ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರದ ಬಗ್ಗೆ ಮಾತನಾಡಿದ ಯಶ್, ರಾವಣನ ಪಾತ್ರಕ್ಕಾಗಿ ಸೆಟ್‌ನಲ್ಲಿ ತಾನು ವಾತಾವರಣವನ್ನೇ ಹಾಳು ಮಾಡುತ್ತಿದ್ದೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇದರ ಹಿಂದಿನ ಸೀಕ್ರೆಟ್ ಏನು? ಇಲ್ಲಿದೆ ಮಾಹಿತಿ.

ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'ದ ಮೇಲೆ ಎಲ್ಲರ ಕಣ್ಣಿದೆ! ಇತ್ತೀಚೆಗೆ, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಪ್ರಮುಖ ನಟರಾದ ರಣಬೀರ್ ಕಪೂರ್ ಮತ್ತು ಯಶ್, ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ತಮ್ಮ ಚಿತ್ರದ ಪ್ರಚಾರಕ್ಕಾಗಿ ಭಾಗವಹಿಸಿದ್ದರು. ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಿರುವ ಯಶ್, ಶೂಟಿಂಗ್ ಅಥವಾ ತಮ್ಮ ಪಾತ್ರದ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ. ಆದರೆ, ಈ ಕಾರ್ಯಕ್ರಮದಲ್ಲಿ ಅವರು ತೆರೆಮರೆಯ ಕೆಲವು ಸೀಕ್ರೆಟ್‌ಗಳನ್ನು ಹಂಚಿಕೊಂಡಿದ್ದಾರೆ.

ಹೌದು, 'ರಿವ್ಯೂ ನೇಷನ್' ಯೂಟ್ಯೂಬ್ ಚಾನೆಲ್‌ನಲ್ಲಿ ರಾಮಾಯಣ ಚಿತ್ರತಂಡ ಸಿನಿಮಾ ಬಗ್ಗೆ ಮಾತನಾಡಿದೆ. ರಾವಣನ ಪಾತ್ರಕ್ಕೆ ತಾವು ಹೇಗೆ ಸಿದ್ಧರಾದೆವು ಎಂಬುದರ ಬಗ್ಗೆ ಯಶ್ ವಿವರಿಸಿದರು. ಪಾತ್ರದ ಭಾರವಾದ ಕಿರೀಟವು ಪ್ರತಿದಿನ ಸೆಟ್‌ನಲ್ಲಿ ರಾವಣನಾಗಿ ಬದಲಾಗಲು ತಮಗೆ ಸಹಾಯ ಮಾಡುತ್ತಿತ್ತು ಎಂದು ಅವರು ಹೇಳಿದರು. ಈ ವೇಳೆ ನಿರ್ದೇಶಕ ನಿತೇಶ್, ಯಶ್ ಅವರ ಮ್ಯೂಸಿಕ್ ಬಗ್ಗೆ ನೆನಪಿಸಿದಾಗ, "ನಾನು ಸೆಟ್‌ನ ವಾತಾವರಣವನ್ನೇ ಹಾಳು ಮಾಡುತ್ತಿದ್ದೆ. ನಾನು ತುಂಬಾ ಗಂಭೀರವಾಗಿರುತ್ತಿದ್ದೆ," ಎಂದು ಯಶ್ ನಕ್ಕರು.

ಸೆಟ್‌ಗೆ ಮ್ಯೂಸಿಕ್ ತರುತ್ತಿದ್ದ ಯಶ್

ರಣಬೀರ್ ಕಪೂರ್ ಕೂಡ ತಾವು ಇನ್ನೂ ಯಶ್ ಜೊತೆ ಯಾವುದೇ ದೃಶ್ಯದಲ್ಲಿ ನಟಿಸಿಲ್ಲ ಎಂದು ಬಹಿರಂಗಪಡಿಸಿದರು. ಯಶ್ ತಮ್ಮ ಅನುಭವ ಹಂಚಿಕೊಂಡು, "ನಾನು ದೊಡ್ಡ ಸ್ಪೀಕರ್‌ಗಳನ್ನು ತರಿಸಿ, ಫುಲ್ ವಾಲ್ಯೂಮ್‌ನಲ್ಲಿ ಮ್ಯೂಸಿಕ್ ಹಾಕ್ತಿದ್ದೆ. ನಾನು ಆ ಜೋನ್‌ನಲ್ಲೇ ಇರಬೇಕಿತ್ತು. ಶಿವನ ಹಾಡುಗಳನ್ನು ಪ್ಲೇ ಮಾಡ್ತಿದ್ದೆ. ರಾವಣ ಶಿವನ ದೊಡ್ಡ ಭಕ್ತ. ಆ ಟ್ರಾನ್ಸ್‌ನಲ್ಲೇ ಇರಬೇಕು ಅಂತ ನಾನು ಬಯಸುತ್ತಿದ್ದೆ. ಮ್ಯೂಸಿಕ್ ಸೌಂಡ್ ಜೋರಾಗಿದ್ದರಿಂದ, ಬೇರೆಯವರಿಗೆಲ್ಲಾ ಮಾತಾಡೋಕೆ ಕಷ್ಟ ಆಗ್ತಿತ್ತು," ಎಂದರು.

