮ ಅನುಭವವನ್ನು ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಇದೇ ಟ್ರೇಲರ್‌ ಕನ್ನಡದ ನಟಿಯೊಬ್ಬರಿಗೆ ಮಾತ್ರ ಇಷ್ಟವಾಗಿಲ್ಲ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರ ಪುತ್ರಿ ಹಾಗೂ ನಟಿ ರಿಷಿಕಾ ಸಿಂಗ್‌, ‘ಟಾಕ್ಸಿಕ್’ ಟ್ರೇಲರ್‌ ಕುರಿತು ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ್ದು, ಯಶ್‌ ಅವರನ್ನುದ್ದೇಶಿಸಿ ಖಡಕ್‌ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದೀಗ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಯಶ್‌ಗೆ ರಿಷಿಕಾ ಸಿಂಗ್‌ ಖಡಕ್‌ ವಾರ್ನಿಂಗ್‌!

ರಿಷಿಕಾ ಸಿಂಗ್‌ ಹಂಚಿಕೊಂಡಿರುವ ವಿಡಿಯೋದಲ್ಲಿ ‘ಟಾಕ್ಸಿಕ್’ ಟ್ರೇಲರ್‌ನ ಕೆಲವು ದೃಶ್ಯಗಳನ್ನು ಉಲ್ಲೇಖಿಸಿ ಸಿನಿಮಾದಲ್ಲಿನ ನಾಯಕನ ಪಾತ್ರ, ಮಹಿಳಾ ಪಾತ್ರಗಳ ಚಿತ್ರಣ ಹಾಗೂ ನಾಯಕಿಯರೊಂದಿಗೆ ಯಶ್‌ ಕಾಣಿಸಿಕೊಂಡಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಗೌರವ ನೀಡಬೇಕು ಎಂದು ಹೇಳಿರುವ ರಿಷಿಕಾ, ತಮ್ಮ ವಿಡಿಯೋದಲ್ಲಿ ವ್ಯಂಗ್ಯಭರಿತ ಡೈಲಾಗ್‌ಗಳ ಮೂಲಕ ಯಶ್‌ ಅವರನ್ನು ಟೀಕಿಸಿದ್ದಾರೆ. ಕೊನೆಯಲ್ಲಿ, ‘ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರೆ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ’ ಎಂಬ ಎಚ್ಚರಿಕೆಯ ಮಾತನ್ನೂ ಹೇಳಿದ್ದಾರೆ. ರಿಷಿಕಾ ತಮ್ಮನ್ನು ‘ಐ ಆಮ್ ಟಾಕ್ಸಿಕ್’ ಎಂದು ಹೇಳಿಕೊಂಡಿರುವುದು ಕೂಡ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೋ ವೈರಲ್‌, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ರಿಷಿಕಾ ಸಿಂಗ್‌ ಅವರ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಆರಂಭವಾಗಿದೆ. ಕೆಲವರು ನಟಿಯ ಅಭಿಪ್ರಾಯವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅವರ ಟೀಕೆಯನ್ನು ಪ್ರಶ್ನಿಸಿದ್ದಾರೆ. ‘ಟಾಕ್ಸಿಕ್’ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನಿಮಾದಲ್ಲಿ ನಟಿಸಿರುವ ನಟಿಯರೇ ವೇದಿಕೆಗೆ ಬಂದು ಯಶ್‌ ಜೊತೆ ಕೆಲಸ ಮಾಡಿದ ಅನುಭವವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರತಂಡದ ವೃತ್ತಿಪರತೆಯ ಬಗ್ಗೆಯೂ ಮಾತನಾಡಿದ್ದಾರೆ. ಹೀಗಿರುವಾಗ ರಿಷಿಕಾ ಅವರ ಟೀಕೆಗೆ ಕಾರಣವೇನು ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು, ಸಿನಿಮಾದಲ್ಲಿ ನಟಿಸಿರುವ ಕಲಾವಿದರು ತಮ್ಮ ಪಾತ್ರ ಮತ್ತು ಸಿನಿಮಾದ ಸ್ವರೂಪವನ್ನು ತಿಳಿದುಕೊಂಡೇ ಕೆಲಸ ಮಾಡಿದ್ದಾರೆ. ಹೀಗಾಗಿ ಅದನ್ನು ಹೊರಗಿನಿಂದ ಪ್ರಶ್ನಿಸುವ ಅಗತ್ಯವೇನು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಿಷಿಕಾ ವಿರುದ್ಧವೂ ಶುರುವಾಯ್ತು ಟ್ರೋಲಿಂಗ್‌

ಇನ್ನೊಂದೆಡೆ ರಿಷಿಕಾ ಸಿಂಗ್‌ ಅವರ ಹಳೆಯ ಸಿನಿಮಾಗಳ ದೃಶ್ಯಗಳನ್ನು ಹಂಚಿಕೊಂಡು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಗ್ಲಾಮರಸ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಿಷಿಕಾ, ಇದೀಗ ‘ಟಾಕ್ಸಿಕ್’ನಲ್ಲಿನ ದೃಶ್ಯಗಳ ಬಗ್ಗೆ ಮಾತನಾಡಿರುವುದು ಏಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಮತ್ತೊಂದು ವರ್ಗದವರು, ಒಬ್ಬ ನಟಿ ಅಥವಾ ಕಲಾವಿದರಿಗೆ ಯಾವುದೇ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಅದನ್ನು ವೈಯಕ್ತಿಕ ದಾಳಿ ಅಥವಾ ಟ್ರೋಲ್‌ ಮಾಡುವ ಮಟ್ಟಕ್ಕೆ ಕೊಂಡೊಯ್ಯಬಾರದು ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ರಿಷಿಕಾ ಸಿಂಗ್‌ ಅವರ ಈ ಒಂದು ವಿಡಿಯೋ ಇದೀಗ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್‌ಗಿಂತಲೂ ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ಯಾರು ಈ ರಿಷಿಕಾ ಸಿಂಗ್‌?

ರಿಷಿಕಾ ಸಿಂಗ್‌ ಅವರು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರ ಪುತ್ರಿ. ನಟ ಆದಿತ್ಯ ಅವರ ಸಹೋದರಿಯಾಗಿರುವ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್‌ ಜೊತೆಗಿನ ‘ಕಂಠೀರವ’, ‘ಕಳ್ಳ ಮಳ್ಳ ಸುಳ್ಳ’, ‘ಬೆಂಕಿ ಬಿರುಗಾಳಿ’, ‘ತುಂಟರು’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕನ್ನಡದ ಮೊದಲ ‘ಬಿಗ್‌ ಬಾಸ್‌’ ಸೀಸನ್‌ನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದೀಗ ‘ಟಾಕ್ಸಿಕ್’ ಟ್ರೇಲರ್‌ ಕುರಿತ ಅವರ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಯಶ್‌ ಅಭಿಮಾನಿಗಳು ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.