ಬಹುಭಾಷಾ ನಟ ರಾವ್ ರಮೇಶ್ ಅವರು ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ತಮ್ಮ ಅಪರೂಪದ ಭೇಟಿಯೊಂದನ್ನು ನೆನೆದು ಭಾವುಕರಾಗಿದ್ದಾರೆ. ಸರಳತೆ ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದ ಅಪ್ಪು.

ಬಹುಭಾಷಾ ನಟ ರಾವ್ ರಮೇಶ್ ಅವರು ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ತಮ್ಮ ಅಪರೂಪದ ಭೇಟಿಯೊಂದನ್ನು ನೆನೆದು ಭಾವುಕರಾಗಿದ್ದಾರೆ. ಸರಳತೆ ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದ ಅಪ್ಪು ಸರ್ ತಮ್ಮನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿದ್ದ ಕ್ಷಣವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ನಟ ಕೋಮಲ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ತೆನಾಲಿ ಡಿಎ, ಎಲ್‌ಎಲ್‌ಬಿ’ ಚಿತ್ರದ ಪ್ರಚಾರದ ವೇಳೆ ಮಾತನಾಡಿದ ರಾವ್ ರಮೇಶ್, ಚಿತ್ರದ ಜೊತೆಗೆ ತಮ್ಮ ಸಿನಿ ಪಯಣ ಮತ್ತು ಕನ್ನಡ ಚಿತ್ರರಂಗದೊಂದಿಗಿನ ನಂಟಿನ ಬಗ್ಗೆಯೂ ಮಾತನಾಡಿದರು. ಈ ವೇಳೆ ಅವರು ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ನೆನಪನ್ನು ಮೆಲುಕು ಹಾಕಿದರು.

ಜಿಮ್‌ನಲ್ಲಿ ನಡೆದಿತ್ತು ಅಪ್ಪು ಸರ್ ಭೇಟಿ

ರಾವ್ ರಮೇಶ್ ಅವರು ತಮ್ಮ ನೆನಪಿನ ಬುತ್ತಿ ಬಿಚ್ಚುತ್ತಾ, ಮೈಸೂರಿನಲ್ಲಿ ‘ಕೆಜಿಎಫ್ 2’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದ ಘಟನೆಯನ್ನು ವಿವರಿಸಿದರು. ನಾನು ಮೈಸೂರಿನ ಹೋಟೆಲ್ ಜಿಮ್‌ನಲ್ಲಿ ಇದ್ದಾಗ ಅಪ್ಪು ಸರ್ ಅಲ್ಲಿಗೆ ಬಂದರು. ಅವರನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅವರು ನನ್ನನ್ನು ಗುರುತಿಸಿ, ‘ನೀವೊಬ್ಬ ಅದ್ಭುತ ನಟ ಸರ್’ ಎಂದು ಹೊಗಳಿದರು.

ಬಳಿಕ ನಮ್ಮ ಮನೆಗೆ ಬನ್ನಿ ಸರ್, ಒಟ್ಟಿಗೆ ಊಟ ಮಾಡೋಣ ಎಂದು ಪ್ರೀತಿಯಿಂದ ಆಹ್ವಾನಿಸಿದ್ದರು ಎಂದು ರಾವ್ ರಮೇಶ್ ಹೇಳಿದ್ದಾರೆ. ಆ ದಿನದ ನೆನಪನ್ನು ಹಂಚಿಕೊಳ್ಳುವಾಗ ಭಾವುಕರಾದ ಅವರು, "ಅಂತಹ ಒಳ್ಳೆಯ ವ್ಯಕ್ತಿ ಇಂದು ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ" ಎಂದು ಅಪ್ಪು ಅವರ ಸರಳತೆಯನ್ನು ಸ್ಮರಿಸಿದರು.

ಕನ್ನಡದಲ್ಲೇ ಧ್ವನಿ ನೀಡುತ್ತಿರುವ ರಾವ್ ರಮೇಶ್

ಇನ್ನು ‘ತೆನಾಲಿ ಡಿಎ, ಎಲ್‌ಎಲ್‌ಬಿ’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ರಾವ್ ರಮೇಶ್ ಅವರೇ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡ ಪ್ರೇಕ್ಷಕರಿಗೆ ಮತ್ತೊಮ್ಮೆ ತಮ್ಮದೇ ಧ್ವನಿಯ ಮೂಲಕ ಹತ್ತಿರವಾಗಲಿದ್ದಾರೆ. ರಾವ್ ರಮೇಶ್ ಅವರು ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ಜಾಗ್ವಾರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ನಂತರ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾದಲ್ಲಿ ಸಿಬಿಐ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಆ ಚಿತ್ರದಲ್ಲೂ ಅವರು ತಮ್ಮ ಪಾತ್ರಕ್ಕೆ ಸ್ವತಃ ಕನ್ನಡದಲ್ಲಿ ಧ್ವನಿ ನೀಡಿದ್ದರು. ಗಂಭೀರ ಧ್ವನಿ, ವಿಭಿನ್ನ ಅಭಿನಯ ಶೈಲಿ ಮತ್ತು ಸಂಭಾಷಣೆ ಹೇಳುವ ವಿಶೇಷ ರೀತಿಯಿಂದ ಕನ್ನಡ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ರಾವ್ ರಮೇಶ್, ಇದೀಗ ‘ತೆನಾಲಿ ಡಿಎ, ಎಲ್‌ಎಲ್‌ಬಿ’ ಮೂಲಕ ಮತ್ತೊಮ್ಮೆ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.