ಯಶ್ ಜೊತೆ ಕೆಲಸ ಮಾಡುವ ಬಗ್ಗೆ ರಣಬೀರ್ ಮಾತು

ಈ ಬಗ್ಗೆ ಮಾತನಾಡಿದ ರಣಬೀರ್, "ಶ್ರೀರಾಮ ಮತ್ತು ರಾವಣ ಚಿತ್ರದ ಕೊನೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ, ಬಹುಶಃ ಮಧ್ಯದಲ್ಲಿ ಒಂದು ಭೇಟಿ ಇರಬಹುದು. ಆದರೆ ನಾವು ಇನ್ನೂ ಆ ದೃಶ್ಯಗಳನ್ನು ಚಿತ್ರೀಕರಿಸಿಲ್ಲ. ಹಾಗಾಗಿ, ನಮಗೆ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ. ಆದರೆ, ನನಗೆ ಯಶ್ ಸ್ವಲ್ಪ ಸಮಯದಿಂದ ಪರಿಚಯ. ನಾನು ಅವರ ಕೆಲಸದ ದೊಡ್ಡ ಅಭಿಮಾನಿ. ಈ ಪಾತ್ರವನ್ನು ನಿರ್ವಹಿಸಲು ಅವರ ವ್ಯಕ್ತಿತ್ವ, ಅವರ ಸ್ಟಾರ್‌ಡಮ್ ಮತ್ತು ಅವರ ದೃಷ್ಟಿಕೋನ ಇರುವ ಒಬ್ಬರು ಬೇಕು ಎಂದು ನಾನು ನಿಜವಾಗಿಯೂ ನಂಬುತ್ತೇನೆ," ಎಂದು ಹೇಳಿದರು.

ರಾಮಾಯಣ ಟ್ರೇಲರ್‌ ಬಗ್ಗೆ

ಜುಲೈ 18 ರಂದು ನವದೆಹಲಿಯಲ್ಲಿ ನಡೆದ 'ಪ್ರಥಮ್ ಸಂಕಲ್ಪ್' ಕಾರ್ಯಕ್ರಮದಲ್ಲಿ ರಾಮಾಯಣದ ಟ್ರೇಲರ್‌ ಪ್ರದರ್ಶನಗೊಳ್ಳಬೇಕಿತ್ತು. ಆದರೆ ಟ್ರೇಲರ್‌ ಆನ್‌ಲೈನ್‌ನಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯನ್ನು ಮುಂದೂಡಲಾಯಿತು. ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿ, "ಇಂದು ನಮ್ಮ 'ರಾಮಾಯಣ'ಕ್ಕೆ ಬಹಳ ವಿಶೇಷವಾದ ಕ್ಷಣ. ಸೋನಿ ಪಿಕ್ಚರ್ಸ್ ಮನರಂಜನೆ ಜೊತೆಗಿನ ನಮ್ಮ ಸಹಭಾಗಿತ್ವದೊಂದಿಗೆ ರಾಮಾಯಣವನ್ನು ಜಗತ್ತಿಗೆ ಕೊಂಡೊಯ್ಯುವ ನನ್ನ ಕನಸು ನನಸಾಗಿದೆ. ಈ ಹಿನ್ನೆಲೆಯಲ್ಲಿ, ನಾವು ನಮ್ಮ ಟ್ರೇಲರ್‌ ಅನ್ನು ಜಾಗತಿಕವಾಗಿ ನಂತರದ ದಿನಾಂಕದಂದು ಬಿಡುಗಡೆ ಮಾಡುತ್ತೇವೆ," ಎಂದು ಬರೆದುಕೊಂಡಿದ್ದರು.