'ಆಪ್ ಕೀ ಅದಾಲತ್' ಶೋನಲ್ಲಿ ನಟ ಯಶ್, ತಾವು ಸೂಪರ್‌ಸ್ಟಾರ್ ಆದ ಮೇಲೂ ತಮ್ಮ ತಂದೆ ಯಾಕೆ ಬಿಎಂಆರ್‌ಟಿಸಿ ಬಸ್ ಚಾಲಕನಾಗಿ ಕೆಲಸ ಮುಂದುವರೆಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. 'ನನ್ನ ಕೆಲಸದಿಂದಲೇ ಜನರು ನನ್ನನ್ನು ಗುರುತಿಸಬೇಕು' ಎಂಬುದು ತಮ್ಮ ತಂದೆಯ ನಿಲುವಾಗಿತ್ತು ಎಂದು ಯಶ್ ತಂದೆಯ ಸರಳತೆ ಮತ್ತು ಸ್ವಾಭಿಮಾನವನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ಮಕ್ಕಳು ಎಷ್ಟೇ ದೊಡ್ಡವರಾಗಿ ಬೆಳೆದರೂ, ಅವರನ್ನು ಆ ಮಟ್ಟಕ್ಕೆ ಬೆಳೆಯಲು ಅವಕಾಶ ನೀಡಿದ ಚಿಕ್ಕಪುಟ್ಟ ಕೆಲಸವನ್ನು ಅದೆಷ್ಟೋ ಅಪ್ಪ-ಅಮ್ಮ ಮರೆಯುವುದೇ ಇಲ್ಲ. ಜೀವನದ ಕಷ್ಟಕಾಲದಲ್ಲಿ ಕೈಹಿಡಿದ, ಮಕ್ಕಳನ್ನು ಅಷ್ಟು ಎತ್ತರಕ್ಕೆ ಬೆಳೆಸಲು ಅನ್ನ ನೀಡಿದ ಸಂಸ್ಥೆಗಳನ್ನು ಕೆಲವರು ಮರೆಯುವುದೇ ಇಲ್ಲ. ಅಂಥದ್ದೇ ಒಂದು ಸ್ಟೋರಿ ಸೂಪರ್​ಸ್ಟಾರ್​ ಆಗಿ ಮಿಂಚುತ್ತಿರುವ ನಟ ಯಶ್​ ಅವರದ್ದು. ಒಂದರ ಮೇಲೊಂದರಂತೆ ಹಿಟ್​ ಸಿನಿಮಾಗಳನ್ನು ನೀಡುತ್ತಾ, ರಾಕಿಂಗ್​ ಸ್ಟಾರ್​ ಆಗಿ ಬೆಳೆದು ಈಗ ಟಾಕ್ಸಿಕ್​ ಚಿತ್ರದ ಮೂಲಕ ಹವಾ ಸೃಷ್ಟಿಸ್ತಿರೋ ಯಶ್​ ಅವರು, ಜನಪ್ರಿಯ ಷೋ ಆಪ್​ ಕೀ ಅದಾಲತ್​ನಲ್ಲಿ ಭಾಗವಹಿಸಿದ್ದು, ರಜತ್​ ಶರ್ಮಾ ಅವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಅಷ್ಟಕ್ಕೂ ಯಶ್​ ಅವರ ಬಹುತೇಕ ಫ್ಯಾನ್ಸ್​ಗೆ ತಿಳಿದಿರುವಂತೆ ಯಶ್​ ಅವರ ತಂದೆ, ಬಿಎಂಆರ್‌ಟಿಸಿ ಬಸ್ ಚಾಲಕನಾಗಿದ್ದರು. ಸಂಸಾರದ ನೊಗ ಹೊರಲು ಸಹಾಯ ಮಾಡಿದ ಈ ವೃತ್ತಿಯನ್ನು ಅವರು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ತಮ್ಮ ಪುತ್ರ ಯಶ್​ ಸೂಪರ್​ಸ್ಟಾರ್​ ಎಂದು ಎನ್ನಿಸಿಕೊಂಡ ಮೇಲೂ ಅವರು ಬಸ್​ ಚಾಲನೆ ಮಾಡುವುದನ್ನು ಬಿಟ್ಟಿರಲಿಲ್ಲ. ಈ ಕುರಿತು ರಜತ್​ ಶರ್ಮಾ ಅವರು ಯಶ್​ಗೆ ಪ್ರಶ್ನೆ ಕೇಳಿದರು. ಮಗ ಆಡಿ ಕಾರ್​ನಲ್ಲಿ ಓಡಾಡುತ್ತಿದ್ದರೆ, ಅಪ್ಪ ಮಾತ್ರ ಬಸ್​ನಲ್ಲಿಯೇ ಓಡಾಡುತ್ತಿದ್ದರು, ಯಾಕೆ ಎಂದು ಅವರು ಪ್ರಶ್ನೆ ಕೇಳಿದರು.

