ನಟ ಉಪೇಂದ್ರ ತಮ್ಮ ಪ್ರಜಾಕೀಯ ಪಕ್ಷಕ್ಕೆ ಮತ್ತೆ ಚಾಲನೆ ನೀಡಿದ್ದು, ಈ ಬಾರಿ ತಾವೇ ಚುನಾವಣೆಗೆ ನಿಲ್ಲುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ, ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ಸಂದರ್ಶನವೊಂದರಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಪರೋಕ್ಷ ಸುಳಿವು ನೀಡಿದ್ದು, ಸೂಕ್ತ ಸಂದರ್ಭ ಬಂದರೆ ಯೋಚಿಸುವುದಾಗಿ ತಿಳಿಸಿದ್ದಾರೆ.
ಇದೀಗ ಕಾಕ್ರೋಚ್ ಜನತಾ ಪಕ್ಷ (CJP) ಹವಾ ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ಇತ್ತ ಕರ್ನಾಟಕದಲ್ಲಿ ನಟ ಉಪೇಂದ್ರ ಅವರು ತಮ್ಮ ಪ್ರಜಾಕೀಯ ಪಕ್ಷವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಅಷ್ಟಕ್ಕೂ ನಟರಿಗೆ ಸಿನಿಮಾದಲ್ಲಿ ಲಕ್ಷನೋ, ಕೋಟಿನೋ ಅಭಿಮಾನಿಗಳು ಇದ್ದ ಮಾತ್ರಕ್ಕೆ ಚುನಾವಣೆಯಲ್ಲಿಯೂ ಅಷ್ಟೇ ಮತ ಬರುವುದಿಲ್ಲ ಎನ್ನುವುದು ಇದಾಗಲೇ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಸಾಬೀತಾಗಿಬಿಟ್ಟಿದೆ. ಸ್ಟಾರ್ ಸೆಲೆಬ್ರಿಟಿ ಆದ ತಕ್ಷಣ, ತಮ್ಮ ಅಭಿಮಾನಿಗಳೆಲ್ಲಾ ತಮಗೆ ವೋಟ್ ಹಾಕುತ್ತಾರೆ ಎನ್ನುವ ಕಲ್ಪನೆ ಕನಸಾಗಿಯೇ ಉಳಿದುಬಿಡುತ್ತದೆ. ಒಂದಷ್ಟು ಸಾವಿರ ಮತಗಳೂ ಬರದ ಉದಾಹರಣೆಗಳಿವೆ. ಆದರೆ ಈ ಬಾರಿ ಚುನಾವಣೆಗೆ ಖುದ್ದು ನಿಲ್ಲುವ ಮೂಲಕ ಇದನ್ನು ಸುಳ್ಳು ಮಾಡಲು ಹೊರಟಿದ್ದಾರೆ ನಟ ಉಪೇಂದ್ರ. ತಾವು ಈ ಬಾರಿ ಚುನಾವಣೆಗೆ ನಿಲ್ಲುತ್ತೇನೆ ಎಂದಿದ್ದಾರೆ.
ನಟರಿಗೆ ಸುಲಭವಲ್ಲ
ತಮಿಳುನಾಡಿನಲ್ಲಿ ಸ್ಟಾರ್ ನಟರು ರಾಜಕೀಯ ಪಕ್ಷದ ರೂವಾರಿಯಾಗುವ ಸಾಧ್ಯತೆ ಇರಬಹುದು ಬಿಟ್ಟರೆ, ಬೇರೆ ಕಡೆಗಳಲ್ಲಿ ಇದು ಸಾಧ್ಯವಾಗದ ಮಾತು. ಇದರ ನಡುವೆಯೇ, ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ, ಪ್ರಜಾಕೀಯ ಪಕ್ಷವನ್ನು ಮುನ್ನಡೆಸುವ ಯತ್ನದಲ್ಲಿ ಇದ್ದಾರೆ ನಟ ಉಪೇಂದ್ರ. ಅಷ್ಟಕ್ಕೂ ಉಪೇಂದ್ರ ಅವರು ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿ 8 ವರ್ಷಗಳೇ ಕಳೆದಿವೆ. ಯಾವುದೇ ಹಣದ ವ್ಯವಹಾರ, ದಾನ ಅಥವಾ ಸದಸ್ಯತ್ವ ಶುಲ್ಕವಿಲ್ಲದೆ ಜನಪರ ಆಡಳಿತವನ್ನು ನೀಡುವ ಗುರಿ ಹೊಂದಿರುವ ರಾಜಕೀಯ ವೇದಿಕೆ ಇದು ಎನ್ನುವ ಮೂಲಕ ಪಕ್ಷವನ್ನು ಸ್ಥಾಪಿಸಿದರೂ, ಅವರ ಅಭಿಮಾನಿಗಳು ಕೂಡ ಅವರ ಕೈಹಿಡಿಯಲಿಲ್ಲ. ನಟನೆಯಲ್ಲಿ ನೋಡಲು ಇಷ್ಟ ಬಿಟ್ಟರೆ, ರಾಜಕಾರಣಿಯಾಗಿ ಅಲ್ಲ ಎನ್ನೋದನ್ನು ಅಭಿಮಾನಿಗಳು ಸಾರಿದರು.
ರಾಜಕೀಯಕ್ಕೆ ಎಂಟ್ರಿ?
ಇದೀಗ ಪ್ರಜಾಕೀಯಕ್ಕಾಗಿ ಸಾಕಷ್ಟು ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ ನಟ ಉಪೇಂದ್ರ. ಇದರ ನಡುವೆಯೇ, ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ತಿಳಿಸಿದ್ದಾರೆ. ನನಗೆ ಬೇಕಾದಷ್ಟು ಜವಾಬ್ದಾರಿಗಳು ಇವೆ. ರಾಜಕೀಯದ ಬಗ್ಗೆ ಅಷ್ಟೇನೂ ವಿಚಾರ ಮಾಡಿಲ್ಲ ಎಂದಿರುವ ನಟಿ, ಮುಂದೆ ನೋಡೋಣ, ಆ ರೀತಿಯ ಸನ್ನಿವೇಶ ಬಂದರೆ ಯೋಚನೆ ಮಾಡುತ್ತೇನೆ ಎನ್ನುವ ಮೂಲಕ, ಪರೋಕ್ಷವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತನಾಡಿದ್ದಾರೆ.
ಪತಿ ಉಪೇಂದ್ರ ಅವರನ್ನು ಇದೇ ವೇಳೆ ಹೊಗಳಿರುವ ನಟಿ, ಅವರಿಗೆ ತುಂಬಾ ಟ್ಯಾಲೆಂಟ್ ಇದೆ. ಲೀಡರ್ ಆಗುವ ಎಲ್ಲಾ ಗುಣಗಳೂ ಇವೆ. ಅವರು ಸಿದ್ಧಾಂತವನ್ನು ಯಾವುದೂ ಬಿಟ್ಟುಕೊಡುವುದಿಲ್ಲ. ಹಣ, ಬಟ್ಟೆ ಅದು ಇದು ಆಮಿಷ ಅವರಿಗೆ ಇಲ್ಲ. ಸಿದ್ಧಾಂತವೇಮುಖ್ಯ ಎಂದಿದ್ದಾರೆ.