ಮಗ ಆಡಿ ಕಾರು, ಅಪ್ಪ ಬಸ್​

ಅದಕ್ಕೆ ಯಶ್​, ಹೌದು. ನಾನು ಹೀರೋ ಆದ ಮೇಲೂ ಅವರು ತಮ್ಮ ಕೆಲಸವನ್ನು ಬಿಡಲಿಲ್ಲ. ನಾನು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದೇನೆ. ಕೆಲಸ ಬಿಡು ಎಂದು ಹೇಳಿದ್ದುಂಟು. ಆದರೆ ನಿನ್ನ ಕೆಲಸ ನಿನಗೆ, ನನ್ನ ಕೆಲಸ ನನಗೆ. ನನಗೆ ಇದರಲ್ಲಿ ತೃಪ್ತಿ ಇದೆ ಎಂದೇ ಹೇಳುತ್ತಿದ್ದರು. ಅವರಿಗೆ ಎಷ್ಟೋ ಸಂದರ್ಭದಲ್ಲಿ ಕಾರಿನಲ್ಲಿ ಕುಳ್ಳರಿಸಿಕೊಂಡು ಡ್ರಾಪ್​ ಮಾಡಿದ್ದು ಇದೆ. ಆದರೆ ಅವರಿಗೆ ಅದು ಇಷ್ಟನೇ ಆಗುತ್ತಿರಲಿಲ್ಲ. ನನಗೆ ಮುಜುಗರವಾಗುತ್ತದೆ, ನನಗೆ ಇವೆಲ್ಲಾ ಬೇಡ ಎನ್ನುತ್ತಿದ್ದರು ಎಂದು ತಂದೆ ಹೇಳಿದ ಮಾತುಗಳನ್ನು ಯಶ್​ ನೆನಪಿಸಿಕೊಂಡರು.

ಅಪ್ಪನ ನೆನೆದ ಯಶ್​

ನನಗೆ ನನ್ನದೇ ಆದ ಗುರುತು ಇದೆ. ಯಶ್​ ಅಪ್ಪ ಎಂದು ಗುರುತಿಸಿಕೊಳ್ಳುವುದು ಬೇಡ. ನನ್ನನ್ನು ಜನ ನನ್ನ ಕೆಲಸದಿಂದ ಗುರುತಿಸಬೇಕು. ನಿನಗೆ ಅಪಾರ ಅಭಿಮಾನಿಗಳು ಇದ್ದಾರೆ. ಅವರು ನಿನ್ನನ್ನು ನಿನ್ನ ಕೆಲಸದಿಂದ ಗುರುತಿಸುವಂತೆ, ಜನರು ನನ್ನನ್ನು ನನ್ನ ಕೆಲಸದಿಂದ ಗುರುತಿಸಬೇಕು. ಅದಕ್ಕಾಗಿ ನಾನು ಈ ಕೆಲಸವನ್ನು ಬಿಡುವುದಿಲ್ಲ ಎನ್ನುತ್ತಿದ್ದರು ಎಂದಿದ್ದಾರೆ ಯಶ್​. ಇವರ ಈ ಉತ್ತರಕ್ಕೆ ಅಲ್ಲಿ ನೆರೆದ ಜನ ಫಿದಾ ಆಗಿದ್ದಾರೆ.